ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ಪ್ರೇಮ ನಶೆಯ ಮದಿರೆ ಏರಿದರಲ್ಲೆಯ ನಿದಿರೆ
ಒಲವಿನುಯ್ಯಾಲೆಯಲಿ ತೂಗುತಲಿದ್ದರೆಲ್ಲಿಯ ನಿದಿರೆ
ಕಳವಳದಲ್ಲಿ ಜೀವ ಕುಸುಮ ಮಂಪರಿಸುತ ಕಂಪನ
ಪ್ರೀತಿಯ ಮಾಯೆಯಲಿ ಮೈಮರೆತರೆಲ್ಲಿಯ ನಿದಿರಿ
ಹಗಲಿರುಳು ಹಂಬಲದ ಕೊಳದಿ ಅಲೆಗಳ ನಿಲ್ಲದ ಶಬ್ದ
ಅಪ್ಪುಗೆಯಾಲಿಂಗನಕೆ ಕಾಯುತದಲಿದ್ದರೆಲ್ಲಿಯ ನಿದಿರೆ
ಬಿಸಿಯುಸಿರು ಧಗೆಯಲಿ ದೇಹ ಧಗಧಗಿಸುವ ನೋವು
ಕನಸುಗಳ ಹಾಸಿ ಹೊತ್ತು ಮಲಗಿದರೆಲ್ಲಿಯ ನಿದಿರೆ
ನೆನಪಿನಲೆಯ ಕೋಲಾಹಲ ತಾಳಲಾರದ ಸಿಹಿ ಸಂಕಟ
ಕಣ್ಣ ಕೊಳದಲಿ ನೆಟ್ಟ ಚಿತ್ರ ಮಾಸದಿರೆಲ್ಲಿಯ ನಿದಿರೆ
ಮನ ಮಂದಾರ ಬಿರಿಯುವ ಸಂಕಟ ಕಾತುರದ ಕೌತುಕ
ಜೀವ ಕುಸುಮ ರವಿಗಾಗಿ ಕಾಯುತಲ್ಲಿದ್ದರೆಲ್ಲಿಯ ನಿದಿರೆ
ಅನುರಾಗದಲೆಯಲಿ ಅನು ಕೊಚ್ಚಿ ಹೋಗುತಿಹಳು ತಾಳದೇ
ರಾಗಕೆ ತಾಳ ಬೆರೆಸಲು ದುಂಬಿ ಬರದಿದ್ದರೆಲ್ಲಿಯ ನಿದಿರೆ
ಡಾ ಅನ್ನಪೂರ್ಣ ಹಿರೇಮಠ



