ಗಜಲ್ ಲೋಕ
ಜುಗಲ್ ಬಂದಿ ಗಜಲ್
ಅರುಣಾ ನರೇಂದ್ರ
ಡಾ.ವೈ ಎಂ ಯಾಕೊಳ್ಳಿ



ಗಜಲ್
ನೀ ಹೀಗೆ ನೋಡದಿರು ಮತ್ತಿನಲ್ಲಿ ಕಣ್ಣು ಮುಚ್ಚಿವೆ
ಬೆರಳ ಸ್ಪರ್ಶಕ್ಕೆ ಮೊಗ್ಗಿನೆದೆಯ ಪಲಕು ಬಿಚ್ಚಿವೆ
ಮುತ್ತು ಮಳೆಗೆ ತೊಯ್ದು ಭುವಿಯ ಮೈ ನಡುಗಿದೆ
ಬಾನ ಬಿಸಿ ಅಪ್ಪುಗೆಗೆ ದಂತ ತುಟಿಯ ಕಚ್ಚಿವೆ
ಕಣ್ಣಲ್ಲೇ ಕರೆದಾಗ ಅಲೆಗಳಿಗೂ ಹೊಸ ಹುರುಪು
ಮನದ ಮೂಲೆ ಮೂಲೆಗೂ ನೆನಪು ಬಣ್ಣ ಹಚ್ಚಿವೆ
ಭುಜ ಕುಣಿಸಿ ನೀ ನಕ್ಕಾಗ ನವಿಲು ಕೇಕೆ ಹಾಕುತ್ತದೆ
ಮದನ ಹೂಡಿದ ಹೂ ಬಾಣ ನೇರ ಎದೆಗೆ ಚುಚ್ಚಿವೆ
ಅಮರ ಪ್ರೇಮಿಗಳ ಹೆಜ್ಜೆ ಗುರುತು ಕಂಡಿದ್ದಾಳೆ ಅರುಣಾ
ಮಾತು ಕೇಳಲೊಲ್ಲದ ಖೊಟ್ಟಿ ಹರೆಯದ ಬಯಕೆ ಹೆಚ್ಚಿವೆ
ಅರುಣಾ ನರೇಂದ್ರ

ಗಜಲ್
ನೀ ಹೀಗೆ ಕಾಡದಿರು ಕಣ್ಣ ನೋಟಕ್ಕೆ ಭಾವ ಬೆಚ್ಚಿವೆ
ಎದೆಯ ಒಳಗೆ ನೂರು ವೀಣೆ ಮೀಟಿ ರಾಗ ಹೆಚ್ಚಿವೆ
ಪ್ರೀತಿಯ ಹೂ ಮಳೆಯಲಿ ತೋಯ್ದು ನಾ ಧನ್ಯನಾದೆ
ತೋಳಿನಲಿ ಅಪ್ಪಿ ಮುದ್ದಾಡುವ ಕನಸು ಸುರುಳಿ ಬಿಚ್ಚಿವೆ
ನೀ ಕೊಟ್ಟ ಮುತ್ತುಗಳ ನಾ ಹೇಗೆ ಲೆಕ್ಕವಿಡಲಿ ಹೇಳು
ಕಳೆದ ದಿನದ ಪ್ರೀತಿ ನೆನಪು ಮತ್ತೆ ಮನಕೆ ಚುಚ್ಚಿವೆ
ಸಾಗರದಿ ನದಿ ಸೇರುವಂತೆ ಸೇರಿಬಿಡು ನನ್ನೊಳಗೆ
ಉಸಿರಿನ ಪ್ರತಿ ಏರಿಳಿತವು ಬಯಸಿ ನಿನ್ನ ನೆಚ್ಚಿವೆ
ಜೋಗಿ ಬರೆದ ಕವಿತೆ ಪದ ಪದಕೂ ನೀನೆ ಸಾಕ್ಷಿ ಗೆಳತಿ
ಬಾಳ ಬಟ್ಟೆಯಲ್ಲಿ ದಿನದ ಕ್ಷಣ ಕ್ಷಣವೂ ನಿನ್ನ ಮೆಚ್ಚಿವೆ
ಡಾ.ವೈ.ಎಮ್.ಯಾಕೊಳ್ಳಿ
ಅರುಣಾ ನರೇಂದ್ರ
ಡಾ.ವೈ ಎಂ ಯಾಕೊಳ್ಳಿ



