ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ
“ಸಾವಿಲ್ಲದ ಶರಣರು” ಮಾಲಿಕೆ,
ಕಲ್ಯಾಣದ ಮೇರು ಲಿಂಗಸಾಧಕ
ಭಾಲ್ಕಿ ಡಾ ಶ್ರೀ ಚೆನ್ನಬಸವ ಸ್ವಾಮೀಜಿ-


ಹೈದ್ರಾಬಾದ ಕರ್ನಾಟಕದ ಶ್ರೇಷ್ಠ ಶಿವಯೋಗ ಸಾಧಕ ಭಾಲ್ಕಿ ಡಾ ಡಾ ಶ್ರೀ ಚೆನ್ನಬಸವ ಸ್ವಾಮೀಜಿ .ರಜಾಕಾರ ಮತ್ತು ಮುಸ್ಲಿಮರ ಹಾವಳಿಗೆ ಕನ್ನಡ ಶಿಕ್ಷಣ ತತ್ತರಿಸಿ ಹೋಗಿತ್ತು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡವನ್ನು ಕಲಿಸುವ ದಿಟ್ಟತನವನ್ನು ಪರಮ ಪೂಜ್ಯ ಡಾ ಭಾಲ್ಕಿ ಡಾ ಚೆನ್ನ ಬಸವ ಸ್ವಾಮೀಜಿಯವರು ಕೈಗೊಂಡರು
ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು ಕೇಳದೆ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.
ಲಿಂಗೈಕ್ಯ ಡಾ|| ಚೆನ್ನಬಸವ ಪಟ್ಟದೇವರು
ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು.
ಬಾಲ್ಯ ಮತ್ತು ಶಿಕ್ಷಣ
ಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಎಂಬ ವ್ಯಾಪಾರಸ್ಥ ಮನೆತನದಲ್ಲಿ ತಂದೆ ರಾಜಪ್ಪ- ತಾಯಿ ಸಂಗಮ್ಮಎಂಬ ದಂಪತಿಗಳಿಗೆ 22 ಡಿಸೆಂಬರ್ 1890 ರಂದು ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ 8 ರಿಂದ 10 ವರ್ಷಗಳವರೆಗೆ ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕಂತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಯಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರಾದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಶಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಶೀಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು.
ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು.
ಗುರು ಲಿಂಗ ಜಂಗಮ ತತ್ವಗಳನ್ನು ನಾಡಿನ ತುಂಬೆಲ್ಲಾ ಪ್ರಸಾರ ಮಾಡಿ 22 ಏಪ್ರಿಲ್ 1999 ರಂದು ತಮ್ಮ ನೂರಾ ಒಂಬತ್ತನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು
__________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ





ಕಲ್ಯಾಣದ ಮೇರು ಲಿಂಗ ಸಾಧಕ – ಅತ್ಯಂತ ಅರ್ಥಪೂರ್ಣವಾದ ಲೇಖನ ಸರ್… ಸಾವಿಲ್ಲದ ಶರಣರು ಮಾಲಿಕೆಯ ಮೂಲಕ ಇದೊಂದು ಅದ್ಭುತವಾದ ತಿಳುವಳಿಕೆಯ ಮತ್ತು ಪರಿಚಯಾತ್ಮಕ ವ್ಯಕ್ತಿಚಿತ್ರಣ….ನಮಗೆಲ್ಲರಿಗೂ ಒಂದೊಳ್ಳೆಯ ಕಲಿಯುವಿಕೆಯ ಆಗರ
ಸುಧಾ ಶಿವಾನಂದ
ಹೈದರಾಬಾದ್ ಕರ್ನಾಟಕದ ಶ್ರೇಷ್ಠ ಶಿವಯೋಗಿ ಸಾಧಕರು ಡಾಕ್ಟರ್ ಚನ್ನಬಸವ ಸ್ವಾಮೀಜಿಯವರ ಬಾಲ್ಯ ಶಿಕ್ಷಣ ಹಾಗೂ ಅವರು ಇವ ನಮ್ಮವ ,ಇವ ನಮ್ಮವ ಎನ್ನುತ ದೀನದಲಿತರಿಗೆ ಬಡವರಿಗೆ ಅಂಗವಿಕಲರಿಗೆ ವಿಧವೆಯರಿಗೆ ಅನಾಥರಿಗೆ ಕಲಾವಿದರಿಗೆ ಆಶ್ರಯ ನೀಡಿರುವಂತಹ ಮಠ ಎಂಬುದನ್ನು ಸ್ಮರಿಸುತ್ತಾ ನಾಡಿನ ಗುರು ಸ್ಥಳ ಮಠಗಳಿಗೆ ಬಾಲ್ಕೀಮಠ ಮಾದರಿ ಹಾಗೂ ನಾಡಿನ ವಿರಕ್ತಮಠಗಳಿಗೆ ಇಲ್ಕಲ್ ಮಠ ಮಾದರಿ ಎಂದು ಎಂಎಂ ಕಲಬುರ್ಗಿಯವರು ಬರೆದಿರುವುದನ್ನು ಸ್ಮರಿಸಿದ ಡಾಕ್ಟರ್ ಶಶಿಕಾಂತ್ ಪಟ್ಟಣ ಸರ್ ಅವರಿಗೆ ಹೃತ್ಪೂರ್ವಕ ವಂದನೆಗಳು.
ವಿಜಯಲಕ್ಷ್ಮಿ ಕೆ ಹಂಗರಗಿ.