ಪುಸ್ತಕ ಸಂಗಾತಿ
ವರದೇಂದ್ರ ಕೆ ಮಸ್ಕಿ
ಉಷಾ ರವಿ
“ಆತ್ಮಾನುಸಂಧಾನ”
“ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”


ಆತ್ಮಾನುಸಂಧಾನ
ಕೃತಿಕಾರರು : ಉಷಾರವಿ
ಬೆಲೆ : 250/-
“ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”
ಕೃತಿ ಲೋಕಾರ್ಪಣೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಎರಡನೇ ಮುದ್ರಣ ಕಂಡ ಅಪರೂಪದ, ಅನುರೂಪವಾದ ಕಾದಂಬರಿ ಉಷಾರವಿ ಅವರ “ಆತ್ಮಾನುಸಂಧಾನ”.
ಮೊದಲ ಕೃತಿ “ಅಂತರಪಟ” ಕಾದಂಬರಿ ಮೂಲಕ ರಾಜ್ಯದ ಮನೆಮಾತಾಗಿದ್ದ ನನ್ನ ನೆಚ್ಚಿನ ಬರಹಗಾರ್ತಿ ಸಹೋದರಿ ಶ್ರೀಮತಿ ಉಷಾ ರವಿ ಅವರು ಈಗ ಎರಡನೇ ಕೃತಿ ಆತ್ಮಾನುಸಂಧಾನದ ಮುಖೇನ ರಾಜ್ಯದ ಓದುಗರ ಮನಮಾತಾಗಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಆರಾಧಿಸುವ, ಪ್ರೀತಿಸುವ ಮೇರು ವ್ಯಕ್ತಿತ್ವದ ಪಾತ್ರಗಳ ಹೃದಯದೊಂದಿಗಿನ ಸಂಧಾನ ಈ ಕಾದಂಬರಿಯಲ್ಲಿ ಮುನ್ನೆಲೆಗೆ ಬರುತ್ತದೆ. ಇದನ್ನೆಲ್ಲಾ ನಾವು ಓದುತ್ತಾ ಹೋದರೆ ಅಕ್ಷರಶಃ ಪಾತ್ರಗಳೊಂದಿಗೆ ನಾವೂ ಆತ್ಮಾನುಸಂಧಾನ ಬೆಸೆದುಕೊಳ್ಳುತ್ತಾ ಸಾಗುತ್ತೇವೆ.
ನಾವು ಸಂಪೂರ್ಣ ಸಂಧಾನಕ್ಕೊಳಪಡಲು ಕೃತಿಯನ್ನು ತಾಂತ್ರಿಕ ಮನಸಿನಿಂದ ಓದದೆ ಪ್ರಾರ್ಥನೆಯಂತೆ, ತಪಸ್ಸಿನಂತೆ ಓದಬೇಕು. ಆಗ ಮಾತ್ರ ಈ ಸಂಧಾನ ಅನುಭವಕ್ಕೆ ಬಂದು ಸಂತುಷ್ಟತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನು ಕೃತಿಯ ಭಾವದೊಂದಿಗೆ ನಾನೂ ಸಂಧಾನಕ್ಕೊಳಪಟ್ಟು ಸಾಧ್ಯವಾದಷ್ಟು ತಮ್ಮ ಮುಂದೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ.
***
ಮನಸು ಎಂಬ ಅತ್ಯಮೂಲ್ಯವಾದ ಕಪ್ಪೆ ಚಿಪ್ಪಿನೊಳಗಿನ ಮುತ್ತನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಅದರೊಳಗಿನ ಮುತ್ತನ್ನು ಕೇವಲ ಕಾಮದ, ಧನದ ಮತ್ತಿರುವವರಿಗೆ ಎಟಕುವಂತೆ ಮಾಡಿದರೆ ಆಗುವ ಅನಾಹುತ ತುಂಬಾ ಘೋರವಾದುದು. ಇಂತಹ ಘೋರತೆಯನ್ನು ಜೀವನದಲ್ಲಿ ಅನುಭವಿಸಿದ ಹೆಣ್ಣಿನ ಬದುಕಿನ ಸುತ್ತ ಸುತ್ತಿರುವ ಈ ಆತ್ಮಾನುಸಂಧಾನ ಕಾದಂಬರಿ ವಿಶೇಷತೆಯಿಂದ ಕೂಡಿದೆ.
ಐಶ್ವರ್ಯ ಮತ್ತು ವಿಕಾಸ್ ಎಂಬ ಪಾತ್ರಗಳಿಂದ ಪ್ರಾರಂಭವಾಗುವ ಕಾದಂಬರಿ ನಿಜವಾಗಲೂ ನಮ್ಮೊಳಗೆ ಮೌಲ್ಯಗಳ ಐಶ್ವರ್ಯವನ್ನು ತುಂಬಿ ನಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಹೊಸ ಭಾವವನ್ನು ವಿಕಾಸಗೊಳಿಸುತ್ತದೆ.
ವಿಕಾಸ್ ಐಶ್ವರ್ಯಳನ್ನು ಪ್ರೇಮಿಸುತ್ತಿದ್ದರೆ ಐಶ್ವರ್ಯ ಅಜ್ಞಾತ ಕವಿಯ ಸಾಹಿತ್ಯಕ್ಕೆ ಮಾರು ಹೋಗಿ ಅಜ್ಞಾತ ಕವಿಯನ್ನು ಪ್ರೇಮಿಸುತ್ತಾಳೆ. ಪ್ರಾರಂಭದಲ್ಲಿ ಹರ್ಷ(ಐಶ್ವರ್ಯಳ ತಮ್ಮ)ನಿಗೆ ಅನ್ನಿಸಿದಂತೆ ವಿಕಾಸನೇ ಅಜ್ಞಾತ ಕವಿಯಾಗಿರಬಹುದೇ ಎಂದು ಓದುಗನಿಗೂ ಭಾಸವಾಗುತ್ತದೆ. ವಿಕಾಸನ ನಿಷ್ಕಲ್ಮಶ ಪ್ರೇಮದ ಪರಿ ಓದಿದ ನಮಗೆ ಎಲ್ಲಿ ಐಶ್ವರ್ಯ ವಿಕಾಸನಿಂದ ದೂರವಾಗುತ್ತಾಳೋ ಅಜ್ಞಾತ ಕವಿಯನ್ನು ವಿವಾಹವಾಗುತ್ತಾಳೋ ಎಂಬ ಬೇಸರವೂ ಮೂಡುತ್ತದೆ.
ಕಾದಂಬರಿ ಸಾಗಿದಂತೆ ಓದುಗರಿಗೆ ಅಜ್ಞಾತ ಕವಿಯ ಪರಿಚಯವಾದಂತೆ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳ ಬದುಕು ಅನಾವರಣಗೊಳ್ಳುತ್ತದೆ.
***
ಹರೆಯದಲ್ಲಿ ಮನಸು ಬೇಡಿದ್ದನ್ನು ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ನೀಡಬೇಕು. ಅದರಲ್ಲೂ ಮನಸು ಪ್ರೇಮದ ಕಡೆಗೆ ವಾಲಿದರೆ, ನಮ್ಮ ಪ್ರೇಮವನ್ನು ಯೋಗ್ಯರಿಗೆ ಮಾತ್ರ ಧಾರೆ ಎರೆಯಬೇಕು. ಹೀಗೆ ಹರೆಯದಲ್ಲಿ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ಅನಾಮತ್ತಾಗಿ, ರಾಕ್ಷಸೀ ಪ್ರವೃತ್ತಿವುಳ್ಳ ವ್ಯಕ್ತಿಗೆ ತನ್ನ ಪ್ರೇಮವನ್ನು ಮತ್ತು ತನ್ನನ್ನು ಅರ್ಪಿಸಿದ ಪರಿಣಾಮವಾಗಿ ಎದುರಿಸಿದ ರೌರವ ನರಕದ ಬದುಕಿಗೆ ಸಾಕ್ಷಿಯಾಗಿ ಈ ಆತ್ಮಾನಂಧಾನ ಕೃತಿ ನಮ್ಮ ಕಣ್ಣ ಮುಂದೆ ಗೋಚರಗೊಳ್ಳುತ್ತದೆ.
ಕಾದಂಬರಿಯ ಶೀರ್ಷಿಕೆಗೆ ಸಹಸಂಬಂಧ ಕಲ್ಪಿಸಿಕೊಂಡು ಓದುವ ಓದುಗ ವರ್ಗಕ್ಕೆ, ಇಂತಹ ದುಸ್ಥಿತಿಯಲ್ಲಿ ಸಿಲುಕಿದ ಹೆಣ್ಣಿನ ಕಥೆಗೆ ಆತ್ಮಾನುಸಂಧಾನ ಹೆಸರು ಹೇಗೆ ಸರಿಹೊಂದುತ್ತದೆ? ಎಂಬ ಆಲೋಚನೆ ಹುಟ್ಟುತ್ತದೆ.
ಹೌದು ಇಲ್ಲಿ ಕಥಾ ನಾಯಕಿ ಸೂರ್ಯನೆಂಬ ಧೂರ್ತ ಹುಡುಗನನ್ನು ಮದುವೆಯಾಗಿ ತನ್ನ ವೈವಾಹಿಕ ಬದುಕಲ್ಲಿ ಎದುರುಗೊಂಡ ಎಲ್ಲ ತೊಡರುಗಳಲ್ಲಿ ಸಿಕ್ಕು, ಬಳಲಿ ಅದರಿಂದ ಹೊರಬಂದ ನಂತರ ಒಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ತಾನಷ್ಟೇ ಹೊಸ ಬದುಕನ್ನು ಕಟ್ಟಿಕೊಂಡಳು ಎಂದರೆ ತಪ್ಪಾದೀತು. ತನ್ನ ಬದುಕನ್ನು ಬರಹದ ರೂಪದಲ್ಲಿ ಲೋಕಾರ್ಪಣೆಗೊಳಿಸಿ ತಪ್ಪು, ಒಪ್ಪುಗಳನ್ನು ಅಕ್ಷರ ರೂಪದಲ್ಲಿ ಬಿತ್ತರಿಸಿ ಅನೇಕ ಓದುಗರ ಮನಃಪರಿವರ್ತನೆಗೆ ದಾರಿಯಾಗುತ್ತಾಳೆ.
ಅಕ್ಕನ ಮಗಳನ್ನೇ ವರಿಸುವ ಬಯಕೆಯಿಂದ ಯಾವಾಗಲೂ ಮಲ್ಲಿಗೆ ಹೂವಿಡಿದು ಬರುತ್ತಿದ್ದ ಕಥಾ ನಾಯಕ ರವಿಗೆ ಕಥಾ ನಾಯಕಿ ಆರುಷಿಯಿಂದ ಆದದ್ದು ಆಘಾತವಲ್ಲ, ಮೋಸವೂ ಅಲ್ಲ ಎಂದು ಓದುಗನಿಗೆ ಅನಿಸುತ್ತದೆಯಾದರೂ ಸೂರ್ಯನ ಬದಲಾಗಿ ಸೋದರ ಮಾವ ರವಿಯನ್ನು ಕೈ ಹಿಡಿದಿದ್ದರೆ ನಮ್ಮ ಕಥಾ ನಾಯಕಿ ಹೇಗೆ ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದಳು ಎಂದು ಮಧ್ಯೆ ಮಧ್ಯೆ ಅಪೇಕ್ಷಿತವಾಗಿ ಆಲೋಚಿಸುತ್ತಾನೆ.
ರವಿಯೊಂದಿಗೆ ದಾಂಪತ್ಯದ ಭಾವನೆಯನ್ನೇ ಬೆಳೆಸಿಕೊಳ್ಳದ ಆರುಷಿ ಸಹಜವಾಗಿಯೇ ಸೂರ್ಯನೊಂದಿಗೆ ಪ್ರೀತಿಯಲ್ಲಿ ಲೀನವಾಗುತ್ತಾಳೆ.
ಆದರೆ ರವಿಗೆ ಆರುಷಿಯಲ್ಲಿ ಪ್ರೇಮವಿತ್ತು, ಅಕ್ಕರೆಯಿತ್ತು, ಕೃತಿಕಾರರೇ ಕೊನೆಯಲ್ಲಿ ಹೇಳುವಂತೆ ತಾಯಿಯ ಮಮಕಾರವೂ ಇತ್ತು. ಇದೆಲ್ಲದಕ್ಕೂ ಮಿಗಿಲಾಗಿ ಆತ್ಮ ಬಂಧನವಿತ್ತು ಎಂಬುದು ನಮ್ಮ ಗಮನಕ್ಕೂ ಬರುತ್ತದೆ.
ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಆರುಷಿಗೆ ಮದುವೆಯ ನಂತರವೇ ಸೂರ್ಯನ ನಿಜಮುಖ, ಸಂಸ್ಕಾರವಿಲ್ಲದ ನಡೆ ತಿಳಿಯುತ್ತದೆ. ರವಿ ಆರುಷಿಯನ್ನು ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ಬಯಸಿದರೆ ಸೂರ್ಯ ದೇಹಕ್ಕೆ ಹತ್ತಿರವಾಗಿಸಿಕೊಳ್ಳಲೆಂದೇ ಅವಳನ್ನು ಮದುವೆಯಾಗಿದ್ದು ಎಂದು ತಿಳಿದಾಗ ಓದುಗನ ರಕ್ತವೇ ಕುದಿಯುತ್ತದೆ ಎಂದರೆ ಆರುಷಿಯ ಮನಸಿಗೆ ಎಷ್ಟು ಘಾಸಿಯಾಗಿರಬಹುದು ಎಂದು ಊಹಿಸಬಹುದಾಗಿದೆ.
ಈ ಕಾದಂಬರಿಯಲ್ಲಿ ಬರುವ ರವಿ, ಸೂರ್ಯ ಇಬ್ಬರೂ ಸಮಾನಾರ್ಥಕ ಹೆಸರನ್ನು ಹೊಂದಿದ್ದರೂ ಅವರ ವ್ಯಕ್ತಿತ್ವ, ನಡೆ, ನುಡಿ, ಪ್ರೇಮವನ್ನು ವ್ಯಕ್ತಪಡಿಸುವ ಪರಿ ಸಂಪೂರ್ಣ ತದ್ವಿರುದ್ಧವಾಗಿವೆ. ತ್ರಿಕೋನ ಪ್ರೇಮದ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ವಯೋಸಹಜದ ಆಕರ್ಷಣೆಗೊಳಗಾಗಿ ಅನ್ಯ ಮತದ ಸೂರ್ಯನನ್ನು, ಜಾತಿಯನ್ನೂ ಮೀರಿ ಪ್ರೀತಿಸಿ, ಎಂತದ್ದೇ ಕಷ್ಟ, ನಿಂದನೆ ಬಂದರೂ ಎದುರಿಸಲು ಸನ್ನದ್ಧವಾಗಿ ಮದುವೆಯಾಗುತ್ತಾಳೆ. ತಂದೆ, ತಾಯಿಯ ಪ್ರೀತಿಗಿಂತ ಪಕ್ಕದ ಮನೆಯ ಪ್ರೇಮಿ ಸೂರ್ಯನ ಪ್ರೀತಿಯೇ ಮಿಗಿಲು ಎಂದು ಸೂರ್ಯನನ್ನು ನಂಬಿ ಹಸ್ತ ಜೋಡಿಸುತ್ತಾಳೆ. ಈ ಸಂದರ್ಭದಲ್ಲಿ ಆರುಷಿ ಸೂರ್ಯ ಮದುವೆ ಆಗುವ ಕೊನೆಯ ಕ್ಷಣದವರೆಗೂ ಆರುಷಿ ಸೂರ್ಯನನ್ನು ಮದುವೆ ಆಗದೇ ಇರಲಿ ಎಂದು ಓದುಗ ಪ್ರತಿ ಹಂತದ ಓದಿನಲ್ಲೂ ಪ್ರಾರ್ಥಿಸುತ್ತಲೇ ಸಾಗುತ್ತಾನೆ. ಆದರೆ ರವಿ ಆರುಷಿಯ ವ್ಯಕ್ತಿತ್ವ ಲೋಕಕ್ಕೆ ಪರಿಚಯವಾಗಲೆಂದೇ ವಿಧಿ ಸೂರ್ಯ ಆರುಷಿಯ ವಿವಾಹವಾಗುವಂತೆ ಮಾಡಿದೆ ಅನಿಸುತ್ತದೆ.
ಸೂರ್ಯನ ಎಲ್ಲಾ ಆಟಾಟೋಪಗಳನ್ನು ಸಹಿಸಿಕೊಂಡೇ ಆರುಷಿ ಜೀವನ ಸಾಗಿಸುತ್ತಿದ್ದಳು. ಸೂರ್ಯ ಇವತ್ತಲ್ಲಾ ನಾಳೆ ಬದಲಾಗಬಹುದೆಂಬ ಆರುಷಿಯ ನಂಬಿಕೆ, ತಾಳ್ಮೆ ಕೊನೆಯವರೆಗೂ ಗೆಲ್ಲವುದೇ ಇಲ್ಲ. ಬದಲಿಗೆ ಆರುಷಿ ಮೆತ್ತಗಾದಷ್ಟು ಸೂರ್ಯ ಅಡ್ಡದಾರಿಯಲ್ಲಿ ಬಲಿಯುತ್ತಲೇ ಸಾಗುತ್ತಾನೆ. ವೈವಾಹಿಕೇತರ ಸಂಬಂಧದಲ್ಲೂ ಮುಂದುವರೆಯುತ್ತಾನೆ. ಇದನ್ನೆಲ್ಲಾ ಸಹಿಸಿಕೊಂಡ ಆರುಷಿಗೆ ಸೂರ್ಯನ ಅನುಮಾನದ ಮನ ಮಾತ್ರ ಬಹಳ ಬಾಧಿಸುತ್ತದೆ. ಎಲ್ಲಿ ಹೋದರೂ ಪರರ ಜೊತೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದ ಸೂರ್ಯನ ನಡೆ ನಿಜಕ್ಕೂ ಓದಗನಿಗೂ ಕೂಡ ಅಸಹನೀಯವೆನಿಸುತ್ತದೆ.
ಅಂತೂ ಒಂದು ಸಮಯದಲ್ಲಿ ಸೂರ್ಯನ ಬದುಕು ಅಂತ್ಯವಾದರೆ, ಆರುಷಿಯ ಬದುಕು ಹೊಸ ಹಂತದತ್ತ ಸಾಗುತ್ತದೆ. ಅವಳ ಲೇಖನಿಯಿಂದ ಬಂದ ಅನೇಕ ಲೇಖನಗಳು ಪರರ ಬದುಕಿಗೆ ದಾರಿದೀಪವಾಗುತ್ತವೆ.
ಸೂರ್ಯ ಸಾಯುವ ಮುನ್ನ ತನ್ನ ಹೆಂಡತಿ, ಮಗಳನ್ನೇ ಮಾರುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾನೆ. ಮಾರುತ್ತಾನೆ ಕೂಡ. ಇತ್ತ ಬೆಂಕಿ ಅಪಘಾತದಲ್ಲಿ ಸೂರ್ಯ ಮತ್ತು ಸೂರ್ಯನೊಡನೆ ಅನೈತಿಕ ಸಂಬಂಧ ಇಟ್ಟುಕೊಂಡ ಪರಿಮಳ ಅನ್ನೋ ಹೆಂಗಸು ಸಾಯುತ್ತಾಳೆ. ಲೋಕದ ದೃಷ್ಟಿಯಲ್ಲಿ ಸೂರ್ಯನೋಡನೆ ಆರುಷಿ ಮತ್ತು ಮಗಳು ರಶ್ಮಿಕಾ ಇಬ್ಬರೂ ಬೆಂಕಿಯಲ್ಲಿ ದಹಿಸಿಹೋದರು ಎಂಬಂತೆ ಭಾಸವಾಗುತ್ತದೆ.
ಮಾರಾಟಗೊಂಡು ದುಷ್ಟರ ಕೈಯಿಂದ ತಪ್ಪಿಸಿಕೊಂಡು ಬಂದ ಆರುಷಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ರವಿಯಿಂದನೂ ಅನೇಕ ವರ್ಷ ದೂರವಾಗಿ ಉಳಿಯುತ್ತಾಳೆ. ಆರುಷಿಯ ಮಗಳು ಆರುಷಿಗೆ ಸದಾ ಸಹಾಯಕಳಾಗಿದ್ದ ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದು ಆರುಷಿಯ ಗೆಳತಿ ಬೇಬಿಯ ಸುಪರ್ದಿಯಲ್ಲಿ ಬೆಳೆಯುತ್ತಾಳೆ.
ರವಿ ಮುಂದೆ ಅಪ್ಪಾಜಿಯಾಗಿ ಎಲ್ಲರಿಗೂ ಬೇಕಾಗುತ್ತಾರೆ, ನಂತರ ಒಂದು ಸಂದರ್ಭದಲ್ಲಿ ಆರುಷಿಗೆ ರವಿಯ ಭೇಟಿ ಆಗುತ್ತದೆ. ಆರುಷಿ, ರವಿ, ವಿಕಾಸ್, ಐಶ್ವರ್ಯ, ಆತ್ಮಾರಾಮ ಎಲ್ಲರ ಒಡನಾಟದಲ್ಲಿ ಎಲ್ಲರಿಗೂ ಆರುಷಿಯ ಇತಿಹಾಸ ತಿಳಿಯುತ್ತದೆ. ಆರುಷಿಯ ತಂದೆ ತಾಯಿ ಎಲ್ಲರೂ ಆರುಷಿ ಸತ್ತಿದ್ದಾಳೆ ಎಂದು ಭಾವಿಸಿದರೆ ರವಿ ಮಾತ್ರ ಅದನ್ನು ನಂಬಿರಲಿಲ್ಲ. ಆರುಷಿ ಇಲ್ಲವಾದ ಸಂದರ್ಭದಲ್ಲಿ ನಾನೂ ಇಲ್ಲವಾಗುತ್ತೇನೆ ಎಂಬಷ್ಟು ಪ್ರೇಮಿಸಿದ್ದ ರವಿಯ ನಂಬಿಕೆ ನಿಜವಾಗುತ್ತದೆ.
ಪ್ರಸ್ತುತ ಆರುಷಿಯ ಎರಡನೇ ಮಗ ಕಿರಣ (ಸೂರ್ಯನಿಂದ ದೂರವಾಗುವ ಸಂದರ್ಭದಲ್ಲಿ ಸೂರ್ಯನಿಂದ ಗರ್ಭಿಣಿಯಾಗಿರುತ್ತಾಳೆ) ಐಶ್ವರ್ಯ, ವಿಕಾಸ ಎಲ್ಲರೂ ರವಿ ಆರುಷಿಗೆ ಮದುವೆ ಮಾಡಿಸಬೇಕೆಂದು ಹವಣಿಸುತ್ತಾರೆ. ಆದರೆ ಆರುಷಿ ರವಿಯ ಸಂಬಂಧ ಮದುವೆಗೂ ಮೀರಿದ್ದು, ದೈಹಿಕ ಸಂಬಂಧಕ್ಕೂ ಮಿಗಿಲಾದುದು ಎಂಬ ಅರಿವು ಎಲ್ಲರಿಗೂ ಕೊನೆಯಲ್ಲಿ ತಿಳಿಯುತ್ತದೆ.
ಅನೇಕ ತಿರುವನ್ನೊಳಗೊಂಡ ಕಾದಂಬರಿಯ ಕೊನೆಯಲ್ಲಿ ಓದುಗನಿಗೆ ಕೃತಿಕಾರರು ಅಚ್ಚರಿಯ ತಿರುವನ್ನು ನೀಡುತ್ತಾರೆ. ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದ ಆರುಷಿಯ ಮಗಳು ರಶ್ಮಿಕಾಳೇ ಈ ಐಶ್ವರ್ಯ, ಈಗಿನ ಆರುಷಿಯ ತಾಯಿ ಭಾರ್ಗವಿಯೇ ಆರುಷಿಯ ಗೆಳತಿ ಬೇಬಿ ಎಂದು ತಿಳಿದು ಓದುಗ ರೋಮಾಂಚನಗೊಳ್ಳುತ್ತಾನೆ.
ಸೂರ್ಯನ ಸಾವಿಗೆ ಆರುಷಿಯೇ ಕಾರಣ ಎಂದು ತಿಳಿದಿದ್ದ ಸೂರ್ಯನ ತಾಯಿ ಸರೋಜಮ್ಮ ಕೊನೆಯಲ್ಲಿ ಆರುಷಿ ಬೆನ್ನಿಗೆ ಚೂರಿ ಹಾಕುತ್ತಾಳೆ. ರವಿಯ ತೊಡೆಯ ಮೇಲೆಯೇ ಆರುಷಿ ಕೊನೆ ಉಸಿರೆಳೆದರೆ ಆರುಷಿಯನ್ನು ಮಲಗಿಸಿಕೊಂಡ ರವಿ ಆರುಷಿ ಹಣೆಗೆ ಮುತ್ತಿಟ್ಟು ಅಲ್ಲೇ ಪ್ರಾಣ ಬಿಡುತ್ತಾನೆ. ಇಬ್ಬರ ನಡುವಿನ ಪ್ರೇಮದ ಸಂಧಾನ ಆತ್ಮಾನುಸಂಧಾನದಲ್ಲಿ ಮಿಲನವಾಗುತ್ತವೆ ಎನ್ನುವಲ್ಲಿ ಅಲ್ಲಿಯ ಪಾತ್ರಗಳ ಜೊತೆಗೆ ಓದುಗನ ಕಣ್ಣುಗಳೂ ತೇವವಾಗುತ್ತವೆ.
ತನ್ನ ಹೆತ್ತ ತಾಯಿ ಎಂದು ತಿಳಿದುಕೊಂಡ ಕೆಲವೇ ಕ್ಷಣಗಳಲ್ಲಿ ಐಶ್ವರ್ಯ ತಾಯಿಯನ್ನು ಮತ್ತೆ ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ.
ಬೇಬಿ ತನ್ನ ಆತ್ಮೀಯ ಗೆಳತಿಯನ್ನು ಕಳೆದುಕೊಂಡು ನೋವು ಪಟ್ಟರೆ, ಕಿರಣನಿಗೆ ತಾಯಿ ದೂರವಾದರೂ ತಾಯಿ ಸ್ಥಾನದಲ್ಲಿ ಒಡಹುಟ್ಟಿದ ಅಕ್ಕ, ಅಜ್ಜ, ಅಜ್ಜಿ ಎಲ್ಲರೂ ಸಿಗುತ್ತಾರೆ.
ರವಿಯ ಆದರ್ಶಗಳನ್ನೇ ತುಂಬಿಕೊಂಡಿದ್ದ ವಿಕ್ಕಿ, ಪ್ರೀತಿಯ ಅಭಿಮಾನದ ಅಪ್ಪಾಜಿಯನ್ನು ಕಳೆದುಕೊಂಡು ದುಃಖಿಸುತ್ತಾನೆ.
***
ಈ ಕಾದಂಬರಿಗೆ ಅಂತ್ಯವಿದೆ, ಕೃತಿಕಾರರೇನೋ ಕಾದಂಬರಿಗೆ ಮುಕ್ತಾಯ ಹಾಡಿ ಕಥೆ ಮುಗಿಸಿದರೂ ಕಾದಂಬರಿಯನ್ನು ಓದಿದ ಓದುಗನೆದೆಯಲ್ಲಿ ಪಾತ್ರಗಳು ಜೀವಂತಾವಾಗಿಯೇ ಉಳಿಯುತ್ತವೆ.
ರವಿಯ ಪ್ರೀತಿಸುವ ಪರಿ, ಪ್ರೀತಿ ಕೊಡಬೇಕು ಪ್ರತಿಯಾಗಿ ಬಯಸಬಾರದು ಎಂಬ ಸತ್ಯತೆ, ಆರುಷಿಯ ತಾಳ್ಮೆ, ಆತ್ಮಾರಾಮರ ಜೀವನ ದೃಷ್ಟಿಕೋನ ಎಲ್ಲವೂ ಓದುಗನಲ್ಲಿ ನಿರಂತರವಾಗಿ ಉಳಿಯುತ್ತವೆ.
ಶ್ರೀಮತಿ ಉಷಾ ರವಿ ಅವರ ಬರಹದ ವೈಖರಿ, ಕಥೆ ಕಟ್ಟುವ ವಿಧಾನಕ್ಕೆ ಓದುಗ ಖಂಡಿತ ಶರಣಾಗುತ್ತಾನೆ. ಇಡೀ ಕಾದಂಬರಿ ನನ್ನ ಹೃದಯದಲ್ಲಿದ್ದರೂ ಕೆಲ ಸಂದರ್ಭಗಳನ್ನು ಮಾತ್ರ ನಾನು ಇಲ್ಲಿ ಪರಿಚಯಿಸಲೆತ್ನಿಸಿದ್ದೇನೆ. ಅಜ್ಞಾತ ಕವಿಯನ್ನರಸಿ ಹೊರಟ ಐಶ್ವರ್ಯಳಿಗೆ ಸಿಕ್ಕಿದ್ದು ಯಾರು? ಕೊನೆಗೆ ಐಶ್ವರ್ಯ ಯಾರನ್ನು ಮದುವೆಯಾಗುತ್ತಾಳೆ? ಸೂರ್ಯನನ್ನು ಮದುವೆಯಾದ ಬಳಿಕ ಆರುಷಿ ಅನುಭವಿಸಿದ ಯಾತನೆ, ಮಗಳ ಈ ನಡೆಯಿಂದ ಆರುಷಿಯ ತಂದೆ, ತಾಯಿ, ಅಣ್ಣ ಪಟ್ಟ ಸಂಕಟ, ಆರುಷಿಯ ಜೀವನದ ಪ್ರತಿ ಹೆಜ್ಜೆಯಲ್ಲೂ ಅವಳ ಅರಿವಿಗೆ ಬಾರದಂತೆ ರವಿ ಹೇಗೆ ಸಾತಿಕೊಟ್ಟು ಅವಳ ಬದುಕನ್ನು ಗಟ್ಟಿಗೊಳಿಸುತ್ತಾನೆ. ಈ ಎಲ್ಲವೂ ನನ್ನ ಆತ್ಮದಲ್ಲಿ ಬಂಧನವಾಗಿವೆ ಅಲ್ಲದೆ ಈ ಕೃತಿಯ ಅನೇಕ ಸಾಲುಗಳು ಅನೇಕ ಬಾರಿ ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಮಾಡಿವೆ.
ನಿಮಗೂ ಈ ಆತ್ಮಾನುಸಂಧಾನದ ದರ್ಶನವಾಗಬೇಕೆಂದರೆ, ಎಲ್ಲ ಸನ್ನಿವೇಶಗಳೂ ಮನಕ್ಕೆ ತಾಗಬೇಕೆಂದರೆ ಕೃತಿಯನ್ನು ಕೊಂಡು ಓದಿ ಎಂದು ಕೇಳಿಕೊಳ್ಳುತ್ತೇನೆ. ಮತ್ತು ಶ್ರೀಮತಿ ಉಷಾ ರವಿ ಅವರಿಂದ ಮತ್ತಷ್ಟು ಲೋಕೋದ್ಧಾರಕಕ್ಕೆ ಸಹಕಾರಿಯಾಗುವಂತಹ ಇಂತಹ ಕೃತಿಗಳು ಹೊರಬರಲಿ ಎಂದು ಆಶಿಸುತ್ತಾ ಕೃತಿಯ ಕುರಿತಾದ ನನ್ನ ಕಿರು ಅನಿಸಿಕೆಗೆ ಅಲ್ಪ ವಿರಾಮ ನೀಡುತ್ತೇನೆ.

ವರದೇಂದ್ರ ಕೆ ಮಸ್ಕಿ
9945253030
ಪ್ರತಿಗಳಿಗಾಗಿ ಸಂಪರ್ಕಿಸಿ
—- ಶ್ರೀಮತಿ ಉಷಾ ರವಿ
9844467727
ವರದೇಂದ್ರ ಕೆ ಮಸ್ಕಿ
9945253030
ಪ್ರತಿಗಳಿಗಾಗಿ ಸಂಪರ್ಕಿಸಿ
—- ಶ್ರೀಮತಿ ಉಷಾ ರವಿ
9844467727



