ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

    ತನ್ನ ಆಜ್ಞಾಪಾಲಕನಾದ ಅಗ್ನಿಯನ್ನು ಮರುತ್ತನಲ್ಲಿಗೆ ಕಳುಹಿಸಿಕೊಟ್ಟ. “ಬೃಹಸ್ಪತಿಗಳಿಂದಲೇ ಯಾಗವನ್ನು ಮಾಡಿಸಬೇಕು. ಸಂವರ್ತನಿಂದ ಯಜ್ಞವನ್ನು ಮಾಡಿಸುವುದು ಸರಿಯಲ್ಲ. ಈ ಮಾತನ್ನು ಮೀರಿದರೆ ಯಾಗಕ್ಕೆ ತೊಂದರೆ ಎದುರಾಗುವುದು ಖಚಿತ” ಎಂಬ ಇಂದ್ರ ಸಂದೇಶವನ್ನು ಮರುತ್ತನಿಗೆ ಅರುಹಿದ ಅಗ್ನಿ. 

  ಮರುತ್ತ ಮೆದುವಾದ. ಮೊದಲು ತಾನು ಭಿನ್ನವಿಸಿದ್ದು ಬೃಹಸ್ಪತಿಗಳನ್ನೇ. ಅವರು ಒಪ್ಪದ ಮೇಲೆಯೇ ನಾನು ಸಂವರ್ತರನ್ನು ಯಾಗ ಪುರೋಹಿತರಾಗಿಸಿದ್ದು. ತನ್ನದೇನೂ ತಪ್ಪಿಲ್ಲ ಎಂದು ಹೇಳುತ್ತಾ ಅಗ್ನಿಯನ್ನು ತಣಿಸುವ ಪ್ರಯತ್ನ ಮಾಡಿದ. 

    ಮರುತ್ತನ ಮೃದುಮಾತು ಮರುಕಗೊಳಿಸಿತು ಸಂವರ್ತನನ್ನು. ತಪೋಬಲವನ್ನು ಆಧಾರವಾಗಿಟ್ಟು ಅಗ್ನಿಯನ್ನು ಅಂಜಿಸುವ ಮಾತುಗಳನ್ನಾಡಿದ. ಯಜ್ಞವನ್ನೇನಾದರೂ ಇಂದ್ರ ಕೆಡಿಸಿದರೆ ಇಡಿಯ ಸ್ವರ್ಗವನ್ನೇ ನಾಶಪಡಿಸುತ್ತೇನೆ ಎಂದ. ಎಲ್ಲವನ್ನೂ ಸುಡುವ ಅಗ್ನಿಯನ್ನು ಈ ಕ್ಷಣವೇ ಸುಟ್ಟು ಬೂದಿ ಮಾಡುತ್ತೇನೆಂದು ಅಬ್ಬರಿಸಿದ. ಇಂದ್ರನನ್ನೇ ಕರೆದುಕೊಂಡು ಬಾ ಎಂದು ಅಗ್ನಿಗೆ ಆಜ್ಞಾಪಿಸಿದ. 

    ಸಂವರ್ತನ ಉರಿಉರಿಯ ಮಾತು ಅಗ್ನಿಯ ಗಟ್ಟಿಯೆದೆಯನ್ನು ತಂಪಾಗಿಸಿತು. ತಕ್ಷಣವೇ ಸುರಲೋಕಕ್ಕೆ ಹೋದ ಅಗ್ನಿ ವಿಚಾರವನ್ನೆಲ್ಲಾ ದೇವೇಂದ್ರನಿಗೆ ತಿಳಿಸಿದ. ಸಂವರ್ತರನ್ನು ಎದುರು ಹಾಕಿಕೊಳ್ಳುವ ಧೈರ್ಯ ತನಗಿಲ್ಲೆಂದು ನಿಜದ ನುಡಿಯನ್ನು ಆಡಿದ. ಅನಲ ನುಡಿಯನ್ನು ಮನ್ನಿಸಿದ ಇಂದ್ರ ಮರುತ್ತನನ್ನು ಒಪ್ಪಿಸುವ ಹೊಣೆಯನ್ನು ಗಂಧರ್ವರಾಜ ಎನಿಸಿಕೊಂಡ ಧೃತರಾಷ್ಟçನಿಗೆ ವಹಿಸಿದ. 

    ಧೃತರಾಷ್ಟçನ ಮಾತು ಕೇಳಿದ ಸಂವರ್ತ ಕಿಡಿಕಿಡಿಯಾದ. ಮಾತಿಗೆ ಮಣಿವವರು ಇವರಲ್ಲ ಎನ್ನುವ ಅರಿವು ಮೂಡುವುದಕ್ಕೆ ಅಧಿಕ ಕಾಲವೇನೂ ಬೇಕಾಗಲಿಲ್ಲ ಧೃತರಾಷ್ಟçನಿಗೆ. 

     ವಿಚಾರ ತಿಳಿದ ಇಂದ್ರ ದೇವಗಣಸಹಿತನಾಗಿ ಮರುತ್ತನಲ್ಲಿಗೆ ಬಂದ. ಕ್ರೋಧದಿಂದ ಇಂದ್ರನೆತ್ತಿಹಿಡಿದ ವಜ್ರಾಯುಧ ಮರುತ್ತ ರಾಯನ ಗುಂಡಿಗೆಯನ್ನು ಕೋಮಲವಾಗಿಸಿತು. ಆದರೆ ಸಂವರ್ತ ಬೆದರಲಿಲ್ಲ. ತಪಸ್ಸಿನ ಶಕ್ತಿಯನ್ನು ಬಳಸಿ ಪೂರ್ಣ ದೇವಗಣವನ್ನು ಅಚಲವಾಗಿ ನಿಲ್ಲಿಸಿಬಿಟ್ಟ. 

   ದೇವತೆಗಳು ಮತ್ತೆ ಚಲನೆ ಪಡೆಯಬೇಕಾದರೆ ಮರುತ್ತನೇ ಸಂವರ್ತನನ್ನು ಬೇಡಿಕೊಳ್ಳಬೇಕಾಯಿತು. ಹವಿಸ್ಸಿನ ಭಾಗವನ್ನು ಪಡೆಯಲಿರುವ ದೇವತೆಗಳನ್ನು ಹೀಗೆ ತಟಸ್ಥಗೊಳಿಸಿದರೆ ಹೇಗೆ! ಈ ಕಲಹವನ್ನು ಕೊನೆಗೊಳಿಸು ಎಂದು ಸಂವರ್ತನಲ್ಲಿ ಭಿನ್ನವಿಸಿದ. ಮರುತ್ತನ ವಿನಯದ ನುಡಿ ಸಂವರ್ತನ ಮುನಿಸನ್ನು ಶಮನಗೊಳಿಸಿತು. ಲೋಕ ಇರುವುದೇ ಹಾಗೆ. ವಿನಯಶೀಲ ನುಡಿಗೆ ಜಗತ್ತು ಮಣಿಯುತ್ತದೆ. ಅಹಂಕಾರದ ಮಾತಿಗೆ ಪೂರ್ಣ ಪೊಡವಿ ಕತ್ತೆತ್ತಿ ನಿಲ್ಲುತ್ತದೆ. ದೇವತೆಗಳೆಲ್ಲಾ ಮತ್ತೆ ಚಲನಶೀಲರಾದರು. 

  ಸಂವರ್ತನ ಸಾಮರ್ಥ್ಯವನ್ನರಿತ ದೇವತೆಗಳಲ್ಲಿ ಈಗ ಅಸಮಾಧಾನ ಇರಲಿಲ್ಲ. ಎಲ್ಲಾ ದೇವತೆಗಳು ಸಂತಸದಿಂದ ಹವಿಸ್ಸನ್ನು ಸ್ವೀಕರಿಸಿದರು. ಮರುತ್ತನನ್ನು ಮನದುಂಬಿ ಹರಸಿದರು. ಯಾಗದ ವೈಭವವದು ಅಮೋಘವಾಯಿತು. ಬುವಿಯ ಈ ಮಣ್ಣು ಹೊನ್ನಿನಿಂದ ತುಂಬಿಹೋಯಿತು. ಮರುತ್ತನ ಬಿಡುಗೈ ಬಂದವರಿಗೆಲ್ಲಾ ದಾನವನ್ನು ಇತ್ತಿತು. ಧನಕನಕಗಳನ್ನು ಅವನಿಂದ ಪಡೆದ ಬ್ರಾಹ್ಮಣರು ಅದನ್ನು ಸಂಪೂರ್ಣವಾಗಿ ಹೊತ್ತುಕೊಂಡು ಹೋಗದವರಾದರು. ಹೊನ್ನಿನ ಭಾರ ಅವರ ಗಮನಗತಿಯನ್ನು ಕುಂಠಿಸಿತು. ಚಿನ್ನದ ಈ ಭಾರವನ್ನು ಹೊತ್ತು ತಾವು ಮುಂದೆ ಸಾಗಲಾರೆವು ಎಂಬ ಅರಿವು ಅವರದ್ದಾಯಿತು. ಹೊರಲಾರದ್ದನ್ನು ಹಿಮಾಲಯದಲ್ಲಿಯೇ ಸುರಿದ ಅವರು ಕಳೆದುಕೊಂಡದ್ದನ್ನು ಗಣಿಸದೆಯೇ ಮುಂದೆ ಮುಂದೆ ಹೆಜ್ಜೆ ಹಾಕಿದರು. ಹೀಗೆ ಸಾರ್ಥಕವಾಗಿ ಯಾಗವನ್ನು ಕೈಗೊಂಡ ಮರುತ್ತ ರಾಯ ಸೊಗದಿಂದ ಭೂಮಿಯನ್ನು ಪಾಲಿಸಿದನು. 

    ಈ ಬಗೆಯಾಗಿ ಮರುತ್ತ ವೃತ್ತಾಂತವನ್ನು ತಿಳಿಸಿದರು ವ್ಯಾಸರು ಧರ್ಮಜನಿಗೆ. “ನೀನು ಮಾಡಬೇಕಿರುವ ಯಾಗದ ಸಮಯ ಹತ್ತಿರವಾಗುತ್ತಿದೆ. ಅದಕ್ಕಾಗಿ ಹಿಮಗಿರಿಯಲ್ಲಿರುವ ಬ್ರಾಹ್ಮಣರು ತ್ಯಜಿಸಿಹೋದ ಧನಕನಕಗಳನ್ನು ತಕ್ಷಣವೇ ತರಬೇಕು” ಎಂಬ ಸಲಹೆಯನ್ನಿತ್ತರು. 

   ವ್ಯಾಸನುಡಿಯನ್ನು ಅಂಗೀಕರಿಸಿದ ಧರ್ಮಜ ಸೇನಾಧಿಪತಿಗಳನ್ನು ಕರೆಸಿದ. ಹಿಮಾಲಯದೆಡೆಗೆ ಹೊರಟ. ನಾನೂ ಅಂದು ಅವನ ಜೊತೆಗಿದ್ದೆ. ಹಿಮಾಲಯದ ಆ ಚೆಲುವು ನನ್ನಣ್ಣನನ್ನು ಅಪರಿಮಿತವಾಗಿ ಆಕರ್ಷಿಸಿತು. ಸೌಂದರ್ಯ ಸವಿಯುತ್ತಾ ದಾರಿ ಸವೆಸಿದ. ಹೇರಳ ಧನಕನಕಗಳ ರಾಶಿ ಗೋಚರವಾಯಿತು. ಧರ್ಮರಾಯನ ಮೊಗದಲ್ಲಿ ಸಂತಸ. ನಮ್ಮೆಲ್ಲರ ಮುಖದಲ್ಲಿಯೂ ಅವನ ನಗುವಿನ ಪ್ರತಿಬಿಂಬ. ಇದ್ದ ಧನವನ್ನು ಗೌರವಾದರಸಹಿತನಾಗಿ ಪೂಜಿಸಿದ ಧರ್ಮಜ. ಅಷ್ಟದಿಕ್ಪಾಲಕರ ಪೂಜೆಯನ್ನು ಒಲವಿಂದ ಮಾಡಿದ. ಯಾಗವನ್ನು ಅರ್ಥಪೂರ್ಣವಾಗಿ ಗೈವುದಕೆ ಇನ್ನೇನೂ ತೊಡಕಿಲ್ಲ ಎಂಬ ತುಂಬು ಭರವಸೆ ಮೂಡಿತು ಅವನಲ್ಲಿ. ದೊರಕಿದ ಧನಕನಕಗಳನ್ನೆಲ್ಲಾ ಹಸ್ತಿನಾವತಿಗೆ ಸಾಗಿಸಲಾಯಿತು. 

  ಯಾಗಕ್ಕೆ ಸಲ್ಲುವ ಸಂಪತ್ತಿನ ಸಂಗ್ರಹವಾದ ಸಮಯದಲ್ಲಿ ಶ್ರೀಕೃಷ್ಣನ ಸ್ಮರಣೆ ಮೂಡಿತು ಯಮನಂದನನಿಗೆ. ದ್ವಾರಕೆಯಿಂದ ಶ್ರೀಕೃಷ್ಣನನ್ನು ಕರೆತರುವ ಹೊಣೆಗಾರಿಕೆಯನ್ನು ಭೀಮನಿಗೆ ವಹಿಸಿದ. ಅಣ್ಣನ ಆಜ್ಞೆಯನ್ನು ಶಿರದ ಮೇಲಿಟ್ಟುಕೊಂಡ ಅನಿಲಜಾತ ದ್ವಾರಕೆಯೆಡೆಗೆ ಹೊರಟ


About The Author

Leave a Reply

You cannot copy content of this page

Scroll to Top