ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊನ್ನೆ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದುಬರುತ್ತಿದ್ದೆ. ರಾತ್ರಿಯಾಗಿದ್ದರಿಂದ (09 ರ ಸಮಯ) ಓಣಿಯೊಳಗಾಗಲೇ ಜನ ಸಂಚಾರ ವಿರಳವಾಗಿತ್ತು. ಶಟರ್ ಮುಚ್ಚಿದ ಅಂಗಡಿಯೊಂದರ ಮೆಟ್ಟಿಲ ಮೇಲೆ ವೃದ್ದರೊಬ್ಬರು ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ತೆಳುವಾದ ಹಾಸಿಗೆಯನ್ನು ಹಾಸಿಕೊಂಡು, ಬಟ್ಹೆ ತುಂಬಿದ ಕೈಚೀಲವೊಂದನ್ನು ತಲೆದಿಂಬಾಗಿಸಿಕೊಂಡು ಏನೋ ಓದುತ್ತಾ ಮಲಗಿದ್ದರು.‌ ಪಕ್ಕದಲ್ಲಿ ಬೀದಿ ದೀಪ ಅಲ್ಲಿಗೆ ಬೆಳಕು ಚೆಲ್ಲಿತ್ತು. ಮಹಾನಗರಗಳಲ್ಲಿ ಹೀಗೆ ನಿರ್ಗತಿಕರು ಭಿಕ್ಷುಕರು ರಸ್ತೆಬದಿಯ ಮುಚ್ಚಿದ ಅಂಗಡಿಗಳ ಮುಂದೆ ಮಲಗೋದು ಸಹಜ.  ಹಾಗೆಯೇ ಅಂದುಕೊಂಡೇ ರಸ್ತೆಯ ಬದಿಯಲ್ಲಿ ಹೊರಟಿದ್ದ ನನ್ನ ಗಮನ ಸೆಳೆದದ್ದು ಆ ವೃದ್ದರ ಕೈಯಲ್ಲಿದ್ದ ಪತ್ರಿಕೆ! ಅದು ಈ ತಿಂಗಳ ಕಸ್ತೂರಿ ಮಾಸಪತ್ರಿಕೆ. ಮುಖಪುಟ ಆ ಬೆಳಕಿನಲ್ಲಿ ಫಳಫಳ ಹೊಳೆಯುತ್ತಿತ್ತು. ಹಾಗೆಯೇ ನೋಡುತ್ತಾ ಏಳೆಂಟು ಹೆಜ್ಜೆ ಮುಂದೆ ಹೋದವನು ವಾಪಾಸು ಬಂದೆ. ಮಾತಾಡಿಸಿದೆ. ಅವರು ಮಾತಾಡಿಸೋಕೆ ಅಷ್ಟೇನು ಆಸಕ್ತಿ ತೋರಲಿಲ್ಲ.‌ ಆದರೂ ನನ್ನ ಪರಿಚಯಿಸಿಕೊಂಡು ಅವರ ಓದು, ಬದುಕಿನ ಬಗ್ಗೆ ವಿಚಾರಿಸಿದೆ.‌ ಹಿರಿಯ ಜೀವಿ ಎದ್ದು ಕುಳಿತು ಮಾತಾಡಿದರು.‌ ಅವರ ಬದುಕು, ಸಾಹಿತ್ಯಾಸಕ್ತಿ, ಓದಿನ ವ್ಯಾಪ್ತಿ  ಕೇಳಿ ಬೆರಗಾದೆ.

ಹೆಸರು ರಮೇಶ್, ಹಾಸನದವರು. ವಯಸ್ಸು ಅರವತ್ತೊಂಬತ್ತು.‌ ಒಬ್ಬಳೇ ಮಗಳು.‌ ಆಕೆಯನ್ನು ಮದುವೆ ಮಾಡಿಕೊಟ್ಟಿದ್ದಾರೆ.‌ಮೊಮ್ಮಕ್ಕಳಿವೆ.  ಊರಲ್ಲಿ (ಹಾಸನದಲ್ಲಿ) ಮನೆಯಿದೆ.‌ ಇಂದಿಗೂ ಇವರ ತಂದೆ ತಾಯಿ, ಹೆಂಡತಿ ಅಲ್ಲೇ ಇದ್ದಾರೆ. ಜೊತೆಗೆ ಸಹೋದರ(ತಮ್ಮ), ಅಕ್ಕ ಕೂಡಾ ಇದ್ದಾರೆ.‌
‘ಹಾಸನ ಬಿಟ್ಟು ಇಲ್ಲಿಗ್ಯಾಕೆ ಬಂದ್ರಿ?” ಅಂತ ಕೇಳಿದೆ.‌
“ನನ್ನ ಕೈಕಾಲು ಗಟ್ಟಿಮುಟ್ಟಾಗಿವೆ, ಅಲ್ಲಿ ಕೂತು ತಿನ್ನೋದಕ್ಕಿಂತ ಇಲ್ಲಿ ದುಡಿದು ತಿನ್ನೋಕೆ ಬಂದೆ” ಅಂತ ಹೇಳಿದರು.
“ಏನು ಕೆಲಸ ಮಾಡ್ತೀರಿ?” ಕೇಳಿದೆ
ಹೊಟೆಲ್ ಗಳಿಗೆ ಇಡ್ಲಿ ಮಾಡಲು ಬೇಕಾದ ಹಲಸಿನ ಎಲೆಗಳನ್ನು ಹೆಣೆಯುತ್ತೇನೆ. ದಿನ ಮುನ್ನೂರು ನಾನ್ನೂರು ದುಡಿಯುತ್ತೇನೆ ಅಂದರು.
“ಊಟ, ವಸತಿ ಎಲ್ಲಿ?” ಕೇಳಿದೆ.‌
ಬೆಳಿಗ್ಗೆ ಶೌಚಾಲಯದಲ್ಲಿ ನಿತ್ಯ ಕರ್ಮಗಳು, “ದೇವಸ್ಥಾನದಲ್ಲಿ ಊಟ, ರಾತ್ರಿ ಬೀದಿಯ ಮುಚ್ಚಿದ ಅಂಗಡಿ ಮುಂದೆ ನಿದ್ರೆ” ಹೇಳಿದರು.
“ಇಷ್ಟೆಲ್ಲಾ ತೊಂದರೆ, ಕಷ್ಟಪಟ್ಟು ಇಲ್ಲಿ ಯಾಕೆ ಇದೀರಾ? ಊರಲ್ಲಿ ಆರಾಮಾಗಿರಬಹುದಲ್ವೇ ?” ಕೇಳಿದೆ.
“ಇಲ್ಲಿ ಅಂತಹ ಕಷ್ಟವೇನಿಲ್ಲ, ಆರಾಮಾಗಿದ್ದೇನೆ. ಆರೋಗ್ಯವಾಗಿದ್ದೇನೆ.‌ ಬಿಪಿ ಶುಗರ್ ಯಾವುದೂ ಇಲ್ಲ. ಕಣ್ಣಿನ ದೃಷ್ಟಿ ಚೆನ್ನಾಗಿದೆ. ಬೆಳದಿಂಗಳಲ್ಲಿ ಕೂಡಾ ಪತ್ರಿಕೆ ಓದಬಲ್ಲೆ.‌ ಅಷ್ಟೊಂದು ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತವೆ. ಆರೋಗ್ಯವೆಂಬುದು ನನಗೆ ತಂದೆತಾಯಿ ಕೊಟ್ಟ ವರ” ಅಂದರು.
“ಊರಿಗೆ ಹೋಗಲ್ವಾ? ಕೇಳಿದೆ.
 “ಮೊನ್ನೆ ತಾನೇ ಊರಿಗೆ ಹೋಗಿಬಂದೆ.‌ಈಗ ದೀಪಾವಳಿಗೆ ಹೋಗಬೇಕು” ಅಂದರು.

ಈಗ ಮಾತು ಸಾಹಿತ್ಯದೆಡೆಗೆ ಹೊರಳಿತು.‌ಅವರ ಕೈಯಲ್ಲಿ “ಕಸ್ತೂರಿ” ಪತ್ತಿಕೆ ಇತ್ತಾದ್ದರಿಂದ ಕೆದಕಿದೆ.‌ ಏನೇನು ಓದಿದಿರಿ ಅಂತ ಕೇಳಿದೆ. ಕೇಳಿ ಅಚ್ಚರಿಗೊಂಡೆ…. ಹಿರಿಯರು ವಿವರಿಸತೊಡಗಿದರು….‌”ಬಿವಿ ಅನಂತರಾಮ್, ಸುದರ್ಶನ್ ದೇಸಾಯಿ, ವಿಜಯ ಸಾಸನೂರು, ವಿದ್ಯುಲ್ಲತಾ, ಅನಕೃ, ಎನ್ ನರಸಿಂಹಯ್ಯ… ಇತ್ಯಾದಿ ಕೃತಿಗಳ ಬಗ್ಗೆ ಮಾತಾಡಿದರು.‌ಅವರಿಗೆ ಪತ್ತೆದಾರಿ ಕಾದಂಬರಿಗಳ ಬಗ್ಗೆ ಆಸಕ್ತಿ ಇದೆಯೆನಿಸಿತು. ವಿಶೇಷವಾಗಿ ಎನ್ ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳು, ಸುದರ್ಶನ ದೇಸಾಯಿಯವರ ಹಳದಿ ಚೇಳು ಕಾದಂಬರಿ, ಅನಕೃ ಅವರ ಸಂಧ್ಯಾರಾಗ ಕಾದಂಬರಿ ಬಗ್ಗೆ ಮಾತಾಡಿದರು.
“ಅನಕೃ ಅವರ ಸಂಧ್ಯಾರಾಗ ತುಂಬಾ ಇಷ್ಟವಾಯಿತು. ಆದರೆ ಅವರ ಇನ್ನೊಂದು ಕಾದಂಬರಿ ಉದಯರಾಗ ಸಿಗಲಿಲ್ಲ, ಅದೊಂದು ಓದಬೇಕಿತ್ತು” ಅಂದರು. ಅವರ ತಲೆದಿಂಬು ಎಂಬ ಕೈಚೀಲದಲ್ಲಿ ಈ ತಿಂಗಳ ಮಯೂರ, ತುಷಾರ ಪತ್ರಿಕೆಗಳನ್ನು ತೆಗೆದು ತೋರಿಸಿದರು. ಅದರೊಂದಿಗೆ ಈ ದಿನದ ದಿನಪತ್ರಿಕೆಗಳ ಕಂತೆ ಇತ್ತು. ಪ್ರಜಾವಾಣಿಯ ಪದಬಂಧ ತುಂಬುವುದು ತಮಗಿಷ್ಟವಾದ ಹವ್ಯಾಸವೆಂದರು. ಅರ್ಧ ತುಂಬಿದ್ದ ಪದಬಂಧವನ್ನು ನೋಡುತ್ತಾ ಅಲ್ಲಿಗೆ ಸೂಕ್ತವಾದ ಪದಕ್ಕಾಗಿ ಯೋಚಿಸಲಾರಂಭಿಸಿದರು.‌ ನಾನು ಯೋಚಿಸಿ “ಚಂಡಮಾರುತ” ಎಂಬ ಪದ ಅಲ್ಲಿಗೆ ಸರಿಹೊಂದುತ್ತೆ ಎಂದು ಹೇಳಿದೆ. ಓ ಹೌದು! ಎಂದು ಅವರು ಗೆಲುವಿನ ನಗೆ ನಕ್ಕರು. ಕನ್ನಡದ ಜೊತೆಗೆ ತುಳು, ಹಿಂದಿ, ಅರೆಭಾಷೆ, ಬ್ಯಾರಿ, ತೆಲುಗು ಭಾಷೆ ಚೆನ್ನಾಗಿ ಮಾತಾಡಬಲ್ಲೆ ಎಂದಾಗ ನಾನು ನಿಜಕ್ಕೂ ಅವಕ್ಕಾದೆ.

ನಾನು ಕನ್ನಡ ಮೇಷ್ಟ್ರು ಅಂತ ಪರಿಚಯ ಮಾಡಿಕೊಂಡಾಗ ಒಂದಿಷ್ಟು ಹೊತ್ತು ಸಾಹಿತ್ಯದ ಬಗ್ಗೆ ಮಾತುಕಥೆ ನಡೆಯಿತು. ಇಷ್ಟೆಲ್ಲಾ ಸಾಹಿತ್ಯ ಓದಿಕೊಂಡಿರುವ  ಇವರು ಶಿಕ್ಷಣ ಎಲ್ಲಿಯವರೆಗೆ ಪಡೆದುಕೊಂಡಿರಬಹುದೆಂದು ಕುತೂಹಲದಿಂದ ಕೇಳಿದೆ.‌
“ನಾ ಹೇಳಿದರೆ ನೀವು ನಂಬಲ್ಲ ಬಿಡಿ” ಅಂದರು.‌
“ಇರ್ಲಿ ಹೇಳಿ ಪರವಾಗಿಲ್ಲ” ಒತ್ತಾಯಿಸಿದೆ.‌
“ಮೂರನೇ ಕ್ಲಾಸು, ಅಷ್ಟೇ!” ಮುಖದಲ್ಲಿ ನಗು ತುಳುಕಿಸಿದರು….‌


About The Author

7 thoughts on ““ಅಚಾನಕ್ಕಾಗಿ ಸಿಕ್ಕ ಅಚ್ಚರಿಯ ಅಕ್ಷರ ಮೋಹಿಯೊಂದಿಗಿನ ಅಕ್ಕರೆಯ ಅನುಭವ..!” ರಾಜ್‌ ಬೆಳಗೆರೆ”

    1. ರಮೇಶ್ ಅವರು ಓದುತ್ತಿದ್ದ ಬಗೆ ನಿಮ್ಮನ್ನ್ ಸೆಳೆದಿದ್ದು, ಹೂ ಮಾರುವವನಿಗೆ ಹೂವಿನ ಗಿಡಗಳೇ ಕಾಣಸಿಗುತ್ತವೆ.. ಎಂಬತಿದೆ. ಚೆಂದದ ಬರಹ. ಮತ್ತಷ್ಟು ಅಕ್ಷರ ಮೋಹಿಗಳು ನಿಮ್ಮ ಕಣ್ಣಿಗೆ ಬೀಳಲಿ..

  1. ಅಕಸ್ಮಾತಾಗಿ ಸಿಕ್ಕ ವೃದ್ದರು ಕುರಿತು ಸತ್ಯ ಸಂಗತಿಯನ್ನು ಗುರುತಿಸಿ ,ಅವರ ಆಸಕ್ತಿಯನ್ನು ತಾಳ್ಮೆಯಿಂದ ಕೇಳಿ ಬರೆದಿದ್ದೀರಿ. ಉತ್ತಮ ವಾಗಿದೆ.

Leave a Reply

You cannot copy content of this page

Scroll to Top