ಜೀವನ ಸಂಗಾತಿ
“ಮಕ್ಕಳು…..ತಾಯಿಯ ಪ್ರತಿಬಿಂಬ”
ವೀಣಾ ಹೇಮಂತ್ ಗೌಡ ಪಾಟೀಲ್


ಮಕ್ಕಳು…..ತಾಯಿಯ ಪ್ರತಿಬಿಂಬ
ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.
ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.
ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.
ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.
ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ.
ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆ
ಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.
ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.
ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.
ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆ
ನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.
ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆ
ಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆ
ನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ.
ಏನಂತೀರಾ ಸ್ನೇಹಿತರೇ??
ವೀಣಾ ಹೇಮಂತ್ ಗೌಡ ಪಾಟೀಲ್



