ಕಾವ್ಯ ಸಂಗಾತಿ
ಸುಜಾತಾ ರವೀಶ್
“ಬೇಂದ್ರೆ_ ಕಾವ್ಯಾಸ್ವಾದ”


ಇಂದು ಡಾ. ದಾರಾ ಬೇಂದ್ರೆ ಅವರ ೧೩೦ ನೆಯ ಜಯಂತಿ ಪ್ರಯುಕ್ತ ಅವರದೊಂದು ಪ್ರಸಿದ್ಧ ಭಾವಗೀತೆಯ ಬಗ್ಗೆ ತಿಳಿಯುವ ಪ್ರಯತ್ನ.
ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರೀಕ್ಷಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ”
ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ
ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ. ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ.
(೧)
ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ
ಇನ್ನೂ ಯಾಕ……….
ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ. ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ.
(೨)
ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ. ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ
ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿಯರು ಅದಕ್ಕೂ ಮೇಲಿನದ್ದು ಜೋಗತಿಯರು. ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ .
(೩)
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ
ಇನ್ನೂ ಯಾಕ……….
ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ. ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ
(೪)
ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ……….
ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ. ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ. ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು?
(೫)
ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ
ಇನ್ನೂ
ಇವನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ, ಪತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ .
(೬)
ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ
ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ
ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?
ಇನ್ನೂ ಯಾಕ ಬರಲಿಲ್ಲಾ ?
ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ. ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು .
ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ. ಕಣ್ಣಿಗೆ
ಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ .
ಬೇಂದ್ರೆಯವರ ಸಖೀ ಗೀತದ ಇಪ್ಪತಾಲ್ಕನೆಯ ಕವನವಾಗಿರುವ ಇದನ್ನು ಅವರ ಸಮಗ್ರ ಕಾವ್ಯ ಔದುಂಬರ ಗಾಥೆಯ 4ನೇ ಸಂಪುಟ ವಿನ್ಯಾಸದಲ್ಲಿ ಸೇರಿಸಲಾಗಿದೆ
ಸುಜಾತಾ ರವೀಶ್




