ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

‘ ಇಡೀ ಜಗತ್ತು ಆಕೆಯನ್ನು ರಾಜಕುಮಾರಿ ಎಂದು ಕರೆದು ಗೌರವಿಸುತ್ತದೆ. ಆದರೆ ನನಗೆ ಮಾತ್ರ ಆಕೆ ನನ್ನ ನೋವಿನಲ್ಲಿ ಕೈ ಹಿಡಿದು ನಡೆಸಿದ ದೇವತೆ,  ನಾನು ಎದ್ದು ನಿಲ್ಲಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನನ್ನ ಕುಟುಂಬವನ್ನು ಸಾಕಿ ಸಲಹಿದ ವ್ಯಕ್ತಿ.ನನ್ನ ಕುಟುಂಬದ ಹೃದಯವೇ ಆಕೆ. ನನ್ನ ದೇಹಕ್ಕೆ ಆಕೆಯೇ ಆತ್ಮ…. ಹೀಗೆಂದು ಅಲ್ಲಿ ನೆರೆದಿದ್ದ ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಜನರ ಮುಂದೆ ಮಾತನಾಡಿದ್ದು ಬೇರಾರೂ ಅಲ್ಲ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎಂದು ಹೆಸರಾದ ಬ್ರಿಟನ್ ನ ರಾಜಕುಮಾರ ಪ್ರಿನ್ಸ್ ವಿಲಿಯಂಸ್.

 ಲಂಡನ್ನಿನ ಹಾರ್ಸ್ ಗಾರ್ಡ್ ಪೆರೇಡ್ನಲ್ಲಿ “ದ ಕಲರ್ 2025” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಿನ್ಸ್ ವಿಲಿಯಮ್ಸ್ ಮಾತುಗಳನ್ನು ಕೇಳುತ್ತಿದ್ದ ಜನರು ನಿಶ್ಚಲರಾಗಿ ನಿಂತಿದ್ದರೂ ಕೂಡ ಅವರ ಗಂಟಲು  ಭಾವುಕತೆಯಿಂದ ಕಟ್ಟಿ ಹೋಗಿತ್ತು. ಪ್ರತ್ಯಕ್ಷವಾಗಿ  ಅರವತ್ತು ಸಾವಿರಕ್ಕೂ ಹೆಚ್ಚು ಜನ ಹಾರ್ಸ್ ಗಾರ್ಡ್ಸ್ ಪರೇಡ್ ನಲ್ಲಿ ಭಾಗವಹಿಸಿದ್ದರೆ ತಮ್ಮ ಮನೆಯ  ದೂರದರ್ಶನದ ಮುಂದೆ ಕುಳಿತ ಕೋಟ್ಯಾಂತರ ಜನ ಭಾವನೆಗಳ ಕಡಲಲ್ಲಿಮುಳುಗಿ ತೇಲುತ್ತಿದ್ದರು.

ಮೇಲಿನ ಮಾತುಗಳನ್ನು ಹೇಳುವಾಗ ಆತನ ದನಿ ಭಾವೋದ್ವೇಗದಿಂದ ನಡುಗುತ್ತಿದ್ದರೂ, ಕಣ್ಣುಗಳಲ್ಲಿ ಸಂತಸದ ಮಿನುಗಿತ್ತು.
ಹಲವಾರು ತಿಂಗಳುಗಳ ಕಾಲ ವೈಯುಕ್ತಿಕವಾಗಿ ದೈಹಿಕ ಅನಾರೋಗ್ಯದಿಂದ ಬಳಲಿ ಬೆಂಡಾಗಿ ಇದೀಗ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡು ಮೊತ್ತ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ನಿ ಕ್ಯಾತರೀನಳ  ಕುರಿತ ಅಭಿಮಾನಪೂರ್ವಕ ಪ್ರೀತಿಗೆ ಎಲ್ಲರೂ ಮೂಕ ವಿಸ್ಮಿತರಾಗಿದ್ದರು. ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿ ಪಕ್ಕದಲ್ಲಿಯೇ ನಿಂತಿದ್ದ ಪ್ರಿನ್ಸೆಸ್ ಕ್ಯಾಥರೀನಳತ್ತ ತಿರುಗಿದ ಆತ ಆಕೆಯನ್ನು ಸಾರ್ವಜನಿಕವಾಗಿ ಗಟ್ಟಿಯಾಗಿ ತಬ್ಬಿದ…. ಅಲ್ಲಿ ಕಿಂಚಿತ್ತೂ ಕಾಮದ ವಾಸನೆ  ಇರಲಿಲ್ಲ ಬದಲಾಗಿ ನಿರ್ಮಲ ಸ್ನೇಹ ಮತ್ತು ನಿಸ್ವಾರ್ಥ ಪ್ರೇಮವಿತ್ತು. ಪತಿಯ ಈ ಭಾವವನ್ನು ಕಂಡು ರಾಜಕುಮಾರಿಯ ತುಟಿಗಳು ಅದುರಿದವು. ಆಕೆಯ ಕೈಗಳು ಅನಾಯಾಸವಾಗಿ ಆಕೆಯ ಹೃದಯ ಭಾಗವನ್ನು ಮುಟ್ಟಿಕೊಂಡವು…. ಅವರಿಬ್ಬರ ಸುತ್ತಲೂ ಸಾವಿರಾರು ಜನರಿದ್ದರೂ ಕೂಡ ಯಾರೊಬ್ಬರೂ ಚಪ್ಪಾಳೆಯನ್ನು ತಟ್ಟಲಿಲ್ಲ. ಭಾವುಕರಾಗಿ ಎಲ್ಲರೂ ನಿಶ್ಚಲರಾಗಿ ನಿಂತು ಈ ವಿದ್ಯಮಾನವನ್ನು ನೋಡುತ್ತಿದ್ದರು.

‘ನೀನು ಕೇವಲ ನನ್ನ ಪತ್ನಿ ಅಲ್ಲ’ ಎಂದು ಮುಂದುವರೆಸಿದ ವಿಲಿಯಮ್ಸ್ “ನೀನು ನನ್ನ ಮನೆಯ ಆತ್ಮ ಕೂಡ, ನನ್ನ ಹೃದಯದ ಪ್ರೀತಿ ಕೂಡ ಮತ್ತು ಬದುಕಿನಲ್ಲಿ ಇಂದಿಗೂ ನಾನು ಭರವಸೆಯನ್ನು ಹೊಂದಲು ಕಾರಣವಾಗಿರುವ ವ್ಯಕ್ತಿ ನೀನು” ಎಂದು ಹೇಳಿದಾಗ ಆತನ ಮಾತುಗಳಲ್ಲಿ ಇದ್ದ ಪ್ರಾಮಾಣಿಕತೆಯ ಬೆಳಕು ಎಲ್ಲರ ಹೃದಯದಲ್ಲೂ ಉನ್ನತ ಭಾವಗಳ ಜ್ಯೋತಿಯನ್ನು ಬೆಳಗಿಸಿ  ಜಗತ್ತಿನಾದ್ಯಂತ ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಸುರಿಸಿತು.

ಅದು ಕೇವಲ ಒಬ್ಬ ರಾಜಕುಮಾರನ ಮಾತಾಗಿರಲಿಲ್ಲ…. ಬದುಕಿನಲ್ಲಿ ಛಿದ್ರಗೊಂಡು ಮತ್ತೆ ಮರು ನಿರ್ಮಾಣಗೊಂಡ ವ್ಯಕ್ತಿಯ ಎದೆಯಾಳದ ಧ್ವನಿಯಾಗಿತ್ತು. ಆ ಒಂದಷ್ಟು ನಿಮಿಷಗಳ ಕಾಲ ಆತನ ಕರ್ತವ್ಯ ಹಿಂದೆ ಸರಿಯಿತು. ಆತನಿಗಿದ್ದ ಪದವಿ ಗೌರವಗಳು ಮರೆಯಾಗಿತ್ತು. ಆ ಕೆಲ ನಿಮಿಷಗಳು ಆ ಬಾಲ್ಕನಿಯಲ್ಲಿ ಅತ್ಯಂತ ಶಕ್ತಿಯುತವಾದ, ಅತ್ಯುನ್ನತ ಗೌರವ ಘನತೆಗಳನ್ನು ಹೊಂದಿದ ಸಾಮ್ರಾಜ್ಯದ ಕಿರೀಟ ಮುಖ್ಯವಾಗಿರಲಿಲ್ಲ…. ಬದಲಾಗಿ ಇದು ಕೇವಲ ನನ್ನೊಬ್ಬನಿಂದ ಸಾಧ್ಯವಿರಲಿಲ್ಲ ಎಂದೂ, ನನ್ನ ಬದುಕಿನಲ್ಲಿ ನೀನಿಲ್ಲದೆ ಏನೂ ಇಲ್ಲ ಎಂಬ ಪ್ರಾಮಾಣಿಕವಾದ ಮತ್ತು ಅಷ್ಟೇ ಧೈರ್ಯವಾಗಿ ಈ ಮಾತುಗಳನ್ನು ಸಾರ್ವಜನಿಕವಾಗಿ ಒಪ್ಪಿಸುವ ಪ್ರಿನ್ಸ್ ವಿಲಿಯಮ್ಸ್ ನ ಮಾನಸಿಕ ದೃಢತೆ ಎಲ್ಲರ ಮನಸ್ಸನ್ನು ಗೆದ್ದಿತ್ತು.

ನಿಜವಾಗಿಯೂ ಸ್ನೇಹಿತರೆ….. ಈ ಭಾವನಾತ್ಮಕ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ, ಓದಿದಾಗ ಮನಸ್ಸು ತುಂಬಿ ಬಂತು.

ಅವಶ್ಯಕತೆ ಇಲ್ಲದಿದ್ದರೂ ಪಾಶ್ಚಾತ್ಯರಂತೆ ಕೋಟು ಧರಿಸುವ, ಟೈ ಹಾಕುವ, ಶೂಗಳನ್ನು ಧರಿಸುವ, ಅವರ ಮಾತುಕತೆ ಜೀವನ ಶೈಲಿಯ ಮ್ಯಾನರಿಸಂಗಳನ್ನು ನಮ್ಮದಾಗಿಸಿಕೊಂಡು ಬೀಗುವ ಮೂಲಕ ನಾವು ಆಧುನಿಕರು ಎಂದು ತಮ್ಮನ್ನು ಬಿಂಬಿಸಿಕೊಳ್ಳುವ ಸಾಕಷ್ಟು ಜನ ನಮ್ಮಲ್ಲಿದ್ದಾರೆ. ಸಶಕ್ತವಾದ ಭಾರತೀಯತೆಯ ಆತ್ಮ ನಮ್ಮಲ್ಲಿದ್ದರೂ ಕೂಡ, ಪಾಶ್ಚಾತ್ಯರಲ್ಲದೆ ಹೋದರೂ ಪಾಶ್ಚಾತ್ಯರಂತೆ ವರ್ತಿಸುವ ಮೂಲಕ ನಮ್ಮ ಅಹಂ ಅನ್ನು ತೃಪ್ತಿಪಡಿಸುತ್ತೇವೆ. ಯಾವುದ್ಯಾವುದೋ ಅಸಂಬದ್ಧ ವಿಷಯಗಳಿಗಾಗಿ, ಕಾರಣಕ್ಕಾಗಿ ನಾವು ವಿದೇಶೀಯರನ್ನು ಅನುಕರಿಸುತ್ತೇವೆ ಎನ್ನುವುದಾದರೆ ಇಂತಹ ಅತ್ಯಂತ ಸ್ಪಷ್ಟವಾದ ಅಹಂಭಾವರಹಿತ ಸುಸಂಬದ್ಧ ವಿಷಯ ನಮ್ಮ ತಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಪುರುಷರ ಮಸ್ತಕದಲ್ಲಿ ಹೊಕ್ಕಬೇಕು ಎಂಬ ಕಾರಣಕ್ಕಾಗಿಯೇ ಈ ಘಟನೆಯನ್ನು ಯಥಾವತ್ತಾಗಿ ಬರೆದಿರುವುದು.

ಎರಡೆರಡು ಕುಟುಂಬಗಳನ್ನು ಬೆಳಗಿಸುವ ಜ್ಯೋತಿಯಾಗಿರುವ ಹೆಣ್ಣು ಮಕ್ಕಳನ್ನು, ಕಾಯಾ ವಾಚಾ ಮನಸಾ ತಮ್ಮ ಕುಟುಂಬಕ್ಕಾಗಿ ಗಂಧದ ಕೊರಡಿನಂತೆ ತೇಯುವ, ತಮ್ಮ ವೈಯುಕ್ತಿಕ ಜೀವನದ ಆಸೆ ಆಕಾಂಕ್ಷೆಗಳನ್ನು ಗಂಟು ಕಟ್ಟಿ ಯಾವುದೋ ಒಂದು ಮೂಲೆಯಲ್ಲಿ ಎಸೆದು ಗಂಡ, ಮಕ್ಕಳು ಮನೆ ಕುಟುಂಬ ಎಂದು ತಮ್ಮಿಡಿ ಜೀವನವನ್ನು ಕಳೆಯುವ ಹೆಣ್ಣು ಮಕ್ಕಳಿಗೆ ನಾವು ಏನು ಕೊಟ್ಟರೂ ಸಾಲದು ಎಂದು ಸಾರ್ವಜನಿಕ ಸಭೆಗಳಲ್ಲಿ, ಸಮಾರಂಭಗಳಲ್ಲಿ, ಮಹಿಳಾ ದಿನಾಚರಣೆಗಳಲ್ಲಿ ಹೆಣ್ಣು ಮಕ್ಕಳನ್ನು ಹಾಡಿ ಹೊಗಳಿ ತಲೆಯ ಮೇಲೆ ಏರಿಸುವ ಗಂಡಸರೇ ಮನೆಯಲ್ಲಿ ತಂತಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕಸಕ್ಕಿಂತಲೂ ಕೀಳಾಗಿ ಕಾಣುವುದು ವಿಪರ್ಯಾಸ ವಲ್ಲದೆ ಮತ್ತೇನು? ಹಾಗಾದರೆ ಅವರು ಹೇಳುವ ಎಲ್ಲ ಉಪಾದಿಗಳು ಪರಸ್ತ್ರಿಯರಿಗೆ ಮಾತ್ರವೇ? ಖುದ್ದು ಅವರ ಮನೆಯ ಹೆಣ್ಣು ಮಕ್ಕಳನ್ನು ಮಾತು ಮಾತಿಗೆ ಹಂಗಿಸುವ, ಪ್ರತಿಯೊಂದು ವಿಷಯಕ್ಕೂ ರೊಳ್ಳೆ ತೆಗೆಯುವ, ಕೀಳರಿಮೆಯಿಂದ ಬಳಲಿಸುವ ಲಕ್ಷಾಂತರ ಜನರನ್ನು ನಾವು ಸಮಾಜದಲ್ಲಿ  ಕಾಣುತ್ತೇವೆ.

 ಆರ್ಥಿಕ ಸಂಪನ್ಮೂಲಗಳ ಉತ್ಪಾದನೆಯಲ್ಲದ ಅವರ ದುಡಿಮೆಯನ್ನು ನಿಕೃಷ್ಟವಾಗಿ ಕಾಣುವ ಅವರ ಕಣ್ಗಳು ಒಂದೇ ಒಂದು ದಿನ ಮನೆಯ ಗೃಹಿಣಿ ತನ್ನೆಲ್ಲ ಕೆಲಸ ಕಾರ್ಯಗಳನ್ನು ಮಾಡದೆ ಹೋದರೆ ಇಡೀ ಮನೆಯ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗುತ್ತದೆ ಎಂಬ ಅರಿವನ್ನು ಹೊಂದಿದ್ದರೂ ಕೂಡ ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ಕಾಣುತ್ತಾರೆ. ಕೇವಲ ಅವರು ಮಾತ್ರ ಕಾರಣರಲ್ಲ…. ಹೆಣ್ಣು ಮಕ್ಕಳು ಕೂಡ ತಮ್ಮ ದೈನೇಸಿ ಪರಿಸ್ಥಿತಿಗೆ ಕಾರಣರಾಗುತ್ತಾರೆ ಎಂಬುದು ಪರಿಸ್ಥಿತಿಯ ವಿಡಂಬನೆಯನ್ನು ತೋರುತ್ತದೆ.

ಮಗಳಾಗಿ, ಸೋದರಿಯಾಗಿ, ಪತ್ನಿಯಾಗಿ,ತಾಯಿಯಾಗಿ ಕುಟುಂಬವನ್ನು ನಡೆಸುವ ಹೆಣ್ಣುಮಕ್ಕಳ ಹೆಗಲ ಮೇಲೆಯೇ ಇಡೀ ಸಮಾಜ ನಿಂತಿದ್ದರೂ ಕೂಡ ಹೆಣ್ಣು ಮಕ್ಕಳನ್ನು ಕಡೆಗಣಿಸುವುದು ಈ ಸಮಾಜದಲ್ಲಿ ನಿಂತಿಲ್ಲ.

ದಣಿವರಿಯದ ಹೆಣ್ಣುಮಕ್ಕಳು ಖುದ್ದು ಅಸ್ತಿತ್ವರಹಿತರಾದರೂ ಕೂಡ ಕುಟುಂಬದ ಬೆನ್ನೆಲುಬಾಗಿದ್ದಾರಲ್ಲದೇ ತಮ್ಮ ಮಕ್ಕಳ ಭವಿಷ್ಯಕ್ಕೆ
ಮುನ್ನುಡಿ ಬರೆಯುತ್ತಾರೆ.

 ಅವರ ಸೇವೆ ಗೋಚರವಾದರೂ ತ್ಯಾಗ,ಸೇವೆ ಅಗೋಚರವಾದದ್ದು.ದೈನಂದಿನ ತ್ಯಾಗ, ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ ಮತ್ತು ಕರ್ತವ್ಯ.
“ತೇನ ವಿನಾ ತೃಣಮಪಿ ನ ಚಲತಿ” ಎಂದು ಕೇವಲ ನಾವು ವಿಧಾತನಿಗಷ್ಟೇ ಅಲ್ಲ ಹೆಣ್ಣು ಮಕ್ಕಳಿಗೂ ಹೇಳಬೇಕು.

ಇಂತಹ ಸಮಯದಲ್ಲಿ ಇಡೀ ಅರಸೊತ್ತಿಗೆಯ ಭೋಗ, ಭಾಗ್ಯಗಳನ್ನು ಹೊಂದಿರುವ ವ್ಯಕ್ತಿ ನನ್ನ ತಂಗಿಯ ಕುರಿತು ಕೃತಜ್ಞತೆಯನ್ನು ಸಾರ್ವಜನಿಕವಾಗಿ ಹೇಳುತ್ತಾನೆ ಇಡೀ ಜಗತ್ತು ಅದನ್ನು ಪ್ರಶಂಸಿಸುತ್ತದೆ ಎಂದಾದರೆ ನಮ್ಮ ನಿಮ್ಮ ಮನೆಗಳಲ್ಲಾದರೂ ನಾವು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಗೌರವಿಸುವ, ಅವರ ಸೂಕ್ಷ್ಮ ಭಾವನೆಗಳನ್ನು ಅರಿಯುವ ಸಂವೇದನ ಶೀಲ ಮನಸ್ಥಿತಿಯನ್ನು ಹೊಂದಿರಬೇಕು ಅಲ್ಲವೇ?

ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ, ಅವರನ್ನು ಆದರಿಸುವ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಂವೇದನ ಶೀಲ ಪುರುಷರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ


About The Author

1 thought on “ʼಸಂವೇದನಾಶೀಲತೆ….. ಒಂದು ವಿವೇಚನೆʼ ಇಂದಿನ ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್”

  1. ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚುವ ಲೇಖನ…! ಚೆನ್ನಾಗಿದೆ

Leave a Reply

You cannot copy content of this page

Scroll to Top