ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಸೆಗಳ ಸುಳಿಯಲಿ ಬಂಧಿ ನೀ ಮನವೇ
ಕನಸುಗಳ ಹೊಳೆಯಲಿ ಸೆಳೆತ ನೀ ಮನವೇ
ಹುಚ್ಚು ಮನವೇ ಪೆಚ್ಚು ಮನವೇ
ಮೂಕ ಮೌನದಲೇ ಮಾತಾಡೋ ಮನವೇ
ಸಹಿಸಲಾರೆ ಏನನೂ ಸಂಬಾಳಿಸಲಾರೆ
ನೋವು ನಲಿವು ಒಲವು ಗೆಲುವನು//

ಬೇಕೆನುವ ಭಾವ ಬಯಕೆಗಳಾ ಕೊರಗಿನಲಿ
ಸಾಕೆನುವ ಭಾವ ಗೆಲುವಿನೆಂಬ ಹಠದಲಿ
ದಿಟವನರಿಯದೆ ಚಡಪಡಿಕೆಯಲಿ
ದಡಬಡಿಸುತಲೇ  ದಣಿಯುವುದು
ಅರಿವಿಗೆ ಅನುವು ಮಾಡಿ ಕೊಡದೇ
ತಾಳುವಿಕೆ ಇರದೇ ತಾಪ ಮೀರದೇ
ಸದಾ ಚಿತ್ತ ಚಂಚಲತೆಯಲಿ ಸುತ್ತುತಲೇ ಇಹುದು//

ಗತ್ತು ತೋರುವುದೊಮ್ಮೆ
ಮೆತ್ತಗಾಗುವುದೊಮ್ಮೆ
ಅತ್ತು ಕರೆಯುತ ಸುಸ್ತಾಗುವ
ಪರಿ ಮತ್ತೊಮ್ಮೆ
ದಿಕ್ಕುಗಾಣದೆ ತಿರುಗುವುದು
ಹೊತ್ತುಗಳೆಯದೇ ಕೊರಗುವುದು
ಪರಿತಾಪ ಸಂತಾಪದೇ ಗೊಗರೆಯುತಲೇ
ಗೊಣಗಾಡುತಲೇ ಕಾಲ ಕಳೆವುದು//

ತಳ ಬುಡ ಇಲ್ಲದ ಆಸೆಗಳಾ ಮೂಟೆ
ದಿಕ್ಕು.ಗಾಣದೇ ತಿರುಗುವ ರಾಟೆ
ಬಿಡು ಬಿಡು ಮನವೇ
ತಡವರಿಕೆ ತಾಕಲಾಟ ತೊಳಲಾಟ
ಬಿಂಕು ಬಿನ್ನಾಣ ಬೆಡಗಿನ ನೋಟ
ಇರುವುದೊಂದೇ ಜನುಮ
ಅನುಭವಿಸು  ಆತ್ಮಾಭಿಮಾನ
ನಿನ್ನಭಿಮಾನಕೆ  ಕುಂದು ಕೊರತೆಯಾಗದಂತೆ//

ನಿಲ್ಲು ಮನವೇ ಅಲ್ಲಲ್ಲಿ
ಗೆಲ್ಲು ಮನವೇ ನಿಜ ಒಲವಲ್ಲಿ
ಮೆಲ್ಲು ಮನವೇ ಸಿಹಿ ಕಹಿಯ
ಬೇವು ಬೆಲ್ಲದಂತೆ
ನಿನ್ನಾಟಕೆ ಹಾಕು ಬೇಲಿ
ಕಳೆ ಕ್ಷಣಗಳ ನಲಿವಿನಲಿ
ಬಂದದ್ದೆಲ್ಲ ಬರಲಿ ಇರುವಂತೆಲ್ಲ ಇರಲಿ
ಸೋಲದಿರು ಕಂಗೆಡದಿರು ಮನವೇ//


About The Author

1 thought on “ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ “ಆಸೆಗಳ ಸುಳಿ””

  1. Dr Jayappa Honnali

    ಚೆನ್ನಾಗಿದೆ…
    ಹೃನ್ಮನಪೂರ್ವಕ ವಂದನೆಗಳು..!
    ಆತ್ಮಪೂರ್ವಕ ಅನಂತ ಅಭಿನಂದನೆಗಳು..!

Leave a Reply

You cannot copy content of this page

Scroll to Top