ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತನು ಮನ ಸಂತೈಸಿಕೊಂಡು
ಸುಮ್ಮನಿರಬೇಕಷ್ಟೇ ಇಲ್ಲಿ,
ಮುಖಕ್ಕಿಂತ ಮುಖವಾಡವ
ಮುದ್ದಿಸುವವರೇ ಹೆಚ್ಚು

ಲೋಕದ ಡೊಂಕು ತಿದ್ದುವ
ಹುದ್ದೆಗಳೆಲ್ಲವು ಖಾಲಿ ಇಲ್ಲಿ,
ಕೊಂಕು ಮಾತಿನ ರೂಪದಿ
ಸಿಗುವ ಸಂಬಳವೇ ಹೆಚ್ಚು

ಮುಂಗಡದ ಜೊತೆ ಜೊತೆಗೆ
ಕೈಗಡವ ನೀಡುವರು ಇಲ್ಲಿ,
ಇಷ್ಟಾದರೂ ಈ ನೌಕರಿಯ
ಬೇಡ ಎನುವವರೇ ಹೆಚ್ಚು

ದಂತಕಥೆಗಳು ಕಣ್ಮುಂದಿವೆ
ಬೇತಾಳ ಬೆನ್ನ ಹಿಂದೆ ಇಲ್ಲಿ,
ಹೊತ್ತ ವಿಕ್ರಮಗರಿಗಿಂತಲೂ
ಹೂತ ಅಕ್ರಮಗಳೇ ಹೆಚ್ಚು

ಅಂಕು ಡೊಂಕುಗಳೇ ಮನೆ
ಮನಗಳ ಸಿಂಗರಿಸಿವೆ ಇಲ್ಲಿ,
ಲೋಕೋದ್ಧಾರ ಬಯಸದೇ
ಹುಟ್ಟಿದ ಹುಳುಗಳೇ ಹೆಚ್ಚು

ದೂರು ಇಲ್ಲ ದೂರುವರಿಲ್ಲ
ದರ್ಬಾರು ನಡೆದಿದೆ ಇಲ್ಲಿ,
ಕಾರ್ಯದ ಭಾರಕ್ಕಿಂತಲೂ
ಕಾರುಬಾರುಗಳೇ ಹೆಚ್ಚು

ನಾನು ನಾನಾಗುವುದ ಬಿಟ್ಟು
ಎಲ್ಲರೊಳಗೊಂದಾದೆ ಇಲ್ಲಿ,
ಮಂಕುತಿಮ್ಮನ ತುಸುಮತಿಗೆ
ಮಂಕು ಕವಿದಿಹುದೇ ಹೆಚ್ಚು


About The Author

Leave a Reply

You cannot copy content of this page

Scroll to Top