ಶಿಕ್ಷಣ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ” ಶಿಕ್ಷಣ ಪದ್ಧತಿ ಹಾಗೂ ಶಾಲೆಗಳ ಪ್ರಸ್ತುತತೆ ಎಲ್ಲವೂ ಆನ್ಲೈನ್ ನಲ್ಲಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಕೂಡ ಆನ್ಲೈನ್ ನಲ್ಲಿ ಕಲಿಯುವ ದಿನಗಳು ಈಗಾಗಲೇ ಬಂದಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ದೊರೆಯುವ ದಿನಗಳು ದೂರವಿಲ್ಲ…. ಹಾಗಾದರೆ ಶಾಲೆಗಳ ಔಚಿತ್ಯವೇನು? ಎಂದು ನೀವು ಕೇಳಬಹುದು ಅಲ್ಲವೇ ? ಇದರ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣ ಪದ್ಧತಿ ನಡೆದು ಬಂದ ರೀತಿಯನ್ನು ಅವಲೋಕಿಸೋಣ. ನಮ್ಮ ಭರತ ಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದ್ದು ಶಿಕ್ಷಣದಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದಾಗಿತ್ತು. ಒಂದು ಕೌಟುಂಬಿಕ ಶಿಕ್ಷಣವಾದರೆ ಮತ್ತೊಂದು ಗುರುಕುಲ ಪದ್ಧತಿಯ ಶಿಕ್ಷಣ. ಕೌಟುಂಬಿಕ ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಆ ಮನೆಯ ರೀತಿ-ನೀತಿ, ಸಂಪ್ರದಾಯಗಳ ಜೊತೆ ಜೊತೆಗೆ ಸಾಮಾಜಿಕ ನಿಯಮಗಳನ್ನು ಪಾಲಿಸುವ ಕುರಿತು ಇಡೀ ಕುಟುಂಬವೇ ಗುರುವಾಗಿ ಪಾಠ ಕಲಿಸುತ್ತಿತ್ತು. ಇಲ್ಲಿ ಕುಟುಂಬದ ಹಿರಿಯರಾಗಲಿ, ಪಾಲಕರಾಗಲಿ, ತಂದೆ-ತಾಯಿಗಳಾಗಲಿ ಕೈಯಲ್ಲಿ ಬಳಪ ಹಿಡಿಸಿ ಪಾಟಿಯ ಮೇಲೆ ಬರೆಸಿ ಇಲ್ಲವೇ ಉರು ಹೊಡೆಸಿ ಪಾಠಗಳನ್ನು ಹೇಳಿಕೊಡಲಿಲ್ಲ…. ಬದಲಾಗಿ ತಮ್ಮ ನಡೆ ನುಡಿಗಳ ಮೂಲಕ ತಮ್ಮ ಮಕ್ಕಳಿಗೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಬದುಕಿನ ಪರಿಚಯವನ್ನು ಮಾಡಿಕೊಟ್ಟರು. ಇದರ ಜೊತೆ ಜೊತೆಗೆ ಗಂಡು ಮಕ್ಕಳಿಗೆ ಕುಟುಂಬದ ಕುಲ ಕಸುಬನ್ನು ಹಾಗೂ ಹೆಣ್ಣು ಮಕ್ಕಳಿಗೆ ಮನೆ ವಾರ್ತೆಯನ್ನು ಹೇಳಿಕೊಟ್ಟರು. ಒಕ್ಕಲುತನವೇ ಮೂಲ ಉದ್ಯೋಗವಾಗಿದ್ದ ನಮ್ಮ ಭಾರತ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಉದ್ಯೋಗ ಹಾಗೂ ಅದರ ಉಪ ಕಸುಬುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಉಪ್ಪಾರ, ಚಮ್ಮಾರ, ಮ್ಯಾದಾರ ಹೀಗೆ ಹತ್ತು ಹಲವು ಉದ್ಯೋಗಗಳನ್ನು ಕೈಗೊಂಡಿದ್ದು ಅದನ್ನೇ ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಇನ್ನು ರಾಜ ಮಹಾರಾಜರು, ಪಂಡಿತರು, ಜ್ಞಾನಿಗಳು, ಬ್ರಾಹ್ಮಣರು 64 ವಿದ್ಯೆಗಳಲ್ಲಿ ಕೆಲವಷ್ಟನ್ನಾದರೂ ಗುರುಕುಲಗಳಲ್ಲಿ ಇದ್ದು ಕಲಿಯುತ್ತಿದ್ದರು. ಊರಿನಿಂದ ತುಸು ದೂರ ಯಾವುದಾದರೂ ಕಾಡಿನ ಪ್ರಶಾಂತ ವಾತಾವರಣದಲ್ಲಿ ನದಿಯ ಪಕ್ಕದಲ್ಲಿ ತಮ್ಮ ಆಶ್ರಮವನ್ನು ಕಟ್ಟಿಕೊಂಡು ನೆಲೆಸಿರುತ್ತಿದ್ದ ಗುರುಗಳಿಗೆ ಋಷಿಮುನಿಗಳಿಗೆ ರಾಜ ಮಹಾರಾಜರುಗಳು ಗುರುಕುಲವನ್ನು ನಡೆಸಲು ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇನ್ನು ಗುರುಕುಲಕ್ಕೆ ಬರುವ ವಿದ್ಯಾರ್ಥಿಗಳು ರಾಜನ ಮಗನಾದರೂ ಸರಿಯೇ ಸೈನಿಕನ ಇಲ್ಲವೇ ಬಡ ಬ್ರಾಹ್ಮಣನ ಮಗನಾದರೂ ಎಲ್ಲರಿಗೂ ಒಂದೇ ನಿಯಮ. ಪ್ರತಿದಿನ ಆಶ್ರಮದ ನಿಯಮದಂತೆ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದರ ಜೊತೆಗೆ ಶಾಸ್ತ್ರೋಕ್ತವಾಗಿ ವಿವಿಧ ವಿದ್ಯೆಗಳನ್ನು ಕಲಿಯುವುದು ಅತ್ಯವಶ್ಯಕವಾಗಿತ್ತು.ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಅವರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವ್ಯಾಕರಣ, ಛಂದಸ್ಸು, ಕಾವ್ಯ, ಪುರಾಣ ಮತ್ತಿತರ ವಿದ್ಯೆಗಳನ್ನು ಕಲಿಸಿದರೆ ರಾಜ ಮಹಾರಾಜರ, ಮಂತ್ರಿಗಳ, ಸೇನಾಪತಿಗಳ ಹಾಗೂ ಸೈನಿಕರ ಮಕ್ಕಳುಶಸ್ತ್ರಾಸ್ತ್ರ ವಿದ್ಯೆಗಳಾದ ಧನುರ್ವಿದ್ಯೆ, ಕತ್ತಿ ವರಸೆ, ಭಲ್ಲೆ ಹಾಗೂ ಮತ್ತಿತರ ಆಯುಧಗಳ ಬಳಕೆಯ ಜೊತೆಗೆ ಕಾನೂನು ರಾಜಕೀಯ ನೀತಿಶಾಸ್ತ್ರ ಮುಂತಾದ ರಾಜ್ಯದ ಆಡಳಿತಕ್ಕೆ ಅತ್ಯವಶ್ಯಕವಾದ ವಿದ್ಯೆಗಳನ್ನು ಕಲಿಯುತ್ತಿದ್ದರು. ಗುರುಗಳು ಹೇಳಿದ ಮಾತುಗಳನ್ನು ವೇದ ವಾಕ್ಯದಂತೆ ಭಾವಿಸುವ, ಆಶ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಎಲ್ಲರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುವ ಈ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸುಮಾರು 6 ರಿಂದ 12 ವರ್ಷಗಳ ಕಾಲ ಶಾಸ್ತ್ರ ವಿದ್ಯೆಯ ಜೊತೆಗೆ ವೃತ್ತಿ ಶಿಕ್ಷಣವು ಕೂಡ ದೊರೆಯುತ್ತಿತ್ತು ಎಂದರೆ ತಪ್ಪಿಲ್ಲ. ಇದರ ಜೊತೆಗೆ ಕೋಶವನ್ನು ಓದುವ ಹಾಗೂ ದೇಶವನ್ನು ಸುತ್ತುವ ಕೆಲಸವನ್ನು ಅಂತಿಮವಾಗಿ ವಿದ್ಯಾರ್ಥಿಯು ಮಾಡುವ ಮೂಲಕ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವ್ಯತ್ಯಾಸಗಳನ್ನು ಅರಿಯುವ ಅವಕಾಶ ಕೂಡ ಅವರಿಗೆ ದೊರೆಯುತ್ತಿತ್ತು. ನಂತರದ ಕಳೆದೆರಡು ಶತಮಾನಗಳವರೆಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅದರಲ್ಲೂ ಮಠಗಳಲ್ಲಿ, ಅಗ್ರಹಾರಗಳಲ್ಲಿ ಆಯಾ ಊರಿನ ಪಂಡಿತರು ಜ್ಞಾನಿಗಳು ಮಕ್ಕಳಿಗೆ ಶಿಕ್ಷಣ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು. ಇಲ್ಲೂ ಕೂಡ ಅದೇ ಕಟ್ಟುನಿಟ್ಟಿನ ನಿಯಮಗಳಿದ್ದರೂ ಮಕ್ಕಳು ತಮ್ಮ ಮನೆಯ ವಾತಾವರಣದಲ್ಲಿ ಮುಂಜಾನೆ ಮತ್ತು ರಾತ್ರಿಗಳನ್ನು ಕಳೆಯುತ್ತಿದ್ದರು. ಮುಂಜಾನೆಯಿಂದ ಸಾಯಂಕಾಲದ ವರೆಗೆ ಶಿಕ್ಷಣ ನಂತರ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪಾಲಕರೊಂದಿಗೆ ವಾಸ ಇರುತ್ತಿತ್ತು. ಅದರ ನಂತರ ಕಳೆದ ಎರಡು ಶತಮಾನಗಳಿಂದ ಆರಂಭವಾಗಿದ್ದು ಇಂದಿಗೂ ಚಾಲ್ತಿಯಲ್ಲಿ ಇರುವುದು ಇಂದಿನ ಪದ್ಧತಿ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಪ್ರೌಢಶಾಲೆ ಕಾಲೇಜು ಸ್ನಾತಕೋತ್ತರ ಹೀಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ನೀಡುವ ಪದ್ಧತಿ ಆರಂಭವಾಯಿತು. ಮೊದಲ ಹತ್ತು ವರ್ಷಗಳವರೆಗೆ ಸಾಂಪ್ರದಾಯಿಕವಾಗಿ ಆಯಾ ಪ್ರದೇಶದ ಆಡಳಿತ ಭಾಷೆ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಗಳ ಜೊತೆ ಜೊತೆಗೆ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದ್ದ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಯಿತು. ಭಾಷೆಗಳ ಪಟ್ಟಿಯಲ್ಲಿ ನಮ್ಮ ಕರ್ನಾಟಕದಲ್ಲಿ ಕನ್ನಡ ನಮ್ಮ ಮಾತೃಭಾಷೆಯಾಗಿದ್ದು ಆ ಭಾಷೆಯ ಕಥೆ,ಕಾವ್ಯ, ಕವನ, ಗದ್ಯ, ಪದ್ಯ, ಹಳಗನ್ನಡ, ನಡುಗನ್ನಡ ನವ್ಯ ಸಾಹಿತ್ಯ, ನಾಟಕ ಇತಿಹಾಸ ವ್ಯಾಕರಣ, ಕವಿ ಕರ್ತೃಗಳ ಪರಿಚಯ, ಬದುಕು ಬರಹ ಇವುಗಳ ಕುರಿತು ಮಕ್ಕಳಿಗೆ ಆಯಾ ತರಗತಿಗಳಿಗೆ ಅನುಸಾರವಾಗಿ ಪಠ್ಯವನ್ನು ಇಡಲಾಗುತ್ತದೆ. ಗಣಿತದಲ್ಲಿ ಅಂಕಿಗಳನ್ನು ಬರೆಯುವ, ಓದುವ ಎಣಿಸುವ ಹೇಳುವುದರಿಂದ ಆರಂಭಿಸಿ ಕೂಡಿಸುವ ಕಳೆಯುವಾಗ ಗುಣಾಕಾರ ಮಾಡುವ ಭಾಗಿಸುವ ಲೆಕ್ಕಗಳನ್ನು ಇದರ ಮುಂದಿನ ಭಾಗವಾಗಿ ಗಣಿತದ ಮತ್ತೆ ವಿಷಯಗಳಾದ ದಶಮಾಂಶ ಪದ್ಧತಿ ಭಿನ್ನರಾಶಿ ಸಮೀಕರಗಳು ಪ್ರಮೇಯಗಳನ್ನು ಹಂತ ಹಂತವಾಗಿ ಕಲಿಸುವ ಯೋಜನೆಗಳು ರೂಪುಗೊಂಡವು. ಗಣಿತದಲ್ಲಿ ಅಂಕಗಣಿತ ಬೀಜಗಣಿತ ಹಾಗೂ ರೇಖಾಗಣಿತ ಎಂಬ ಮೂರು ವಿಭಾಗಗಳನ್ನು ಮಾಡಿದರು. ಸಮಾಜಶಾಸ್ತ್ರದಲ್ಲಿ ಇತಿಹಾಸ,ಭೂಗೋಳ ಹಾಗೂ ನಮ್ಮ ಸಂವಿಧಾನದ ನೀತಿಗಳನ್ನು ಅರಿಯುವ ಪೌರನೀತಿ ಎಂಬ ಮೂರು ವಿಭಾಗಗಳನ್ನು ಮಾಡಿ ಭೂಗೋಳದಲ್ಲಿ ಭೂಮಿಯ ಸಂರಚನೆಯ ಕುರಿತು ವೈವಿಧ್ಯಮಯ ಪ್ರದೇಶಗಳ ಕುರಿತು ಪ್ರಸ್ಥಭೂಮಿ ಮರುಭೂಮಿ ಕಾಡು ಹುಲ್ಲುಗಾವಲು ಮುಂತಾದ ಪ್ರಾದೇಶಿಕ ವೈವಿಧ್ಯತೆಗಳನ್ನು ಪಠ್ಯದ ಭಾಗವಾಗಿಸಿದರು. ಹೀಗೆ ಎಲ್ಲ ವಿಷಯಗಳು ಕುರಿತು ನುರಿತ ಭಾಷಾ ತಜ್ಞರನ್ನು, ವಿದ್ವಾಂಸರನ್ನು ಸಂಶೋಧಕರನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಆಯಾ ತರಗತಿಗಳಿಗೆ ಅನುಗುಣವಾಗಿ ಪಠ್ಯಗಳನ್ನು ಮೂಲಭೂತ ವಿಷಯಗಳ ಪಟ್ಟಿಯಲ್ಲಿ ಅಡಕಗೊಳಿಸಿ ವಯೋಮಿತಿಗೆ ತಕ್ಕಂತೆ ಅವುಗಳನ್ನು ಮಕ್ಕಳ ಕಲಿಕೆಯಲ್ಲಿ ಅಳವಡಿಸಿದರು. ಇದೀಗ ಆನ್ಲೈನ್ ನಲ್ಲಿ ಕೂಡ ವೈವಿಧ್ಯಮಯ ಕೋರ್ಸುಗಳ ವಿಷಯಗಳ ಕುರಿತು ನಾವು ಕಲಿಯಬಹುದು. ಈ ಎಲ್ಲಾ ಕಲಿಕೆಗೆ ಮೂಲ ನಮ್ಮ ಆಸಕ್ತಿ ಆಗಿರಬೇಕು. ಇಂತಹ ಕಲಿಕೆಯನ್ನು ಕಲಿಸಲು ಶಾಲೆ ಪುಸ್ತಕ ಗುರುಗಳು ಬೇಕಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಭೌತಿಕವಾಗಿ ಶಾಲೆಗಳ ಅಸ್ತಿತ್ವ ಇರುತ್ತದೆಯೇ ಎಂಬ ಪ್ರಶ್ನೆ ಕೇಳಿದರೆ ಬಹುಶಹ ಇಲ್ಲ ಎಂದು ಹೇಳಬಹುದು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಮ್ಮದೇ ಆದ ಅನುಕೂಲಕರ ವಾತಾವರಣದಲ್ಲಿ ಕುಳಿತು ನಿಂತು ಮಲಗಿ ಆನ್ಲೈನ್ ನಲ್ಲಿ ಶಿಕ್ಷಕರ ಪಾಠಗಳನ್ನು ಕೇಳಿ ಪರೀಕ್ಷೆಗಳನ್ನು ಬರೆದು ಪದವಿಗಳಿಸಬಹುದಾದ ದಿನಗಳು ಮುಂದೊಂದು ದಿನ ಬರಬಹುದು. ಹಾಗಾದರೆ ಶಿಕ್ಷಣ ಎಷ್ಟರಮಟ್ಟಿಗೆ ಪ್ರಸ್ತುತ ? ಶಾಲೆಗಳ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸಬಹುದು ಖಂಡಿತವಾಗಿಯೂ ಶಾಲೆಗಳ ಅವಶ್ಯಕತೆ ಇದೆ. ಮಕ್ಕಳು ಚಿಕ್ಕಂದಿನಿಂದಲೂ ಒಂದು ಸಾಂಫಿಕ ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು, ಬದುಕಿನಲ್ಲಿ ಮೌಲ್ಯಗಳ ಅಳವಡಿಕೆಯ ಪಾಠವನ್ನು ಕಲಿಯಲು ಶಿಕ್ಷಣ ಬೇಕು. ಆದರೆ ಅಂತಹ ಶಿಕ್ಷಣ ದೊರೆಯುವುದು ಕೇವಲ ಶಾಲೆಗಳಲ್ಲಿ ಮಾತ್ರ. ಸತ್ಯ,ಧರ್ಮ,ನ್ಯಾಯ, ನೀತಿ, ಕರುಣೆ, ದಯೆ,ಪ್ರೀತಿ, ವಿಶ್ವಾಸ, ನಂಬಿಕೆ, ದೇಶಪ್ರೇಮ, ದೇಶದ ಕುರಿತು ಅಭಿಮಾನ, ರಾಷ್ಟ್ರೀಯ ಜಾಗೃತಿ ಸಂವಿಧಾನದ ಪರಿಕಲ್ಪನೆ ನಮ್ಮ ರಾಷ್ಟ್ರೀಯ ನಾಯಕರ ಕುರಿತ ಕಥೆಗಳು, ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಬದುಕಿನ ಪಾಠಗಳು, ಆಟಗಳು ಆಟದ ಮೂಲಕ ಒಪ್ಪಿಕೊಳ್ಳಲು ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೆ ಅತ್ಯವಶ್ಯಕವಾದ ಎಲ್ಲಾ ಬಗೆಯ ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬಲು ನಮಗೆ ಶಾಲೆಗಳು ಅತ್ಯವಶ್ಯಕ. ಶಿಕ್ಷಣವನ್ನು ಬೇಕಾದರೆ ಆನ್ಲೈನ್ ನಲ್ಲಿ ಪಡೆಯಬಹುದು… ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನವನ್ನು ಚಾರಿತ್ರ್ಯ ನಿರ್ಮಾಣವನ್ನು ಶಿಕ್ಷಣದಂತೆ ಕೇವಲ ಒಂದು ಇಲ್ಲವೇ ಎರಡು ವರ್ಷಗಳಲ್ಲಿ ಕಲಿಸಿ ಮುಗಿಸಲು ಸಾಧ್ಯವಿಲ್ಲ ಅದೊಂದು ನಿರಂತರ ಪ್ರಕ್ರಿಯೆ…. ಅದಕ್ಕೆ ತನ್ನದೇ ಆದ ಗತಿಯಿದ್ದು ಆ ಗತಿಯಲ್ಲಿಯೇ ಮಕ್ಕಳು ತಮ್ಮ ಬದುಕಿನಲ್ಲಿ ಶಾಲೆಗಳ ಮೂಲಕ, ಶಿಕ್ಷಕರ ಮೂಲಕ, ಸಹಪಾಠಿಗಳ ಜೊತೆಗೆ, ಹಿರಿಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಶಾಲೆ ಎಂಬ ದೊಡ್ಡ ಆವರಣದ ಆಟದ ಮೈದಾನದಲ್ಲಿ, ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ನಿರಂತರವಾಗಿ ಕಲಿಯಬೇಕು ಇದಕ್ಕೆ ಶಾಲೆ ಅತ್ಯಂತ ಸೂಕ್ತವಾದ ಸ್ಥಳ. ಜನನೀ ಜನ್ಮ ಭೂಮಿಶ್ಚ.. ಸ್ವರ್ಗಾದಪಿ ಗರೀಯಸಿ ಎಂಬ ಪರಿಕಲ್ಪನೆಯನ್ನು ನಮಗೆ ಕಟ್ಟಿಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ನಾಗರಿಕರಾಗಿ ನಮ್ಮ ದೇಶದ ಸಂವಿಧಾನದ ಮೂಲಕ ನಾವೆಲ್ಲರೂ ಒಂದು ಎಂಬ ವಿವಿಧತೆಯಲ್ಲಿ ಏಕತೆಯ ಪಾಠವನ್ನು ಹೇಳಿಕೊಡುವುದು ಶಾಲೆಯೇ. ಸಿರಿವಂತರ ಮಗನಾಗಲಿ ಗುರು ಪುತ್ರನಾಗಲಿ ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯ ಮಗನಾಗಲಿ ಶಾಲೆಯ ವಾತಾವರಣದಲ್ಲಿ ಏಕರೂಪದ ಸಮವಸ್ತ್ರವನ್ನು ಧರಿಸಿ ಮೇಲು-ಕೀಳು, ಬಡವ-ಬಲ್ಲಿದ, ವರ್ಗ-ವರ್ಣ ಎಂಬ ಯಾವುದೇ ಭೇದಗಳಿಲ್ಲದೆ ಕಲಿಯುವ ವಾತಾವರಣವನ್ನು ಕಲ್ಪಿಸಿ ಕೊಡುವುದು ಶಾಲೆ ಎಂಬ ಪವಿತ್ರ ದೇಗುಲ. ಶಾಲೆಗಳೇ ಮಕ್ಕಳ ವ್ಯಕ್ತಿತ್ವ ವಿಕಸನದ ಅದ್ಭುತವಾದ ಕಾರ್ಯ ಆಧಾರಗಳು ಅಂತಹ ಶಾಲೆಗಳಲ್ಲಿ ಮಕ್ಕಳು ತಮ್ಮ ಬದುಕಿನಲ್ಲಿ ಮುಂದೆ ಹೇಗೆ ಇರಬೇಕು ಎಂಬುದರ ಪ್ರಾಥಮಿಕ ಪಾಠವನ್ನು ಕಲಿಯುತ್ತಾ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಒಂದೊಂದೇ ಹಂತದ ನೈತಿಕ, ಮೌಲಿಕ, ಸಾಮಾಜಿಕ ಐತಿಹಾಸಿಕ ಸಾಂಸ್ಕೃತಿಕ ಜೀವನ ಪಠ್ಯಗಳನ್ನು ಪ್ರಾಯೋಗಿಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗುತ್ತಾರೆ. ಧೈರ್ಯ, ಸಾಹಸ, ರಾಷ್ಟ್ರೀಯವಾದ, ಸೇವಾ ಮನೋಭಾವ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಯುವ ಮಕ್ಕಳ ಬದುಕಿನಲ್ಲಿ ಮೂಡುವುದು ಶಾಲೆಯ ಮೂಲಕವೇ ಮುಂದೆ ಮಕ್ಕಳು ತಮ್ಮ ಬದುಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಂಗಗಳಲ್ಲಿ ಮಿಂಚಿ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು.. ಆದರೆ ಅದೆಲ್ಲಕ್ಕೂ ಮುಖ್ಯವಾದ ಮೂಲಭೂತವಾದ ಅಡಿಪಾಯವನ್ನು ಶಾಲೆಗಳು ಹಾಕಿಕೊಡುತ್ತವೆ. ಸೋಲು ಗೆಲುವಿನ ನೋವು ನಲುವಿನ ನೂರಾರು ಪಾಠಗಳನ್ನು ಕೂಡ ಶಾಲೆಗಳು ಕಲಿಸಿಕೊಡುತ್ತವೆ. ಹೀಗಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಶಾಲೆಗಳು ಬೇಕೇ ಬೇಕು ಅಂತಹ ಶಾಲೆಗಳ ಅಸ್ತಿತ್ವವನ್ನು ಗುರುತಿಸುವ ಸಂವೇದನಾಶೀಲ ಸಶಕ್ತ ಸಮಾಜದ ಹರಿಕಾರರು ನಾವಾಗಬೇಕು. ಆ ಮೂಲಕ ಶಿಕ್ಷಣ ಪದ್ಧತಿಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತೀಕರಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಸಮಾಜದ ನಾವೆಲ್ಲರೂ ಒಂದುಗೂಡಿ ಕಾರ್ಯ ನಿರ್ವಹಿಸೋಣ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್