ಪುಸ್ತಕ ಸಂಗಾತಿ
ವರದೇಂದ್ರ ಕೆ ಮಸ್ಕಿ
ಗುರುಸ್ವಾಮಿ ಕಲಕೇರಿ ಅವರ ಕೃತಿ
“ಚಿನುಮಯ”
(ಚಿತ್ತರಗಿ ಶ್ರೀ ವಿಜಯ ಮಹಾಂತ
ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ)



“ಚಿನುಮಯ”
(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ)
ಕೃತಿಕಾರರು : ಶ್ರೀ ಗುರುಸ್ವಾಮಿ ಕಲಕೇರಿ
ಪ್ರಥಮ ಮುದ್ರಣ : 1984
ದ್ವಿತೀಯ ಮುದ್ರಣ : 2025
"ಡಾ.ಶಶಿಕಾಂತ ಕಾಡ್ಲೂರ್" ಹೆಸರು ಕರಣಗಳಿಗೆ ತಾಕಿದ ಕ್ಷಣ ನೆನಪಾಗೋದು ಬಸವ ತತ್ವ, ಬಸವಾದಿ ಶರಣರ ವಚನಾನುಭವದ ಸಾರ. ಖಡಕ್ ಮಾತಿನೊಂದಿಗೆ, ವಿಷಯಗಳಲ್ಲಿ ಸ್ಪಷ್ಟತೆಯನ್ನು ನೀಡುವ ಶ್ರೀಯುತರು ಯುವ ಸಾಹಿತಿಗಳಿಗೆ ಆದರ್ಶ ಪ್ರಾಯ ಸಾಹಿತಿಗಳೂ ಹೌದು.
ಹೌದು ಹಲವಾರು ಕೃತಿಗಳ ಕರ್ತೃಗಳಾಗಿದ್ದು ರಾಯಚೂರು ಸಾಹಿತ್ಯ ಲೋಕದಲ್ಲಿ ಮನ್ನೆಲೆಯಲ್ಲಿದ್ದು ಕೂಡ ಹಿನ್ನೆಲೆಯಲ್ಲಿ ಸಾಗಿ ಬರುತ್ತಿರುವ ಅನೇಕ ಯುವಕರಿಗೆ ಪ್ರೋತ್ಸಾಹ ಪೂರ್ವಕವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳುವಂತೆ ಬೆಂಬಲ ನೀಡುವ ಶ್ರೀಯುತರು ಈ ಕಿರಿಯನ ಮೇಲೆಯೂ ಅಭಿಮಾನ ಇಟ್ಟುಕೊಂಡು "ಚಿನುಮಯ" ಪುಸ್ತಕವನ್ನು ನೀಡಿ, "ಓದು ಗುರು" ಬಹಳ ಚೆನ್ನಾಗಿದೆ, ಓದಿಸಿಕೊಂಡು ಹೋಗುತ್ತದೆ ಎಂದು ಹೇಳಿದ್ದರು.
ಅಂತೆಯೇ ಪುಸ್ತಕ ಓದಲು ಕುಳಿತ ನಾನು ಅಕ್ಷರಶಃ ಚಿತ್ತರಗಿ ಮಹಾಂತ ಶಿವಯೋಗಿಗಳ ಅಭಿಮಾನಿಯಾಗಿದ್ದೇನೆ.
ವಟುವಿನಿಂದ ಬೆಟ್ಟವಾಗುವರೆಗೆ ನಿಷ್ಠೆಯನ್ನು ಪ್ರಖರವಾಗಿಸಿಕೊಳ್ಳುತ್ತ ಸಾಗಿದ ಮಳೆಯಪ್ಪ ಎಲ್ಲೂ ಸ್ವಾರ್ಥಕ್ಕಾಗಿ, ಮೋಹಕ್ಕಾಗಿ, ಸ್ವಯಂ ಬೆಳವಣಿಗೆಗಾಗಿ, ಹೆಸರಿನ ಪ್ರಚಾರಕ್ಕಾಗಿ ನಡೆದದ್ದೇ ಇಲ್ಲ.
ಚಿತ್ತರಗಿ ಎಂಬ ಮಹಾಪೀಠಕ್ಕೆ ಒಡೆಯರಾಗುವ ಸದಾವಕಾಶ ಬಂದರೂ ಸೇವಕನಾಗಿ ಸೇವೆ ಮಾಡುತ್ತೇನೆ ಹೊರತು ಪೀಠಾರೋಹಣ ಅಸಾಧ್ಯ ಎಂದು ಪೀಠ ತೊರೆದ ವಟು, ದಿಟವಾಗಿ ಭಕ್ತರ(ಓದುಗರ) ಹೃದಯದ ಪೀಠವನ್ನು ಅಲಂಕರಿಸುತ್ತಾರೆ.
ಈ ಪೀಠಾಲಂಕಾರದ ಮುಂಚಿನ ಎಲ್ಲ ಸಮಯ ವಟುಯೋಗಿಯಾಗಿದ್ದ ಮಳೆಯಪ್ಪನ ಬದುಕು ಅದ್ಭುತ ಇತಿಹಾಸ. ಅವರ ನಡೆ ಮಾದರಿ, ನುಡಿ ಅನುಕರಣೀಯ.
ಈ ಪುಸ್ತಕ ಓದುವಾಗ ನೂರಾರು ಸಾಲುಗಳು ನೆನಪಿನ ಬುತ್ತಿಯಲ್ಲಿಟ್ಟು ಅಂತರ್ಗತ ವಾಗಿಟ್ಟುಕೊಂಡು ಬದುಕಿನುದ್ದಕ್ಕೂ ಹೆಕ್ಕಿ, ಹೆಕ್ಕಿ ಅವುಗಳ ಉದ್ದೇಶವನ್ನು ಅರ್ಥೈಸಿಕೊಂಡು ಪ್ರತಿ ಹೆಜ್ಜೆ ಹೆಜ್ಜೆಗೂ ಅಳವಡಿಸಿಕೊಂಡು ಬದುಕನ್ನು ಸಾಕ್ಷಾತ್ಕರಿಸಿಕೊಳ್ಳುವಂತಿವೆ. ಚಿತ್ತರಗಿ ಶ್ರೀ ಮಹಾಂತ ಶಿವಯೋಗಿಗಳ ಪರಮ ಪಾವನ ಬದುಕಿನ ಸಾರವನ್ನು ಕಾದಂಬರಿ ರೂಪದಲ್ಲಿ ಓದುಗರಿಗೆ ನೀಡಿದ್ದು, ಶ್ಲಾಘನೀಯವಾದುದಾಗಿದೆ ಮತ್ತು ಇದು ಓದುಗರ ಸೌಭಾಗ್ಯವೂ ಆಗಿದೆ.
- ಚಿನ್ಮಯಾನುಗ್ರಹ ದೀಕ್ಷೆ ಕಂಡ ಕಂಡವರಿಗೆ ಸಿಕ್ಕುದಲ್ಲ. ಅಂತ ಸೌಭಾಗ್ಯ ಆ ಸೂರ್ಯನಿಗೆ ಇಲ್ಲ. ಅಂತೆ ಶಾಂತಿ ಇಲ್ಲ, ಆತನ ಜೀವಕ್ಕೆ ಮುಕ್ತಿ ಇಲ್ಲ ಆತನ ಬಾಳಿಗೆ. ದಿನ ದಿನವೂ ಜನನ ಮರಣಗಳ ಕುತ್ತಿನಲ್ಲಿ ಕುದಿದು ಸುಡುತ್ತಿದ್ದಾನೆ.
- ಕಲ್ಲಿನಲ್ಲಿ ಕನಕ ತೆಗೆಯುವುದು ದೊಡ್ಡದಲ್ಲ. ಕಲ್ಲು ಮನದವರನ್ನು ಚಿನ್ನ ಬಾಳಿಗರನ್ನಾಗಿಸುವುದು ದೊಡ್ಡ ಕಾರ್ಯ.
- ಮದ್ದು ಕೊಟ್ಟು ಮರಳು ಮಾಡುವುದು ದೊಡ್ಡದಲ್ಲ ಮರವೆಯಲ್ಲಿ ಅರಿವು ತುಂಬಿ ಹರುಷ ಹುಡಿಯೇರಿಸಿ ಮರಳು ಮಾಡುವುದು ದೊಡ್ಡದು.
- ಜೀವರನ್ನು ಅಳಿಸುವುದು ದೊಡ್ಡದಲ್ಲ ಅಳುವವನನ್ನು ನಗಿಸುವುದು ದೊಡ್ಡದು.
ಹೀಗೆ ನೂರಾರು ಅದ್ಭುತ ಸಾಲುಗಳನ್ನೊಳಗೊಂಡು, ೩೦ ಭಾಗದಲ್ಲಿ ಸಂಪದ್ಭರಿತವಾಗಿ ರೂಪುಗೊಂಡ ಈ ಕೃತಿಯನ್ನು ನನ್ನ ಅಲ್ಪ ಮತಿಗೆ ತಿಳಿದಷ್ಟು ಪರಿಚಯಿಸಲು ನಾನಿಲ್ಲಿ ಪ್ರಯತ್ನಿಸುತ್ತೇನೆ. ಕೃತಿಯ ಸಂಪೂರ್ಣ ಸಾರವನ್ನು ಅರಿಯಲು, ಅರಿತದ್ದನ್ನು ಅರಗಿಸಿಕೊಳ್ಳಲು ತಾವುಗಳು ಕೃತಿಯನ್ನು ಓದಿರೆಂದು ಫ್ರಾರ್ಥಿಸುತ್ತ ಮಹಾಂತರ ಬದುಕನ್ನು ಅಕ್ಷರ ರೂಪದಿಂದ ಸ್ಮರಿಸುತ್ತಿದ್ಧೇನೆ..
****
ಮಳೆಯಪ್ಪ ಕೊಟ್ರಪ್ಪನ ತೋಟದಲ್ಲಿ ಕಾಯಕ ಮಾಡುವಾಗ ಅದನ್ನು ಕಂಡು,
- ಯೋಗಿಯ ಸನ್ನಿಧಾನ ಕರ್ತೃತ್ವದಲ್ಲಿ ಕೊಟ್ರಪ್ಪನ ಶರೀರ ತೇಲಿ ಹೋಗಿ, “ಸಂಗೀತಾನಂದ, ಬಸವತತ್ವಾನಂದ, ಕಾಯಕಾನಂದ” ಈ ಮೂರು ಆನಂದಗಳಲ್ಲಿ ಲೋಕದ ಅರಿವಿಲ್ಲದೆ ನಾದಲೋಲ ಶಿವ ನಾಟ್ಯವಾಡುವಂತೆ ಈ ಜಂಗಮ ಮೂರ್ತಿ ಹಗ್ಗದ ಮೇಲೆ ಕುಣಿಕುಣಿದು ಹಾಡುತ್ತಿರುವ ಈತ ಪ್ರತ್ಯಕ್ಷ ಶಿವನೇ! ಎಂದು ಕೊಟ್ರಪ್ಪ ಭಾವಿಸುತ್ತಾನೆ.
ನಂತರ ಯೋಗಿ ಕೊಟ್ರಪ್ಪನನ್ನು ಬಸವ! ಬಸವಪ್ಪ! ಎಂದಾಗ, ನನ್ನ ಹೆಸರು ಕೊಟ್ರಪ್ಪ ಬುದ್ಧಿ, ಬಸವ ಅಲ್ಲ ಎನ್ನಲು, ಯೋಗಿಗಳು,
“ಅಲ್ಲಪಾ, ಭಕ್ತಾ ಕೊಟ್ಟರಪ್ಪನಾರು, ಕಲ್ಯಣದಪ್ಪನಾರು, ಅದೇ ಬಸವಪ್ಪ ತಾನೆ?” ಎನ್ನುತ್ತಾರೆ.
ಮುಂದೆ ತೋಟದ ಕಾರ್ಯ ತನ್ನದು ತಾವು ಈ ಕೆಲ್ಸಾ ಮಾಡಿ ತಮ್ಮ ಈ ಬಂಗಾರದಂತ ಕೈನಾ ಹೊಲ್ಸ ಮಾಡಿಂಕೊಂಡಿರಿ ಎಂದು ಕೊಟ್ರಪ್ಪ ಹೇಳಲು,
“ಹುಚ್ಚ, ಕಾಯಕ ಮಾಡಿದರೆ ಕೈ ಹೊಲಸಾಗುವುದಿಲ್ಲಪಾ,
ಹುಲುಸಾಗುತ್ತದೆ. ಕೃಷಿ ಕರ್ಮ ಫಲ”
ಎಂಬ ಅದ್ಭುತ ಮಾತನ್ನು ಯೋಗಿಗಳು ಹೇಳುತ್ತಾರೆ.
“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ”
ಎಂಬ ಮಾತಂತೂ ಎಲ್ಲರೂ ಎದೆಯಲ್ಲಿಟ್ಟುಕೊಳ್ಳುವಂತದ್ದಾಗಿದೆ.
** ಈ ಕೃತಿಯಲ್ಲಿ ಶಿವಧರ್ಮದಲ್ಲಿ ಮೇರು ಸ್ಥಾನದಲ್ಲಿದ್ದ ಬಳ್ಳಾರಿಯ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸುತ್ತಾ, ಈಗಿನ ಪೀಳಿಗೆಗೆ ಬಳ್ಳಾರಿಯ ಘನತೆಯನ್ನು ತಿಳಿಸುತ್ತಾ ‘ಬಳ್ಳಾರಿಯು ಶಿವಮತದ ಉತ್ಕ್ರಾಂತಿಗೈದ ಮಹಾ ಸ್ಥಾನ’ವೆಂದು ತಿಳಿಸುತ್ತಾರೆ.
ಕ್ರಿ.ಶ 11ನೇಯ ಶತಮಾನದಲ್ಲಿ ಜೈನ ಧರ್ಮಾನುಯಾಯಿ ಜಿನಮಲ್ಲಶೇಠನು, ಶಿವಮತ ಪ್ರಭಾವಕ್ಕೊಳಗಾಗಿ ಶಿವದೀಕ್ಷೆ ಸ್ವೀಕರಿಸಿ, ಶಿವಭಕ್ತ ಮಲ್ಲಶೆಟ್ಟಿ ಎಂದು ಹೆಸರಾಗುತ್ತಾನೆ. ಹೀಗಿರಲು ಮಲ್ಲಶೆಟ್ಟಿಗೆ ಕಣ್ಣು ಬೇನೆ ಬಂದು ಕಣ್ಣು ಕಾಣದಂತೆ ಆಗುತ್ತದೆ. ಮಹಾವ್ರತಧಾರಿಯಾಗಿ ಶಿವಲಿಂಗವನ್ನು ಪೂಜಿಸದೆ ನಿತ್ಯ ಪ್ರಸಾದ ಸ್ವೀಕರಿಸದೇ ಇರುವಂತಹ ಸಂಪ್ರದಾಯಕ್ಕೆ ಬದ್ಧನಾದ ಮಲ್ಲಶೆಟ್ಟಿಗೆ ಪೂಜಾ ಸಂದರ್ಭದಲ್ಲಿ ಶಿವಲಿಂಗ ಎಲ್ಲಿರುವುದು ಎಂಬುದೇ ಕಾಣದಂತಹ ಪರಿಸ್ಥಿತಿ ಉಂಟಾದಾಗ, ಅಲ್ಲಿರುವಂತಹ ಕುತ್ಸಿತ ಗುಣದ ಮನುಷ್ಯರು ಒಂದು ಬೋರಲು ಹಾಕಿದ ‘ಬಳ್ಳ’ವನ್ನು ತೋರಿಸಿ “ಇದೇ ನೋಡು ಶಿವಲಿಂಗ! ಪೂಜಿಸು!” ಎಂದು ಹೇಳುತ್ತಾರೆ.
ಕಣ್ಣು ಕಾಣದ ಮಲ್ಲಶೆಟ್ಟಿ ಅವರ ಮಾತನ್ನು ನಂಬಿ ಡಬ್ಬು ಹಾಕಿದ ಬಳ್ಳವನ್ನೇ ಲಿಂಗವೆಂದು ಭಾವಿಸಿ ಪೂಜಿಸುತ್ತಾನೆ. ನಂತರದಲ್ಲಿ ಈ ಕುತ್ಸಿತ ಬುದ್ಧಿ ಜನರು, “ಲೋ ಕುರುಡ ಮಲ್ಲ! ನೀನು ಪೂಜಿಸಿದ್ದು ಲಿಂಗವನ್ನಲ್ಲ ಬೆಪ್ಪ! ಅದು ಬಳ್ಳ ನಿನ್ನ ವ್ರತ ಕೆಟ್ಟಿದೆ, ಕೆಟ್ಟಿದೆ!” ಎಂದು ಹಂಗಿಸಿ ಚಪ್ಪಾಳೆ ತಟ್ಟುತ್ತಾರೆ. ಆಗ ಗಾಬರಿಗೊಂಡ ಮಲ್ಲಶೆಟ್ಟಿಯು, “ಇಲ್ಲ ನಾ ಪೂಜಿಸಿದ್ದು ಶಿವಲಿಂಗವನ್ನೇ” ಎಂದು ಬಳ್ಳವನ್ನು ಕೈ ಮುಟ್ಟಿ ತೋರಿಸಿದಾಗ, ಅದು ಶಿವಲಿಂಗವಾಗಿ ಮಾರ್ಪಾಟು ಆಗಿರುತ್ತದೆ. ಇದನ್ನೆಲ್ಲಾ ಕಂಡ ಜನರು ಆಶ್ಚರ್ಯ ಚಕಿತರಾಗಿ “ಬಳ್ಳವನ್ನು ಶಿವಲಿಂಗ ಮಾಡಿದ ನೀನು ನಮಗೆ ಆರ್ಯ ನೀನು ಮಲ್ಲಾರ್ಯ. ನಿನ್ನಿಂದ ಇಲ್ಲಿ ಬಳ್ಳೇಶನಾದ ಶಿವನು ನಿನ್ನ ಹೆಸರಿನಲ್ಲಿ ಮಲ್ಲೇಶ್ವರನೆಂದು ಹೆಸರಾಗುತ್ತಾನೆ” ಎಂದು ಸರ್ವರೂ ಕೊಂಡಾಡುತ್ತಾರೆ.
ಅಂದಿನಿಂದ “ಬಳ್ಳ ಲಿಂಗವಾಯಿತು ಅರಿ! ಬಳ್ಳಾರಿ” ಎಂದು ಹೆಸರಾಯಿತು ಎಂಬ ಇತಿಹಾಸ ನಿಜವಾಗಿಯೂ ಓದುಗನನ್ನು ಪುಳಕಿತರನ್ನಾಗಿ ಮಾಡುತ್ತದೆ.
ಈ ಬಳ್ಳಾರಿಯಲ್ಲೇ ಮತ್ತೊಬ್ಬ ಯೋಗಿಯ ಭಕ್ತ, ಶಿವ ಭಕ್ತ, ಶರಣಶ್ರೇಷ್ಠ ಮಹಾನ್ ವ್ಯಕ್ತಿತ್ವ ಹೊಂದಿದವರೆಂದರೆ ಸಕ್ಕರೆ ಕರಡೆಪ್ಪನವರು. “ಚಿನುಮಯ” ಕಾದಂಬರಿಯಲ್ಲಿ, ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸಿದವರು ಇವರು.
ಶ್ರೀ ವಿಜಯ ಮಹಾಂತರನ್ನು ಸಕ್ಕರೆ ಕರಡೆಪ್ಪನವರ ಹೊರತಾಗಿ ಚಿಂತಿಸಲು ಸಾಧ್ಯವೇ ಇಲ್ಲ ಎನಿಸುತ್ತದೆ. ಬಳ್ಳಾರಿಯಲ್ಲಿ ಪ್ರಾರಂಭವಾದ ಇವರಿಬ್ಬರ ಒಡನಾಟ ಮಹಾಂತರು ಚಿತ್ತರಗಿ ಪೀಠಕ್ಕೆ ಬಂದ ನಂತರವೂ, ಅಷ್ಟೇ ಅಲ್ಲ ಕರಡೆಪ್ಪನವರು ಲಿಂಗೈಕ್ಯರಾದ ನಂತರವೂ ಮಹಾಂತರ ಆತ್ಮಬಂಧುವಾಗಿ ಇರುತ್ತಾರೆ. ** ಮುಂದೆ ಒಂದು ಕಡೆ “ಭಕ್ತಿ ಮುಂದೆ ಮುಂದೆ, ಶಕ್ತಿ ಹಿಂದೆ ಹಿಂದೆ” ಎಂಬ ವಾಕ್ಯ ಬರುತ್ತದೆ.
— ಇಲ್ಲಿ ಭಕ್ತಿಗೆ ರಾಯಭಾರಿಯೇ ಶಿವಯೋಗಿಗೆ ಮೊದಲು ಸಂಧಿಸಿದ ಕೊಟ್ರಪ್ಪ,
— ಶಕ್ತಿಗೆ ರಾಯಭಾರಿ ಈ ವಟುಯೋಗಿ ಮಳೆಯಪ್ಪಾರ್ಯ, ಅಂದರೆ ಮಹಾಂತರು”.
ಕರಡೆಪ್ಪನವರ ಐಸಿರಿಯ ರಾಜಾತಿಥ್ಯ ಇದ್ದರೂ ಕೊಟ್ರಪ್ಪನ ಗುಡಿಸಲಿನ ಅಂಬಲಿಯ ರುಚಿ ಬಯಸಿ ನಡೆದರು ಶಿವನಂತೆ ಎಂದು ಹೇಳುತ್ತಾರೆ.
ಮಳೆಯಪ್ಪನವರ ಭಿಕ್ಷಾ ಲೀಲೆಯೇ ಅದ್ಭುತವಾಗಿ ಲೇಖಕರು ವರ್ಣಿಸಿದ್ದಾರೆ. ಪಂಚ ಭಿಕ್ಷಾವೃತ್ತಿ ನುಡಿ-ಮಂತ್ರಗಳನ್ನು ಹೇಳುತ್ತ ಪಂಚ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡುತ್ತಾರೆ. ಇಲ್ಲಿ ಜಾತಿಯಿಂದ ಮನೆಗಳನ್ನು ಅರಸದೆ ನೀತಿ-ನೇಮಾಚರಣೆಯುಳ್ಳವರಾದ ಎಲ್ಲ ಮತೀಯರ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ, ಸತ್ಪಾತ್ರರ ಬಳಿ ಜಾತ್ಯಾತೀತವಾಗಿ ಇರಬೇಕೆಂಬುದನ್ನು ತೋರಿಸಿದ್ದಾರೆ. ಪ್ರತಿ ಮನೆಯಲ್ಲೂ ಒಂದು ಹಿಡಿ ಅಕ್ಕಿ ಮಾತ್ರ ಪಡೆದು ಸಾಗುವ ಯೋಗಿ ಎಲ್ಲರನ್ನೂ ಅವರವರ ಆಸೆಯನ್ನರಿತು ಹರಸುತ್ತಾನೆ. ಮುಂದೆ ಸಾಗುತ್ತಾನೆ.
ಒಲ್ಲದ ಮನದಿಂದ ಭಿಕ್ಷೆ ನೀಡ ಬಂದವರ ಭಿಕ್ಷೆ ಸ್ವೀಕರಿಸದೆ ಮುನ್ನಡೆಯುವ ಸಂದರ್ಭವನ್ನು ಲೇಖಕರು, ಆಯ್ದಕ್ಕಿ ಲಕ್ಕಮ್ಮನ ಮನಕ್ಕೆ, ಗಂಟು ಮೊಗದಿ ಭಿಕ್ಷೆ ನೀಡಬಂದವರ ಮನಕ್ಕೆ ಹೋಲಿಸಿ ವಚನದೊಂದಿಗೆ ಉತ್ತಮವಾಗಿ ಬರೆದಿದ್ದಾರೆ.
** ಮಂಗ ಮಂಗ ಎಂದು ಬಯ್ಯುವ ಹಿನ್ನೆಲೆ ಎಂದರೆ ಮಂಗನ ಸಮತಾ ಗುಣ ರೂಢಿಸಿಕೊ ಎಂದು ಹೇಳುವುದು ಎಂಬುದನ್ನು ಉದಾಹರಣೆ ಮೂಲಕ ಲೇಖಕರು ಮನಮುಟ್ಟುವಂತೆ ಹೇಳಿದ್ದಾರೆ. - ಮುಂದೆ ಕರಡೆಪ್ಪ ಗಂಗಮ್ಮ ದಂಪತಿಗಳು ಶಿವಯೋಗಿ ಮಳೆಯಪ್ಪಾರ್ಯರನ್ನು ಅವರ ಮನೆಗೆ ಕರೆಯಲು ಹೋದದ್ದು, ಜೋಡುಗಳನ್ನು ನೀಡಿದ್ದು, ಅವುಗಳ ಬಳಕೆ, ಆ ಜೋಡುಗಳು ಈಡಾಗುವುದು, ಅದರ ನಂತರ ಕರಡೆಪ್ಪನವರ ಮನೆಗೆ ಮಳೆಯಪ್ಪಾರ್ಯರು ತೆರಳಿದ್ದು ಎಲ್ಲವೂ ಕುತೂಹಲಕಾರಿ ಘಟನೆಗಳಾಗಿ, ಕಣ್ಣ ಮುಂದೆ ನಡೆಯುತ್ತಿರುವಂತೆ ಲೇಖಕರು ಚಿತ್ರಿಸಿದ್ದಾರೆ.
- ಒಕ್ಕಲು ಬದುಕಿನ ಬೇಸಾಯಕ್ಕೆ ಹೆಸರಾಗಿ ಬಾಳಿದ ಸಸಿವಾಳ ಗ್ರಾಮವು ಬರಗಾಲಕ್ಕಿಡಾಗಿ ಭೂಮಿ ಬೆಳೆಯಿರದೆ ಬರಿದಾದಾಗ, ಊರ ಜನ “ಮಠದಯ್ಯ ವೀರಯ್ಯ”ನವರ ಸಲಹೆಯಂತೆ ರುದ್ರಾಭಿಷೇಕ, ಜಂಗಮ ಪೂಜೆ, ಗಣಾರಾಧನೆ ಮಾಡುತ್ತಾರೆ.
“ಗಣಾರಾಧನೆ ಮಾಡಿಸಿರಿ ಮಳೆ ಬರುತ್ತದೆ” ಎಂದು ಹೇಳಿದ ವೀರಪ್ಪಯ್ಯನವರ ಮಾತಿನಂತೆ ಗಣಾರಾಧನೆ ಮುಗಿಯುವ ಹೊತ್ತಿಗೆ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಇತ್ತ ವೀರಪ್ಪಯ್ಯನವರ ಹೆಂಡತಿ ಗೌರಮ್ಮನವರಿಗೆ ಹೆರಿಗೆ ಆಗಿ ಗಂಡು ಮಗು ಆಗುತ್ತದೆ. ಮಳೆ ಜೊತೆಗೆ ಹುಟ್ಟಿ ಬಂದ ಕಂದಯ್ಯ “ಮಳೆಯಯ್ಯ” ಎನ್ನುತ್ತಾರೆ.
ಈ ಮಳೆಯಯ್ಯನೇ ಮಳೆಯಪ್ಪಯ್ಯಾ! ಮಳೆಪ್ಪಯ್ಯ!, ಈ ಮಳೆಯಪ್ಪನೇ ನಮ್ಮ “ವಿಜಯ ಮಹಾಂತ ಶಿವಯೋಗಿ”ಗಳು ಎಂದು ತಿಳಿದಾಗ ಓರುಗನಿಗೆ ಆಗುವ ಭಾವುಕತೆ ಹೃದಯ ತುಂಬುತ್ತದೆ. ಖಂಡಿತ ಓದುಗನು ಈ ಸನ್ನಿವೇಶ ಓದಿ ಭಾವನಾತ್ಮಕವಾಗಿ ಕಳೆದುಹೋಗುತ್ತಾನೆ.
** ಮುಂದೆ ಚಿತ್ತರಗಿ ನಿರಂಜನ ಪೀಠದ ಪರಮ ಭಕ್ತರಾದ, ವಿಜಾಪುರದ ಅಮರಾವತಿ ಮನೆತನದ ರಾಮಪ್ಪದೇಸಾಯಿಗಳ ಆಗಮನ, ಅವರ ಸಂಸ್ಥಾನದ ವರ್ಣನೆ ಮನಮುಟ್ಟುವಂತಿದೆ. ಈ ರಾಮಪ್ಪ ದೊರೆಯೇ ಚಿತ್ತರಗಿ ಪೀಠಕ್ಕೆ ಸೂಕ್ತವಾದ ಪೀಠಾಧಿಪತಿಯನ್ನು ಅರಸಿ ಬರುತ್ತಾರೆ, ಸೂಕ್ತವಾದವರನ್ನು ಆರಿಸುತ್ತಾರೆ. ಅನೇಕ ವಟುಗಳು ಪೀಠ ಏರಲು ನಾ ಮುಂದು ತಾ ಮುಂದು ಎಂದು ಬಂದರೆ ರಾಮಪ್ಪ ದೇಸಾಯಿಯವರು ಅವರ್ಯಾರನ್ನೂ ಪ್ರೋತ್ಸಾಹಿಸದೆ, ತಕ್ಕ ಯೋಗಿಯನ್ನು ಹುಡುಕುತ್ತಲೇ ಸಾಗುತ್ತಾರೆ. ಆಗ ಕರಡೆಪ್ಪನವರ ಮನೆಯಲ್ಲಿ ಸಿಕ್ಕವರೇ ಈ ಮಳೆಯಪ್ಪಾರ್ಯರು.
ಅವರನ್ನೂ ಕಂಡೊಡನೆ, ರಾಮಪ್ಪ ದೊರೆಗಳಿಗೆ ಮೈಯಲ್ಲಿ ವಿದ್ಯುತ್ ಸಂಚರಿಸಿದಂತಾಗಿ,
“ಮಹಾಲಿಂಗಾಕೃತಿಯ ಕನ್ನಡಿಯ ಕರಿಯಂತೆ ಇಲ್ಲಿ ಕಿರಿದಾಗಿದೆ. ಬ್ರಹ್ಮಾಂಡದಿಂದ ಅತ್ತತ್ತ ಆವರಿಸಿದ ಶ್ರೀ ಮುಕುಟವೀಗ ಜೀವಂಗಳಿಗೆ ಗೋಚರಿಸಿದೆ. ಪಾತಾಳದಿಂದತ್ತತ್ತ ಬಳಸಿದ ಶ್ರೀ ಪಾದಗಳೀಗ ಭೂಮಿಯ ಮೇಲೆ ಓಡಾಡುತ್ತಿವೆ” ಎಂದೆನ್ನಿಸಿತಂತೆ.
ಇವರೇ ನಮ್ಮ ಚಿತ್ತರಗಿ ಪೀಠಕ್ಕೆ ಅರ್ಹರೆನಿಸಿ ಕೈ ಮುಗಿದು, ಭಿನ್ನವಿಸುತ್ತಾರೆ.
ಪ್ರಾರಂಭದಲ್ಲಿ ಪೀಠ ಏರಲು ಸುತಾರಾಂ ಒಪ್ಪದ ಶಿವಯೋಗಿಗಳು ಅನೇಕ ವೃತ್ತಾಂತ, ಘಟನಾವಳಿಗಳ ತರುವಾಯ, ವೇದ ದೀಕ್ಷೆ, ಮಂತ್ರ ದೀಕ್ಷೆ, ಕ್ರಿಯಾ ದೀಕ್ಷೆಗಳನ್ನು ಸಂಸ್ಕಾರಯುತವಾಗಿ ಸ್ವೀಕರಿಸಿ ಮಳೆಯಪ್ಪಾರ್ಯರು ಶ್ರೀ ಶ್ರೀ ಶ್ರೀ ವಿಜಯ ಮಹಾಂತರಾಗಿ ಪೀಠಾರೂಢರಾಗಿ ಜಗತ್ಪ್ರಸಿದ್ಧರಾಗುತ್ತಾರೆ. ನಂತರದಲ್ಲಿ ಘನಮಠದಾರ್ಯರ ಆಗಮನ, ಮಾತುಗಳು, ಪ್ರವಚನ, ಶಿವಧ್ಯಾನ, ಹಿಂದು ಮಸ್ಲಿಂ ಬಾಂಧವ್ಯ, ಪೈಗಂಬರೇಶರಾದುದು, ಅಲ್ಲ! ಅಲ್ಲಾ!! ಎನ್ನುವ ಒಂದೆ ಶಿವಾಲ್ಲಮರಂತಾಗಿ ವಿಜಯ ಮಹಾಂತರು, ಹಜರತ ಸಾಹೇಬರು ಒಂದಾಗಿ ಐಕ್ಯತೆಯ ಸಂದೇಶ ನೀಡುತ್ತ ಶೋಭಿಸುತ್ತಾರೆ.
** ಮುಂದೆ ಸಸಿವಾಳ ಗ್ರಾಮದ ಗುರುತಾಯಿ ಗೌರಮ್ಮ ಮರುಹುಟ್ಟಿನಲ್ಲಿ ಮಹಾಂತರ ಮಠಕ್ಕೆ ಆಗಮಿಸಿ ಮಠದಮ್ಮ, ಮಹಾಂತಮ್ಮ ಆದುದು, ಅದರ ಹಿನ್ನೆಲೆ, ಗೌರಮ್ಮನೇ ಈ ಹಿಂದೆ ಮರಣದ ಸಮಯದಲ್ಲಿ ಹೇಳಿದ ಮಾತು ಎಲ್ಲವೂ ಓದುಗನ ಸ್ಮೃತಿಪಟಲದಿಂದ ಎಂದಿಗೂ ಕಳಚದಂತೆ ಲೇಖಕರು ಬರೆದಿದ್ದಾರೆ.
ಅವರ ವಾಣಿಯಂತೆ, “ಮಹಾಂತಮ್ಮ” ಮಹಾಂತರ ಅಂತಿಮ ಬದುಕಿನವರಿಗೆ ಗೋಮಾತೆ ರೂಪದಲ್ಲಿ ಜೊತೆ ಇರುತ್ತಾಳೆ.
ಈ ಗೋ ಮಾತೆ, “ಮಹಾಂತಮ್ಮ”ನ ಹಿನ್ನೆಲೆ, ಮತ್ತೆ ಅವತರಿಸಿ, ಮಹಾಂತರಿಗೆ ಜೊತೆಯಾದ ರೀತಿ ಸೋಜಿಗವೂ ಹೌದು, ಸುಂದರವೂ ಹೌದು. - ಬಾದವಾಡಗಿಯಲ್ಲಿ ಮಹಾಂತರ ದಯೆ, ಕರುಣೆ, ಕ್ಷಮಾ ಗುಣದಿಂದ ಕುಲಕರ್ಣಿ ಗೋವಿಂದರಾವ ಮಾಸ್ತರನ ಹುಂಬತನ ಕರಗಿದ್ದು, ಮಹಾಂತರರಿಗೆ ಗೋವಿಂದರಾವ ಶರಣಾಗಿದ್ದು. ಜನಿವಾರ – ಶಿವದಾರ ಒಂದಾದ ಘಟನೆ ನಿಜವಾಗಿಯೂ ಮನಮುಟ್ಟುವಂತದ್ದು, ಮನಃಪರಿವರ್ತಿಸುವಂತಿದೆ.
- ಅಂತಿಮ ಪಯಣದಲ್ಲಿ ಮಹಾಂತರು ಶ್ರೀ ಕ್ಷೇತ್ರ ಪಂಡರಪುರದ ವಿಠೋಬನ ದರ್ಶನ ಪಡೆಯುತ್ತಾರೆ. ಅಲ್ಲೇ ಕದುರೆ ಖರೀದಿಸಿ ಕುದುರೆ ಸವಾರಿ ಮಾಡುತ್ತಾರೆ. ಬಹಳ ಹೊತ್ತಿನ ನಂತರ ಕುದುರೆ ಸವಾರಿ ಮುಗಿಸಿ ಬಂದ ಮಹಾಂತರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಕ್ಷೀಣಿಸಿದ ಆರೋಗ್ಯ ಕ್ಷೀಣಿಸುತ್ತಲೇ ಸಾಗುತ್ತದೆ. ಎಷ್ಟೇ ವೈದ್ಯೋಪಚಾರವಾದರೂ ಫಲಗೊಡದೆ ಅಂಗ ದೇಹ ಲಿಂಗೈಕ್ಯವಾಗುತ್ತದೆ. ಭಕ್ತರನ್ನು ಕಣ್ಣೀರಗಡಲಲ್ಲಿ ತೇಲಿಸಿ ಮಹಾಂತರ ಅಂಗ ಜಂಗಮ ಲಿಂಗದಲ್ಲಿ ಲೀನವಾಗುತ್ತದೆ. ಚಿತ್ತರಗಿ ಪೀಠ ಅಕ್ಷರಶಃ ಅನಾಥವಾಗದಂತಾಗುತ್ತದೆ.
- ಅಂದು ಬಹುರ್ಮುಖಿ. ಇಂದು ಅಂತರ್ಮುಖಿ. ಅಂದು ಶೂನ್ಯರಾಧನೆಯಲ್ಲಿದ್ದ. ಇಂದು ಶೂನ್ಯವೇ ತಾನಾಗಿದ್ದ. ಎಂದು ಮಹಾಂತರ ಗೈರನ್ನು ಲೇಖಕರು ಓದುಗರ ಹೃದಯ ತಟ್ಟುವಂತೆ ಬರೆದಿದ್ದಾರೆ.
*
ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ದಿವ್ಯ ಚರಿತ್ರೆಯನ್ನು ಕಾದಂಬರಿಯಾಗಿ “ಚಿನುಮಯ” ಶೀರ್ಷಿಕೆಯಲ್ಲಿ ಸಾರ್ವಕಾಲಿಕವಾಗಿ ಮನೆ ಮಾತಾಗುವಂತೆ ಶ್ರೀ ಗುರುಸ್ವಾಮಿ ಕಲಕೇರಿ ಅವರು
ರಚಿಸಿದ್ದಾರೆ.
ಇಲ್ಲಿ ಬರುವ ಸನ್ನಿವೇಶಗಳಿಗೆ ತಕ್ಕುದಾಗಿ ಅನೇಕ ಸತ್ಸಂದೇಶಗಳನ್ನು, ಅತ್ಯಂತ ಮಹತ್ವಪೂರ್ಣ ಸಾಲುಗಳೊಂದಿಗೆ ವಿಶ್ಲೇಷಿಸಿ ನಿಜವಾಗಿಯೂ ಇಹ ಪರ ಕಾರ್ಯ ಮಾಡಿದ್ದಾರೆ ಎನಿಸುತ್ತದೆ.
ಸಾಹಿತ್ಯಾಸಕ್ತರೊಂದಿಗೆ, ಸಾಹಿತ್ಯಾಸಕ್ತರಲ್ಲದೇ ಇರುವ ಅನೇಕ ಆಸ್ತಿಕ ಹೃದಯಗಳು ಈ ಕೃತಿಯನ್ನು ಓದಲೇ ಬೇಕು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವೈಚಾರಿಕವಾಗಿ, ಸಾಂಪ್ರದಾಯಿಕವಾಗಿ ನಮ್ಮನ್ನು ನಾವು ಉತ್ತಮವಾಗಿ ಜೀವಿಸುವಂತೆ ಮಾಡುವಷ್ಟು ನಮ್ಮಲ್ಲಿ ಬದಲಾವಣೆ ತರುವಂತಹ ಕೃತಿ ಇದಾಗಿದೆ.
ಇಂತಹ ಮೇರು ಕೃತಿಯನ್ನು ಕೊಟ್ಟು, ಓದು ಗುರು ಎಂದು ಹೇಳಿದ ಶ್ರೀಯುತ ಶಶಿಕಾಂತ ಕಾಡ್ಲೂರ್ ಸರ್ ಅವರಿಗೆ ಈ ಲೇಖನವನ್ನು ಅರ್ಪಿಸುತ್ತ ನನ್ನ ಬರಹಕ್ಕೆ ವಿರಾಮ ನೀಡುತ್ತೇನೆ.
ಯಾವುದೇ ಐತಿಹಾಸಿಕ ಹಿನ್ನೆಲೆ ತಿಳಿಯದೇ, ಅಧ್ಯಯನ ಮಾಡದೇ, ಕೇವಲ ಈ ಕೃತಿಯನ್ನು ಮಾತ್ರ ಓದಿ ನನ್ನ ಮನದ ಭಾವನೆಯನ್ನು ಅಕ್ಷರರೂಪಕ್ಕಿಳಿಸಿದ್ದು; ತಪ್ಪು ಒಪ್ಪುಗಳನ್ನು ಯಥಾವತ್ತಾಗಿ ತಿಳಿಸಿದರೆ ವಿನಮ್ರವಾಗಿ ಸ್ವೀಕರಿಸುತ್ತೇನೆ.
ಇಲ್ಲಿ ಕೇವಲ ಕೆಲವು ಸನ್ನಿವೇಶ, ಸಂದರ್ಭ, ಶ್ರೀ ವಿಜಯ ಮಹಾಂತರ ಕೆಲವು ಮಹಿಮೆಗಳನ್ನು ಮಾತ್ರ ಉಲ್ಲೇಖಿಸಿದ್ದು ಸಂಪೂರ್ಣ ಚರಿತ್ರೆ ತಿಳಿಯಲು ಕೃತಿಯನ್ನು ಓದಿ ಎಂದು ಪ್ರಾರ್ಥಿಸುತ್ತೇನೆ. - ————————————————————————-
- ವರದೇಂದ್ರ ಕೆ ಮಸ್ಕಿ




