ಸ್ಪೂರ್ತಿ ಸಂಗಾತಿ
ಜಯಲಕ್ಷ್ಮಿ.ಕೆ
“ಗೋಳಿನ ದನಿಗೆ ಕಿವಿಗಳಿಲ್ಲ…”

” ನಿಮ್ಮೂರಲ್ಲಿ ಈ ವರ್ಷ ಮಳೆ ಚೆನ್ನಾಗಿ ಬಂತಲ್ಲವೇ? “
” ಅಯ್ಯೋ… ಮಳೆ ಕಥೆ ಏನು ಕೇಳ್ತೀರಾ..? ಮೊದ್ಲೆಲ್ಲಾ ಮಳೆಗಾಲ ಅಂತ ಹೇಳ್ಕೊಳ್ಳೋಕೆ ಒಂದೆರಡು ಮಳೆ ಸುರಿತ್ತಿತ್ತು, ಆಗ ನೆಮ್ಮದಿ ಇತ್ತು. ಈ ವರ್ಷದ ಮಳೆಯೋ…. ಸುರಿತಾನೆ ಇರುತ್ತೆ.. ಒಂದ್ಕಡೆ ಹೋಗಂಗಿಲ್ಲ ಒಂದ್ಕೆಲಸ ಮಾಡಂಗಿಲ್ಲ, ಬಿಟ್ಟೂ ಬಿಡದೆ ಸುರಿವ ಮಳೆ ದೆಸೆಯಿಂದ ತಲೆಯೆಲ್ಲ ಚಿಟ್ಟು ಹಿಡಿದೋಗಿದೆ. ಸಾಕಪ್ಪಾ..ಈ ಮಳೆ ಕಾಟ… “
” ಈ ವರ್ಷ ಕಬ್ಬಿಗೆ ಒಳ್ಳೆ ಬೆಲೆ ಬಂತಲ್ಲಣ್ಣಾ..? “
” ಏನ್ ಬೆಲೆನೋ ಏನೋ… ಎರಡು ವರ್ಷದ ಹಿಂದಿನ ಸಾಲಾನೇ ಇನ್ನೂ ತೀರ್ಸೋಕೆ ಆಗಿಲ್ಲ. ಅಡಿಕೆ, ಕಾಫಿ ಬೆಳೆಗೆ ಹೋಲಿಸಿದ್ರೆ, ನಮಗೆ ಬರೋ ಆದಾಯ ಏನೂ ಅಲ್ಲ. ಕಟಾವು ಕಾಲಕ್ಕೇ ಮಾರುಕಟ್ಟೆ ದರದಲ್ಲಿ ಇಳಿಕೆ ಆಗುತ್ತೆ. ಕೆಲಸಗಾರರಿಗೂ ಕೊರತೆ. ಇನ್ನು ಸರ್ಕಾರನೋ…ನಮ್ ಕಡೆ ಗಮನನೇ ಕೊಡ್ತಿಲ್ಲ. “
” ಮಕ್ಕಳು ಚೆನ್ನಾಗಿ ಓದ್ಕೊಂತಿದ್ದಾವಾ? “
” ಅದೇನು ಓದ್ತಾವೋ…ಈಗಿನ ಕಾಲಕ್ಕೆ ಅವರ ಮಾರ್ಕ್ಸ್ ಎಲ್ಲಿಗೂ ಸಾಲಲ್ಲ. ಏನೋ ಕಾಟಾಚಾರಕ್ಕೆ ಓದ್ತಾವೆ, ವರ್ಷದಿಂದ ವರ್ಷಕ್ಕೆ ಮುಂದಿನ ಕ್ಲಾಸಿಗೆ ಹೋಗ್ತವೆ, ಅಷ್ಟೇ. ” ಈ ರೀತಿಯ ಕೆಲವು ಕೊರಗಪ್ಪ- ಕೊರಗಮ್ಮಂದಿರು ನಮ್ಮಲ್ಲಿದ್ದಾರೆ. ಅಂಥವರ ಜೊತೆಗೆ ಐದು -ಹತ್ತು ನಿಮಿಷ ಮಾತನಾಡಿದರೆ ಸಾಕು, ನಮ್ಮ ಜೀವನೋತ್ಸಾಹವೆಲ್ಲ ಕೊಚ್ಚಿ ಹೋಗಿ ಈ ಭೂಮಿಯೇ ಬರಡು, ಬದುಕೇ ಶೂನ್ಯ ಎನಿಸಿಬಿಡಬಹುದು. ಇನ್ನು ಕೆಲವರಿದ್ದಾರೆ, ” ಈ ವರ್ಷ ಆಕಾಶ ಕೆಳಗೆ ಬೀಳುತ್ತಂತಲ್ಲೋ ಮಾರಾಯಾ.. ” ಅಂದ್ರೆ ” ಬಿದ್ರೆ ಬೀಳಲಿ ಬಿಡೋ…ಆಕಾಶ ಬಿದ್ರೆ ನನ್ನ – ನಿನ್ನ ತಲೆ ಮೇಲೆ ಮಾತ್ರ ಬೀಳುತ್ತೇನೋ ಪೆಕರಾ… ಎಲ್ಲರ ಮೇಲೂ ಬೀಳುತ್ತೆ ತಾನೇ? ಒಂದಲ್ಲ ಒಂದಿನ ಹೋಗಲೇಬೇಕು ಎಲ್ಲರೂ ಒಟ್ಟಾಗಿ ಹೋಗೋಣ ” ಅಂತ ಬಹಳ ಹಗುರವಾಗಿ ಆ ವಿಷಯವನ್ನು ತೇಲಿಸಿಬಿಡುತ್ತಾರೆ. ಬದುಕನ್ನು ಪ್ರೀತಿಸುವ ಜನರೆಲ್ಲರೂ ಇಷ್ಟಪಡುವುದು ಇಂತಹ ನಿರಾಳ ಮನಸ್ಸುಗಳನ್ನೇ. ಕತ್ತಲಿನಲ್ಲಿಯೂ ಬೆಳಕಿನ ಕಿಂಡಿಯನ್ನು ಕಾಣಬಲ್ಲ ಇಂತಹ ಆಶಾವಾದಿಗಳ ಹಿಂದೆ ಜನಗಳ ಹಿಂಡೇ ನೆರೆದಿರುತ್ತದೆ. ಬದುಕಿನ ಭರವಸೆಗಳೆಲ್ಲ ತೀರಾ ಬತ್ತಿ ಹೋಗಿವೆ ಎನ್ನುವವನ ಹೃದಯದಲ್ಲಿಯೂ ಜೀವಸೆಲೆ ತುಂಬಬಲ್ಲ ಶಕ್ತಿವಂತರಿವರು. ಈ ಜಗತ್ತು ಆರಾಧಿಸುವುದೇ ಇಂಥವರನ್ನು. ತಾವು ಸದಾ ಉಲ್ಲಸಿತರಾಗಿರುವುದರ ಜೊತೆಗೆ ತಮ್ಮ ಬಳಿ ಬರುವವರೆಗೂ ಉಲ್ಲಾಸವನ್ನು ಹಂಚುವ ಹೃದಯವಂತರಿವರು.ಎಲ್ಲರನ್ನೂ, ಎಲ್ಲವನ್ನೂ, ಧನಾತ್ಮಕ ದೃಷ್ಟಿಕೋನದಿಂದಲೇ ಕಾಣುವ ಇಂತಹ ಆಶಾವಾದಿಗಳ ಸ್ನೇಹವನ್ನು ಎಲ್ಲರೂ ಬಯಸುತ್ತಾರೆ. ನಮ್ಮ ಸುತ್ತ – ಮುತ್ತಲಿನ ಆಗುಹೋಗುಗಳನ್ನು ಸಕಾರಾತ್ಮಕವಾಗಿ ನೋಡುವವನಿಗೆ ಯಾವ ಸಮಸ್ಯೆಗಳು ಕೂಡಾ ಬಗೆಹರಿಸಲಾಗದ್ದು…. ಎಂದು ಅನಿಸುವುದೇ ಇಲ್ಲ. ಅಂಥವರಿಗೆ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಮನೋಬಲವಿರುತ್ತದೆ. ಅಂಥವರಿಗೆ ಬದುಕಿನ ದಾರಿ ಎಂದೂ ಸುಗಮವೇ. ಕೆಲವು ವರ್ಷಗಳ ಹಿಂದೆ ಮಗಳನ್ನು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನನ್ನ ಹಾಗೇ ತನ್ನ ಮಗಳನ್ನು ಸ್ಪರ್ಧೆಗೆ ಕರೆತಂದ ತಾಯಿಯೊಬ್ಬರ ಪರಿಚಯವಾಯಿತು. ಮಗಳ ಹತ್ತನೇ ತರಗತಿಯ ಪೂರ್ವ ತಯಾರಿ ಪರೀಕ್ಷೆಗೆ ಕೇವಲ ಆರೇ ದಿನಗಳು ಬಾಕಿ ಇದ್ದುದ್ದರಿಂದ ಆ ಬಗ್ಗೆಯೇ ಚಿಂತಿಸುತ್ತಿದ್ದ ನಾನು ಅದೇ ತರಗತಿಯಲ್ಲಿ ಓದುತ್ತಿದ್ದ ಅವರ ಮಗಳ ಕಲಿಕೆಯ ಬಗ್ಗೆ ಕೇಳಿದೆ. ” ನನ್ನ ಮಗಳು ಯಾವಾಗಲೂ ಫಸ್ಟ್ ಕ್ಲಾಸ್! ಎಲ್ಲದರಲ್ಲೂ 60ಕ್ಕಿಂತ ಹೆಚ್ಚೇ ಮಾರ್ಕ್ಸ್ ತೆಗೆಯುತ್ತಾಳೆ, ಅವಳ ಕಲಿಕೆಯ ಬಗ್ಗೆ ನನಗೆ ಚಿಂತೆಯೇ ಇಲ್ಲ “,ಎಂದರವರು. ಹೊಳಪು ತುಂಬಿದ್ದ ಅವರ ಕಣ್ಣುಗಳಲ್ಲಿ ಮಗಳ ಕಲಿಕೆಯ ಬಗ್ಗೆ ಅದೆಂಥ ತೃಪ್ತಿ ಇತ್ತು!! ಅವಳ ಭವಿಷ್ಯದ ಬಗ್ಗೆ ಅದೆಷ್ಟು ವಿಶ್ವಾಸವಿತ್ತು!! ಆ ತಾಯಿಯ ಸಂತೃಪ್ತಿಯ ಮುಖಭಾವದ ಚಿತ್ರಣ ಇನ್ನೂ ನನ್ನ ಕಣ್ಣ ಮುಂದಿದೆ. ನಮ್ಮ ಅತೃಪ್ತಿ, ನಮ್ಮ ಕೊರಗು,ಇವುಗಳ ಕಥೆ ಕೇಳಲು ಯಾರೂ ಉತ್ಸುಕರಾಗಿ ಇರುವುದಿಲ್ಲ. ಹೇಳುವವರಿಗಾಗಲೀ, ಕೇಳುವವರಿಗಾಗಲೀ, ಇದರಿಂದ ಆನಂದವೂ ಇಲ್ಲ.
ಒಮ್ಮೆ ಜಾನಪದ ಪರಿಷತ್ ವತಿಯಿಂದ ಪ್ರವಾಸ ಹೋಗಿದ್ದೆವು. ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಂತೆ ಆ ತಾಣದಲ್ಲಿ ಕೆಲವರಿಗೆ ಹಾಡುವ ಅವಕಾಶವಿತ್ತು. ಅಮ್ಮನನ್ನು ಕಳೆದುಕೊಂಡು ಕೆಲವೇ ತಿಂಗಳುಗಳಾಗಿದ್ದುದರಿಂದ ” ನಿನ್ನ ಮುಖ ನೋಡುವ ಋಣ ಇನ್ನಿಲ್ಲ ” ಎನ್ನುವ ಜಾನಪದ ಗೀತೆ ಯೊಂದನ್ನು ನಾನು ಸ್ವಲ್ಪ ಭಾವುಕಳಾಗಿ ಹಾಡಿದೆ. ವೇದಿಕೆಯಿಂದ ಕೆಳಗಿಳಿದು ಬಂದಾಗ ” ಹಾಡು ಚೆನ್ನಾಗಿತ್ತು, ಆದರೆ ನಮಗೆ ಕುಣಿಯಲು ಸಾಧ್ಯವಾಗಲಿಲ್ಲ, ಜೋಶ್ ಕೊಡುವ ಹಾಡೊಂದನ್ನು ಹಾಡಿ ” ಎಂದರು ನನ್ನ ಸಂಗಡಿಗರು. ಮತ್ತೊಮ್ಮೆ ಅಂತಹ ಹಾಡನ್ನೇ ಹಾಡಿದೆ ಕೂಡಾ. ವೈಯಕ್ತಿಕ ಕೊರಗು, ನೋವು, ಇವೆಲ್ಲ ವ್ಯಕ್ತಿಗತವಾಗಿಯಷ್ಟೇ ಇರಬೇಕು ಎನ್ನುವ ಸೂಕ್ಷ್ಮದ ಅರಿವಾದದ್ದು ನನಗೆ ಆಗಲೇ.
ನಾವು ಸದಾ ಧನಾತ್ಮಕ ಚಿಂತನೆಗಳನ್ನೇ ಮಾಡಬೇಕು, ಹಾಗೇ ನುಡಿಯಬೇಕು. ಹಾಗೇ ನಡೆಯಬೇಕು. ನನ್ನ ಆಪ್ತ ವಲಯದಲ್ಲಿ ಒಬ್ಬಳು ಗೆಳತಿ ಇದ್ದಾಳೆ. ತಾಯಿಯೊಂದಿಗೆ ಆಕೆಯ ವಾಸ. ತಂಗಿಯರಿಬ್ಬರ ಮದುವೆಯಾಗಿದೆ. ಈಕೆಯ ನಿಶ್ಚಿತಾರ್ಥದ ಮರು ದಿನವೇ ಆಕೆಯ ಭಾವೀಪತಿಯ ತಂದೆ ಸ್ವರ್ಗಸ್ಥರಾಗಿದ್ದಕ್ಕೆ ಹುಡುಗಿ” ಶಕುನ ಸರಿ ಇಲ್ಲವೆಂದು ವರನ ಕಡೆಯವರು ಆಕೆಯನ್ನು ಒಲ್ಲದೆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಮತ್ತೆ ಆಕೆ ಮತ್ತೆಂದೂ ಮದುವೆಯಾಗಬಯಸಲಿಲ್ಲ. ಹಾಗೆಂದು ಈಗಿನ ಒಂಟಿ ಬದುಕಿನ ಬಗ್ಗೆ ಆಕೆಗೆ ಕಿಂಚಿತ್ತೂ ತಕರಾರಿಲ್ಲ.ಕೊರಗುತ್ತಾ ಗೋಳಾಡುವುದಾದರೆ ಅದಕ್ಕೆ ಸಾಕಷ್ಟು ಕಾರಣಗಳನ್ನು ಆಕೆ ಹುಡುಕಬಹುದಿತ್ತು . ಆದರೆ ಆಕೆ ಹಾಗೆ ಗೋಳಾಡಲಿಲ್ಲ. ಸಮಸ್ಯೆಗಳನ್ನು ಹೇಳಿಕೊಂಡು ಕೊರಗುತ್ತಾ ಕೂರಲಿಲ್ಲ. ಆಕೆ ತನ್ನ ವಿಧಿಯನ್ನು ಹಳಿಯುತ್ತಾ ಕುಳಿತದ್ದನ್ನು ನಾನು ಕಂಡೆೇ ಇಲ್ಲ. ನಾಗರ ಪಂಚಮಿಯಿಂದ ಯುಗಾದಿಯವರೆಗೂ ಒಂದೇ ಒಂದು ಹಬ್ಬವನ್ನೂ ಬಿಡದೆ ಆಚರಿಸಿ ಸಂಭ್ರಮಿಸುತ್ತಾಳೆ. ಆಕೆಯ ಜೊತೆ ಮಾತನಾಡುವುದೇ ಒಂದು ಸುಖದ ಸುಗ್ಗಿ. ಅವಳನ್ನು ಕಂಡಾಗ
“ವಿಧಿ ಬರೆದ ಬರಹವನು
ಅಳಿಸಿ ಮೆರೆಯುವವರು…
ತಮ್ಮ ಭವಿತವ್ಯವನು
ತಾವೇ ಬರೆಯುವರು…”
ಎನ್ನುವ ಗೀತೆಯ ಸಾಲುಗಳು ಹಾಗೇ ನೆನಪಾಗುತ್ತವೆ.
ಓರ್ವ ಉಪನ್ಯಾಸಕಿಯಾಗಿ ಸದಾ ಪೋಷಕರ ಸಂಸರ್ಗದಲ್ಲಿ ಇರುವ ನಾನು ಎಷ್ಟೋ ನಿದರ್ಶನಗಳನ್ನು ಕಂಡಿದ್ದೇನೆ, ತೃಪ್ತ ಮನಸ್ಸಿನ ತಾಯಿಯ ತೆಕ್ಕೆಯಿಂದ ಬಂದ ಅದೆಷ್ಟೋ ಮಕ್ಕಳು ಸಂತಸದಲ್ಲಿ ಓದು ಮುಗಿಸಿ ಸಂತೃಪ್ತ ಬದುಕಿನತ್ತ ಹೆಜ್ಜೆ ಹಾಕಿದ್ದಾರೆ.
ಜೀವನದ ಯಾವುದೇ ಘಟ್ಟಗಳಲ್ಲಿಯೂ ಎದುರಾಗುವ ಸಮಸ್ಯೆಗಳಿಗೆ ಅಧೀರರಾಗದೆ ಮುಂದಡಿ ಇಡೋಣ… ರಾತ್ರಿಯ ಬಳಿಕ ಹಗಲು ಎನ್ನುವಂತೆ ಯಾವ ಸಮಸ್ಯೆಗಳೂ ಶಾಶ್ವತವಲ್ಲ. ಬಾಳೊಂದು ಗೋಳೆಂದು ಕೊರಗುವವನ ದನಿಗೆ ಕಿವಿಗಳಾಗುವ ಜನರಿಲ್ಲ, ಏಕೆಂದರೆ ನೋವಲ್ಲೂ ನಲಿವವನ ಸುತ್ತಲೇ ಈ ಜಗವೆಲ್ಲ…
ಜಯಲಕ್ಷ್ಮಿ ಕೆ.




