ಕಾವ್ಯ ಸಂಗಾತಿ
ಭಾರತಿ ಅಶೋಕ್
“ಆನು ಒಲಿದಂತೆ”


ನೀನೊಲಿದ
ಬೇಡನಿಗೆ ಹೊರತಲ್ಲ ಎನ್ನ ಬಕುತಿ
ಮೂದಳದ ಬಿಲ್ವ ಎಲೆಗಳ
ಹೊರತು ಕೊಡಲಿಲ್ಲ ಶಕುತಿ
ಭವಣೆಯಲಿ ಹಣ್ಣಾದ ಮನವು
ನೀನಿತ್ತ ಬದುಕಿಗೆ ಮಣಿದ ಕಾಯ
ಕೊಡಲೇನಿದೆ ಉಸಿರುಸಿರಿಗು ಶಿವ’ನ ಹೊರತಾದ ಸೊಲ್ಲು
ಅಲ್ಲೆಲ್ಲೊ ಗುಡಿಯೊಳಗೆ
ಹುಡುಕುತಿಹ ಮಂದಿ
ನೀನು ನನ್ನವರ ಜೊತೆ ಗುಡಿಸಲೊಳಗೆ ಬಂಧಿ.
ಚಿಂದಿ ಕೌದಿಯೊಳಗೆ ದಿನವೂ
ಏಕಾದಶಿಯ ಮಂದಿ
ಕೊಡಲೇನಿದೆ
ಬಯಲ ಸೂರ್ಯನ ಹೊರತು
ಇಂದು ಶಿವರಾತ್ರಿ
ಕಣ್ಣ ಹನಿಗಳ ತುಂಬಾ
ನಿನ್ನವೇ ಬಿಂಬ
ಅಲ್ಲೇ ಅರ್ಚನೆಗೈವೆ,
ಕಣ್ಣೀರಲೇ ಮಹಾ ಮಜ್ಜನ
ಕೊಡಲೇನಿದೆ ಹಸಿವ ಬಿತ್ತಿ
ಬದುಕ ಸುಟ್ಟ ಬೂದಿಯ ಹೊರತು
ನನ್ನವರ
ಕರುಳ ಕೂಗೇ ಮಹಾ ಮಂತ್ರಾರ್ಚನೆ
ಕಂಗಳ ಗುಳಿಯಲಿ ಆಸೆಯ ಹೊಳಪಿತ್ತ
ಕರುಳಿನ ಜೊತೆಗಾರ ನಿನಗೆ
ಕೊಡಲೇನಿದೆ ಹಸಿವಿನ ಹೊರತು
ಶಿವರಾತ್ರಿ
ಭಾರತಿ ಅಶೋಕ್



