ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

       ಭಾರತವು ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ದೇಶ. ಈ ವೈವಿಧ್ಯತೆಯ ನಡುವೆಯೂ ದೇಶದ ಏಕತೆ ಮತ್ತು ಅಖಂಡತೆ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಸಂದೇಶವನ್ನು ನೆನಪಿಸಲು ಹಾಗೂ ರಾಷ್ಟ್ರದ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಏಕತಾ ದಿನವನ್ನು    ಪ್ರತಿವರ್ಷ ಅಕ್ಟೋಬರ್ 31ರಂದು   ಆಚರಿಸಲಾಗುತ್ತದೆ. ಈ ದಿನವು “ಉಕ್ಕಿನ ಮನುಷ್ಯ” ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭ ಬಾಯಿ ಪಟೇಲ್  ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುತ್ತದೆ.  

    ಈ ದಿನದಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ “ರನ್ ಫಾರ್ ಯೂನಿಟಿ” (run for unity) ಎಂಬ ಏಕತಾ ಓಟದ ಸ್ಪರ್ಧೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು ಮತ್ತು ನಾಗರಿಕರು ಏಕತೆಯ ಪ್ರತಿಜ್ಞೆಯನ್ನು ಇಂದು ಸ್ವೀಕರಿಸುತ್ತಾರೆ. ಸರಕಾರದ ವಿವಿಧ ಇಲಾಖೆಗಳು, ಸೈನ್ಯ ಮತ್ತು ಪೊಲೀಸ್ ಇಲಾಖೆಯವರು ಏಕತೆಯ ಪಥಸಂಚಲನ (Unity March) ಆಯೋಜಿಸುತ್ತಾರೆ. ಸರ್ದಾರ್ ಪಟೇಲ್ ರವರ ಜೀವನ ಮತ್ತು ಅವರ ಕೊಡುಗೆ ಕುರಿತು ಭಾಷಣಗಳು, ಚಿತ್ರ ಪ್ರದರ್ಶನಗಳು, ಕವನ ಸ್ಪರ್ಧೆಗಳು ಮತ್ತು ನಾಟಕಗಳು ನಡೆಯುತ್ತವೆ.
ಗುಜರಾತ್‌ನ ಕೇವಾಡಿಯಾ  ಪ್ರದೇಶದಲ್ಲಿರುವ ಪಟೇಲ್ ಅವರ  “ಸ್ಟಾಚು ಆಫ್  ಯೂನಿಟಿ,”  ವಿಶ್ವದ ಅತಿ ಎತ್ತರದ ಪ್ರತಿಮೆ ಈ ದಿನದ ವಿಶೇಷ ಆಕರ್ಷಣೆಯಾಗಿರುತ್ತದೆ. ಈ ಪ್ರತಿಮೆಯು ಸರ್ದಾರ್ ಪಟೇಲ್ ಅವರ ಏಕತೆಯ ಸಂಕೇತವಾಗಿದೆ ಮತ್ತು ಪ್ರತಿವರ್ಷ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡಿ ರಾಷ್ಟ್ರಭಕ್ತಿ ವ್ಯಕ್ತಪಡಿಸುತ್ತಾರೆ.

        ರಾಷ್ಟ್ರೀಯ ಏಕತಾ ದಿನದ ಆಚರಣೆ ಭಾರತದ ಪ್ರಜೆಗಳಿಗೆ ಏಕತೆ, ಸಹಕಾರ ಮತ್ತು ದೇಶಪ್ರೇಮದ ಮೌಲ್ಯಗಳನ್ನು ನೆನಪಿಸುತ್ತದೆ. ಧರ್ಮ, ಭಾಷೆ ಅಥವಾ ಪ್ರದೇಶದಿಂದ ಉಂಟಾಗುವ ವಿಭಜನೆಗಳಿಂದ ದೂರವಿದ್ದು, “ಏಕ್ ಭಾರತ್– ಶ್ರೇಷ್ಠ ಭಾರತ್” ಎಂಬ ಸಂದೇಶವನ್ನು ಈ ದಿನವು ನೀಡುತ್ತದೆ. ಸರ್ದಾರ್ ಪಟೇಲ್ ಅವರ ದೃಷ್ಟಿ ನಮಗೆ ಏನು ತಿಳಿಸುತ್ತದೆ ಎಂದರೆ ” ರಾಷ್ಟ್ರದ ಶಕ್ತಿ ಅದರ ಏಕತೆಯಲ್ಲಿದೆ ಮತ್ತು ನಾವು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ.” ಇದನ್ನು ಕಲಿತು ನಾವೆಲ್ಲಾ ಅಳವಡಿಸಿಕೊಳ್ಳಬೇಕಿದೆ.
         ಹೀಗೆ, ರಾಷ್ಟ್ರೀಯ ಏಕತಾ ದಿನವು ಕೇವಲ ಒಂದು ಆಚರಣೆ ಮಾತ್ರವಲ್ಲ, ಅದು ಭಾರತದ ಏಕತೆಯ ಪರಮ ಸಂಕೇತವಾಗಿದೆ. ಸರ್ದಾರ್ ಪಟೇಲ್ ಅವರ ತ್ಯಾಗ, ಶ್ರಮ ಮತ್ತು ದೃಢಸಂಕಲ್ಪದಿಂದ ನಾವು ಇಂದು ಒಂದೇ ಭಾರತವಾಗಿ ನಿಂತಿದ್ದೇವೆ. ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವುದು ಪ್ರತಿ ಭಾರತೀಯರಾದ ನಮ್ಮ ಕರ್ತವ್ಯವಾಗಿದೆ.
“ಏಕತೆ ನಮ್ಮ ಶಕ್ತಿ, ವಿಭಜನೆ ನಮ್ಮ ದುರ್ಬಲತೆ” – ಈ ಸಂದೇಶವನ್ನು ರಾಷ್ಟ್ರೀಯ ಏಕತಾ ದಿನವು ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ನೆಟ್ಟಿರುತ್ತದೆ. ಗಣೇಶ ಚತುರ್ಥಿಯನ್ನು ಆಚರಿಸುವ ಮೂಲಕ ಪಟೇಲ್ ಅವರು ಜನರನ್ನು ಒಗ್ಗಟ್ಟಿನೆಡೆ ತಂದು ಸ್ವಾತಂತ್ರ್ಯದ ಹೋರಾಟದ ಕಹಳೆ ಕೂಗಿದ್ದನ್ನು ಇಲ್ಲಿ ಸ್ಮರಿಸುತ್ತಾ ಸರ್ದಾರ್ ಪಟೇಲ್ ಅವರಿಗೆ ನಮಿಸೋಣ. ನೀವೇನಂತೀರಿ?


ಹನಿಬಿಂದು

About The Author

Leave a Reply

You cannot copy content of this page

Scroll to Top