ಕಾವ್ಯ ಸಂಗಾತಿ
ವೈ.ಯಂ.ಯಾಕೊಳ್ಳಿ
“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….”


ಇಲ್ಲಿ ಇದ್ದ ಮೇಲೆ ಏನೂ
ತೊರೆಯಲಾಗದು
ಬೆನ್ನತ್ತಿ ಬಂದಿರುವದನು
ನಮ್ಮದೆ ಎಂಬುದ
ಮರೆಯಬಾರದು
ಬಿಡಲೆನು ಮೂರು ದಿನದ
ಸಂತೆಯಲ್ಲ ಜೀವನದಾಟ
ಬಡಿದಾಡಿ ಮುಗಿಸಲು
ಅಪರಿಚಿತರೊಡನೆ ಜಗಳವಲ್ಲ
ಸಂಸಾರ ಕೂಟ
ಒಡನೆ ಇದ್ದವರು ಬಿಡದೆ
ಕಾಡುವರು ನಿಜದ ಮಾತು
ಅನಿವಾರ್ಯ ಹೊಂದಿಕೆಯೆ
ಇಲ್ಲಿ ಮುಖ್ಯ ಧಾತು
ಯಾರನೆ ದೂಷಿಸುತ ಏನನೋ
ನಿಂದಿಸುತ ಅತ್ತರೇನು ಬಂತು
ಹೊತ್ತು ತಂದ ತಟ್ಟೆಯ
ಅನ್ನವ ನಾವೇ ಉಣ್ಣಬೇಕು
ಎನಿತು ಬಡಿದಾಡಿದರೂ.
ಎಷ್ಟು ಕಾದಾಡಿದರೂ
ಅಂತಿಮ ನಿರ್ಣಯವಾಗದ ಯುದ್ದ
ಯಾವ ನ್ಯಾಯಾಲಯದಲೂ
ದಾವೆ ಹೂಡಿದರೂ ಉತ್ತರ
ಸಿಗದ ವ್ಯಾಜ್ಯ
ಹೃದಯದ ಪ್ರಶ್ನೆಗಳಿಗುತ್ತರವ
ಹೃದಯವೆ ಕೊಡಬೇಕು
ದೊರಕದು ಬೇರೆಡೆಗೆ
ಎನಿತು ಹುಡುಕಿದರೂ
ತಾಜಮಹಲಿ ಮುಂದೆ ನಗುತ
ರಾಜರಾಣಿಯಂತೆ ನಿಂತು
ತಗೆಸಿಕೊಂಡ ಪೋಟೊ
ಬಂದು ಕಾಡುತ್ತವೆ ಆಗಾಗ
ಎಲ್ಲರಿಗೂ ಕನಸಿನಲ್ಲಿ
ಅದನೆ ನಿಜವೆಂದು ನಂಬಿ
ಹೊರಡಲಾಗದು
ಮರುದಿನದ ನನಸಿನಲ್ಲಿ
ಹಾಗೆಂದು
ಮಧ್ಯ ರಾತ್ರಿಯಲಿ
ಎದ್ದು ಹೋಗಲಸಾಧ್ಯ
ಅದು ಕವಿತೆ
ಕಥೆಯಲಷ್ಟೇ ಬರೆದದ್ದು
ತೂತಿರುವ ದೋಸೆಯನೆ
ಕತ್ತರಿಸಿ ತಿನ್ನುತ್ತ
ಸುಖವ ಅನುಭವಿಸಬೇಕು
ಹರಿದ ಹಾಸಿಗೆಯನೆ
ಹೊಲಿದು ಹೊದ್ದುಕೊಂಡು
ಮತ್ತೆ ಕನಸುಗಳ ಕಾಣಬೇಕು
—–
ವೈ. ಎಂ.ಯಾಕೊಳ್ಳಿ





*ರವಿ ಕಾಣದ್ದನ್ನು ಕೂಡ ಕವಿ ಕಾಣುವನು* ಎಂಬ ವಾಣಿ ಯಂತೆ ತಮ್ಮ ವಿಚಾರ ಮತ್ತು ಬರವಣಿಗೆಗಳು ಓದುಗರ ಮನ ಮುಟ್ಟುತಿವೆ . ಹೀಗೆ ಮುಂದುವರೆಯಲಿ ನಿಮ್ಮ ಸಾಹಿತ್ಯದ ಪ್ರಯಾಣ ಸುಖಕರ.
ಸಂಗೀತಾ ಪ್ರಕಾಶ ಗುಂಡಾಳಿ