ಕಾವ್ಯ ಸಂಗಾತ
ಡಾ. ಹೆಚ್. ನಟರಾಜ್ ಆರ್ಯ
“ಮಾನ್ಯಳ ಆತ್ಮದ ಅಳಲು”


ನಾನು
ಕತ್ತಲಲ್ಲಿ ಸತ್ತವಳಲ್ಲ—
ನನ್ನೊಳಗೆ
ಒಂದು ಚಿಕ್ಕ ಬೆಳಕು
ಇನ್ನೂ ಉಸಿರಾಡುತ್ತಿತ್ತು.
ನನ್ನ ಉಸಿರಲ್ಲಿ
ಮತ್ತೊಂದು ಉಸಿರಿನ ನಡುಗು,
ಹೃದಯದ ತಾಳದಲ್ಲಿ
ನಾಳೆಯೊಂದು
ಭಯದಿಂದ ಕಂಪುತ್ತಿತ್ತು.
ನನ್ನನ್ನು ಕೊಂದದ್ದು
ಕತ್ತಿಯಲ್ಲ—
ಜಾತಿಯೆಂಬ
ಮನಸ್ಸಿನ ಕಾಯಿಲೆ.
ಅಪ್ಪಾ…
ಪ್ರೀತಿ ತಪ್ಪೇ?
ಮಾನವನಂತೆ ಬದುಕಲು
ಕನಸು ಕಾಣುವುದು
ಪಾಪವೇ?
ನೀವು ಕೊಂದದ್ದು
ದೇಹವಲ್ಲ—
ಗರ್ಭದ ಬೆಳಕು.
ಅಲ್ಲಿ
ಒಂದು ಬದುಕು
ಬೀಜವಾಗಿಯೇ
ಕುಸಿದಿತ್ತು.
ಹೇಳಿ—
ಆ ಉಸಿರಿಗೆ
ಯಾವ ಜಾತಿ?
ಆ ಕನಸಿಗೆ
ಯಾವ ಗೋಡೆ?
ತಾಯಿಯ ಕಣ್ಣೀರಿಗೂ
ನಿಯಮ ಇದೆಯೆ?
ದೌರ್ಜನ್ಯ
ಕ್ಷಣದ ಕೋಪವಲ್ಲ—
ತಲೆತಲಾಂತರದಿಂದ
ಹರಿದು ಬಂದ
ಕತ್ತಲ ರಕ್ತ.
ಇದಕ್ಕೆ ಔಷಧಿ
ಕತ್ತಿಯಲ್ಲ—
ಮನಸ್ಸು ಎಚ್ಚರಗೊಳ್ಳುವ
ಜಾಗೃತಿ.
ಮಾನ, ಧರ್ಮ, ಸಂಪ್ರದಾಯದ ಹೆಸರಿನಲ್ಲಿ
ನಾವು
ಬಂಧನಗಳನ್ನೇ
ಹಾರವೆಂದು
ಧರಿಸಿಕೊಂಡೆವು.
ತಪ್ಪಿಗೆ
ಕಾನೂನು ಇದೆ,
ನ್ಯಾಯ ಇದೆ,
ಶಿಕ್ಷೆ ಇದೆ—
ಆದರೆ
ಜೀವ ಕತ್ತರಿಸುವ
ಅಧಿಕಾರ
ಯಾರಿಗೂ ಇಲ್ಲ.
ಅವಳ ಕಣ್ಣಲ್ಲಿ
ನಿನ್ನ ಮಗಳ ಭಯ,
ಅವನ ಉಸಿರಲ್ಲಿ
ನಿನ್ನ ಮಗನ
ನಾಳೆ.
ನನಗೆ ನ್ಯಾಯ ಸಿಕ್ಕಿತು—
ಆದರೆ
ನನ್ನ ಮಗನಿಗೆ
ಬೆಳಗ್ಗೆ ಬರಲಿಲ್ಲ.
ಸೂರ್ಯೋದಯಕ್ಕೂ
ಅನುಮತಿ ಬೇಕಾಯಿತೇ?
ನನ್ನ ಆತ್ಮಕ್ಕೆ ಶಾಂತಿ ಸಿಗುವುದು
ಒಂದು ದಿನ—
ಈ ಸಮಾಜ
ಕನ್ನಡಿ ನೋಡಿಕೊಂಡು
ತನ್ನನ್ನೇ ಪ್ರಶ್ನಿಸಿದಾಗ.
ಆ ದಿನ
ನಮ್ಮಂಥ ಆತ್ಮಗಳು
ಕತ್ತಲಲ್ಲ—
ಭಯದಲ್ಲಲ್ಲ—
ಮಾನವೀಯತೆಯ ಬೆಳಕಿನಲ್ಲಿ
ನಿಶ್ಶಬ್ದವಾಗಿ
ಅಳದೆ
ನಗುತ್ತೇವೆ.




ಸಮಾಜದಲ್ಲಿರುವ ಪಿಡುಗುಗಳನ್ನು ತೊಡೆದು ಹಾಕಲು, ಹನಿ ಹನಿ ಸೇರಿದರೆ ಹಳ್ಳವೆಂಬಂತೆ ಪ್ರತಿಯೊಬ್ಬ ಹುಲು ಮಾನವನು ತನ್ನ ಪ್ರಜ್ಞೆಯಿಂದ ಆಲೋಚಿಸಬೇಕು ಸರ್.
ತಮ್ಮೆಲ್ಲ ಕವನಗಳನ್ನು ಸಂಕಲನದ ಮೂಲಕ ಹೊರತನ್ನಿ ಎಂದು ಕೋರುವೆ.!
ಸಮಾಜದ ಗೊಡ್ಡು ಸಂಪ್ರದಾಯಗಳಿಗೆ ಎಷ್ಟೊಂದು ಜೀವಗಳು ಬಲಿಯಾಗಿದೆ ಈ ಆಧುನಿಕ ಯುಗದಲ್ಲೂ ಕೂಡ ಸಂಪ್ರದಾಯದ ಜಾತಿ ಹೆಸರಲ್ಲಿ ಪ್ರತಿ ನಿತ್ಯ ಬಲಿಗಳು ಆಗ್ತಾನೆ ಇದೆ. ಜಾತಿವಾದಿಗಳಿಗೆ ದುಃಖ ದುಮ್ಮನಗಳು ಈ ಕವನದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಎಂಬ ಭ್ರಮೆ ಇನ್ನೂ ಇದ್ದೇವೆ
ಮಾನ್ಯಳ ಆತ್ಮದ ಅಳಲು ಕವನವು ಒಂದು ಕಡೆ ನೋವನ್ನು ಹೇಳುದ್ರೆ ಮತ್ತೊಂದು ಕಡೆ ಭರವಸೆಯನ್ನು ಹುಟ್ಟುಹಾಕುತಿದೆ.ಹಾಗೂ ಮಾನವೀಯತೆ ಮೌಲ್ಯವನ್ನು ನೆನಪಿಸುವ ಕವನವಾಗಿದೆ.ನಿಮ್ಮ ಕವನ ಸಂಕಲನಕ್ಕೆ ಕಾಯುತಿರುವೆ ಸ್ನೇಹಿತ. All the best
ತಾವು ಬರೆದ ಮಾನ್ಯಳ ಆತ್ಮದ ಅಳಲು ಕವನವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್…ಈ ಮೂಢನಂಬಿಕೆ ಪಿಡುಗು ತೊಲಗಬೇಕು… ಇಂದಿನ ಪೀಳಿಗೆಯ ಮನುಕುಲವು ನಾವೆಲ್ಲರೂ ಒಂದೇ.ಜಾತಿ-ಬೇಧ ಮರೆತು ಒಂದೇ ಎಂದು ಭಾವನೆ ಮೂಡಬೇಕು ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಭಾವನೆ ಮೂಡುತ್ತದೆ. ಅಭಿನಂದನೆಗಳು ಸರ್
ಸರಳ ಪದಗಳಲಿ ಪ್ರಬುದ್ಧ ಭಾವನೆಗಳನ್ನು ತುಂಬುವ ನಿಮ್ಮ ಕವನ ಸಾಮರ್ಥ್ಯ ತುಂಬಾ ಪ್ರಶಂಷನೀಯ
So Natural and need of the hour, pls publish …
So natural and need of yhr hour, pls publish it wil inspire society..
ಬಹಳ ಅರ್ಥ ಗರ್ಭಿತ ವಾಗಿದೆ ಈ ಜಾತಿ ಪಿಡುಗು ಇನ್ನೆಷ್ಟು ವರ್ಷ ಸಾಕಾಗಿದೆ ಬಾಲ್ಯ ದಿಂದಲೂ ನನಗು ಕೇಳಿ ಕೇಳಿ ಸಾಕಾಗಿದೆ ಇದು ಇನ್ನೆಷ್ಟು ವರ್ಷ ಕೇಳಬೇಕು ಗೊತ್ತಿಲ್ಲ ಶಿವನಲ್ಲಿ ಬೇಡಿಕೆ ಈ ಪಿಡುಗು ಇಲ್ಲಿಗೆ ನಿಲ್ಲಿಸಿ ಬಿಡು ಇಂದು ಮತ್ತೆ ನಾವೆಲ್ಲರೂ ಹೋರಾಡಬೇಕಿದೆ ಈ ವೆವಸ್ಥೆ ವಿರುದ್ದ ಇರುವುದೊಂದೇ ಜಾತಿ ಅದು ಮಾನವ ಜಾತಿ
ನಮಸ್ತೆ sir
“*ಮಾನ್ಯಳ ಆತ್ಮದ ಅಳಲು*” ಕವನವು ಸಾಂಪ್ರದಾಯಿಕ ಮೂಡ್ಯತೆಯ ಸೆಲೆ ಹಿನ್ನಲೆಯಲ್ಲಿ ರಚಿತಗೊಂಡ ಈ ಕವನವು ಭಾವನಾತ್ಮಕ ರೋಧನೆಯ ಆಳ,ಪದಗಳ ಸರಳ ಜೋಡಣೆ,ಭಾಷಾ & ನಿರೂಪಣಾ ಶೈಲಿ ತುಂಬಾ ಅರ್ಥಗರ್ಭಿತವಾಗಿದೆ.
ಕವಿತೆಯು ಓದುಗರ ಮನಸ್ಸನ್ನು ತಟ್ಟುವ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾ, ಸಮಾಜದಲ್ಲಿನ ಮೌಢ್ಯತೆಯ ನೈಜತೆ ವಿವರಣೆ ಮತ್ತು ಕವನದಲ್ಲಿ ಪದಗಳ ಆಯ್ಕೆ ಮತ್ತು ಸಾಲುಗಳ ಜೋಡಣೆ ತುಂಬಾ ಸೊಗಸಾಗಿ & ಅದ್ಭುತವಾಗಿದೆ sir.
ಈ ಕವನದಲ್ಲಿನ ಶರಣ ತತ್ವ ಮತ್ತು ಮಾನವತ್ವದ ಅಲೆಗಳು ಕವನ ಜೀವಂತವಾಗುವಂತೆ ಮಾಡುತ್ತವೆ. ನೋವಿನ ಅಳಲು ಒಂದು ಕಡೆಯಾದರೆ ಮಾನವೀಯತೆಯ ಮೌಲ್ಯಗಳನ್ನು ಅರಳುವ ಭರವಸೆಯ ಬೆಳಕು ಇನ್ನೊಂದು ಕಡೆ ಇದೇ ಈ ಕವನದ ವಿಶೇಷತೆ & ಆತ್ಮ ಕೂಡ.
ಒಟ್ಟಾರೆಯಾಗಿ ಸೂಕ್ತ ಸಮಯದಲ್ಲಿ ಸೂಕ್ತ ಕವನ.
ನಿಮ್ಮ ಬರವಣಿಗೆ ಮುಂದುವರಿಯಲಿ , ತುಂಬು ಹೃದಯದ ಅಭಿನಂದನೆಗಳು. ಇನ್ನು ಹೆಚ್ಚೆಚ್ಚು ಕವನಗಳು ಬರಲಿ sir.
ಅರ್ಥಪೂರ್ಣ, ಸಂಪೂರ್ಣ, ಮನಮುಟ್ಟುವಂತ ಪದಗಳು ಸಾರ್
ನಟರಾಜ್ ಬಹು ದಿನಗಳ ನಂತರ ಮುಚ್ಚಿಟ್ಟದ್ದ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಪ್ರತಿ ಸಾಲಿನ ಪದವೂ ತೂಗಿದ ಅಕ್ಕಸಾಲಿಯ ನೋವಿನ ತುಣುಕುಗಳಂತಿವೆ. ಅಭಿನಂದನೆಗಳು