ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೮

೧೯೯೭……..  ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ  ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು.

ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ.

ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ  ಸಹಾಯಕ ಅಧಿಕಾರಿಯಾಗಿ ಹೋಗಿದ್ದು.  ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು.

ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್  ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್  ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ.

ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ  ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು.  ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು.

ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು.

ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು.  ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.
ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.
ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ  ಅಂತ ರೇಗಿಸಿದ್ದರು.

ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ.


About The Author

Leave a Reply

You cannot copy content of this page

Scroll to Top