ಶ್ರೀದೇವಿ ಮ.ಗುಮ್ಮಗೋಳ
“ಸೋತು ಗೆದ್ದ ರೈತ”


“ಎನ್ ಸವಕಾರ ಕರಿದರಂತಲ್ಲ ಎದಕ” ಎಂದು ಕೆಳಗಿನಮನಿ ರಾಮಪ್ಪ ಬಸನ ಗೌಡರ ಮುಂದೆ ಕೈ ಕಟ್ಟಿ ನಿಂತು ಕೇಳಿದ.
“ನೋಡ ರಾಮ್ಯಾ ಈ ಸರಿ ನಾನು ಜಿಲ್ಲಾ ಪಂಚಾಯತ್ ಎಲಕ್ಷನ್ ನಿಲ್ಲಾಕ್ಕತ್ತೇನಿ. ಊರಾಗಿನ ರೈತರೆಲ್ಲರಿಗೂ ಹೇಳಿ ನೀನ ಓಟ ಹಾಕಸ್ಬೇಕು. ನಿನ್ನ ರೈತ ಸಂಘದ ಮುಖಂಡ ಮಾಡ್ತೇನಿ. ಎದಕ ಹೊಲ ಮನಿ ಅಂತ ಕತ್ತಿ ದುಡದಂಗ ದುಡಿತಿ. ನಿನ್ನ ಕೈಯಾಗಿ ನಾಕ ರೊಕ್ಕಾಡ್ತಾವು”
ರಾಮಪ್ಪನಿಗೆ ನಾಲ್ಕು ಎಕರೆ ಹೊಲ ಇತ್ತು. ಮಳಿ ಇಲ್ಲದಿದ್ದರ ಬೆಳಿ ಇಲ್ಲ. ಇನ್ನ ಮಳಿ ಬಂದರ ಬೆಳಿಗೆ ಸರಿಯಾದ ಬೆಲೆ ಇಲ್ಲ. ಒಟ್ಟನಲ್ಲಿ ಇಡಿ ನಾಡಿಗೆ ಅನ್ನ ನೀಡುವ ರೈತ ಒಂದಪ್ಪತ್ತಿನ ಕೂಳಿಗೂ ಪರದಾಡುವ ಸ್ಥಿತಿ. ರಾಮಪ್ಪನು ಯೊಚಿಸಿದ “ಭೂಮಿ ತಾಯವ್ವನ ನೆಚ್ಚಕೊಂಡು ಎಷ್ಟ ವರಷಾತು ದುಡಿಯಾಕ್ಕತು ಇನ್ನು ಎಲ್ಲ ಅದೇನಿ ಅಲ್ಲೆ ಅದೇನಿ. ಅದ ಮುರಕಲು ಮನಿ.. ಅದೇ ಹಳೆ ಜೋಡತ್ತುಗಳು…. ನೋಡ.. ಗೌಡರು ಪಂಚಾಯತ್ ಎಲಕ್ಷನ್ ಗೆದ್ದು ಹೋದ ಸಾರಿ ಟ್ರಾಕ್ಟರ್ ತುಗೊಂಡ್ರು ಹೊಸ ಮನಿ ಕಟ್ಟಿಸಿದ್ರು…. ಬರಿ ಹೊಲ ಅಷ್ಟಲ್ಲದ… ಹಿಂಗ ಬ್ಯಾರೆ ಕೆಲಸ ಹಿಡದಾರಂತ…. ಜೀವನದಾಗ ಮುಂದ ಬಂದಾರು. ತಾನು ಇವರ ಹೇಳದಂಗ ಇವರ ಹಿಂದ ಇವರ ದಾರಿಯೊಳಗ ಹೋದರ… ಮುಂದೊಂದು ದಿನಾ ನಾನು ರೈತ ಮುಖಂಡಾಗಿ ಎಲೆಕ್ಷನ ನಿಂತು ಗೆದ್ದ ಬಂದರ… ನನ್ನ ಬದುಕು ಬಂಗಾರ ಆಗ್ತೇತಿ” ಎಂದುಕೊಂಡ.
ಗೌಡ ಹೋದ ಸಾರಿ ಪಂಚಾಯತ ಚೇರಮನ್ ಆಗಿ ಸರಕಾರದಿಂದ ಹಳ್ಳಿಗಳಿಗೆ ಕೊಡುವ ವಿವಿಧ ಫಂಡಗಳಲ್ಲಿ ಸಾಕಷ್ಟು ದುಡ್ಡು ಹೊಡೆದಿದ್ದ. ಮುಂದ ಇನ್ನೂ ಜಿಲ್ಲಾ ಪಂಚಾಯತ ಚುನಾವಣೆ ಯಲ್ಲಿ ಗೆದ್ದು ಮುಂದ ವಿಧಾನ ಸೌಧದಾಗ ಕುಳಿತುಕೊ ಮಹಾನ್ ಆಸೆ ಇಟ್ಟಕೊಂಡಿದ್ದ. ತನ್ನ ಈ ಆಸೆ ಇಡೇರಿಸಿಕೊಳ್ಳಲು ರಾಮಪ್ಪನನ್ನ ಉಪಯೋಗಿಸಿಕೊಂಡ.
ರಾಮಪ್ಪ ಹಳ್ಳಿಯಲ್ಲಿ ಎಲ್ಲರೊಂದಿಗೆ ಬೆರೆತು ಒಳ್ಳೆ ಸಂಬಂಧ ಇತ್ತು. ಬಹಳ ಸಂಬಾವಿತ ಮತ್ತು ಮುಗ್ದನಾಗಿದ್ದ. ಯಾರ ಜೊತೆಗೂ ಜಗಳ ಆಡದ ಊರ ಜನರ ಮೆಚ್ಚುಗೆ ಗಳಿಸಿದ್ದ. ಎಪ್ಪತ್ತು ದಾಟಿದ ರಾಮಪ್ಪನಿಗೆ ಇದ್ದದ್ದು ಎರಡು ಹೆಣ್ಣು ಮಕ್ಕಳು ಅವರನ್ನು ಮದುವೆ ಮಾಡಿ ಕೊಟ್ಟಿದ್ದ. ಊರಿನಲ್ಲಿ ಕೆಲವೊಂದು ಸಮಸ್ಯೆ ಬಂದಾಗ ರಾಮಪ್ಪ ಯಾರಿಗೂ ನೊವಾಗದ ಹಾಗೆ ಬಗೆಹರಿಸಿದ್ದ.
ರಾಮಪ್ಪ ಗೌಡನ ಎಲೆಕ್ಷನ್ ಪ್ರಚಾರಕ್ಕೆ ಅವನ ಹಿಂದೆ ನಿಂತ. ಊರೊಳಗ ಎಲ್ಲ ಮನಿ ಮನಿಗೂ ತೆರಳಿ “ನೋಡಪಾ ಗೌಡರಿಗೆ ಓಟ ಹಾಕ್ಬೇಕು. ನಮ್ಮ ಗೌಡರು ರೈತರಿಗೆ ಬಹಳಷ್ಟು ಅನುಕೂಲ ಆಗಾಕ ಸರಕಾರಕ್ಕ ಕೇಳಕೊತಾರು.” ಅಂದ
ಗೌಡ ” ನೊಡ್ರಪ್ಪಾ ಇನ್ನ ಮುಂದ ಸಾಲ ಮಾಡಿ ನೇಣ ಹಾಕೊ ಪರಿಸ್ಥಿತಿ ಇಲ್ಲ. ನಿಮ್ಮ ಸಾಲ ಮನ್ನಾ ಆಗುಂಗ ಮಾಡ್ತೇನಿ. ಬೆಳೆಗೆ ಚುಲೊ ರೊಕ್ಕ ಬರುವ ವ್ಯವಸ್ಥಾ ಮಾಡ್ತೇನಿ. ಇನ್ನ ಮುಂದ ರೈತರ ಕಷ್ಟ ತೀರತು ಅಂತ ತೀಳಕೊರಿ” ಅಂದ
ಬಸನಗೌಡನಿಗೆ ರಾಮಪ್ಪ ಜೊತೆ ಇದ್ದದ್ದರಿಂದ ಜನ ಗೌಡನಿಗೆ ಓಟ ಹಾಕಿದರು. ಗೌಡ ಗೆದ್ದು ಬಂದ. ಬಸನ ಗೌಡ ಓಡಾಡಿದ್ದಕ್ಕಾಗಿ ರಾಮಪ್ಪನ ಕೈಯಲ್ಲಿ ಒಂದಿಷ್ಟು ದುಟ್ಟು ಕೊಟ್ಟ. ಅಷ್ಟು ದುಡ್ಡನ್ನು ರಾಮಪ್ಪ ತನ್ನ ಜೀವಮಾನದಲ್ಲೆ ನೋಡಿರಲಿಲ್ಲ. ಅದರಲ್ಲಿನ ದುಡ್ಡಿನಿಂದ ತಾನು ಮಾಡಿದ ಸಾಲವನ್ನು ತೀರಿಸಿದ. ಆದರೆ ವಾಸ್ತವವಾಗಿ ರಾಮಪ್ಪ ತನ್ನನ್ನು ಮತ್ತು ತನ್ನ ಜನರನ್ನ ಓಟಿಗೆ ಮಾರಿದೆ ಎನ್ನುವ ಆಲೊಚನೆಯಾಗಲಿ ಬರಲೆ ಇಲ್ಲಾ. ರೈತ ದೇಶದ ಬೆನ್ನಲಬು ಅಂತಾರೆ. ಆದರೆ ಬಸನಗೌಡಾ ಅದೇ ಬೆನ್ನಲಬನ್ನು ತನ್ನ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡ. ಆ ಮೀಟಿಂಗ ಈ ಮೀಟಿಂಗು ಎನ್ನುತ ಬೆಂಗಳೂರಿಗೆ ಹೋಗತೊಡಗಿದವನು ಬರಬರುತ್ತ ಬೆಂಗಳೂರಿನಲ್ಲೆ ಇರತೊಡಗಿದ. ಸಚಿವನಾಗಬೇಕೆನ್ನುವದಕ್ಕಾಗಿ ಮುಂದಿನ ಪ್ಲಾನ್ ಹಾಕ ತೊಡಗಿದ. ರಾಮಪ್ಪನನ್ನು, ಓಟ ಗಿಟ್ಟಿಸಿಕೊಂಡ ಊರಿನ ಜನರನ್ನು ಮರತೆ ಬಿಟ್ಟ.
ರಾಮಪ್ಪ ತಾನು ರೈತ ಮುಖಂಡನಾಗ್ತೇನಿ ಮುಂದ ಪಂಚಾಯತ್ ಚೇರಮನ್ ಆಗ್ತೇನಿ ಅಂತ ಕನಸು ಕಂಡು ಗೌಡನ ಹಿಂದೆ ಸುತ್ತಿದವನಿಗೆ ಬರಬರುತ್ತ ವಾಸ್ತವ ಅರ್ಥವಾಗತೊಡಗಿತು. ಹೆಂಡತಿ “ಎದಕ ಬೇಕಾಗಿತ್ತು ನಿಮಗ ಆ ಗೌಡನ ಹಿಂದ ಸುತ್ತದು…. ಒಂದಿಷ್ಟ ದುಡ್ಡ ಕೊಟ್ಟು ಕೈತೊಳಕೊಂಡ…. ಸಾಲಾ ಏನೊ.. ಹರದರಿ ಆದರ…. ಹೊಲದಾಗ ನೀವಲ್ಲದ ಬಿತ್ತಿಗಿ ಕೂರಗಿ ಒಂದು ಇಲ್ಲದ ಹೊಲಾ ಪಾಳ ಬಿದ್ದೈತಿ. ನಾನಾದರೂ ಹೊಲದಾಗ ಏನಾದರೂ ಬಿತ್ತತೇನಿ ಅಂದರ… ಎದಕ ಬೇಕಿನ್ನ ಹೊಲ… ಗೌಡರು ಮುಂದ ಬಾಳು ಬಂಗಾರಕ್ತೈತಿ ಅಂದಾರು ಅಂತ ಹೇಳದಿ….. ಎಲ್ಲಿ ಬಂಗಾರ…. ಬರಿ ಅಂಗಾರ ತಿನ್ನುದಾತು….” ಎಂದು ಗಂಡನನ್ನ ಬೈದಳು. ಹೌದು ಪಾಪ ಮುಗ್ದನಾದ ರಾಮಪ್ಪ ಗೌಡನನ್ನ ನಂಬಿ ಹಾಳಾದ. ಬೆಳಿ ಇಲ್ಲದ ಭೂಮಿ ಹಾಳಾತು.
ರಾಮಪ್ಪ ನೊಂದಕೊಂಡು ಅಂದು ಹೊಲಕ ಹೋಗಿ ನೋಡಿದರ ಬೂಮಿಯೊಳಗ ಎಲ್ಲಾ ಕಡೆ ಕಸಾ ಬೆಳದಿತ್ತು. ಎತ್ತುಗಳಿಗೆ ಸರಿಯಾಗಿ ಮೇವು ಇಲ್ಲದ ಸಣಕಲಾಗಿದ್ದವು. ನೋಡಿ ಮರಾಮರಾ ಅಂತ ಮರಗಿದ. ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟ. ರಾಮಪ್ಪ ತನ್ನ ತೆಲೆಯೊಳಗ ಗೌಡ ಬೆಳೆದ ಕಸಾ ಕಿತ್ತೊಗದ. ಕಳೆದುಕೊಂಡ ಮಗಾ ತನ್ನ ತಾಯಿಯ ಮಡಿಲನ್ನು ಸೇರಿದಾಗ ಬಿಕ್ಕಿ ಬಿಕ್ಕಿ ಅಳುವಂತೆ ಅಂದು ಭೂತಾಯಿಯ ಮಣ್ಣನ್ನ ತನ್ನ ಕೈ ಮುಷ್ಟಿಯಲ್ಲಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾ. ಮನಸಿಗೆ ಪಕ್ಕದಲ್ಲಿರುವ ಗಿಡಕ್ಕೆ ಹಗ್ಗದಿಂದ ನೇಣುಹಾಕಿಕೊಳ್ಳಬೇಕೆನಿಸಿತು. ಆಕಾಶದ ಕಡೆ ಮುಖ ಮಾಡಿದಾಗ. ಬದುಕು ವಿಶಾಲವಾಗೈತಿ. ಬದುಕು ಇಷ್ಟಕ್ಕೆ ಮುಗದಿಲ್ಲ ಎಂದು ತನ್ನಲ್ಲೆ ಸಮಾದಾನ ಪಟ್ಟುಕೊಂಡ. ಒಂದು ದೃಡ ನಿರ್ದಾರಕ್ಕೆ ಬಂದವನಂತೆ ಎದ್ದುನಿಂತ ಮುಂದೆಂದು ಎಡವದ ಹಾಗೆ ಎದ್ದುನಿಂತ. ಕೈಯಲ್ಲಿ ಕುಡುಗೋಲು ಹಿಡಿದು ಕಸ ಕೀಳತೊಡಗಿದ. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂದುವಿಲ್ಲ’ ಎನ್ನುವಂತೆ ತನ್ನ ಭೂತಾಯಿಯನ್ನು ಬಿಟ್ಟು ಒಂದು ಕ್ಷಣ ಅಗಲದಂತೆ ಮೈಮುರಿದು ದುಡಿಯತೊಡಗಿದ.
ಒಣಗಿದ್ದ ನೆಲವನ್ನು ತನ್ನ ಉಸಿರಿನಿಂದ ಹಸುರಾಗಿಸಿದ. ಹಟಕ್ಕೆ ಬಿದ್ದವನಂತೆ ತನಗೀರುವ ನಾಲ್ಕೆ ನಾಲ್ಕು ಎಕರೆಯ ಬರಾಡಾದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ. ಸುತ್ತ ಮುತ್ತ ಹಳ್ಳಿಯಲ್ಲಿ ಜನ ಇದ್ದರೆ ರಾಮಪ್ಪನಂತ ರೈತ ಇರಬೇಕು ಎಂದು ಕೊಂಡಾಡ ತೋಡಗಿದರು. ತನ್ನ ಸಾಧನೆಯಿಂದ ಉತ್ತಮ ರೈತ ಎಂಬ ಪ್ರಶಸ್ತಿ ಪಡೆದ.
ಶ್ರೀದೇವಿ. ಮ. ಗುಮ್ಮಗೋಳ



