ಕಾವ್ಯ ಸಂಗಾತಿ
ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ
“ನಿನ್ನೊಳಿದೆ ನನ್ನ ಹೃದಯ”


ನಿನ್ನ ನೋಡದೆ ನಾ ಹೇಗಿರಲಿ,ನನ್ನೊಲವಿನ ಗೆಳತಿ
ನಿನ್ನೊಳಿದೆ ನನ್ನ ಮನಸ್ಸು……..
ಅರ್ಥವಾಗದಿಹದೇ ನಿನ್ನೊಲವಿನ ಗೆಳೆಯನ
ಹೃದಯಾಂತರಾಳದ ವೇದನೆಯು ನಿನಗೆ
ನಿನ್ನದೆ ಮಧುರ ನೆನಪು ಪ್ರತಿ ಕ್ಷಣ ಕ್ಷಣವು
ನನ್ನೆದೆಯ ವೀಣೆಯ ಮೀಟುತಿದೆ…..
ಅಂದು ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ
ಚಂದ್ರಮುಖಿ ಚಕೋರಂಗೆಯೇ ನಾಚುವಂತೆ
ಸಿಂಗರಿಸಿಕೊಂಡು ಬಳಿಬಂದು ಎನ್ನ ಬಳಸಿ
ಎದೆಗಪ್ಪಿ ಚುಂಬಿಸಿ ಪ್ರೇಮಬಂಧನದಿ ಬಂಧಿಸಿದ
ಆ ಘಳಿಗೆಯನ್ನು ಮರೆಯಲಾದೀತೆ ಗೆಳತಿ
ಈ ಜನ್ಮದಿಂದ ಸಪ್ತಜನ್ಮದವರೆಗೂ…..
ಕಾಯ ನನ್ನದು ಪ್ರಾಣ ನಿನ್ನದು ಒಲವೇ
ಹೃದಯ ನನ್ನದು ಬಡಿತ ನಿನ್ನದೆ ಚಲುವೇ
ದೂರವಾಗಬೇಡ ನೀ ತಾಳಲಾರೆನು ನಾ
ಈ ಸುಡುವ ವಿರಹದೂರಿಯಿಂದ
ದೂರವಾದರೆ ನೀನು ಬರಿದಾದ ಕಡಲಂತೆ
ನನ್ನ ಬದುಕು…….. ನನ್ನ ಬದುಕು…….
ನಾನು ಬಡವನಾದರೂ ಪ್ರೀತಿಗೆ ಬಡತನವಿಲ್ಲ
ನನ್ನ ಮನದಿ ಪ್ರೇಮಸಿರಿಯೇ ಇರುವದು
ನೀನೀ ದೀನನ ಬಾಳಿನ ಜ್ಯೋತಿಯೆಂದು
ಹರುಷದಿ ಹಕ್ಕಿಯಂತೆ ಹಾರಾಡುತ್ತಿರುವೆ
ಮರೆಯಾದರೆ ನೀ ಮಣ್ಣಲ್ಲಿ ಮಣ್ಣಾಗುವೆ ನಾ
ನಿನ್ನೊಳಿದೆ ನನ್ನ ಹೃದಯ……….
ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ



