ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ʼಮಳೆಯಲಿ ನಿನ್ನ ಜೊತೆಯಲಿʼ


ಚಿತ್ರಕೃಪೆ- ಚಾಟ್ ಜಿಪಿಟಿ
ಗೆಳೆಯ ನೀ ಎಡೆಬಿಡದೆ ಸುರಿಯುವ ಮಳೆಯಂತೆ
ಸುರಿಸುವೆ ನೀ ಪ್ರೀತಿಯನು ಕಂತೆ ಕಂತೆ ಕಂತೆ
ಸಾಕೆನಿಸುವಷ್ಟು ತುಂಬುವ ಧರಣಿಯೊಡಲಿನಂತೆ
ಮೊಗೆದಷ್ಟು ತುಂಬುವುದು ನಿನ್ನ ಪ್ರೀತಿ ಕಡಲಿನಂತೆ
ಭೂರಮೆಗೆ ಸಿಹಿ ಮುತ್ತನಿಟ್ಟ ಮಳೆ ಹನಿಯಂತೆ
ನಿನ್ನ ಪ್ರೀತಿ ಹನಿಗೆ ನಾನಾದೆ ಅರಳಿದ ಹೂವಿನಂತೆ
ವರ್ಷಧಾರೆಗೆ ಧರಣಿ ನಲಿದು ಹಸಿರಾದಂತೆ
ನನ್ನ ಮನವಾಗಿದೆ ಗರಿಗೆದರಿದ ನವಿಲಿನಂತೆ
ಧರೆಗಿಳಿದ ಮಳೆ ಹನಿಯದು ಸ್ವಾತಿ ಮುತ್ತಾದಂತೆ
ನಿನ್ನ ಪ್ರೀತಿಯದು ಬೋರ್ಗರೆವ ಜಲಪಾತದಂತೆ
ನಾ ನೆನೆವೆ ನಿನ್ನ ಪ್ರೀತಿ ಹನಿಗೆ ಕೊಡೆ ಹಿಡಿಯದಂತೆ
ಮಳೆಯಲಿ ನಿನ್ನ ಜೊತೆಯಲಿ ಸದಾ ನೆರಳಿನಂತೆ
ಬಾ ಗೆಳೆಯ ನೆನೆಯೋಣ ಕೊಡೆಯರಳಿಸದಂತೆ
ಮೆಲುಕೋಣ ಪ್ರೀತಿಯುದಯಿಸಿದ ಕ್ಷಣವ ಜೇನಸವಿದಂತೆ
‘ ಮಧು’ರವಾದ ಈ ಪ್ರೀತಿ ಹಾಲು ಜೇನು ಬೆರೆತಂತೆ
ಇರುವೆ ನಿನ್ನಲೊಂದಾಗಿ ನದಿ ಕಡಲನೆ ಬೆರೆತಂತೆ
ಮಧುಮಾಲತಿ ರುದ್ರೇಶ್




ಧನ್ಯವಾದಗಳು ತಮಗೆ