ರಾಜ್ಯೋತ್ಸವ ವಿಶೇಷ
ಸಂಪಾದಕೀಯ ಬರಹ
ಕನ್ನಡ ರಾಜ್ಯೋತ್ಸವವನ್ನು
ಯಾವಾಗ, ಯಾರು, ಹೇಗೆ,
ಯಾಕೆ ಆಚರಿಸಬೇಕು?


ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಇದ್ದೇ ಇರುತ್ತದೆ. ಕರ್ನಾಟಕಕ್ಕೂ ಅಂತಹ ಸುವರ್ಣ ಐತಿಹ್ಯ, ಸಂಸ್ಕೃತಿಯ ಸೊಗಡಿದೆ. ಕನ್ನಡ ರಾಜ್ಯೋತ್ಸವವನ್ನು ನಮ್ಮ ರಾಜ್ಯದ ಐಕ್ಯತೆಯ, ಭಾಷಾ ಹೆಮ್ಮೆ ಮತ್ತು ಸಂಸ್ಕೃತಿಯ ಸ್ಮರಣೆಗಾಗಿ ಪ್ರತಿವರ್ಷ ನವೆಂಬರ್ ೧ರಂದು ಆಚರಿಸಲಾಗುತ್ತದೆ. ಈ ದಿನವು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೆಮ್ಮೆಯ ದಿನವಾಗಿದೆ.
ಯಾವಾಗ ಕನ್ನಡ ರಾಜ್ಯೋತ್ಸವದ ಆರಂಭ?
ಕನ್ನಡ ರಾಜ್ಯೋತ್ಸವವನ್ನು ನಮಗೆಲ್ಲಾ ತಿಳಿದಿರುವ ಹಾಗೆ ಪ್ರತಿವರ್ಷ ನವೆಂಬರ್ ತಿಂಗಳ ಮೊದಲ ದಿನಾಂಕದಂದು ಆಚರಿಸಲಾಗುತ್ತದೆ. ೧ ನವೆಂಬರ್ ೧೯೫೬ ರಂದು ಭಾರತ ಸರ್ಕಾರದ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ್ರಚನೆ ಮಾಡಿದಾಗ, ಮೈಸೂರು ಪ್ರಾಂತ್ಯಕ್ಕೆ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಸೇರಿಸಲಾಯಿತು. ಹಳೆಯ ಮೈಸೂರು ರಾಜ್ಯ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೈದ್ರಾಬಾದ್-ಕರ್ನಾಟಕ ಅಂದರೆ ಈಗಿನ ಕಲ್ಯಾಣ ಕರ್ನಾಟಕ, ಬಾಂಬೆ ಪ್ರಾಂತ್ಯದ ಭಾಗಗಳು ಮತ್ತು ಕೊಪ್ಪಳ, ಬಳ್ಳಾರಿ ಮುಂತಾದ ಜಿಲ್ಲೆಗಳು ಒಂದಾಗಿ ಕನ್ನಡನಾಡು ರೂಪಗೊಂಡಿತು. ನಂತರ,೧೯೭೩ರಲ್ಲಿ ಈ ರಾಜ್ಯಕ್ಕೆ “ಕರ್ನಾಟಕ” ಎಂಬ ಹೆಸರನ್ನು ನೀಡಲಾಯಿತು.
ಕನ್ನಡಿಗರಾದ ನಾವು ಇದನ್ನು ಯಾವ ರೀತಿ, ಏಕಾಗಿ ಆಚರಿಸಬೇಕು?
ಕನ್ನಡ ರಾಜ್ಯೋತ್ಸವವನ್ನು ಕೇವಲ ಹಬ್ಬವನ್ನಾಗಿ ಅಲ್ಲ, ನಮ್ಮ ಭಾಷೆ, ಸಂಸ್ಕೃತಿ ಮತ್ತು ಗುರುತಿನ ಸಂಕೇತವನ್ನಾಗಿ ಆಚರಿಸಬೇಕು. ಕನ್ನಡ ನಮ್ಮ ಅಸ್ಮಿತೆಯಲ್ಲವೇ? ನಾವು ಕನ್ನಡದ ಕುಡಿಗಳೆಂಬ ಗೌರವ ನಮಗೆ, ಏಕೆಂದರೆ ಪ್ರಪಂಚದ. ಯಾವ ಊರು ನೋಡಲು ಹೋದರೂ ಕೂಡಾ
“ಏನೇನು ಕಂಡ ಮೇಲೂ ನಮ್ಮೂರೇ ನಮಗೆ ಮೇಲು” ಅಲ್ಲವೇ?
ಈ ದಿನ ನಾವು ಕನ್ನಡದ ಪರಂಪರೆ, ಸಾಹಿತ್ಯ, ಕಲೆ, ಸಂಗೀತ ಮತ್ತು ವಿಜ್ಞಾನದಲ್ಲಿ ನಮ್ಮ ಹಿರಿಯರು ಮಾಡಿದ ಕೊಡುಗೆಯನ್ನು ನೆನೆದು ಗೌರವಿಸಬೇಕು. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾ ಪ್ರೇಮ, ರಾಜ್ಯಾಭಿಮಾನ ಮತ್ತು ಸಾಂಸ್ಕೃತಿಕ ಏಕತೆ ಬೆಳೆಸುವ ಉದ್ದೇಶವನ್ನು ಹೊಂದಿದೆ. ತಾಂತ್ರಿಕ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಈ ದಿನವು ಕನ್ನಡವನ್ನು ಉಳಿಸುವ ಮತ್ತು ಬೆಳಸುವ ನವಚೇತನವನ್ನು ನೀಡಲು ಹೆಸರಿಗಾದರೂ ಕರ್ನಾಟಕದ ಹುಟ್ಟುಹಬ್ಬವನ್ನು ಆಚರಿಸಬೇಡವೆ?
ನಾವು ಕನ್ನಡದ ಹಬ್ಬವನ್ನು ಹೇಗೆ ಆಚರಿಸಬೇಕು?
“ಕೇಳಿದ್ದು ಸುಳ್ಳಾಗಬಹುದು…
ನೋಡಿದ್ದು ಸುಳ್ಳಾಗಬಹುದು…”
ಆದರೆ ಆಲೋಚನೆ, ನುಡಿ ಮಾತ್ರ ಮಾತೃ ಭಾಷೆಯಲ್ಲೇ ಎಂಬ ಮಾತೆಂದಿಗೂ ಸುಳ್ಳಾಗಲು ಸಾಧ್ಯವೇ ಇಲ್ಲ. ರಾಜ್ಯೋತ್ಸವದ ಆಚರಣೆಯು ಕೇವಲ ಧ್ವಜಾರೋಹಣ, ಶೋಭಾಯಾತ್ರೆ ಅಥವಾ ನೃತ್ಯಗಳ ಮಟ್ಟಕ್ಕೆ ಸೀಮಿತವಾಗಬಾರದು. ಅದಕ್ಕಿಂತಲೂ ಹೆಚ್ಚು ಕನ್ನಡ ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ನಾವು ಕೈಜೋಡಿಸಬೇಕು ಅಲ್ಲವೇ?
ಶಾಲೆ, ಕಾಲೇಜುಗಳಲ್ಲಿ: ವಿದ್ಯಾರ್ಥಿಗಳು ಕನ್ನಡ ಮಾತನಾಡುವ ಜೊತೆಗೆ ಕನ್ನಡ ಕವನ, ನಾಟಕ, ಚರ್ಚೆ ಮತ್ತು ಕಾವ್ಯ ವಾಚನಗಳ ಮೂಲಕ ಭಾಷೆಯ ಮೇಲೆ ಪ್ರೀತಿ ತೋರಿಸಬೇಕು.
ಸರ್ಕಾರಿ ಕಚೇರಿಗಳಲ್ಲಿ: ಕನ್ನಡ ಭಾಷೆಯ ಬಳಕೆಯನ್ನು ಉತ್ತೇಜಿಸಲು, ಎಲ್ಲಾ ಪತ್ರವ್ಯವಹಾರ, ಫಲಕಗಳು ಮತ್ತು ಪ್ರಕಟಣೆಗಳು, ಭಾಷೆ ಕನ್ನಡದಲ್ಲಿರಬೇಕು.
ಸಾಮಾಜಿಕ ಮಾಧ್ಯಮದಲ್ಲಿ: ಕನ್ನಡದಲ್ಲಿ ಬರೆಯುವ, ಮಾತನಾಡುವ ಮತ್ತು ಕನ್ನಡ ಸಾಹಿತ್ಯವನ್ನು ಉಳಿದ ಭಾಷೆಗಳ ಜೊತೆ ಹಂಚಿಕೊಳ್ಳುವ ಮೂಲಕ ಯುವ ಸಮುದಾಯ ಕನ್ನಡ ಭಾಷೆಯ ಗೌರವವನ್ನು ಕಾಪಾಡಬಹುದು. ಕನ್ನಡದ ಸಾಹಿತ್ಯವನ್ನು ಇತರ ಭಾಷೆಗಳಿಗೂ, ಇತರ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೂ ಭಾಷಾಂತರ ಮಾಡುವ ಕಾರ್ಯ ಕೂಡಾ ಉತ್ತಮವಾದುದೇ. ರೀಲ್ ಗಳಲ್ಲಿ ಕನ್ನಡ ಹಾಡುಗಳನ್ನು ಉಪಯೋಗಿಸುವುದು ಕೂಡಾ ಪ್ರಯೋಜನಕಾರಿ ಅಲ್ಲವೇ?
ಸಾಂಸ್ಕೃತಿಕ ಕಾರ್ಯಕ್ರಮಗಳು: ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡದ ಜನಪದ, ಯಕ್ಷಗಾನ, ದಾಸರಪದ, ಕಾವ್ಯ ಹಾಗೂ ಇತರ ಕಲೆಗಳ ಪ್ರದರ್ಶನದ ಮೂಲಕ ಕನ್ನಡ ಸಂಸ್ಕೃತಿಯ ವೈವಿಧ್ಯತೆಯನ್ನು ವಿವಿಧ ಜನರಿಗೆ ತೋರಿಸಬಹುದು.
*ಕನ್ನಡಿಗರಾಗಿ ನಮ್ಮ ಜವಾಬ್ದಾರಿಗಳು;*
ಕನ್ನಡ ರಾಜ್ಯೋತ್ಸವದ ನಿಜವಾದ ಅರ್ಥವನ್ನು ಅರಿಯಲು, ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು.ಬಳಸಬೇಕು. ಬಳಸದೆ ಹೋದರೆ ವಸ್ತುಗಳು ತುಂಡಾಗಿ, ತುಕ್ಕು ಹಿಡಿದು ಮುರಿಯುವಂತೆ ಕನ್ನಡವೂ ಅಳಿಯುವ ಸಾಧ್ಯತೆ ಹೆಚ್ಚು.
ಭಾಷಾ ಗೌರವ: ನಾವು ಯಾವ ಕ್ಷೇತ್ರದಲ್ಲಿದ್ದರೂ ಕನ್ನಡವನ್ನು ಹೆಮ್ಮೆಯಿಂದ ಬಳಸಬೇಕು. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು, ಓದುವುದು ನಮ್ಮ ಕರ್ತವ್ಯ.
ಹೊಸ ಪೀಳಿಗೆಗೆ ಕನ್ನಡ ಪರಿಚಯ: ನಮ್ಮ ಮಕ್ಕಳಿಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಪ್ರೋತ್ಸಾಹಿಸಬೇಕು.ಮನೆಯಲ್ಲಿ ಮಾತೃಭಾಷೆ ಬಳಸಿ, ಮುಂದಿನ ಪೀಳಿಗೆಗೆ ಉಳಿಸಬೇಕು.
ಸ್ಥಳೀಯ ಉದ್ಯಮ ಮತ್ತು ಕಲೆಗಳಿಗೆ ಬೆಂಬಲ: ಕನ್ನಡ ಕಲಾವಿದರು, ಲೇಖಕರು, ಚಿತ್ರರಂಗ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬಳಸಿ ಅವುಗಳ ಉಳಿವಿಗೆ ಪ್ರೋತ್ಸಾಹ ನೀಡುವುದು ಕನ್ನಡಿಗರ ಕರ್ತವ್ಯ.
ಸಂವಿಧಾನಾತ್ಮಕ ಹಕ್ಕಿನ ರಕ್ಷಣೆಗೆ ನಿಲ್ಲುವುದು: ಕನ್ನಡ ಭಾಷೆಯ ಅಧಿಕೃತ ಸ್ಥಾನಮಾನವನ್ನು ಕಾಪಾಡಲು, ಸರ್ಕಾರದ ಎಲ್ಲಾ ಮಟ್ಟಗಳಲ್ಲಿ ಕನ್ನಡದ ಬಳಕೆಯನ್ನು ಖಚಿತಪಡಿಸಿ ಅದರೊಡನೆ ನಾವಿರುವುದು ಅನಿವಾರ್ಯ.
ಅಲ್ಲದೆ, ಕನ್ನಡ ರಾಜ್ಯೋತ್ಸವವು ನಮ್ಮ ರಾಜ್ಯದ ಅಸ್ತಿತ್ವದ ಸ್ಮಾರಕ. ಈ ದಿನ ನಾವು ನಮ್ಮ ಇತಿಹಾಸವನ್ನು ನೆನೆದು, ನಮ್ಮ ಭಾಷೆಯ ಗೌರವವನ್ನು ಮತ್ತೊಮ್ಮೆ ಎತ್ತಿ ಹಿಡಿಯಬೇಕು. ಕನ್ನಡವನ್ನು ಕೇವಲ ಭಾಷೆಯಾಗಿ ನೋಡದೆ, ಅದು ನಮ್ಮ ಆತ್ಮ, ಸಂಸ್ಕೃತಿ ಮತ್ತು ಅಸ್ತಿತ್ವ ಎಂದು ಮನಗಾಣಬೇಕು.
“ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ..”
ಕವಿಗಳು ಕರ್ನಾಟಕದ ಮಹತ್ವವನ್ನು ಅದೆಷ್ಟು ಚೆನ್ನಾಗಿ ಸಾರಿ, ಸಾರಿ ಹಾಡಿದ್ದಾರೆ ಅಲ್ಲವೇ? ನಾವು ಎಲ್ಲರೂ ಕನ್ನಡಿಗರಾಗಿರುವ ಹೆಮ್ಮೆ ಪಟ್ಟು, ಕನ್ನಡದ ಗೌರವವನ್ನು ಕಾಪಾಡುವ ನಿಜವಾದ ಕರ್ನಾಟಕದ ನಾಗರಿಕರಾಗೋಣ.ಕನ್ನಡ ಭಾಷೆ ಬೆಳೆಸಲು ಸಾಧ್ಯ ಆಗದೆ ಹೋದರೂ ಪರವಾಗಿಲ್ಲ, ಕನ್ನಡ ಮಾತನಾಡೋಣ, ಕನ್ನಡ ಉಳಿಸೋಣ, ಸಾಧ್ಯ ಆದರೆ ಕನ್ನಡ ಬದುಕಲ್ಲಿ ಒಬ್ಬರಿಗಾದರೂ ಕನ್ನಡ ಕಲಿಸೋಣ. ನೀವೇನಂತೀರಿ?
ಹನಿಬಿಂದು




ಖಂಡಿತವಾಗಿಯೂ ಇದು ಕನ್ನಡಿಗರಾದ ನಾವು ಪಾಲಿಸಬೇಕಾದ ಸಾವಿರದ ಸತ್ಯ