ಕಾವ್ಯ ಸಂಗಾತಿ
“ಲಂಚದ ತುತ್ತು”
ಶರಣಪ್ಪ ತಳ್ಳಿ ಕುಪ್ಪಿಗುಡ್ಡ


ಒಬ್ಬ ಬಡವನ ಮನೆ ಮುಂದೆ
ನಾನು-
ಕಿರಿ ಕಿರಿ ಮಾಡಿದೆ
ಅವನ ಹಸಿವಿನ ಶಾಪವು
ಲಂಚದ ರೂಪವು
ನನ್ನ ಕೈಸೇರಿತು
ಯಾರದೋ
ಬೆವರಿನ ಹಣ
ಬೇಕರಿಯ ಮುಂದೆ ಕುಳಿತು
ಬನ್ನು ತಿನ್ನುತ್ತಿದ್ದೆ
ಹಸಿದ ನಾಯಿಯೊಂದು
ಜೊಲ್ಲು ಸುರಿಸಿ
ನೋಡುತ್ತಿತ್ತು
ಒಂದು ತುಂಡು ಬನ್ನು ಎಸೆದೆ
ಗಬಕ್ಕನೆ ನುಂಗಿ
ಬಾಲ ಅಲ್ಲಾಡಿಸಿತು
ಮತ್ತೊಂದು ತುಣುಕು ಹಾಕಿದೆ
ಅದು-
ಚಿರಪರಿಚಿತನಂತೆ ಹತ್ತಿರ
ಬಂದು
ನನ್ನ ಕಾಲು ಮೂಸಿತು
ನನಗನಿಸಿತು….
ನಾಯಿ ಪ್ರಾಣಿ ಹಸಿದು
ಮೂಕ ಭಾಷೆಯಲಿ
ಬೇಡುತಿದೆ
ಅದರ ತಪ್ಪಲ್ಲ
ನಾನು ಮಾತ್ರ ಎಲ್ಲವೂ
ಇದ್ದೂ
ಕಸಿದುಕೊಳ್ಳುವ
ಒಬ್ಬ ಭಿಕ್ಷುಕನೆ!
ಯಾರಿಂದಲೋ ಪಡೆದೆ
ಅವರ ದುಡಿಮೆಯ ಹಂಗು
ಯಾರಿಗೂ ನೀಡದೆ
ಮನೆಗೆ ನಡೆದೆ
ಹಿಂದೆ ತಿರುಗಿದೆ
ಅದೇ ನಾಯಿ ಬೆನ್ನ ಹಿಂದೆ
ಎಂತಹ ಕಕ್ಕುಲಾತಿ ಅದಕೆ?
ಮತ್ತೆ ಬಾಲ ಅಲ್ಲಾಡಿಸಿತು
ಮೈಯ ಸವರಿದೆ
ಅಂದಿನಿಂದ ಇಂದಿಗೂ
ಎನ್ನ ಮನೆಯ ಕಾಯುತಿದೆ
ತಿಂದ ಒಂದೇ ಅಗುಳಿಗೆ
ತುತ್ತಿನ ಋಣ ತೀರಿಸಲು
ಆದರೆ…….?
ಈ ನರ ಪ್ರಾಣಿಯಾದ ನಾನು
ಯಾವ ಋಣವೂ
ತೀರಿಸದೆ
ಮಹಾ ಭಿಕ್ಷುಕ!
ಆ ನಾಯಿಗಿರುವ ನಿಯತ್ತು ನನಗಿಲ್ಲ
ಬಿಸಾಡಿದ ಬನ್ನು
ನನ್ನಲ್ಲದಿದ್ದರೂ
ಅದು ಸಲ್ಲಿಸಿದ
ಕೃತಜ್ಞತೆ ಮಾತ್ರ
ಪರಮ ಸತ್ಯ
ಕೊಟ್ಟವನು ಬಡವನಾದರೂ
ಅವನೇ ಸಹೃದಯಿ
ಶ್ರೀಮಂತ
ತಿಂದವನು ನಾನಾದರೂ
ನಾನಿಲ್ಲಿ ಬೇಡಿದವ
ಅಯ್ಯೋ
ವಿಪರ್ಯಾಸವೆ……
ನಾಯಿಯೇ ಮೇಲು
ನರನಾಗಿ
ನಾನೇ ಮಹಾ ಬಿಕ್ಷುಕ
————-
ಶರಣಪ್ಪ ತಳ್ಳಿ ಕುಪ್ಪಿಗುಡ್ಡ



