ಸ್ಥಳ ಸಂಗಾತಿ
ಡಾ. ಮಲ್ಲಿನಾಥ ಎಸ್. ತಳವಾರ
“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”


ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು
“If you don’t know where you are, you don’t know who you are.”
— Wendell Berry
‘ವೈಶಿಷ್ಟ್ಯ’ ಎಂಬ ಪದವು ಕೇವಲ ವಿಶೇಷತೆ ಎನ್ನುವ ಅರ್ಥವನ್ನಷ್ಟೇ ಹೊಂದಿಲ್ಲ; ಇದು ಒಂದು ಸ್ಥಳದ ಆತ್ಮ, ಅದರ ಇತಿಹಾಸದ ಧ್ವನಿ, ಸಂಸ್ಕೃತಿಯ ಸ್ಪಂದನೆ ಮತ್ತು ಜನಜೀವನದ ವೈವಿಧ್ಯಮಯ ರೂಪಗಳ ಒಕ್ಕೂಟವಾಗಿದೆ. ಒಂದು ಪ್ರದೇಶವನ್ನು ಇತರ ಪ್ರದೇಶಗಳಿಂದ ವಿಭಿನ್ನವಾಗಿ ಗುರುತಿಸುವ ಸ್ವಭಾವ, ಪರಂಪರೆ, ಸಾಧನೆಗಳು ಮತ್ತು ಜೀವನಪದ್ಧತಿಗಳ ಸಮಗ್ರ ರೂಪವೇ ಅದರ ವೈಶಿಷ್ಟ್ಯ. ಪ್ರತಿ ಭೂಭಾಗಕ್ಕೂ ತನ್ನದೇ ಆದ ಪ್ರಕೃತಿ ರಚನೆ, ಐತಿಹಾಸಿಕ ಪಾದಚಿಹ್ನೆಗಳು, ಧಾರ್ಮಿಕ ನಂಬಿಕೆಗಳು, ಭಾಷಾ-ಸಾಹಿತ್ಯ ಪರಂಪರೆ, ಜನಪದ ಆಚರಣೆಗಳು ಹಾಗೂ ಆರ್ಥಿಕ-ಸಾಮಾಜಿಕ ಜೀವನದ ರೂಪರೇಖೆಗಳಿವೆ. ಇವುಗಳ ಸಮನ್ವಯದಿಂದ ಆ ಪ್ರದೇಶದ ರೂಪುರೇಷೆ ನಿರ್ಮಾಣವಾಗುತ್ತದೆ. ಅದನ್ನು ಸ್ಪಷ್ಟವಾಗಿ ಗುರುತಿಸುವ ಲಕ್ಷಣಗಳೇ ವೈಶಿಷ್ಟ್ಯಗಳು. ವೈಶಿಷ್ಟ್ಯವು ಕೇವಲ ಭೌಗೋಳಿಕ ಅಥವಾ ಐತಿಹಾಸಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಇದು ಮಾನವ ಸಂಬಂಧಗಳ ಉಷ್ಣತೆಯಲ್ಲಿ, ಆಚರಣೆಗಳ ಸರಳತೆಯಲ್ಲಿ, ನಂಬಿಕೆಗಳ ಆಳದಲ್ಲಿ ಮತ್ತು ಸೃಜನಶೀಲತೆಯ ಸ್ಪಂದನದಲ್ಲಿ ವ್ಯಕ್ತವಾಗುತ್ತದೆ. ಒಂದು ಸ್ಥಳದ ವೈಶಿಷ್ಟ್ಯವನ್ನು ಅರಿತುಕೊಳ್ಳುವುದು ಎಂದರೆ ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಂಧಿಬಿಂದುಗಳನ್ನು ಅರಿಯುವುದಾಗಿದೆ. ಈ ಹಿನ್ನೆಲೆಯಲ್ಲಿ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಎಂಬುದನ್ನು ಪರಿಗಣಿಸಿದಾಗ, ಇದು ಕೇವಲ ಸ್ಥಳೀಯ ಮಾಹಿತಿ ಸಂಗ್ರಹವಲ್ಲ; ಬದಲಿಗೆ ಚಿತ್ತಾಪುರದ ಭೌಗೋಳಿಕ ರೂಪರೇಖೆ, ಐತಿಹಾಸಿಕ ಪರಂಪರೆ, ಧಾರ್ಮಿಕ ಸೌಹಾರ್ದತೆ, ಸಾಹಿತ್ಯಿಕ ಚೈತನ್ಯ ಮತ್ತು ಜನಪದ ಸಂಸ್ಕೃತಿಯ ಅನನ್ಯತೆಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ.
ಒಂದು ಸ್ಥಳದ ಹೆಸರಿನಲ್ಲಿ ಅದರ ಇತಿಹಾಸ ಮಾತ್ರವಲ್ಲ, ಅಲ್ಲಿಯ ಜನರ ಮನೋಭಾವ, ಧಾರ್ಮಿಕ ನಂಬಿಕೆಗಳು, ಜೀವನ ವಿಧಾನ ಮತ್ತು ತಾತ್ವಿಕ ಚಿಂತನೆಗಳು ಅಡಗಿರುತ್ತವೆ. “ಚಿತ್ತಾಪುರ”ವು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ತಾಲೂಕು. ಇದನ್ನು ‘ಚಿತ್ತಾಪೂರ’ ಎಂತಲೂ ಕರೆಯಲಾಗುತ್ತದೆ. ಆಡಳಿತಾತ್ಮಕ/ಅಧಿಕೃತ ಬಳಕೆ, ಸರ್ಕಾರದ ದಾಖಲೆಗಳು, ತಾಲೂಕು ಹೆಸರು, ನಕ್ಷೆಗಳು … ಎಲ್ಲೆಡೆಯೂ ‘ಚಿತ್ತಾಪುರ’ ಎಂಬ ರೂಪವನ್ನೇ ಬಳಸಲಾಗುತ್ತದೆ. ಇನ್ನೂ ‘ಪೂರ’ (ಪೂರ್) ರೂಪವು ಕೆಲವು ಸಂದರ್ಭಗಳಲ್ಲಿ ಧ್ವನಿಮಾಧುರ್ಯಕ್ಕಾಗಿ ಸಾಹಿತ್ಯದಲ್ಲಿ ಬಳಸಲಾಗುತ್ತದೆ. ಅಂದರೆ ಅಧಿಕೃತ ಮತ್ತು ವ್ಯಾಕರಣಬದ್ಧವಾಗಿ ‘ಚಿತ್ತಾಪುರ’, ಸಾಹಿತ್ಯಿಕ ಪ್ರಯೋಗವಾಗಿ ‘ಚಿತ್ತಾಪೂರ’ವೆಂದು!
‘ಚಿತ್ತಾಪುರ’ವನ್ನು ಪದದ ನಿಷ್ಪತ್ತಿಯ ಹಿನ್ನೆಲೆ ಗಮನಿಸಿದರೆ ಅದು ಚಿತ್ತ + ಪುರ ಎಂಬ ಎರಡು ಪದಗಳಿಂದ ಕೂಡಿರುವುದು ಮನದಟ್ಟಾಗುತ್ತದೆ. ‘ಚಿತ್ತ’ ಎಂಬುದು ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದ. ಇದು ಮನಸ್ಸು, ಚೇತನ, ಭಾವ, ಜ್ಞಾನ, ಸ್ಮೃತಿ ಎಂಬ ಹಲವು ಅರ್ಥಗಳನ್ನು ಹೊಂದಿದೆ. ಇನ್ನೂ ‘ಪುರ’ ಎಂದರೆ ನಗರ, ವಸತಿ ಕೇಂದ್ರ, ಸಂಘಟಿತ ವಾಸಸ್ಥಳ ಎಂದೆಲ್ಲಾ ಅರ್ಥವನ್ನು ಹೊಂದಿದೆ. ಈ ನೆಲೆಯಲ್ಲಿ ವಿವೇಚಿಸಿದಾಗ ಇದು ‘ಮನಸ್ಸಿನ ನಗರ’ ಅಥವಾ ‘ಧಾರ್ಮಿಕ ಕೇಂದ್ರ’ವನ್ನು ಸೂಚಿಸುತ್ತದೆ. ಇದನ್ನು ‘ಸ್ಥಳೀಯ ದೇವಾಲಯ ಅಥವಾ ಚಿತ್ರಕಲೆಗಳಿಂದ (ಚಿತ್ತಾರ) ಪ್ರಸಿದ್ಧ ನೆಲೆಯಾಗಿರಬಹುದು’ ಎಂದೂ ಅರ್ಥೈಸಿಕೊಳ್ಳಬಹುದಾಗಿದೆ. ಸ್ಥಳನಾಮಗಳು ಭೌಗೋಳಿಕ ಗುರುತುಗಳಷ್ಟೇ ಅಲ್ಲ; ಇವು ಒಂದು ಪ್ರದೇಶದ ಸ್ಮೃತಿ, ಸಂಸ್ಕೃತಿ ಮತ್ತು ಚೇತನದ ಭಾಷ್ಯಗಳು. ಇಂಥ ಭಾರತೀಯ ಸ್ಥಳನಾಮ ಪರಂಪರೆಯಲ್ಲಿ ‘ಪುರ’ ಎಂಬ ಪ್ರತ್ಯಯವು ಸಾಮಾನ್ಯವಾಗಿ ಸಾಂಸ್ಕೃತಿಕ ಅಥವಾ ರಾಜಕೀಯ ಕೇಂದ್ರಗಳಿಗೆ ಬಳಕೆಯಾಗಿದೆ. ಇದರಿಂದ ಚಿತ್ತಾಪುರವೂ ಕೇವಲ ಗ್ರಾಮವಲ್ಲದೆ, ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದ ಸೂಚನೆಯೂ ದೊರಕುತ್ತದೆ.

ಚಿತ್ತಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸನ್ನತಿ (ಆಶೋಕ ಶಿಲಾಶಾಸನ), ಕನಗನಹಳ್ಳಿ (ಮಹಾಸ್ತುಪ) ಮತ್ತು ವಿಹಾರ ಸಂಸ್ಕೃತಿಯ ಅವಶೇಷಗಳ ಹಿನ್ನೆಲೆಯಲ್ಲಿ ‘ಚಿತ್ತ’ ಪದದ ಬೌದ್ಧ ತಾತ್ವಿಕ ಅರ್ಥವನ್ನು ಇನ್ನಷ್ಟು ದೃಢಪಡಿಸುತ್ತದೆ. ಬೌದ್ಧ ತತ್ವದಲ್ಲಿ ಚಿತ್ತ ಎಂದರೆ ‘ಎಲ್ಲದರ ಮೂಲ; ಶುದ್ಧವಾದರೆ ಮುಕ್ತಿ, ಅಶುದ್ಧವಾದರೆ ಬಂಧನ’ ಎಂದಾಗುತ್ತದೆ. ಇದರಿಂದ ‘ಚಿತ್ತಾಪುರ’ ಎಂಬ ಹೆಸರು ‘ಚಿತ್ತಶುದ್ಧಿಯ ಕೇಂದ್ರ’ ಎಂಬ ತಾತ್ವಿಕ ಸೂಚನೆಯಾಗಿ ಕಾಣುತ್ತದೆ. ಬೌದ್ಧ ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಚಿತ್ತಾಪುರ’ವು ಧ್ಯಾನಸ್ಥಳದ ರೂಪಕವಾಗಿಯೂ ಕಂಡುಬರುತ್ತದೆ. ಇಲ್ಲಿ ಶಬ್ದಕ್ಕಿಂತ ಮೌನ ಮುಖ್ಯವಾದ ನೆಲೆಯಾಗಿದ್ದು, ಇತಿಹಾಸವು ಮಾತಾಡುವುದಿಲ್ಲ; ಮೌನವಾಗಿ ಸೂಚಿಸುತ್ತದೆ. ಸಾಹಿತ್ಯದ ದೃಷ್ಟಿಯಲ್ಲಿ ಚಿತ್ತಾಪೂರ ಎಂದರೆ ‘ಮನಸ್ಸು ವಾಸಿಸುವ ಊರು’ ಎಂದಾಗುತ್ತದೆ. ಅಂತೆಯೇ ಊರುಗಳು ಕಲ್ಲಿನಿಂದ ಕಟ್ಟಲ್ಪಡುವುದಿಲ್ಲ; ಅವು ಚಿತ್ತದಿಂದ ನಿರ್ಮಾಣವಾಗುತ್ತವೆ. ಇಂತಹ ಚಿತ್ತದಿಂದ ಕಟ್ಟಲ್ಪಟ್ಟ ಊರೇ ‘ಚಿತ್ತಾಪೂರ’. ಇನ್ನೂ ‘ಚಿತ್ತಾಪುರ’ವನ್ನು ಒಂದು ಮಾನಸಿಕ, ಭೌಗೋಳಿಕ ರೂಪಕವಾಗಿ ನೋಡಿದರೆ, ‘ಚಿತ್ತಾಪುರ’ ಬರಿ ಒಂದು ತಾಲೂಕು ಅಲ್ಲ, ಒಂದು ಮನಸ್ಸಿನ ನಕ್ಷೆ. ಇಲ್ಲಿ ‘ಭೀಮಾ ನದಿ’ಯ ಚಿಂತನೆಯ ಪ್ರವಾಹ, ‘ಸನ್ನತಿ’ಯ ಶಾಂತಿಯ ತಟ ಹಾಗೂ ‘ಕನಗನಹಳ್ಳಿ’ಯ ಸ್ಮೃತಿಗಳ ಸ್ತೂಪ ಇವೆಲ್ಲವೂ ಸೇರಿ, ‘ಚಿತ್ತಾಪುರ’ವನ್ನು ಮಾನವ ಚಿತ್ತದ ಭೌಗೋಳಿಕ ರೂಪವಾಗಿಸಿವೆ.
‘ಚಿತ್ತಾಪುರ’ವು ಕರ್ನಾಟಕದ ಕಲಬುರಗಿ ಜಿಲ್ಲೆಯ ದಕ್ಷಿಣ–ಪೂರ್ವ ಭಾಗದಲ್ಲಿರುವ ದಕ್ಕನ್ ಪೀಠಭೂಮಿಯ ಒಂದು ಪ್ರಮುಖ ಪ್ರದೇಶ. ಇದರ ಭೌಗೋಳಿಕ ಸ್ವರೂಪವು ಸಮತಟ್ಟು ಮತ್ತು ಸ್ವಲ್ಪ ಏರಿಳಿತಗಳಿರುವ ಭೂಪ್ರದೇಶದಿಂದ ಕೂಡಿದೆ. ಭೀಮಾ, ಕಾಗಿಣಾ, ಬೆಣ್ಣೆತೊರಾ, ಗಂಡೋರಿ ನಾಲಾ, ಮುಲ್ಲಾಮಾರಿ ನದಿಗಳು ತಾಲೂಕಿನ ಜೀವನಾಡಿಯಾಗಿವೆ. ಇಲ್ಲಿಯ ಆಲ್ಯೂವಿಯಲ್ ಮಣ್ಣು ಕೃಷಿಗೆ ಅನುಕೂಲಕರವಾಗಿದೆ. ಅಂದರೆ, ನದಿಗಳಿಂದ ತಂದು ಸೇರಿಸಲ್ಪಟ್ಟಿದ್ದು! ಈ ಪ್ರದೇಶದಲ್ಲಿ ಮುಖ್ಯವಾಗಿ ಕಪ್ಪು ಮಣ್ಣು ವ್ಯಾಪಕವಾಗಿದ್ದು ತೊಗರಿ, ಜೋಳ, ಗೋಧಿ, ಸಜ್ಜೆ, ಕುಸುಬೆ, ಕಡಲೆ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಇಲ್ಲಿಯ ಹವಾಮಾನ ಅರ್ಧಶುಷ್ಕ ಸ್ವಭಾವದ್ದು. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ; ಮಳೆಗಾಲವಂತೂ ದಕ್ಷಿಣ–ಪಶ್ಚಿಮ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ. ಸರಾಸರಿ ಮಳೆಯ ಪ್ರಮಾಣ ಮಧ್ಯಮ ಮಟ್ಟದಲ್ಲಿದೆ. ಭೂವೈಜ್ಞಾನಿಕವಾಗಿ ದಕ್ಕನ್ ಟ್ರಾಪ್ ಶಿಲಾಸಂರಚನೆ, ಸಾಲ್ಟ್ ಕಲ್ಲುಗಳು ಮತ್ತು ಚೂನಾಪತ್ರಿ ಪದರಗಳು ಕಂಡುಬರುತ್ತವೆ. ಸಸ್ಯಸಂಪತ್ತು ಮುಖ್ಯವಾಗಿ ಒಣಮೈದಾನ ಪ್ರಭೇದಕ್ಕೆ ಸೇರಿದೆ.
ಚಿತ್ತಾಪುರದ ಇತಿಹಾಸವು ಕೇವಲ ಆಡಳಿತ ಬದಲಾವಣೆಗಳ ಸರಣಿ ಅಲ್ಲ; ಧರ್ಮ, ಸಂಸ್ಕೃತಿ, ನದಿ ಮತ್ತು ಮಾನವ ವಸತಿಯ ನಿರಂತರ ಪ್ರವಾಹವಾಗಿದೆ. ಭೀಮಾ ನದಿ ತಟದಲ್ಲಿ ಆರಂಭವಾದ ಬೌದ್ಧ ಚೇತನದಿಂದ ಹಿಡಿದು ಆಧುನಿಕ ಕರ್ನಾಟಕದ ಭಾಗವಾಗುವವರೆಗೆ ಚಿತ್ತಾಪುರವು ದಕ್ಕನ್ ನೆಲದ ಐತಿಹಾಸಿಕ ಸ್ಮೃತಿ ಸಂಗ್ರಹವಾಗಿದೆ. ಇದು ಅನೇಕ ಮಹತ್ವದ ಸಾಮ್ರಾಜ್ಯಗಳ ಆಡಳಿತವನ್ನು ಅನುಭವಿಸಿದೆ. ಕ್ರಿ.ಪೂ. ೩ನೇ ಶತಮಾನ, ಅಶೋಕನ ಕಾಲದಲ್ಲಿ ಈ ಪ್ರದೇಶ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತು; ಸನ್ನತಿಯ ಶಿಲಾಶಾಸನಗಳೇ ಇದಕ್ಕೆ ಸಾಕ್ಷಿ. ಮುಂದೆ ಬಂದ ಶಾತವಾಹನರು ಬೌದ್ಧ ಸಂಸ್ಕೃತಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಇನ್ನೂ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ದಕ್ಕನ್ ಪ್ರದೇಶದ ರಾಜಕೀಯ–ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದ ಕಲ್ಯಾಣಿ ಚಾಲುಕ್ಯರು ಮತ್ತು ಯಾದವರು ದೇವಾಲಯ ಸಂಸ್ಕೃತಿ ಮತ್ತು ಕೃಷಿ ಆಧಾರಿತ ಆಡಳಿತ ವಿಸ್ತರಣೆ ಮಾಡಿದರು. ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಇಸ್ಲಾಮೀಯ ವಾಸ್ತುಶೈಲಿ ಮತ್ತು ನಗರೀಕರಣದ ಪ್ರಭಾವವಿರುವುದು ಕಂಡುಬರುತ್ತದೆ. ಔರಂಗಜೇಬನ ಕಾಲದಲ್ಲಿ ಈ ದಕ್ಕನ್ ಪ್ರದೇಶವು ಮೊಘಲ್ ಆಳ್ವಿಕೆಗೆ ಸೇರಿತ್ತು. ಮುಂದೆ ಇದು ನಿಜಾಮ್ ರ ಆಳ್ವಿಕೆಯಿಂದಾಗಿ ಹೈದರಾಬಾದ್ ಸಂಸ್ಥಾನದ ಭಾಗವಾಗಿ, ೧೯೪೮ರಲ್ಲಿ ಹೈದರಾಬಾದ್ ವಿಮೋಚನೆಯೊಂದಿಗೆ ಭಾರತದ ಪ್ರಭುತ್ವಕ್ಕೆ ಸೇರಿತು. ೧೯೫೬ರ ಭಾಷಾವಾರು ಪ್ರಾಂತ್ಯಗಳ ನಂತರ ಕರ್ನಾಟಕ ರಾಜ್ಯದ ಭಾಗವಾಗಿ ತಾಲೂಕಾಗಿ ರೂಪುಗೊಂಡಿರುವುದು ನಮ್ಮ ಮುಂದಿನ ಇತಿಹಾಸವಾಗಿದೆ!
ಚಿತ್ತಾಪುರ ತಾಲೂಕಿನ ಶೈಕ್ಷಣಿಕ ಇತಿಹಾಸವು ಕೇವಲ ಶಾಲಾ–ಕಾಲೇಜುಗಳ ಬೆಳವಣಿಗೆಯ ಕಥೆಯಲ್ಲ; ಪ್ರಾಚೀನ ಜ್ಞಾನ ಪರಂಪರೆಯಿಂದ ಆಧುನಿಕ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದವರೆಗೆ ಹರಡಿರುವ ನಿರಂತರ ಪ್ರವಾಹವಾಗಿದೆ. ಇಲ್ಲಿಯ ಶೈಕ್ಷಣಿಕ ಪರಂಪರೆ ಎಂದರೆ
ಬೌದ್ಧ ಧ್ಯಾನ-ನಾಗಾವಿಯ ಶಾಸ್ತ್ರಪೀಠ-ಮಠ-ಮದರಸಾ ಶಿಕ್ಷಣ ಹಾಗೂ ಆಧುನಿಕ ಶಾಲಾ ವ್ಯವಸ್ಥೆ ಎಂಬ ನಿರಂತರ ಜ್ಞಾನಧಾರೆಯಾಗಿದೆ. ಸನ್ನತಿ–ಕನಗನಹಳ್ಳಿ ಪ್ರದೇಶಗಳಲ್ಲಿ ಕಂಡುಬರುವ ಬೌದ್ಧ ವಿಹಾರಗಳು ಇಲ್ಲಿ ಧ್ಯಾನ, ತತ್ವಚಿಂತನೆ ಮತ್ತು ಶಾಸ್ತ್ರಾಧ್ಯಯನ ನಡೆದಿದ್ದುದನ್ನು ಸೂಚಿಸುತ್ತವೆ. ಜ್ಞಾನವು ಧರ್ಮದೊಂದಿಗೆ ಬೆಸೆದುಕೊಂಡಿದ್ದ ಕಾಲದ ಪ್ರತಿಧ್ವನಿಯೇ ಇದು. ಇದಕ್ಕೆ ಮುಂದುವರಿದ ರೂಪವೇ ಚಾಲುಕ್ಯರ ಕಾಲದ ನಾಗಾವಿ ವಿದ್ಯಾಕೇಂದ್ರ. ಶಾಸನಗಳಲ್ಲಿ ಉಲ್ಲೇಖವಾಗಿರುವ ನಾಗಾವಿ “ವಿದ್ಯಾನಗರಿ”ಯಾಗಿ ಪ್ರಸಿದ್ಧವಾಗಿದ್ದು, ವೇದ, ವ್ಯಾಕರಣ, ತರ್ಕ, ಮೀಮಾಂಸೆ ಮೊದಲಾದ ಶಾಸ್ತ್ರಗಳ ಅಧ್ಯಯನ ನಡೆಯುತ್ತಿದ್ದ ಕೇಂದ್ರವಾಗಿತ್ತು. ಇದು ದಕ್ಕನ್ ಪ್ರದೇಶದ ಪ್ರಾಚೀನ ವಿಶ್ವವಿದ್ಯಾಲಯ ಸಮಾನವಾದ ಜ್ಞಾನಪೀಠ. ಮಧ್ಯಯುಗದಲ್ಲಿ ಮಠ–ದೇವಾಲಯ ಪಾಠಶಾಲೆಗಳು ಹಾಗೂ ಮದರಸಾ ಶಿಕ್ಷಣ ಜ್ಞಾನ ಪರಂಪರೆಯನ್ನು ಮುಂದುವರಿಸಿತು. ನಿಜಾಂ ಕಾಲದಲ್ಲಿ ಮೂಲಭೂತ ಶಾಲಾ ವ್ಯವಸ್ಥೆ ರೂಪುಗೊಂಡಿತು. ಸ್ವಾತಂತ್ರ್ಯಾನಂತರ ಕನ್ನಡ ಮಾಧ್ಯಮ ಶಿಕ್ಷಣ ವಿಸ್ತಾರಗೊಂಡು, ಇಂದು ಶಾಲೆ–ಕಾಲೇಜುಗಳ ಮೂಲಕ ಶಿಕ್ಷಣವು ವ್ಯಾಪಕಗೊಂಡಿದೆ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಇತಿಹಾಸವಲ್ಲ; ಜ್ಞಾನವನ್ನು ಜೀವಂತ ಪರಂಪರೆಯಾಗಿ ಉಳಿಸಿಕೊಂಡ ನೆಲದ ಚೇತನವಾಗಿದೆ. ಇಲ್ಲಿಯ ಸಮಕಾಲೀನ ಶಿಕ್ಷಣ ವ್ಯವಸ್ಥೆ ಗ್ರಾಮೀಣ ನೆಲೆಯಲ್ಲೇ ವಿಸ್ತಾರಗೊಂಡ ಸಮಗ್ರ ಶೈಕ್ಷಣಿಕ ಜಾಲವಾಗಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹೆಚ್ಚಿನ ಗ್ರಾಮಗಳಿಗೆ ತಲುಪಿದ್ದು, ಮಧ್ಯಾಹ್ನ ಊಟ, ವಿದ್ಯಾರ್ಥಿವೇತನ ಹಾಗೂ ಉಚಿತ ಪಠ್ಯಪುಸ್ತಕಗಳಂತಹ ಯೋಜನೆಗಳು ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿವೆ. ಇವುಗಳೊಂದಿಗೆ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಪಟ್ಟಣ ಮಟ್ಟದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಮೂಲಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣದ ಜೊತೆಗೆ ಉನ್ನತ ಹಾಗೂ ವೃತ್ತಿಪರ ಶಿಕ್ಷಣವೂ ಲಭ್ಯವಿದೆ. ಕಲ್ಯಾಣ ಕರ್ನಾಟಕ (೩೭೧J) ಸೌಲಭ್ಯಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಹಾಸ್ಟೆಲ್–ವಿದ್ಯಾರ್ಥಿವೇತನಗಳ ಮೂಲಕ ಶಿಕ್ಷಣ ಪ್ರವೇಶ ವಿಸ್ತರಿಸಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳತ್ತ ಯುವಜನರ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಚಿತ್ತಾಪುರವು ಕಲ್ಯಾಣ ಕರ್ನಾಟಕದ ಸಂಸ್ಕೃತಿ ಪ್ರವಾಹದಲ್ಲಿ ಬೆಳೆದ, ಬೆಳೆಯುತ್ತಿರುವ ತಾಲೂಕು. ಇಲ್ಲಿ ಜನಪದದ ಜೀವಂತಿಕೆ, ಭಕ್ತಿ ಸಾಹಿತ್ಯದ ಝರಿ, ಗ್ರಾಮೀಣ ಸಂಗೀತದ ಲಯ ಮತ್ತು ದೇವಾಲಯ–ದರ್ಗಾಗಳ ವಾಸ್ತುಸೌಂದರ್ಯ.. ಎಲ್ಲವೂ ಸೇರಿ ವಿಶಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ನಿರ್ಮಿಸಿವೆ. ಡೊಳ್ಳು ಕುಣಿತ, ಕೋಲಾಟದಂತಹ ಜನಪದ ನೃತ್ಯಗಳು ಹಬ್ಬ–ಜಾತ್ರೆಗಳಲ್ಲಿ ಇನ್ನೂ ಜೀವಂತವಾಗಿವೆ. ಅಂತೆಯೇ ಜಾತ್ರೆಗಳು, ಊರಹಬ್ಬಗಳು ಜನಪದಕಲೆಯ ವೇದಿಕೆಗಳಾಗಿವೆ. ಡೊಳ್ಳು, ಚಂಡೆಮದ್ದಳೆ, ತಾಳಗಳ ಲಯ ಜನಪದ ಸಂಗೀತಕ್ಕೆ ಶಕ್ತಿ ನೀಡುತ್ತದೆ. ಭಜನಾ ಮಂಡಳಿಗಳು ಹಾಗೂ ದಾಸಪದಗಳ ಗಾಯನ ಭಕ್ತಿಭಾವವನ್ನು ಗಾಢಗೊಳಿಸಿದರೆ, ಸೂಫಿ ಪರಂಪರೆಯ ಕವ್ವಾಲಿ ಕಾರ್ಯಕ್ರಮಗಳು ಧರ್ಮಸೌಹಾರ್ದದ ಸಂಕೇತವಾಗಿವೆ. ಲಂಬಾಣಿ ಪರಂಪರೆ, ಕಸೂತಿ ಮತ್ತು ಗ್ರಾಮೀಣ ಕೈಗಾರಿಕೆಗಳು ಸ್ಥಳೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿಯ ಸಾಹಿತ್ಯದಲ್ಲಿ ವಚನ-ಭಕ್ತಿಧಾರೆಯ ಪ್ರಭಾವದಿಂದ ಶರಣ ಸಂವೇದನೆಗಳ ಛಾಯೆ ಎದ್ದು ಕಾಣುತ್ತದೆ. ಇನ್ನೂ ಜನಪದ ಗೀತೆಗಳು ಗ್ರಾಮಜೀವನದ ನೋವು, ನಲಿವುಗಳ ಪರಂಪರೆಗೆ ಕನ್ನಡಿ ಹಿಡಿಯುತ್ತಿವೆ. ಇತ್ತೀಚೆಗೆ ಸ್ಥಳೀಯ ಕವಿಗಳು, ಕಥೆಗಾರರು ಸಾಮಾಜಿಕ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರವಣಿಗೆ ಮಾಡುತ್ತ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದ ದೇವಾಲಯಗಳಲ್ಲಿ ಕಲ್ಯಾಣಿ ಚಾಲುಕ್ಯ–ದ್ರಾವಿಡ–ವಿಜಯನಗರ ಪ್ರಭಾವಗಳ ಮಿಶ್ರಣ ಕಾಣುತ್ತೇವೆ. ಈ ವಾಸ್ತುಶಿಲ್ಪದಲ್ಲಿ ಪ್ರದೇಶದ ಸಂಸ್ಕೃತಿ–ಸಾಮಾಜಿಕ ಸಂಧಿಯ ಜೀವಂತ ಚಿತ್ರಣ ಕಾಣುತ್ತದೆ. ಇವು ಗ್ರಾಮೀಣ ಭಕ್ತಿ, ಶಿಲ್ಪಸೌಂದರ್ಯ ಮತ್ತು ಇತಿಹಾಸದ ಗುರುತುಗಳನ್ನು ಒಟ್ಟುಗೂಡಿಸಿವೆ. ಇವುಗಳು ಕೇವಲ ಪೂಜಾಸ್ಥಳಗಳಲ್ಲ; ಇತಿಹಾಸದ ಕಲ್ಲುಬರಹ, ಭಕ್ತಿಯ ಸ್ಥಿರರೂಪ ಮತ್ತು ಶಿಲ್ಪಕಲೆಯ ಸಾಂದ್ರ ಸ್ಮೃತಿಯಾಗಿವೆ. ದರ್ಗಾ–ಮಸೀದಿಗಳಲ್ಲಿ ಇಸ್ಲಾಮಿಕ್ ಕಮಾನು–ಗುಂಭಜಗಳ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತವೆ. ಕೆಲವು ಊರುಗಳಲ್ಲಿ ಹಳೆಯ ಕೋಟೆ–ಗಡಿಗಳು ಇತಿಹಾಸದ ನೆನಪುಗಳನ್ನು ಹೊತ್ತು ನಿಂತಿವೆ.
ಚಿತ್ತಾಪುರ ತಾಲೂಕು ಕಲ್ಯಾಣ ಕರ್ನಾಟಕದ ಬಹುಸಾಂಸ್ಕೃತಿಕ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಂಡ ಪ್ರದೇಶ. ಇಲ್ಲಿ ಹಿಂದೂ–ಮುಸ್ಲಿಂ–ಲಿಂಗಾಯತ–ದಲಿತ–ಲಂಬಾಣಿ ಸೇರಿದಂತೆ ವಿವಿಧ ಸಮುದಾಯಗಳು ಸಹಜ ಸಹಬಾಳ್ವೆಯಲ್ಲಿ ಜೀವನ ಸಾಗಿಸುತ್ತಿವೆ. ಈ ಸಹಬಾಳ್ವೆಯೇ ತಾಲೂಕಿನ ಕೋಮುಸೌಹಾರ್ದತೆಯ ಮೂಲಸ್ವಭಾವ. ಇಲ್ಲಿ ಕೋಮುಸೌಹಾರ್ದತೆ ಎನ್ನುವುದು ಕೇವಲ ಘೋಷಣೆಯಲ್ಲ; ಇದು ದೈನಂದಿನ ಬದುಕಿನ ಸಹಬಾಳ್ವೆ, ಹಬ್ಬ–ಜಾತ್ರೆಗಳ ಒಗ್ಗಟ್ಟು ಮತ್ತು ಪರಸ್ಪರ ಗೌರವದ ಸಂಸ್ಕೃತಿಯಾಗಿದೆ. ಈ ಒಗ್ಗಟ್ಟು ತಾಲೂಕಿನ ಸಾಮಾಜಿಕ ಶಕ್ತಿಯ ಮೂಲವೂ, ಭವಿಷ್ಯದ ಸಮನ್ವಯ ಅಭಿವೃದ್ಧಿಗೆ ದಿಕ್ಕೂ ಆಗಿದೆ. ಈ ಪ್ರದೇಶದ ಎಷ್ಟೋ ಊರುಗಳಲ್ಲಿ ದೇವಾಲಯ–ಮಸೀದಿ–ದರ್ಗಾಗಳ ಸಹಪಂಕ್ತಿ ಸಾಮಾನ್ಯ ದೃಶ್ಯವಾಗಿ ಕಂಡುಬರುತ್ತದೆ. ಜಾತ್ರೆ–ಉರುಸ್ ಸಂದರ್ಭಗಳಲ್ಲಿ ಪರಸ್ಪರ ಸಹಕಾರ, ಹಬ್ಬಗಳಲ್ಲಿ ಪರಸ್ಪರ ಶುಭಾಶಯ–ಸಹಭಾಗಿತ್ವವು “ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ ಪರಧರ್ಮಮುಮಂ” ಎಂಬ ಕವಿರಾಜಮಾರ್ಗಕಾರ ಶ್ರೀವಿಜಯನ ಆಶಯವನ್ನು ಪ್ರತಿಧ್ವನಿಸುತ್ತದೆ.
ಚಿತ್ತಾಪುರ ತಾಲೂಕು ಭಕ್ತಿ–ಸಂಸ್ಕೃತಿಯ ನೆಲ. ನಾಲವಾರ, ಕರದಳ್ಳಿ, ಅಲ್ಲೂರು, ಡೋಣಗಾಂವ, ಸಾತನೂರ, ಅಳ್ಳೊಳಿ, ಬೆಳಗುಂಪಾ, ಟೆಂಗಳಿ, ಮಲಕೂಡ, ಕಮರಡಗಿ, ಸೂಗೂರ… ಮುಂತಾದ ಗ್ರಾಮಗಳು ರಂಗಭೂಮಿಗೆ ಹೆಸರುವಾಸಿಯಾಗಿವೆ. ಇಲ್ಲಿಯ ಮಠಗಳು ಆತ್ಮೀಯತೆ ಮತ್ತು ಸಾಮಾಜಿಕ ಸೇವೆಯ ಕೇಂದ್ರಗಳಾಗಿವೆ. ಇಲ್ಲಿಯ ಮಠಗಳಲ್ಲಿ ಲಿಂಗಾಯತ ಶರಣ ಪರಂಪರೆಯ ಪ್ರಭಾವ ದಟ್ಟವಾಗಿದೆ. ಇಲ್ಲಿ ಧಾರ್ಮಿಕ ಉಪನ್ಯಾಸ, ವಚನ ಪ್ರವಚನ, ದಾಸೋಹ–ಸಾಮಾಜಿಕ ಸೇವೆ ನಿರಂತರವಾಗಿ ನಡೆಯುತ್ತಿರುತ್ತವೆ. ಅವುಗಳಲ್ಲಿ ನಾಗಾವಿ ಎಲ್ಲಮ್ಮ ದೇವಸ್ಥಾನ, ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನ, ಅಳ್ಳೊಳಿಯ ಮಾನಪಯ್ಯ ದೇವಾಲಯ, ದಂಡಗುಂಡದ ಬಸವೇಶ್ವರ ಮಠ, ಹಲಕರ್ಟಿಯ ವೀರಭದ್ರೇಶ್ವರ ದೇವಾಲಯ, ನಾಲವಾರದ ಕೋರಿಸಿದ್ದೇಶ್ವರ ಮಠ, ದಿಗ್ಗಾಂವನ ಪಂಚಗ್ರಹ ಮಠ, ಕೊಂಚೂರಿನ ಹನುಮಾನ ಮಂದಿರ, ಬಳವಡಗಿಯ ಶ್ರೀ ಯಲ್ಲಮ್ಮ, ಸೂಗೂರಿನ ವೆಂಕಟೇಶ್ವರ… ಪ್ರಮುಖವಾಗಿವೆ. ಈ ಪ್ರದೇಶವು ಐತಿಹಾಸಿಕ ಮತ್ತು ಧಾರ್ಮಿಕವಾಗಿ, ವಿಶೇಷವಾಗಿ ಜೈನ ಧರ್ಮದ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ‘ಕೊಲ್ಲೂರು’ ಗ್ರಾಮದಲ್ಲಿ ಹಲವಾರು ಜೈನ ಬಸದಿಗಳು ಮತ್ತು ಶಾಸನಗಳಿವೆ. ಈ ಪ್ರದೇಶವು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರವಾಗಿತ್ತು, ಇಲ್ಲಿನ ಬಸದಿಗಳು ಆ ಕಾಲದ ವಾಸ್ತುಶಿಲ್ಪದ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಸನ್ನತಿ ಮತ್ತು ಕನಗನಹಳ್ಳಿ ಭಾಗದಲ್ಲಿ ಜಿನಾಲಯಗಳು ಮತ್ತು ಬಸದಿಗಳ ಕುರುಹುಗಳು ಕಂಡುಬರುತ್ತವೆ. ಚಿತ್ತಾಪುರ ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿನ ಜಿನಾಲಯ, ಅಲ್ಲೂರು, ದಂಡೋತಿ, ಪೇಠಶಿರೂರ..ಮತ್ತಿತರೆಡೆ ಜೈನ ಬಸದಿಗಳಿದ್ದು, ಜೈನ ಸಂಬಂಧಿ ಮೂರ್ತಿಶಿಲ್ಪಗಳೊಂದಿಗೆ ಸುಂದರ ಕುಸುರಿ ಕೆತ್ತನೆಯಿಂದ ಕೂಡಿವೆ. ಇಸ್ಲಾಮಿಕ್–ಸೂಫಿ ಪರಂಪರೆಯಲ್ಲಿ ಚಿತಾವಲಿ ಶಹಾ (ಕೆಲವು ಕಡೆ ಚಿತ್ತಾವಲಿ ಶಾ/ಚಿತಾವಳಿ ಶಾ ಎಂದೂ ಕರೆಯುತ್ತಾರೆ) ಸ್ಥಳೀಯವಾಗಿ ಗೌರವಿಸಲ್ಪಡುವ ಒಬ್ಬ ಸೂಫಿ ಸಂತನಾಗಿ ಪರಿಗಣಿಸಲ್ಪಟ್ಟಿದ್ದಾರೆ. ಅವರ ದರ್ಗಾ ಸ್ಥಳೀಯ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿದೆ. ಚಿತಾವಲಿ ಶಹಾ ಪರಂಪರೆ ಚಿತ್ತಾಪುರದ ಬಹುಸಾಂಸ್ಕೃತಿಕ ಜೀವನದ ಒಂದು ಮೃದುಧ್ವನಿ. ಸೂಫಿ ಭಕ್ತಿ, ಮಾನವೀಯ ಮೌಲ್ಯ ಮತ್ತು ಕೋಮುಸೌಹಾರ್ದತೆಯ ಪ್ರತೀಕವಾಗಿ ಇಂದು ಕೂಡ ನೆನಪಾಗುತ್ತಾರೆ. ಇದರೊಂದಿಗೆ ಹಲಕರ್ಟಿಯ ಶರೀಫ್ ದರ್ಗಾ, ಲಾಡ್ಲಾಪುರದ ಶ್ರೀ ಹಾಜಿ ಸರ್ವರ್ ದೇವಾಲಯ.. ಮುಂತಾದವು ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿವೆ.
ಚಿತ್ತಾಪುರ ತಾಲೂಕು ಕೇವಲ ಭೌಗೋಳಿಕ ಅಂಚುಗಳೊಳಗೆ ಸೀಮಿತವಾದ ಒಂದು ಆಡಳಿತ ಘಟಕವಲ್ಲ; ಇದು ತನ್ನ ಅಸ್ತಿತ್ವದ ಬೇರುಗಳನ್ನು ಹಿಡಿದಿಟ್ಟಿರುವ ಮಣ್ಣಾಗಿದೆ. ಇಲ್ಲಿ ಪ್ರತಿಯೊಂದು ದೇವಾಲಯದ ಘಂಟಾನಾದದಲ್ಲೂ, ಬಸದಿಗಳ ಶಿಲಾಶಾಸನಗಳ ಮೌನದಲ್ಲೂ, ಮಸೀದಿಗಳ ಅಝಾನಿನ ಧ್ವನಿಯಲ್ಲೂ, ಹೊಲಗಳ ಹಸಿರಿನಲ್ಲೂ ಒಂದು ಜೀವಂತ ಸಂಸ್ಕೃತಿಯ ಸ್ಪಂದನೆ ಕೇಳಿಸುತ್ತದೆ. ಈ ವೈವಿಧ್ಯವೇ ಚಿತ್ತಾಪುರದ ನಿಜವಾದ ವೈಶಿಷ್ಟ್ಯವಾಗಿದೆ. ಇತಿಹಾಸದ ಪಾದಚಿಹ್ನೆಗಳನ್ನು ಹೊತ್ತ ಈ ಭೂಮಿ, ಧಾರ್ಮಿಕ ಸೌಹಾರ್ದತೆಯ ಮಿಡಿತವನ್ನು ಉಳಿಸಿಕೊಂಡಿದೆ. ಸಾಹಿತ್ಯ, ಜನಪದ, ಹಬ್ಬ-ಹರಿದಿನಗಳು ಮತ್ತು ಸರಳ ಜೀವನಪದ್ಧತಿ… ಇವೆಲ್ಲವೂ ಸೇರಿ ಚಿತ್ತಾಪುರವನ್ನು ರೂಪಿಸಿವೆ. ಇದು ಪರಂಪರೆಯನ್ನು ಕಾಪಾಡಿಕೊಂಡು ಕಾಲಾನುಗುಣವಾಗಿ ಹೆಜ್ಜೆ ಹಾಕುವ ಭೂಮಿ.
ಚಿತ್ತಾಪುರದ ವೈಶಿಷ್ಟ್ಯವು ಕೇವಲ ದಾಖಲಾತಿಗಳ ವಿಷಯವಲ್ಲ; ಇದು ಬದುಕಿನ ಅನುಭವ. ಈ ನೆಲದ ಧೂಳಿನಲ್ಲಿ ಬೆರೆತಿರುವ ಕಥೆಗಳು ಬರವಣಿಗೆಯ ಶ್ವಾಸವಾಗಿವೆ. ಚಿತ್ತಾಪುರವನ್ನು ಅರಿಯುವುದು ಎಂದರೆ ನಮ್ಮೊಳಗಿನ ನೆಲದ ನೆನಪುಗಳನ್ನು ಅರಿಯುವುದೇ ಸರಿ. ಆದುದರಿಂದ, ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು ಎಂಬುದು ಒಂದು ಅಧ್ಯಯನ ವಿಷಯ ಮಾತ್ರವಲ್ಲ—ಅದು ನಮ್ಮ ನೆಲದ ಅಸ್ಮಿತೆಯ ಘೋಷಣೆ. ಈ ನೆಲದ ಇತಿಹಾಸ, ಸಂಸ್ಕೃತಿ ಮತ್ತು ಸೌಹಾರ್ದ ಪರಂಪರೆ ಮುಂದಿನ ಪೀಳಿಗೆಗೂ ದಾರಿದೀಪವಾಗಲಿ ಎಂಬುದು ನನ್ನ ಹಾರೈಕೆ.
“A people without the knowledge of their past history, origin and culture is like a tree without roots.”
— Marcus Garvey
ಡಾ. ಮಲ್ಲಿನಾಥ ಎಸ್. ತಳವಾರ
ಮುಖ್ಯಸ್ಥರು,
ಕನ್ನಡ ಅಧ್ಯಯನ ವಿಭಾಗ,
ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,
ಕಲಬುರಗಿ



