ಪುಸ್ತಕ ಸಂಗಾತಿ
ಪಾರ್ವತಿ ಎಸ್ ಬೂದೂರು
“ಜಗತ್ತೇ ಒಂದು ರಂಗಮಂಟಪ
ನಾವೆಲ್ಲ ನಟರು-ಶೇಕ್ಸಪಿಯರ್”



ಇಂಗ್ಲೆಂಡ್ ನ ಜಗತ್ಪ್ರಸಿದ್ಧ ನಾಟಕಕಾರ ಹಾಗು ಕವಿ ವಿಲಿಯಮ್ ಶೇಕ್ಸಪಿಯರವರು ಈ ದೇಹದಲಿ ಉಸಿರಿರುವ ತನಕ ಸವೆಯುವ ಗಳಿಗೆಗಳನೆ ನಾಟಕ ಎಂದಿರುವರು ಹಾಗಾದರೆ ಈ ನಾಟಕ (Drama) ಎನ್ನುವ ಪದದ ಆಳವನು ನೋಡಲೆತ್ನಿಸಿದಾಗ, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜೀವಂತಿಕೆಯಲ್ಲಿಯೆ ವಿಶಿಷ್ಟವಾದ ಮಾನವ ಸಂವೇದನೆಯ ಪ್ರತಿಬಿಂಬವಾಗಿದೆ.
ಕವಿತೆ ಓದಿಸಿಕೊಂಡು ಹೋಗುತ್ತದೆ, ಕಾದಂಬರಿ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಆದರೆ ನಾಟಕವು ಕಣ್ಣೆದುರೇ ಘಟಿಸುವ ‘ವರ್ತಮಾನ’. ಸಂಸ್ಕೃತದ ಅಲಂಕಾರಿಕರು ನಾಟಕವನ್ನು ‘ದೃಶ್ಯಕಾವ್ಯ’
ಎಂದಿರುವರು.
ನಾಟಕವು ಕೇವಲ ಲೇಖಕನ ಕಲ್ಪನೆಯಲ್ಲ ಪ್ರೇಕ್ಷಕರ ಎದುರು ರಂಗಮಂಟಪದ ಮೇಲೆ ಸೃಷ್ಟಿಯಾಗುವ ಮಾಯಾ ಪ್ರಪಂಚ.
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ನಾಟಕಕ್ಕಿದೆ. ಮನುಷ್ಯನ ಅಂತರಂಗವನ್ನು ಶೋಧಿಸುವ, ಸಮಾಜದ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಬದುಕುವ ಕಲೆಯನ್ನು ಕಲಿಸುವ ಒಂದು ಸತ್ವಯುತ ಕಲಾ ಪ್ರಕಾರವಾಗಿದೆ. ಅಕ್ಷರ ಮತ್ತು ಅಭಿನಯದ ಈ ಸಮಾಗಮವೇ ನಾಟಕವನ್ನು ಅಮರವಾಗಿಸಿದೆ.
‘ನಾಟಕ’ ಎಂಬ ಪದವು ಸಂಸ್ಕೃತದ ‘ನಟ್’ (ನಟಿಸು ಅಥವಾ ಚಲಿಸು) ಎಂಬ ಧಾತುವಿನಿಂದ ಬಂದಿದೆ.
ಭರತಮುನಿಯು ತನ್ನ ‘ನಾಟ್ಯಶಾಸ್ತ್ರ’ದಲ್ಲಿ ನಾಟಕವನ್ನು ‘ಪಂಚಮ ವೇದ’ ( ಋಗ್ವೇದದ ಪಠ್ಯ, ಸಾಮವೇದದ ಗಾಯನ, ಯಜುರ್ವೇದದ ಅಭಿನಯ, ಅಥರ್ವ ವೇದದ ರಸವನು ಪಡೆದುದೆ ನಾಟಕ ) ಎಂದು ಕರೆದಿದ್ದಾರೆ ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಜ್ಞಾನ ಮತ್ತು ಮನರಂಜನೆ ನೀಡುವ ಶಕ್ತಿಯನ್ನು ಹೊಂದಿದೆ.
ನವರಸಗಳ ಮೂಲಕ ಪ್ರೇಕ್ಷಕನಲ್ಲಿ ಭಾವನಾತ್ಮಕ ಬದಲಾವಣೆ ತರುವುದು ಇದರ ಮುಖ್ಯ ಗುರಿ.
ಪೌರಾಣಿಕ: ಐತಿಹಾಸಿಕ: ಸಾಮಾಜಿಕ: ದುರಂತ. ಸುಖಾಂತ, ಹಾಸ್ಯ ಇವೆಲ್ಲ ನಾಟಕದ ಪ್ರಾಕಾರಗಳು.
ಮನುಷ್ಯನ ಸಂಘರ್ಷಗಳು ಸೋಲು-ಗೆಲುವುಗಳು ಮತ್ತು ಭಾವನೆಗಳನ್ನು ಅಭಿನಯದ ಮೂಲಕ ಮರುಸೃಷ್ಟಿಸುವ ಕಲೆ. “ಜಗತ್ತೇ ಒಂದು ರಂಗಮಂಟಪ, ನಾವೆಲ್ಲರೂ ನಟರು” ಎಂಬ ಶೇಕ್ಸ್ಪಿಯರ್ನ ಮಾತು ನಾಟಕದ ವ್ಯಾಪ್ತಿಯನ್ನು ಅದ್ಭುತವಾಗಿ ವರ್ಣಿಸುತ್ತದೆ.
ನಮ್ಮ ಸಗರನಾಡಿನ ಸಾಹಿತಿ, ಸಂಶೋದಕ, ಶಿಕ್ಷಕರಾದ ಶ್ರೀಯುತ ಶ್ರೀ ನಿಂಗನಗೌಡ ದೇಸಾಯಿ ಅವರು ರಚಸಿದ ನಾಟಕ ಕೃತಿಯ ಅವಲೋಕನ.
ಕಲಿಯಿರಿ ಕಲಿಸಿರಿ (ಸಾಮಾಜಿಕ ನಾಟಕ)
ಲೇಖಕರು: ನಿಂಗನಗೌಡ ದೇಸಾಯಿ.
ಪ್ರಥಮ ಮುದ್ರಣ: 2010.
ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಬದುಕುವ ದಾರಿಯನ್ನು ತೋರಿಸುವ ಬೆಳಕು. ಈ ಆಶಯವನ್ನು ಹೊತ್ತು ಹೊರಬಂದಿರುವ ನಾಟಕವೇ ‘ಕಲಿಯಿರಿ ಕಲಿಸಿರಿ’. ಕಲ್ಬುರ್ಗಿಯ ಬಸವ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಗೆ ಖ್ಯಾತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಚಂದ್ರಕಾಂತ್ ಕರದಳ್ಳಿ ಅವರು ಮುನ್ನುಡಿ ಬರೆದಿದ್ದಾರೆ. ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಗೌಡ ಪಾಟೀಲ್ ಅವರ ಪ್ರೋತ್ಸಾಹ ಹಾಗೂ ಕಂಚ್ಯಾಣಿ ಶರಣಪ್ಪ ಅವರ ಬೆನ್ನುಡಿಯೊಂದಿಗೆ ಈ ನಾಟಕವು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತದೆ.
ಇಂದಿನ ನಗರೀಕರಣದ ಅಬ್ಬರದಲ್ಲಿ ಯುವಜನತೆ ಹಳ್ಳಿಯನ್ನು ಮರೆತು ನಗರಗಳತ್ತ ಓಡುತ್ತಿದ್ದಾರೆ. “ಎಲ್ಲವನ್ನೂ ಸರ್ಕಾರವೇ ಮಾಡಲಿ” ಎಂಬ ಅಸಹಾಯಕ ಮನೋಭಾವದ ನಡುವೆ, ಈ ನಾಟಕದ ನಾಯಕ ರವಿ ಒಬ್ಬ ಆದರ್ಶ ಯುವಕನಾಗಿ ಕಾಣಿಸಿಕೊಳ್ಳುತ್ತಾನೆ. ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ತನ್ನ ಹಳ್ಳಿಯ ಅಭಿವೃದ್ಧಿಯ ಬಗ್ಗೆ ಅವನಿಗೆ ಅಪಾರ ಕಾಳಜಿಯಿಂದ ಹಳ್ಳಿಗೆ ಬರುವನು.
ಧರ್ಮಪ್ಪನವರ ಹಟ ಮತ್ತು ಕಹಿ ನೆನಪುಗಳು
ಗ್ರಾಮದ ಶ್ರೀಮಂತ ಹಿರಿಯರಾದ ಧರ್ಮಪ್ಪ ಅನಕ್ಷರಸ್ಥರಾದರೂ ತನ್ನ ಮಕ್ಕಳನ್ನು ಓದಿಸಿದವರು. ಆದರೆ ವಿಧಿಯಾಟ ಬೇರೆಯೇ ಇತ್ತು:
ನೌಕರಿ ಹಿಡಿದ ಮಗ ಮತ್ತು ಸೊಸೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದುತ್ತಾರೆ.
ಎಂ.ಎ ವರೆಗೆ ಓದಿದ ಮಗಳು ರಾಣಿ ಭಯದಿಂದ ಮನೆಯಲಿ ಪ್ರೇಮ ವಿಷಯ ತಿಳಿಸದೆ ಪ್ರೀತಿಸಿದವನ ಜೊತೆ ಹೋಗುತ್ತಾಳೆ. ಅಲ್ಲದೆ ಪಕ್ಕದ ಗ್ರಾಮದ ಪರುತಗೌಡ ಸಾಲ ಮಾಡಿ ಮಗನಿಗೆ ಶಾಲೆ ಕಲಿಸಿದರು ಮಗ ದಂಡಪಿಂಡನಾಗಿ ಊರಮುಂದೆ ಕುಳಿತ ವ್ಯರ್ಥ ಸಮಯ ಸವೆಸುವದು ಕಂಡ ಈ ಎಲ್ಲ ಘಟನೆಗಳಿಂದ ನೊಂದ ಧರ್ಮಪ್ಪ, “ಶಿಕ್ಷಣವೇ ಎಲ್ಲಾ ಅನಾಹುತಗಳಿಗೆ ಕಾರಣ” ಎಂದು ನಂಬಿ ಬಿಡುತ್ತಾರೆ. ತನ್ನ ಮೊಮ್ಮಕ್ಕಳಾದ ಶಂಕರನನ್ನು ದನಕಾಯಲು ಮತ್ತು ರಾಧಾಳನ್ನು ಅಡುಗೆ ಮಾಡಲು ಹಚ್ಚುತ್ತಾರೆ. ಶಾಲೆಗೆ ಕಳಿಸದ ಮೊಮ್ಮಗಳಿಗೆ ಓದಿದ ನೌಕರಿದಾರ ವರನನ್ನು ತಂದು ಮದುವೆ ಮಾಡುವ ಆಸೆ ಪಡುತ್ತಾರೆ ಆದರೆ ಅವಳ ಅನಕ್ಷರತೆ ಅದಕ್ಕೆ ಅಡ್ಡಿಯಾಗುತ್ತದೆ.
ರವಿಯ ಜ್ಞಾನ ಮತ್ತು ತಾರ್ಕಿಕ ಉತ್ತರಗಳು
ರಜೆಯ ಮೇಲೆ ಊರಿಗೆ ಬಂದ ಅದೆ ಗ್ರಾಮದ ಶಿಕ್ಷಿತ ಯುವಕ ರವಿ, ಧರ್ಮಪ್ಪನವರ ಭೇಟಿಗೆ ಬಂದಾಗ ಗೌಡರ ಈ ಮೌಡ್ಯಯುತ ನಿರ್ಧಾರವನ್ನು ಕಂಡು ಪ್ರತಿಭಟಿಸುತ್ತಾನೆ. ಆಗ ಅವರ ನಡುವೆ ನಡೆಯುವ ಸಂಭಾಷಣೆ ಮಾರ್ಮಿಕವಾಗಿದೆ. “ಶಾಲೆ ಕಲಿತರೆ ಹೆಣ್ಣುಮಕ್ಕಳು ದಾರಿ ತಪ್ಪುತ್ತಾರೆ” ಎಂಬ ಧರ್ಮಪ್ಪನವರ ಮಾತಿಗೆ ರವಿ ಕೇಳುವ ಪ್ರಶ್ನೆಗಳು ಕಣ್ಣು ತೆರಿಸುವಂತಿವೆ:
“ಗಾಳಿಗೆ ದೀಪ ಆರಿ ಹೋಯಿತೆಂದು ದೀಪ ಹಚ್ಚುವುದನ್ನೇ ಬಿಡಬೇಕೇ?” “ಊಟದ ತುತ್ತಿನಲ್ಲಿ ಹರಳು ಸಿಕ್ಕಿತೆಂದು ಊಟ ಮಾಡುವುದನ್ನೇ ನಿಲ್ಲಿಸಬೇಕೇ? ಯಾರೋ ಮಾಡಿದ ತಪ್ಪಿಗೆ ಈ ಮಕ್ಕಳಿಗೆ ಶಿಕ್ಷೆ ಕೊಡುವುದು ನ್ಯಾಯವೇ?”
ರವಿಯ ಪ್ರಕಾರ ಶಿಕ್ಷಣ ಎಂಬುದು ಕೇವಲ ನೌಕರಿಗಾಗಿ ಅಲ್ಲ; ಅದು ಜ್ಞಾನಕ್ಕಾಗಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಮತ್ತು ಮನೆಯ ವ್ಯವಹಾರಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಅತ್ಯಗತ್ಯ
ಬದಲಾವಣೆಯ ಹಾದಿಗೆ ಯೋಜನೆಗಳ ಅನುಷ್ಠಾನ
ಧರ್ಮಪ್ಪನವರ ಪತ್ನಿ ಕ್ಯಾನ್ಸರ್ನಿಂದ ತೀರಿಹೋಗಿದ್ದರಿಂದ ಮನೆಯಲ್ಲಿ ಅಡುಗೆ ಮಾಡಲು ಯಾರೂ ಇಲ್ಲ ಎಂಬ ನೆಪವನ್ನೂ ರವಿ ಸುಳ್ಳು ಮಾಡುತ್ತಾನೆ. ಮಕ್ಕಳನ್ನು ಶಾಲೆಗೆ ತರಲು ಇರುವ ಸರ್ಕಾರದ ಯೋಜನೆಗಳಾದ:
- ಡಿ.ಪಿ.ಎ.ಪಿ (DPAP – ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ)
- ಚಿಣ್ಣರ ಅಂಗಳ (ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವ ಯೋಜನೆ)
ಇವುಗಳ ಬಗ್ಗೆ ಅರಿವು ಮೂಡಿಸುತ್ತಾನೆ. ಗ್ರಾಮದ ಸುಶಿಕ್ಷಿತರನ್ನು ಒಗ್ಗೂಡಿಸಿ, ಜನರ ವ್ಯಂಗ್ಯದ ಮಾತುಗಳನ್ನು ಸಹನೆಯಿಂದ ಎದುರಿಸಿ, ಗ್ರಾಮದಲ್ಲಿ ಒಂದು ಸಹಕಾರಿ ಸಂಘ ಮತ್ತು ಕಡಿಮೆ ಬಡ್ಡಿ ದರದ ಫೈನಾನ್ಸ್ ಆರಂಭಿಸುತ್ತಾನೆ. ಇದು ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ದುಶ್ಚಟಗಳ ವಿರುದ್ಧ ಸಮರ ಮತ್ತು ರಾಜಕೀಯ ಎಚ್ಚರ
ರವಿ ಕೇವಲ ಅಕ್ಷರ ಕಲಿಸುವುದಕ್ಕೆ ಸೀಮಿತವಾಗದೆ, ಗ್ರಾಮದಲ್ಲಿ ಮೋಜು-ಮಸ್ತಿ, ಗುಟುಕಾ, ಮಟಕಾ ಮತ್ತು ಕುಡಿತದಂತಹ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುತ್ತಾನೆ. ಚುನಾವಣೆ ಬಂದಾಗ ಹೆಂಡ-ಹಣದ ಆಮಿಷಕ್ಕೆ ಬಲಿಯಾಗದಂತೆ ಜನರನ್ನು ತಡೆಯುತ್ತಾನೆ. ಮೈಕು, ಕಡಾಯಿ ಅಡುಗೆಯಂತಹ ಕ್ಷಣಿಕ ಸೌಕರ್ಯಗಳ ಬದಲು ರಸ್ತೆ, ಚರಂಡಿ, ಶಾಲೆ ಮತ್ತು ಶುದ್ಧ ಕುಡಿಯುವ ನೀರಿನ ಬೇಡಿಕೆಯನ್ನು ರಾಜಕಾರಣಿಗಳ ಮುಂದೆ ಇಡುವಂತೆ ಮಾಡುತ್ತಾನೆ.
ಸಂಘಟಿತ ಶಕ್ತಿಯ ವಿಜಯ
ಚುನಾವಣೆಯಲ್ಲಿ ಗೆದ್ದ ನಾಯಕರು ಊರಿನ ಕಡೆ ಮುಖ ಮಾಡದಿದ್ದಾಗ, ರವಿ ಹತಾಶರಾಗದೆ ಜನರನ್ನು ಸಂಘಟಿಸುತ್ತಾನೆ. ಗ್ರಾಮಸ್ಥರೇ ಸೇರಿ ಎತ್ತು-ಗಾಡಿಗಳ ಮೂಲಕ ಮಣ್ಣು ಹೊತ್ತು, ಶ್ರಮದಾನದ ಮೂಲಕ ರಸ್ತೆಯನ್ನು ನಿರ್ಮಿಸುತ್ತಾರೆ. ಆರಂಭದಲ್ಲಿ ರವಿಯನ್ನು ನಿಂದಿಸಿದವರೇ ಕೊನೆಗೆ ಅವನ ಶ್ರಮ ಮತ್ತು ಆದರ್ಶವನ್ನು ಕಂಡು ಬೆರಗಾಗುತ್ತಾರೆ. ನಾಟಕವು ರವಿಗೆ ಗ್ರಾಮಸ್ಥರು ಮಾಡುವ ಸನ್ಮಾನ ಮತ್ತು ಅವನ ಗುಣಗಾನದೊಂದಿಗೆ ಅರ್ಥಪೂರ್ಣವಾಗಿ ಮುಕ್ತಾಯವಾಗುತ್ತದೆ. ಒಟ್ಟಾರೆಯಾಗಿ ಈ ನಾಟಕ ವನು ಶಿಕ್ಷಣವೆ ಶಕ್ತಿ, ಶಿಕ್ಷಣದಿಂದಲೆ ಗ್ರಾಮಗಳ ಸರ್ವಸಮಸ್ಸೆಗಳಿಗೆ ಸಂಜೀವಿನಿ, ಎಂಬ ಸತ್ಯವನು ನಿಂಗನಗೌಡ ದೇಸಾಯಿವರ ಕೃತಿಯು ಹಳ್ಳಿಗಳ ಉದ್ಧಾರಕ್ಕಾಗಿ ಹಿಡಿದ ಕನ್ನಡಿ ಎನ್ನಬಹುದು.- ಪಾರ್ವತಿ ಎಸ್ ಬೂದೂರು




