ಧಾರಾವಾಹಿ ಸಂಗಾತಿ-13
ಅರ್ಜುನ ಉವಾಚ
ವಿಶ್ವನಾಥ ಎನ್ ನೇರಳೆಕಟ್ಟೆ
ಕದನಾಂತರಂಗದಲ್ಲಿ
ಅನಲ ನರ್ತನ


ಕದನಾಂತರಂಗದಲ್ಲಿ ಅನಲ ನರ್ತನ
ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ.
ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು.
ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು.
ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು.
ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು.
ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ.
ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ.
ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು.
ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು.
ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ.
ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ.
ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ.
“ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ.
ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ.
ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




