ಸಿನಿಮಾ ಸಂಗಾತಿ
ಸಿತಾರೆ ಜಮೀನ್ ಪರ್
(ಸಬ್ ಕಾ ಅಪ್ನಾ ನಾರ್ಮಲ್ ಹೋತಾ ಹೇ)
ಸಿನಿಮಾ ಬಗ್ಗೆ ಬರೆದಿದ್ದಾರೆ
ವೀಣಾ ಹೇಮಂತ್ ಗೌಡ ಪಾಟಿಲ್ .

2025 ರ ಜೂನ್ 20ರಂದು ಬಿಡುಗಡೆಯಾದ ಅಮೀರ್ ಖಾನ್ ಅವರ ಹಿಂದಿ ಚಲನಚಿತ್ರ ಸಿತಾರೇ ಜಮೀನ್ ಪರ್ ಸ್ಪಾನಿಶ್ ಚಲನಚಿತ್ರ ಕ್ಯಾಂಪಿಯನ್ಸ್ ನ ರಿಮೇಕ್ ಆಗಿದೆ.
ಚಿಕ್ಕಂದಿನಲ್ಲಿಯೇ ತಾಯಿಯನ್ನು ತೊರೆದುಹೋದ ತಂದೆಯಿಂದಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡ ಚಿತ್ರದ ನಾಯಕ ಗುಲ್ಶನ್ ಕುಮಾರ್ ತನ್ನ ನೆಚ್ಚಿನ ಆಟವಾದ ಬಾಸ್ಕೆಟ್ ಬಾಲ್ ನಲ್ಲಿ ತೊಡಗಿಕೊಳ್ಳಲು ಆತನ ತಾಯಿಯ ಪ್ರೀತಿ ಮತ್ತು ಒತ್ತಾಸೆಗಳು ಕಾರಣವಾಗಿದ್ದವು. ಸಹನೆ ಎಂದರೇನು? ಎಂಬುದು ಗೊತ್ತಿಲ್ಲದ, ತನ್ನ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದ ನಾಯಕ ಗುಲ್ಶನ್ ಕುಮಾರನ ನಡೆಯನ್ನು ಸುಧಾರಿಸಲು ಆತನ ಪತ್ನಿ ಬಹಳವೇ ಪ್ರಯತ್ನ ಪಡುತ್ತಿದ್ದರೂ ಅದು ನಿಷ್ಫಲವಾಗುತ್ತಿತ್ತು. ಮಕ್ಕಳನ್ನು ಪಡೆಯಬೇಕು ಎಂಬ ಆಕೆಯ ಆಸೆಯಿಂದಾಗಿ ಆತ ಆಕೆಯಿಂದ ದೂರವಾಗಿ ತನ್ನ ತಾಯಿಯ ಬಳಿ ವಾಸಿಸುತ್ತಿದ್ದ.
ಒಂದು ಬಾರಿ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನ ಫೈನಲ್ನಲ್ಲಿ ತನ್ನ ತಂಡದ ಮುಖ್ಯ ಕೋಚ್ ಜೊತೆ ಮಾತಿಗೆ ಮಾತು ಬೆಳೆದು ಕೋಚ್ ಕೆನ್ನೆಗೆ ಹೊಡೆದು ಸಸ್ಪೆಂಡ್ ಆದ ಗುಲ್ಕನ್ ಕುಡಿದು ಮನೆಗೆ ಮರಳುತ್ತಿದ್ದಾಗ ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ ಕಾನೂನಾತ್ಮಕ ಪರಿಶೀಲನೆಗೆ ಒಳಪಟ್ಟು ನಡವಳಿಕೆಯನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ/ ಸಮುದಾಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂಬ ಶಿಕ್ಷೆಗೆ ಒಳಪಟ್ಟು ಸರ್ವೋದಯ ಸಂಸ್ಥೆಯ ವಿಕಲಚೇತನ ಮಕ್ಕಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ಕೋಚ್ ಆಗಿ ನಿಯುಕ್ತನಾಗುತ್ತಾನೆ.
ಪ್ರಾರಂಭದಲ್ಲಿ ವಿಕಲಚೇತನ ಮಕ್ಕಳ ಸಹಜ ನಡವಳಿಕೆಗಳನ್ನು ಕಂಡು ಸಿಡಿಮಿಡಿಗೊಳ್ಳುತ್ತಿದ್ದ ಆತನಿಗೆ ಸರ್ವೋದಯ ಸಂಸ್ಥೆಯ ಮುಖ್ಯಸ್ಥ ಎಲ್ಲರಿಗೂ ಅವರದ್ದೇ ಆದ ಸಾಮಾನ್ಯ ಸ್ಥಿತಿ ಎಂಬುದು ಇರುತ್ತದೆ… ಈ ಮಕ್ಕಳ ಸಾಮಾನ್ಯ ಸ್ಥಿತಿಯು ಕೂಡ ಹಾಗೆಯೇ ಇದೆ ಎಂಬುದನ್ನು ತಿಳಿಸಿ ಹೇಳುತ್ತಾನೆ.
ಇತ್ತ ಮನೆಯಲ್ಲಿ ಆತನ ತಾಯಿ ಕೂಡ ಎಲ್ಲರಿಗಿಂತ ವಿಭಿನ್ನವಾಗಿರುವವರ ಪರವಾಗಿ ಕಾರ್ಯನಿರ್ವಹಿಸುವವರ ಅವಶ್ಯಕತೆ ಇದೆ… ಆ ಕೆಲಸವನ್ನು ನೀನು ಮಾಡಲೇಬೇಕು ಎಂದು ತಿಳಿ ಹೇಳುತ್ತಾಳೆ.
ಗುಲ್ಷನ್ ನಿಧಾನವಾಗಿ ಅವರೊಂದಿಗೆ ಹೊಂದಿಕೊಳ್ಳುವ ಅನಿವಾರ್ಯ ಪ್ರಯತ್ನಕ್ಕೆ ಒಳಗಾಗುತ್ತಾನೆ. ಹಲವಾರು ಅವಘಡಗಳು ಗೊಂದಲಗಳ ನಡುವೆಯೇ ಅವರ ಕೋಚಿಂಗ್ ನಡೆಯುತ್ತದೆ.
ಎಲ್ಲ ವಿಕಲ ಚೇತನ ಮಕ್ಕಳನ್ನು ಗುಡ್ ಫಾರ್ ನಥಿಂಗ್( ಯಾವುದಕ್ಕೂ ಉಪಯೋಗವಿಲ್ಲದವರು)
ಎಂದು ಹೀಯಾಳಿಸುವ ನಾಯಕನಿಗೆ ಸರ್ವೋದಯ ಸಂಸ್ಥೆಯ ಮುಖ್ಯಸ್ಥ ಕ್ರೋಮೋಸೋಮ್ ಗಳ ಕುರಿತು, ಮಕ್ಕಳು ಹುಟ್ಟುವಾಗಿನ ತೊಂದರೆಗಳ ಕುರಿತು, ವ್ಯಕ್ತಿಯ ವ್ಯಕ್ತಿತ್ವದ ಕುರಿತು ವಿಭಿನ್ನ ಚೇತನ ಮಕ್ಕಳ ತೊಂದರೆಗಳ ಕುರಿತು ಎಲ್ಲರಿಗೂ ಅವರವರದ್ದೇ ಆದಂತಹ ಸಾಮಾನ್ಯ ಸ್ಥಿತಿ ಇರುತ್ತದೆ ಎಂಬುದನ್ನು ವಿವರಿಸಿ ಹೇಳಿದಾಗ ನಾಯಕ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.
ನಾಯಕ ನಟನ ಪ್ರಯತ್ನ ಮತ್ತು ನಿರಂತರ ತರಬೇತಿಯ ಫಲವಾಗಿ ಬಾಸ್ಕೆಟ್ ಬಾಲ್ ಆಟದಲ್ಲಿ ತರಬೇತಿ ಪಡೆದ ವಿಕಲಚೇತನರು ಬಾಸ್ಕೆಟ್ ಬಾಲಿನ
ಮೊದಲ ಪಂದ್ಯಾವಳಿಗಳು ನಡೆಯುತ್ತವೆ. ಈ ಪಂದ್ಯಾವಳಿಗಳಲ್ಲಿ ಅನಿರೀಕ್ಷಿತ ಗೆಲುವನ್ನು ಪಡೆದ ಎಲ್ಲ ವಿಕಲ ಚೇತನ ಮಕ್ಕಳನ್ನು ಅಭಿನಂದಿಸಿ ಸ್ನಾನಕ್ಕೆ ಕಳುಹಿಸುತ್ತಾರೆ. ಚಿಕ್ಕಂದಿನ ಒಂದು ಘಟನೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಕಾರಣ ನೀರಿನ ಕುರಿತು ಭಯವನ್ನು ಹೊಂದಿ ಹಲವಾರು ದಿನಗಟ್ಟಲೆ ಸ್ನಾನ ಮಾಡದೇ ಇದ್ದ ವಿಕಲಚೇತನ ಗುಡ್ಡುವನ್ನು ನೀರಿನಲ್ಲಿ ಬಿದ್ದು ಮುಳುಗುತ್ತಿದ್ದ ಇಲಿಯನ್ನು ರಕ್ಷಿಸುವ ನೆಪದಲ್ಲಿ ನೀರಿನ ತೊಟ್ಟಿಗೆ ಕೋಚ್ ಕಳುಹಿಸುವರು. ಆತನಿಗಿದ್ದ ನೀರಿನ ಭಯವನ್ನು ಹೋಗಲಾಡಿಸುವ ಕೋಚ್ ನ ಪ್ರಯತ್ನಕ್ಕೆ ಉಳಿದೆಲ್ಲರೂ ಬೆಂಬಲ ನೀಡಿದ ಪರಿಣಾಮವಾಗಿ ಗುಡ್ಡು ಭಯದಿಂದ ಮುಕ್ತನಾಗುತ್ತಾನೆ.
ಮುಂದೆ ನಡೆದ ಪಂದ್ಯಾವಳಿಗಳಲ್ಲಿ ಇವರಿಗೆ ಗೋಲು ಎಂಬ ವಿಕಲಚೇತನ ಯುವತಿಯ ಜೊತೆಯಾಗುತ್ತಾಳೆ.
ವಿಭಿನ್ನ ಘಟನೆಗಳ ನಡುವೆ ನಡೆಯುವ ಚಿತ್ರದಲ್ಲಿ ವಿಕಲಚೇತನ ಮಕ್ಕಳ ಜೊತೆಗಿನ ಒಡನಾಟ ಮತ್ತು ಅವರ ನಿಷ್ಕಲ್ಮಶವಾದ ಮನಸ್ಸು ಮತ್ತು ತಿಳಿಹೇಳುವಿಕೆಯ ಪರಿಣಾಮವಾಗಿ ತನ್ನ ಪತ್ನಿಯೊಂದಿಗೆ ಕೂಡ ಗುಲ್ಶನ್ ನ ಸಂಬಂಧ ಸುಧಾರಿಸುತ್ತದೆ.

ಸಂಸ್ಥೆಯ ಮುಖ್ಯಸ್ಥರೊಂದಿಗೆ, ಪತ್ನಿ ಮತ್ತು ವಿಕಲಚೇತನ ಮಕ್ಕಳ ತಂಡದೊಂದಿಗೆ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಆಡಲು ವಿವಿಧ ಸ್ಥಳಗಳಿಗೆ ತೆರಳುವ ಗುಲ್ಶನ್ ಮಕ್ಕಳಿಗೆ ತಾನು ತರಬೇತಿ ನೀಡುತ್ತಿದ್ದೇನೆ ಎಂದು ಭಾವಿಸುತ್ತಾ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿದ್ದುದನ್ನು ಅತ್ಯಂತ ಮನೋಜ್ಞವಾಗಿ ತೋರಿಸಿರುವ ಈ ಚಿತ್ರದಲ್ಲಿ ಅಂತಿಮವಾಗಿ ವಿಕಲಚೇತನ ಮಕ್ಕಳು ಬಾಸ್ಕೆಟ್ ಬಾಲ್ ಪಂದ್ಯಾವಳಿಯ ಫೈನಲ್ಸ್ ಗೆ ತಲುಪುತ್ತಾರೆ, ಆದರೆ ಮುಂಬೈಯಲ್ಲಿ ನಡೆಯುವ ಪಂದ್ಯಾವಳಿಗೆ ಇವರನ್ನು ಕರೆದೊಯ್ಯಲು ಹಣಕಾಸಿನ ಅಡಚಣೆ ಎದುರಾಗುತ್ತದೆ. ಈ ಸಮಯದಲ್ಲಿ ನಾಯಕ ತನ್ನ ಪತ್ನಿ ಯೊಂದಿಗೆ ತೋರುವ ಚಾಕಚಕ್ಯತೆಯಿಂದಾಗಿ ಅವರೆಲ್ಲರೂ ಫೈನಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮುಂಬೈಗೆ ವಿಮಾನದಲ್ಲಿ ತೆರಳುತ್ತಾರೆ.
ರೋಚಕವಾಗಿ ಸಾಗುವ ಅಂತಿಮ ಪಂದ್ಯಾವಳಿಯಲ್ಲಿ
ವಿಕಲಚೇತನ ಮಕ್ಕಳ ಆಟ ಮತ್ತು ಅಂತಿಮ ಹಂತದಲ್ಲಿ ಕೇವಲ ಒಂದು ಅಂಕದಲ್ಲಿ ಸೋತರೂ ಕೂಡ ಅವರು
ತಮ್ಮ ವಿರೋಧಿ ಗುಂಪಿನೊಂದಿಗೆ ಪಡುವ ಸಂಭ್ರಮ ಸಂತಸಗಳನ್ನು ಕಂಡು ಅಚ್ಚರಿಪಡುವ ನಾಯಕ ಈ ಕುರಿತು ವಿಕಲಚೇತನರಲ್ಲಿ ಒಬ್ಬಳಾದ ವ್ಯಕ್ತಿಯನ್ನು ಕರೆದು ‘ನಾವು ಸೋತು ಹೋಗಿದ್ದೇವೆ ಸಂಭ್ರಮ ಪಡಬಾರದು’ ಎಂದು ಹೇಳಿದಾಗ ಆಕೆ “ಇಲ್ಲ ಸರ್ ನಾವು ಗೆದ್ದಿದ್ದೇವೆ… ಒಂದಕ್ಕಿಂತ ಎರಡು ದೊಡ್ಡದು” ಎಂದು ಹೇಳಿ ತಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಮೂಲಕ ಬದುಕನ್ನು ಸಂಭ್ರಮಿಸುವ ರೀತಿಯನ್ನು ನೋಡಿ ಇದುವರೆಗೂ ನಾನು ಅವರಿಗೆ ತರಬೇತಿ ನೀಡುತ್ತಿದ್ದೇನೆ ಎಂದು ಭಾವಿಸಿದ್ದೆ ಆದರೆ ನಿಜಕ್ಕೂ ಅವರು ನನಗಿಂತ ಎಲ್ಲ ರೀತಿಯಲ್ಲೂ ಉತ್ತಮರು… ಅವರೇ ನನಗೆ ಬದುಕಿನ ಪಾಠವನ್ನು ಹೇಳಿಕೊಟ್ಟರು ಎಂದು ತನ್ನ ಪತ್ನಿಗೆ ಗುಲ್ಶನ್ ಹೇಳುತ್ತಾನೆ.
ಚಿತ್ರದ ಅಂತಿಮ ಘಟ್ಟದಲ್ಲಿ ನಾಯಕ ಅವರನ್ನು ಬೀಳ್ಕೊಡುವ ಸಮಯದಲ್ಲಿನ ದೃಶ್ಯಗಳು ಮನಸ್ಸನ್ನು ಭಾವನೆಗಳ ಕಡಲಲ್ಲಿ ಮುಳುಗಿಸಿ ಏಳಿಸುತ್ತವೆ.
ಅಕ್ಷರಗಳಲ್ಲಿ ಹಿಡಿದಿಡಲಾಗದ ಎಲ್ಲ ಭಾವಗಳನ್ನು ಚಿತ್ರದ ಒಂದೊಂದು ದೃಶ್ಯದಲ್ಲೂ ನಮಗೆ ತೋರುವ ಚಿತ್ರದ ನಾಯಕ ಅಮೀರ್ ಖಾನ್ ಮತ್ತು ವಿಕಲಚೇತನರ ನಟನೆ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ.
ನಾವೆಲ್ಲರೂ ಪರಿಪೂರ್ಣರು ಎಂಬ ಬಹುತೇಕ ಜನರ ಭಾವನೆಯನ್ನು ಪ್ರಶ್ನಿಸುವ ವಿಕಲಚೇತನರನ್ನು ಅವರು ಇರುವಂತೆಯೇ ಒಪ್ಪಿಕೊಳ್ಳುವ ಅವಶ್ಯಕತೆಯಿದೆ. ಎಲ್ಲರಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ… ಆ ಕೊರತೆಯೊಂದಿಗೆ ನಾವು ಅವರನ್ನು ಒಪ್ಪಿಕೊಳ್ಳಬೇಕು ಎಂಬ ಸಂದೇಶವನ್ನು, ಎಲ್ಲರಿಗೂ ಅವರವರದ್ದೇ ಆದ ಅಸಾಮಾನ್ಯವಾದ ಸಾಮಾನ್ಯತೆ ಇರುತ್ತದೆ….. (ನಾವು ಒಪ್ಪಿದರೂ ಒಪ್ಪದಿದ್ದರೂ ಕೂಡ) ಎಂಬುದನ್ನು ಈ ಚಿತ್ರದಲ್ಲಿ ನಾವು ಕಾಣಬಹುದು.

2025ರ ಜೂನ್ 20ರಂದು ಥಿಯೇಟರ್ಗಳಿಗೆ ಲಗ್ಗೆ ಇಟ್ಟ ಈ ಚಲನಚಿತ್ರ ಹಿಂದಿ ಚಿತ್ರರಂಗದಲ್ಲಿ ಬಾಕ್ಸ್ ಆಫೀಸಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೂರನೇ ಚಲನಚಿತ್ರವಾಗಿ ಪರಿಗಣಿಸಲ್ಪಟ್ಟಿದೆ.
ವೈವಿಧ್ಯಮಯ ಭಾವನೆಗಳನ್ನು ತೋರಿಸುವ, ಕೆಲವೊಮ್ಮೆ ಹುಚ್ಚೆದ್ದು ಕುಣಿಸುವ, ಮನಸ್ಸನ್ನು ಮೂಕ ಗೊಳಿಸುವ, ಸದಾ ಬಾಲ್ಯದ ಪ್ರೀತಿ ವಿಶ್ವಾಸಗಳನ್ನು ಹೊಂದಿ, ಯಾವುದೇ ರೀತಿಯ ಕಪಟತನದ ಅರಿವಿರದ ವಿಕಲಚೇತನರ ಬದುಕು ನಮ್ಮನ್ನು ಪ್ರಭಾವಗೊಳಿಸುವುದರಲ್ಲಿ ಅಚ್ಚರಿಯಿಲ್ಲ…. ಆದರೆ ಇಂತಹ ಜನರನ್ನು ಅವರು ಇರುವಂತೆಯೇ ಒಪ್ಪಿಕೊಂಡು ಅಪ್ಪಿಕೊಳ್ಳುವ ಮನಸ್ಥಿತಿಯನ್ನು ಸಚೇತನರು, ಜ್ಞಾನಿಗಳು ಎಂದು ಕರೆಸಿಕೊಳ್ಳುವ ನಾವುಗಳು . ಬೆಳೆಸಿಕೊಳ್ಳಬೇಕು ಎಂಬುದನ್ನುವಿಕಲಚೇತನರು ಆಗಸದಿಂದಿಳಿದ ಸಿತಾರೆಗಳಾಗಿರುವಈ ಚಲನಚಿತ್ರ ನಮಗೆ ತಿಳಿ ಹೇಳುತ್ತದೆ.
ಖಂಡಿತವಾಗಿಯೂ ಒಮ್ಮೆ ನೋಡಿ…. ಸಿತಾರೆ ಜಮೀನ್ ಪರ್
ವೀಣಾ ಹೇಮಂತ್ ಗೌಡ ಪಾಟೀಲ್ .





ಇತ್ತೀಚೆಗೆ ನೋಡಿದೆ. ಮನಮುಟ್ಟುವ ಚಿತ್ರ. ಕತೆ, ನಿರೂಪಣೆ ಎಲ್ಲವೂ ಚೆಂದ.