ಕಾವ್ಯ ಸಂಗಾತಿ
ಕುವೆಂಪು,ಬೇಂದ್ರೆ ಬಗ್ಗೆ
ಸುಮತಿ ನಿರಂಜನ್
ಅವರ ಎರಡು ಪುಟ್ಟ ಕವಿತೆಗಳು


ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ.
ಕನ್ನಡವೆಂದರೆ ಕುವೆಂಪು !
ಕವಿಶೈಲದ ಇಂಚರ ಇಂಪು
ಮಲೆನಾಡಿನ ಹಸಿರಿದೆ
ಜೋಗದ ಭರವಿದೆ
ಕಾಜಾಣದ ಕರೆಯಿದೆ
ಅದರಲಿ
ಅಮ್ಮನ ಲಾಲಿಯ ತಂಪು ಇದೆ !
—

ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕ
ಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕ
ನಾಕು ತಂತಿ ಮೀಟುವ ಶಬ್ದ ವೈಣಿಕ
ದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕ
ಪಂಡಿತ ಪಾಮರರ ಪ್ರೀತಿಪಾತ್ರ
ಕನ್ನಡಾಂಬೆಯ ಔರಸ ಪುತ್ರ
ಕಾವ್ಯಾಂತರಿಕ್ಷದ ಧ್ರುವ ನಕ್ಷತ್ರ
ವರಕವಿಯ ಕೀರುತಿ ಸರ್ವತ್ರ
ಸುಮತಿ ನಿರಂಜನ್




