ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಧ್ವನಿಯನ್ನು ಕೇಳಿದ ಸುಮತಿ ಕಣ್ಣು ತೆರೆದಳು”ಮಕ್ಕಳೇ ನೀವೇಕೆ ಇಲ್ಲಿಗೆ ಬಂದಿರಿ?… ಎಂದು ಸುಮತಿ ಆಯಾಸದ ದನಿಯಲ್ಲಿ ಕೇಳಿದಳು. ಸುಮತಿಯ ಮುಖ ನೋಡಿದರೆ ಬಹಳ ಬಳಲಿದಂತೆ ಕಾಣುತ್ತಿತ್ತು. ದಿನವೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ ಸುಮತಿ ಮಧ್ಯಾಹ್ನ ಊಟವನ್ನು ಮಾಡಿರಲಿಲ್ಲ. ಭಟ್ಟರನ್ನು ಕೇಳಿ ಮಜ್ಜಿಗೆಯನ್ನು ಪಡೆದು ಕುಡಿದಿದ್ದಳು. ಮಧ್ಯಾಹ್ನ ಊಟ ಮಾಡದಿದ್ದ ಕಾರಣ ಬಹಳ ದಣಿದಿದ್ದಳು. 

“….ಅಮ್ಮ ನೀನು ಬರುವೆ ಎಂದು ಮನೆಯಲ್ಲಿ ಕಾಯುತ್ತಿದ್ದೆವು…. ಮಧ್ಯಾಹ್ನದ ನಂತರವೂ ನಿನ್ನನ್ನು ಕಾಣದೆ ಹೋದಾಗ ಹುಡುಕಿಕೊಂಡು ಇಲ್ಲಿಗೆ ಬಂದೆವು…. ಬಾಮ್ಮಾ ಮನೆಗೆ ಹೋಗೋಣ…. ಎಂದು ಇಬ್ಬರೂ ಕರೆದರು…. “ನೀವು ಮನೆಗೆ ಹೋಗಿ ಮಕ್ಕಳೇ… ಸಣ್ಣ ಸಾಹುಕಾರರು ಬೆಂಗಳೂರಿನಿಂದ ಇಂದು ಬರುವವರಿದ್ದಾರೆ…. ಅವರು ಬಂದ ನಂತರ ಸಹಾಯವನ್ನು ಪಡೆದು ಬರುತ್ತೇನೆ…. ಮ್ಯಾನೇಜರ್ ರವರನ್ನು ಕೇಳಿದಾಗ ತೋಟದ ಲೆಕ್ಕದಲ್ಲಿ ಹಣವನ್ನು ಕೊಡಲು ಸಾಧ್ಯವಿಲ್ಲ…. ಸಾಹುಕಾರರು ಇಂದು ಬರಬಹುದು…. ಅವರ ಬಳಿ ನನ್ನ ಕಷ್ಟಗಳನ್ನು ಹೇಳಿಕೊಂಡರೆ ಏನಾದರೂ ಸಹಾಯ ಸಿಗಬಹುದು…. ಎಂದು ಹೇಳಿದ್ದಾರೆ…. ಹಾಗಾಗಿ ಅವರು ಬರುವವರೆಗೂ ನಾನಿಲ್ಲಿ ಕಾಯುತ್ತೇನೆ”…. ಎಂದಳು ಸುಮತಿ. 

ಸುಮತಿಯ ಮಾತನ್ನು ಕೇಳಿದ ಮಕ್ಕಳು….”ಅಮ್ಮಾ ನಮಗೇನೂ ಬೇಡ… ನೀನು ಈಗ ನಮ್ಮ ಜೊತೆಗೆ ಬಾ… ನೀನು ಬಹಳ ದಣಿದಿದ್ದೀಯಾ…. ಮೊದಲು ಈ ಹಣ್ಣನ್ನು ತಿನ್ನು”…. ಎಂದು ತಾವು ತಂದಿದ್ದ ಎರಡು ಆಲೆಹಣ್ಣುಗಳನ್ನು ಸುಮತಿಗೆ ಕೊಟ್ಟರು. ಬಹಳ ಹಸಿವು ಎನಿಸಿದ್ದರಿಂದ ಮಕ್ಕಳು ನೀಡಿದ ಹಣ್ಣನ್ನು ಸ್ವೀಕರಿಸಿ, ಸರಗಿನಿಂದ ಒರೆಸಿ ಗಬ-ಗಬನೆ ತಿಂದಳು. 

ಈಗ ಹಸಿವು ಸ್ವಲ್ಪ ಶಮನವಾದಂತೆ ಅನಿಸಿತು. ಆಫೀಸಿನ ಬಾಗಿಲನ್ನು ಭದ್ರ ಪಡಿಸಲು ಬಂದ ಮ್ಯಾನೇಜರ್ ಸುಮತಿ ಮತ್ತು ಮಕ್ಕಳನ್ನು ನೋಡಿ… “ಏನು ಸುಮತಿ ನೀನಿನ್ನೂ ಮನೆಗೆ ಹೋಗಿಲ್ಲವೇ? ಸಾಹುಕಾರರು ಬರುವುದು ತಡವಾಗಬಹುದು…. ನೀನೀಗ ಮನೆಗೆ ಹೋಗು… ಸಾಹುಕಾರರಲ್ಲಿ ನಿನ್ನ ಬಗ್ಗೆ ಮಾತನಾಡುತ್ತೇನೆ”…. ಎಂದರು. ಮ್ಯಾನೇಜರ್ ಅವರ ಮಾತನ್ನು ಕೇಳಿ…” ಸರಿ ಸರ್ … ಹಾಗೆಯೇ ಆಗಲಿ…ಧನ್ಯವಾದಗಳು”…. ಎಂದು ಹೇಳಿ ಇಬ್ಬರೂ ಮಕ್ಕಳ ಕೈಹಿಡಿದು ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಮಾರನೇ ದಿನ ತೋಟದ ರೈಟರ್ ಕೆಲಸದ ಹುಡುಗನನ್ನು ಸುಮತಿಯ ಮನೆಗೆ ಕಳುಹಿಸಿ ಸಾಹುಕಾರರು ಬರಲು ಹೇಳಿದ್ದಾರಂತೆ ಸಂಜೆ ಅವರನ್ನು ಹೋಗಿಭೇಟಿ ಮಾಡಿ ಎಂಬ ಸಂದೇಶವನ್ನು ಕಳುಹಿಸಿದ್ದರು. ಅದನ್ನು ಕೇಳಿ ಸುಮತಿಗೆ ಬಹಳ ಸಂತೋಷವಾಯಿತು. ಮಾರನೇ ದಿನ ಸಣ್ಣ ಸಾಹುಕಾರರನ್ನು ಭೇಟಿ ಮಾಡಲು ಹೋದಳು. ಅವರನ್ನು ಭೇಟಿ ಮಾಡಲು ಇನ್ನೂ ಸ್ವಲ್ಪ ಹೊತ್ತು ಆಫೀಸ್ ಬಳಿ ಕಾಯಬೇಕಿತ್ತು. ಹಾಗಾಗಿ ತನಗೆ ಚಿರಪರಿಚಿತರಾದ ಮಲಯಾಳಿ ಡ್ರೈವರ್ ರವರ ಮನೆಗೆ ಹೋದಳು. ಅವರ ಮನೆಗೆ ಹೋದಾಗ ಮಲಯಾಳಿ ಡ್ರೈವರ್ ಆತನ ಪತ್ನಿ ಹಾಗೂ ಮಗ ಪ್ರೀತಿಯಿಂದ ಸುಮತಿ ಟೀಚರನ್ನು ಮನೆಯ ಒಳಗೆ ಬರಮಾಡಿಕೊಂಡರು. ತಿನ್ನಲು ತಿಂಡಿಗಳನ್ನು ಕೊಟ್ಟು ಕುಡಿಯಲು ಬಿಸಿ ಬಿಸಿ ಕಾಫಿಯನ್ನು ಕೊಟ್ಟರು. ಸುಮತಿ ಎಂದರೆ ಅವರಿಗೆ ಎಲ್ಲಿಲ್ಲದ ಗೌರವ. ಹೆಣ್ಣು ಮಕ್ಕಳನ್ನು ಉತ್ತಮ ಸಂಸ್ಕಾರ ನೀಡಿ ಸಾಕಿ ಸಲಹಿರುವ ಹಾಗೂ ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾದಾನವನ್ನು ಮಾಡುತ್ತಿರುವ ಸಹೃದಯಿ ಶಿಕ್ಷಕಿಯ ಬಗ್ಗೆ ಅವರಿಗೆ ಹೆಮ್ಮೆಯೂ ಇತ್ತು. ಸುಮತಿಯ ಕಷ್ಟಗಳನ್ನು ಕೂಡ ಬಲ್ಲವರಾಗಿದ್ದರು. 

ಸುಮತಿ ಟೀಚರ್ ಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಆಸೆಯೂ ಅವರಿಗಿತ್ತು. ಆದರೆ ಅವರೂ ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಉಭಯಲೋಪರಿ ವಿನಿಮಯದ ನಡುವೆ, ನಿನ್ನೆ ತಾನು ಎಸ್ಟೇಟ್ ನ ಆಫೀಸಿನ ಬಳಿ ಬಂದು ಕಾಯುತ್ತಿದ್ದ ವಿಷಯವೂ ಅಚಾನಕ್ಕಾಗಿ ಸುಮತಿಯಿಂದ ಹೊರಬಂತು. ಅದನ್ನು ಆಲಿಸಿದ ಡ್ರೈವರ್ ಸ್ವಲ್ಪ ಹೊತ್ತು ಮೌನವಾಗಿದ್ದು ಏನನ್ನೋ ಯೋಚಿಸುತ್ತಿದ್ದರು. ನಂತರ ವಿಷಯ ಬದಲಿಸಿ ಹೆಣ್ಣುಮಕ್ಕಳ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಆಗ ತಮ್ಮ ಕಿರಿಯ ಮಗಳು ನವೋದಯ ಶಾಲೆಯಲ್ಲಿ ಓದುತ್ತಿರುವುದಾಗಿ ತಿಳಿಸಿದರು. ಇನ್ನಿಬ್ಬರು ಮಕ್ಕಳು ಸುಮತಿಯ ಜೊತೆಗೆ ಇದ್ದುದರಿಂದ ಆಗಾಗ ಭೇಟಿಯೂ ಆಗುತ್ತಿತ್ತು. ಹಾಗಾಗಿ ಅವರಿಬ್ಬರ ಪರಿಚಯವೂ ಇವರ ಕುಟುಂಬಕ್ಕೆ ಚೆನ್ನಾಗಿಯೇ ಇತ್ತು. ಇಬ್ಬರು ಅಕ್ಕತಂಗಿಯರಲ್ಲಿ ಎರಡನೆಯವಳು ಅವರ ಮಗನ ಓರಗೆಯವಳು. ಶಾಲೆ-ಕಾಲೇಜಿಗೆ ಹೋಗಿ ಬರುವಾಗ ಅವರಿಬ್ಬರ ಭೇಟಿಯಾಗುತ್ತಿತ್ತು. ಇಬ್ಬರಲ್ಲೂ ಉತ್ತಮ ಗೆಳೆತನವಿತ್ತು. ಡ್ರೈವರ್ ಮನೆಗೆ ಸುಮತಿ ಭೇಟಿ ನೀಡುವಾಗಲೆಲ್ಲಾ ಈ ಇಬ್ಬರು ಸ್ನೇಹಿತರು ಕುಳಿತು ಹರಟುತ್ತಿದ್ದರು. ಕಾಲೇಜಿನ ಅಭ್ಯಾಸದಲ್ಲಿ ಇಬ್ಬರ ಆಯ್ಕೆಯ ವಿಷಯಗಳು ಬೇರೆ ಬೇರೆಯಾಗಿದ್ದರೂ ಹೆಚ್ಚಾಗಿ ಶಾಲೆ-ಕಾಲೇಜಿನ ಪಠ್ಯಗಳ ಬಗ್ಗೆ ಇವರ ಮಾತುಕತೆ ಇರುತ್ತಿತ್ತು. ಒಟ್ಟಿನಲ್ಲಿ ಒಂದು ಉತ್ತಮ ಆರೋಗ್ಯಕರ ಗೆಳೆತನ ಅವರದಾಗಿತ್ತು. ಸ್ವಲ್ಪ ಹೊತ್ತು ಡ್ರೈವರ್ ಕುಟುಂಬದ ಜೊತೆ ಮಾತನಾಡುತ್ತಾ ಕಾಲ ಕಳೆದ ನಂತರ ಅವರಿಗೆ ವಿದಾಯ ಹೇಳಿ ಸುಮತಿ ಸಣ್ಣ ಸಾಹುಕಾರರನ್ನು ಭೇಟಿ ಮಾಡಲು ಹೊರಟಳು. 

ಸುಮತಿ ಮೈತುಂಬ ಸೆರಗನ್ನು ಹೊದ್ದು ಆಫೀಸಿನ ಮೆಟ್ಟಿಲ ಮೇಲೆ ಕುಳಿತಿದ್ದಳು. ಸ್ವಲ್ಪ ಹೊತ್ತಿಗೆಲ್ಲ ಸಣ್ಣ ಸಾಹುಕಾರರು ಆಫೀಸಿನ ಬಳಿಗೆ ಬಂದರು. ಸಣ್ಣ ಸಾಹುಕಾರರನ್ನು ಕಂಡ ಕೂಡಲೇ ಸುಮತಿ ಎದ್ದುನಿಂತು ಗೌರವದಿಂದ ಅವರಿಗೆ ನಮಸ್ಕರಿಸಿದಳು. ಸದಾ ಹಸನ್ಮುಖಿಯಾಗಿರುತ್ತಿದ್ದ ಸಣ್ಣ ಸಾಹುಕಾರರು ಒಂದು ಸಣ್ಣ ಮುಗುಳುನಗೆ ಸುಮತಿಯೆಡೆಗೆ ಬೀರುತ್ತಾ, ಮ್ಯಾನೇಜರ್ ನಿನ್ನೆ ಹೇಳಿದ್ದ ಸಂಗತಿ ತಿಳಿದಿದ್ದರೂ…. “ಏನು ಸುಮತಿ ಇಲ್ಲಿ ಆಫೀಸಿನ ಬಳಿ ನಿಂತಿದ್ದೀರಿ?…ಎಂದು ಕೇಳಿದರು. ಆಗ ಸುಮತಿ ತನ್ನ ಕಷ್ಟಗಳನ್ನು ಅವರ ಬಳಿ ಹೇಳಿಕೊಂಡಳು. ಸಣ್ಣ ಸಾಹುಕಾರರು ಅದೇ ಮುಗುಳುನಗೆಯೊಂದಿಗೆ… “ನೀವು ಮಾಡುತ್ತಿರುವ ಕೆಲಸವು ನಮ್ಮ ತೋಟದ ಕೆಲಸಗಾರರ ಪಟ್ಟಿಯಲ್ಲಿ ಇಲ್ಲದಿರುವುದರಿಂದ ನಿಮಗೆ ತೋಟದ ಲೆಕ್ಕದಲ್ಲಿ ಯಾವ ಧನಸಹಾಯವನ್ನೂ ಮಾಡಲು ಸಾಧ್ಯವಿಲ್ಲ”…. ಎಂದು ಹೇಳುತ್ತಾ, ತಮ್ಮ ಜೇಬಿನಿಂದ ಒಂದಿಷ್ಟು ನೋಟುಗಳನ್ನು ತೆಗೆದು ಸುಮತಿಯ ಕೈಗಿಟ್ಟರು. 

ಸುಮತಿ ಆ ಹಣವನ್ನು ಪಡೆದು ಕಣ್ಣಿಗೊತ್ತಿಕೊಂಡು…. “ಧನ್ಯವಾದಗಳು ಸರ್…. ದೊಡ್ಡ ಸಾಹುಕಾರರು ನಮ್ಮ ಬದುಕಿಗಾಗಿ ಒಂದು ದಾರಿಯನ್ನು ಮಾಡಿ ಕೊಟ್ಟಿದ್ದಾರೆ…. ಅವರು ದೈವಾಧೀನರಾದ ನಂತರ ನೀವು ಅದನ್ನು ಮುಂದುವರಿಸುತ್ತಾ ನಮ್ಮ ಬದುಕಿಗೆ ಆಸರೆಯಾಗಿದ್ದೀರಿ… ನಿಮ್ಮ ಋಣವನ್ನು ನಾವು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ… ಆದರೂ ಮಕ್ಕಳ ಅಗತ್ಯಕ್ಕಾಗಿ ನಿಮ್ಮಲ್ಲಿ ಸಹಾಯವನ್ನು ಕೇಳಿದ್ದೇನೆ ದಯವಿಟ್ಟು ಕ್ಷಮಿಸಿ”… ಎಂದು ದೀನಳಾಗಿ ಕೈಮುಗಿದಳು. ಸುಮತಿಯ ಮಾತನ್ನು ಕೇಳಿದ ಸಣ್ಣ ಸಾಹುಕಾರರು…” ಏಕೆ ಹಾಗೆಲ್ಲ ತಿಳಿದುಕೊಳ್ಳುವಿರಿ… ನಿಮ್ಮ ಕಷ್ಟ ನಮಗೂ ಅರ್ಥವಾಗುತ್ತದೆ… ಈ ಹಣದಿಂದ ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಾಗೂ ಬಟ್ಟೆಯನ್ನು ಕೊಡಿಸಿ”…. ಎಂದು ಮುಗುಳು ನಗುತ್ತಾ ಬಂಗಲೆಯ ಕಡೆಗೆ ನಡೆದರು.


About The Author

Leave a Reply

You cannot copy content of this page

Scroll to Top