ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ರವಿ …ಮೀಟ್ಸ್…. ಬಾನು”


ನೀ ಬರುವ ಸಮಯ ಕೆಂಪೇರುವುದು
ನನ್ನ ಮೂಡಣದ ಕೆನ್ನೆ ,
ನೀ ಬರುವ ಸಂಭ್ರಮ ಹೇಳ ತೀರದು ,
ನನ್ನ ಹರುಷದ ಬಾಗಿಲು ತೆರೆಯುವ
ಕೀಲಿ ನೀನು, ಮೆಲ್ಲನೆ ಉಲಿಯಲೆ ನಲ್ಲ , ನಿನ್ನ ಹೆಸರು ….ರವಿ ….ರವಿ…..ರವಿ…..
ಮಂದ ಶೀತಲ ಗಾಳಿ ,
ಇಬ್ಬನಿಯ ಮಣಿ ಮಾಲೆ ಹಸುರಿನ ಮೇಲೆ ,
ಅರಳಿ ನಿಂತ ಹೊಸ ಕುಸುಮ ,
ಹಕ್ಕಿಯ ಚಿಲಿ ಪಿಲಿ ನಾದ ,
ನಿನ್ನ ಸ್ವಾಗತ ಕೊರುವವು ,
ನೀ ತಂಪ ಸುಸುತ ,
ಮಂದಹಾಸ ಬಿರುತ ,
ಸ್ವರ್ಣ ವರ್ಣದ ತೇರ ಏರಿ ಬರುವೆ …..
ತುಸು ಹೊತ್ತು ಸರಿಯುತ್ತಿರೆ
ಅದೇನು ರೋಷವೊ ?
ಅದೆಂಥಹ ಮೋಹವೊ ?
ಕಾಯಿಸಿ , ಕಂಗೆಡಿಸಿ ,
ಬೇಯಿಸಿ , ಬೇಂಡಾಗಿಸುವೆ
ಅದೇನು ಹುಚ್ಚು ಪ್ರೇಮವೊ ನಿನ್ನದು ,
ಇರುವ ಸ್ವಲ್ಪ ಹೊತ್ತಲ್ಲೆ ನನ್ನೊಡನೆ
ಸರಸ , ವಿರಸ ಮತ್ತೆ ಸರಸ….
ನೀ ಮರಳುವಾ ಸಮಯ ಕೆಂಪಾಗಿಸುವೆ
ನನ್ನ ಪಡುವಣದ ಕೆನ್ನೆ
ಇಡೀ ದಿನ ನನ್ನ ಗೋಳಾಡಿಸಿ
ಹೋಗುವಾಗ ರಮಿಸಿ , ಮುದ್ದಿಸಿ ,
ತಬ್ಬಿ ತಂಪನೆರೆಯುವೆ
ನಿನ್ನ ಪ್ರೇಮದ ಪರಿಯ ನಾನರಿಯೆ ?
ನೀ ನನ್ನವನೆಂಬ ಖುಷಿ ನನ್ನದು
ನೀ ನನಗಾಗೆ ಇರುವೆ ಎಂಬ ಜಂಭ ನನ್ನದು
ನಾ ನಿನ್ನ ಬೆಳಕಿನಲಿ ನಲಿಯುವೆ ,
ನಾ ನಿನ್ನವಳೆಂಬ ತೃಪ್ತಿ ನನ್ನದು……
ನೀ ಮರೆಯಾಗುವೆ ಇರುಳಿಗೆ
ನಾ ಬೇಸರದಿ ಮುಖ ಕಪ್ಪು ಮಾಡಿಕೊಂಡು
ಮುದುರಿ ಮಂಕಾಗುವೆ
ಮತ್ತೆ ನಾಳೆ ನಿನ್ನ ಬರುವಿಕೆಗಾಗಿ
ಕನವರಿಸಿ ಕಾಯುವ ನಾನು ನೀಲಿ
ಬಾನು …ಬಾನು….ಬಾನು….
ಪರವಿನಬಾನು ಯಲಿಗಾರ



