ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ”


ವಿಶಾಲವಾದ ಬಟಾಬಯಲು ನಡುವಲ್ಲೊಂದು ಮನೆ
ಆ ಮನೆಯ ಮೂಲೆಯಲ್ಲೊಂದು ಕೋಣೆ
ತಿರುಗುತ್ತಿದೆ ಕೋಣೆಯಲ್ಲಿ ತಣ್ಣನೆಯ ಫ್ಯಾನು
ಅವನ ಉದ್ವೇಗಕ್ಕಾಗಿಯೋ ಅವಳ ಆವೇಗಾಕ್ಕಾಗಿಯೋ
ಪ್ರೇಮ ಕಾಮಗಳ ಪರಾಕಾಷ್ಠೆಗೆ
ನೆರೆಹೊರೆಗೆ ಸದ್ದು ಕೇಳಿಸದಿರಲೆಂದು
ಮೈ ಜುಮ್ಮೆನ್ನುವ ಗಡುವಿಗೆ
ಕಿವಿಗಡಚುವಂತೆ ಏರಿಸಿದ
ಗಮನಿಸದ ಹಾಡು
ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ
ಕಳಚಿಟ್ಟ ಬಟ್ಟೆಯೂ ನೆನಪಿಸುತ್ತಿಲ್ಲ
ಬಂಧಿಸಿದ ಭಾವನೆಗಳ ತಳಮಳದಲ್ಲಿ
ಅವರಿಬ್ಬರೂ ತನ್ಮಯರು
ಲೋಕದ ರೂಢಿಯಲ್ಲಿ ಅವ್ಯಕ್ತ
ಮೂಕ ವಿಸ್ಮಿತರು
ಬೆವರ ಹನಿ ಘಮಗುಡಲೆಂದು
ಮೈ ತುಂಬಾ ತಣ್ಣಗೆ ಚುಮುಕಿಸಿದ
ಸುಗಂಧ ದ್ರವ್ಯ
ಬೆಚ್ಚನೆಯ ಬೆವರ ಹನಿಗೆ ಬಣ್ಣ ಕಳೆದುಕೊಂಡಿತೆನ್ನುವ ಭಯ
ಕಳೆದುಕೊಂಡದ್ದೋ, ದಕ್ಕಿಸಿಕೊಂಡದ್ದೋ
ಎಲ್ಲವನ್ನೂ ಒಮ್ಮೆಲೆ ಸುಖಿಸಿಕೊಂಡ
ಸ್ಖಲನದ ರಾತ್ರಿಯೋ
ಅರಿವಿಲ್ಲದ ಖಾತ್ರಿಯೋ ತಿಳಿಯದು
ರವಿಗೆ ಇಬ್ಬನಿ ಕರಗುವಂತೆ
ಮಳೆಗೆ ಮಣ್ಣ ತಣುವಾದಂತೆ
ಸ್ಪರ್ಶದೊಳಗಿನ ಹಣ್ಣು
ರುಚಿ ನೀಡಿದ ಹೊತ್ತಿಗೆ
ಈಗೆಲ್ಲವೂ ಆ ಕೋಣೆಯ
ಮೂಲೆಯಲ್ಲಿ
ಅದೇ ಕಡುಗಪ್ಪಿನ ಮೂಲೆಯಲ್ಲಿ
ಬೆಳದಿಂಗಳ ಬಯಕೆಗೆ ಲೀನವಾಗಿದೆ
ಬಟಾಬಯಲಿನ ನಡುಮನೆಯಲ್ಲೊಂದು
ಫ್ಯಾನೂ ಇನ್ನೂ ತಣ್ಣಗೆ ತಿರುಗುತ್ತಿದೆ
ಇನ್ನೂ ತಣ್ಣಗೆ ತಿರುಗುತ್ತಿದೆ
ನಾಗೊಂಡಹಳ್ಳಿ ಸುನಿಲ್



