ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ರಿಚರ್ಡ್ ಎಂಬ ಒಬ್ಬ ಪ್ರಖ್ಯಾತ ನಟ ಒಂದು ಬಾರಿ ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಲು ಬಂದ ಆಹ್ವಾನವನ್ನು ತಿರಸ್ಕರಿಸಿದನು, ಅದಕ್ಕಾಗಿ ತಾನೆಂದೂ ಪಶ್ಚಾತಾಪ ಪಡಲಿಲ್ಲ ಎಂದು ಆತ ಹೇಳಿದ್ದಾನೆ. ಪ್ರಮುಖವಾದ ಒಂದು ಪಾತ್ರಕ್ಕೆ ಸಿಕ್ಕ ಆಹ್ವಾನವನ್ನು ತಿರಸ್ಕರಿಸಿದ ಆತನನ್ನು ಆ ಸಮಯದಲ್ಲಿ ಎಲ್ಲರೂ ಗೇಲಿ ಮಾಡಿದರು. ಚುಚ್ಚು ಮಾತುಗಳಿಂದ ಅವಮಾನಿಸಿದರು. ಡೇಂಜರ್ ವಾಷಿಂಗ್ಟನ್ ನಂತಹ ದೊಡ್ಡ ನಟನ ಪ್ರಮುಖ ತಾರಾಗಣವಿರುವ ಈ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯುವುದೆಂದರೆ ಸಾಮಾನ್ಯ ಮಾತೇ? ಈತನಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಕೂಡ ಹಂಗಿಸಿದರು. ಆದರೆ ರಿಚರ್ಡ್ ಇದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.

ಹೌದು, ನನಗೆ ಹಾಲಿವುಡ್ ಚಲನಚಿತ್ರದಲ್ಲಿ ನಟಿಸಲು ಆಸಕ್ತಿ ಇಲ್ಲ. ಆದ್ದರಿಂದಲೇ ನಾನು ಬೇಡ ಎಂದು ನಿರಾಕರಿಸಿದ್ದೇನೆ. ಈಗಾಗಲೇ ನಾನು ನನ್ನ ಮಾತೃಭೂಮಿ ಸ್ಪೇನ್ ದೇಶದ ಚಲನಚಿತ್ರಗಳಲ್ಲಿ ನಿರಂತರವಾಗಿ ನಟಿಸುತ್ತಿದ್ದೇನೆ. ರಂಗಭೂಮಿಯಲ್ಲೂ ಸಕ್ರಿಯನಾಗಿದ್ದೇನೆ. ಇದೀಗ ನನಗೆ ದಣಿವಾಗಿದ್ದು ವಿಶ್ರಾಂತಿ ಬೇಕಾಗಿದೆ ಎಂದು ಹೇಳಿದ.

ಬದುಕಿನಲ್ಲಿ ಇದೀಗ ನನಗೆ ಅತ್ಯಂತ ಮುಖ್ಯ ಮತ್ತು ಅತ್ಯವಶ್ಯಕವಾಗಿರುವುದು ನಾನು ನನ್ನ ಮನೆಗೆ ಹಿಂತಿರುಗಿ ವಿಶ್ರಾಂತಿ ಪಡೆಯುವುದು ಮತ್ತು ನನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸಮಯವನ್ನು ಕಳೆಯುವುದು. ಬದುಕಿನ ನಾಗಾಲೋಟದಲ್ಲಿ ಕಳೆದುಕೊಂಡಿರುವ ಸುಖ ಸಂತೋಷಗಳನ್ನು ಮತ್ತೆ ಬದುಕಿನಲ್ಲಿ ಮರು ಸ್ಥಾಪಿಸಿಕೊಳ್ಳುವುದು ನನ್ನ ಗುರಿಯಾಗಿದೆ ಎಂದು ಹೇಳುವ ಮೂಲಕ ಆತ ತನ್ನ ಮಾತುಗಳನ್ನು ಸಮರ್ಥಿಸಿಕೊಂಡ.

ತನ್ನ ಹಾಲಿವುಡ್ ಅವಕಾಶ ನಿರಾಕರಣೆಯ ಕುರಿತು ಆತ ಹೇಳಿದ್ದು ಹೀಗೆ  ” ಇನ್ನು ಹಾಲಿವುಡ್ ನಲ್ಲಿ ನನಗೆ ದೊರೆತಿರುವ ಡ್ರಗ್ ಮಾಫಿಯಾದ ದೊರೆಯ ಪಾತ್ರವನ್ನು ಯಾರು ಬೇಕಾದರೂ ಮಾಡಬಹುದು
ನಾನು ಹೀಗೆ ಹೇಳಬಹುದೋ ಇಲ್ಲವೋ ಗೊತ್ತಿಲ್ಲ ಆದರೆ ಯಾವಾಗಲೂ ನಾವೇ ಏಕೆ?
ಮಾಫಿಯಾದ ಡಾನ್ಗಳ ಪಾತ್ರಕ್ಕೆ ನಾವು ಕಪ್ಪುಜನರನ್ನೇ ಏಕೆ  ಅಮೇರಿಕಾದವರು ಆಯ್ಕೆ ಮಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಡ್ರಗ್ ಸೇವಿಸುವ ದೇಶದ ಜನ ಚಲನಚಿತ್ರಗಳಲ್ಲಿ ಮಾತ್ರ ಬೇರೆಯವರನ್ನು ಡ್ರಗ್ ಕಳ್ಳ ಸಾಗಾಣಿಕೆದಾರರಾಗಿ ಆಯ್ಕೆ ಮಾಡುವುದು ನನಗೆ ಸಮ್ಮತವಿಲ್ಲ. ಅದೂ ಅಲ್ಲದೆ ನನಗೆ ಆಹ್ವಾನವನ್ನು ನೀಡಿದ ನಿರ್ದೇಶಕರು ಬೇಡ ಎಂದು ಹೇಳಲು ನನಗೆ ಆಯ್ಕೆಯೇ ಇಲ್ಲ ಎಂದು ಹೇಳಿದ್ದು ನನ್ನ ಸ್ವಾಭಿಮಾನವನ್ನು ಕೆರಳಿಸಿತು. ಎಲ್ಲಕ್ಕಿಂತಲೂ ಹೆಚ್ಚು ಬಾಧಿಸಿದ್ದು ಈ ನಿರ್ದೇಶಕರ ಮಾತು. ಬೇಡ ಎನ್ನುವುದು ಖಂಡಿತವಾಗಿಯೂ ಒಂದು ಆಯ್ಕೆ… ಬೇಡ ಎಂದು ಹೇಳುವ ಮೂಲಕ ನಮ್ಮ ಆತ್ಮ ಗೌರವವನ್ನು ಕಾಯ್ದುಕೊಳ್ಳಬೇಕು. ನಮಗೆ ಇಷ್ಟವಿಲ್ಲದ ವಿಷಯವನ್ನು ನಾವು ಖಂಡಿತವಾಗಿಯೂ ನಿರಾಕರಿಸಲೇಬೇಕು” ಎಂದು ಪತ್ರಕರ್ತರಿಗೆ ಆತ ಹೇಳಿದನು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಓರ್ವ ಪತ್ರಕರ್ತ “ಈ ಚಿತ್ರವನ್ನು ನಿರಾಕರಿಸುವ ಮೂಲಕ ನೀವು ಅದೆಷ್ಟು ಹಣವನ್ನು ಕಳೆದುಕೊಳ್ಳುತ್ತಿದ್ದೀರಿ ಎಂಬುದರ ಅರಿವು ನಿಮಗೆ ಇದೆಯೇ?” ಎಂದು ಪ್ರಶ್ನಿಸಿದ.
 ಕಳೆದುಕೊಳ್ಳುವುದರಿಂದ ಏನಾಗುತ್ತದೆ ಎಂದು ನಟ ರಿಚರ್ಡ್ ಮರು ಪ್ರಶ್ನಿಸಿದಾಗ ಆ ಪತ್ರಕರ್ತ “ನೀವು ಇನ್ನಷ್ಟು ಚೆನ್ನಾಗಿ ಐಷಾರಾಮಿಯಾಗಿ ಬದುಕಬಹುದಿತ್ತು.” ಎಂದು ಕೆಣಕಿದ.

ರಿಚರ್ಡ್ಸ ನಗುತ್ತಾ ಆ ಪತ್ರಕರ್ತನಿಗೆ ಉತ್ತರಿಸಿದ… ಈಗಿರುವುದಕ್ಕಿಂತ ಚೆನ್ನಾಗಿ ಬದುಕಬಲ್ಲೆನೆ!? ನಾನು ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುತ್ತೇನೆ. ಥೇಟರಿನಲ್ಲಿ ನಾನು ಕೆಲಸ ಮಾಡುವಾಗ ಜನ ನನ್ನನ್ನು ಮೆಚ್ಚಿ ಜೋರಾಗಿ ಕೂಗಿ ಹುರಿದುಂಬಿಸುತ್ತಾರೆ. ನನ್ನನ್ನು ಪ್ರೀತಿಸುವ ಜನರ ನಡುವೆ ನಾನು ಸಂಪೂರ್ಣ ತೃಪ್ತ. ನನ್ನ ಜೀವನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು.

 ನೋಡಿದಿರಾ ಸ್ನೇಹಿತರೆ!

 ಆತ್ಮ ಗೌರವಕ್ಕಿಂತ ಮಿಗಿಲಾದ ಗೌರವವಿಲ್ಲ ಹಣವನ್ನು ಮೀರಿದ ಆತ್ಮತೃಪ್ತಿ ಬದುಕನ್ನು ಮುನ್ನಡೆಸಬಲ್ಲದು. ಸಂತೋಷ ತೃಪ್ತಿ ಎಂಬ ಪದಗಳಿಗೆ ಸಮಾನಾಂತರವಾಗಿ ಯಶಸ್ಸನ್ನು ನಮ್ಮ ಜನ ಹೋಲಿಸಿ ನೋಡುತ್ತಾರೆ. . ಆದರೆ ಸ್ಪೇನ್ ನ ನಟ ರಿಚರ್ಡ್ಸ್
 ಈ ಲೆಕ್ಕಾಚಾರವನ್ನು  ತಪ್ಪು ಎಂದು ನಮಗೆಲ್ಲ ತೋರಿಸಿಕೊಟ್ಟ.

 ಬದುಕಿನಲ್ಲಿ ಯಶಸ್ಸು ಇದ್ದರೆ ಮಾತ್ರ ಸಂತೋಷವಾಗಿರಲು ಸಾಧ್ಯ ಎಂಬ (ತಪ್ಪಾದ) ಪರಿಕಲ್ಪನೆ ಮತ್ತು ಹಣ, ಯಶಸ್ಸು ಇದ್ದ ವ್ಯಕ್ತಿಯೇ ಸಂತೃಪ್ತ ಎಂಬ ಮಾರುಕಟ್ಟೆಯ ಸರಕಾಗಿರುವ ಈ ವಾಕ್ಯವು ಪ್ರಸ್ತುತ ದಿನಮಾನಗಳಲ್ಲಿ ನಮ್ಮೆಲ್ಲರ ದಿಕ್ಕು ತಪ್ಪಿಸಿದೆ. ಕೆಲವೊಮ್ಮೆ ಅತಿಯಾದ ಮಹತ್ವಾಕಾಂಕ್ಷೆ ಕೂಡ ನಮ್ಮನ್ನು ದಾರಿ  ತಪ್ಪಿಸುತ್ತದೆ, ಮೌಲ್ಯ ರಹಿತರನ್ನಾಗಿಸುತ್ತದೆ, ಗಾಢಾಂಧಕಾರಕ್ಕೆ ಕೊಂಡೊಯ್ಯುತ್ತದೆ, ಒಂಟಿತನಕ್ಕೆಳಸುತ್ತದೆ  ಎಂಬುದರ ಅರಿವು ನಮಗಿಲ್ಲ.

ಆಧುನಿಕ ಜಗತ್ತು ನಮ್ಮ ಕಿವಿಯಲ್ಲಿ ಸದಾ ಪಿಸುಗುಡುವ ಮಾತು ನಿಮ್ಮ ಅವಕಾಶಗಳಿಗಾಗಿ ಕಾಯಿರಿ, ಎಲ್ಲದರಲ್ಲೂ ಅತ್ಯುತ್ತಮ ನೀವೇ ಆಗಿರಿ, ಎಲ್ಲರಿಗಿಂತ ಮುಂದೆ ಇರಿ… ಮುಂಚೂಣಿಯಲ್ಲಿರಿ ಎಂದು.

ಆದರೆ ಅದಕ್ಕೂ ಮುನ್ನ ನಾವು ನೋಡಬೇಕಾಗಿರುವುದು ದಿನಕ್ಕೆ ಒಂದು ಹೊತ್ತು ಊಟ ಮಾಡಲು ಗತಿಯಿಲ್ಲದ, ತಲೆಯ ಮೇಲೆ ಸೂರಿಲ್ಲದ, ಬೆಚ್ಚಗೆ ಹೊದ್ದುಕೊಂಡು ಮಲಗಿ ನಿದ್ರಿಸಲು ಹಾಸಿಗೆ ಇಲ್ಲದ, ಬದುಕಿನಲ್ಲಿ ಯಾವುದೇ ಅವಕಾಶಗಳನ್ನು ಹೊಂದಿರದ ಜನರನ್ನು.

ಚೆನ್ನಾಗಿ ಬದುಕುವುದು ಎಂದರೆ ಐಷಾರಾಮಿ ಬದುಕಲ್ಲ… ಚೆನ್ನಾಗಿ ಬದುಕುವುದು ಎಂದರೆ ನಮ್ಮನ್ನು ಮತ್ತು ನಮ್ಮ ಬದುಕಿನ ಇಷ್ಟಗಳನ್ನು ಅರಿತುಕೊಂಡು ಬದುಕುವುದು. ಅವಶ್ಯಕವಾದದ್ದನ್ನು ಪಡೆದುಕೊಳ್ಳುವ ಮತ್ತು ಬೇಡವಾದದ್ದನ್ನು ತಿರಸ್ಕರಿಸುವ ಧೈರ್ಯವನ್ನು ಹೊಂದಿರುವುದು. ಅಂತಿಮವಾಗಿ ನಮ್ಮ ಆತ್ಮ ಸ್ಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳುವ ಮನಸ್ಥಿತಿಯನ್ನು ಹೊಂದಿರುವುದು.

ತಟ್ಟೆಯ ಮುಂದೆ ಕುಳಿತಾಗ ಅದೆಷ್ಟೇ ಹೊಟ್ಟೆ ಬಿರಿಯುವಂತೆ ತಿಂದರೂ ಕೂಡ ಒಂದು ಹಂತದಲ್ಲಿ ಸಾಕು ಎಂದೆನಿಸುತ್ತದೆ. ಆದರೆ ಮನೆ, ಆಸ್ತಿ, ಯಶಸ್ಸು, ಹಣ ಸಂಗ್ರಹವಾಗುತ್ತಾ ಹೋದಂತೆಲ್ಲ ಮತ್ತಷ್ಟು ಬೇಕೆಂಬ ಆಸೆ ಮನುಷ್ಯನಲ್ಲಿ ಹೆಚ್ಚುತ್ತಾ ಹೋಗುತ್ತದೆ.

ಮನುಷ್ಯನಿಗೆ ಆಸೆಯ ಪರಿಮಿತಿಯನ್ನು ತಿಳಿಸಬೇಕೆಂಬ ಆಸೆಯಿಂದ ಓರ್ವ ರಾಜ ಮುಂಜಾನೆಯ ಸೂರ್ಯ ಹುಟ್ಟುವ ಗಳಿಗೆಯಿಂದ ಎದ್ದು ನಡೆಯಲು ಆರಂಭಿಸಿ ಸಾಯಂಕಾಲ ಸೂರ್ಯ ಮುಳುಗುವ ಹೊತ್ತಿಗೆ ತಲುಪುವವರೆಗಿನ ವಿಸ್ತಾರದ ಭೂಮಿಯನ್ನು ಹಾಗೆ ನಡೆಯುವ ವ್ಯಕ್ತಿಯ ಹೆಸರಿಗೆ ಬಿಟ್ಟುಕೊಡುವುದಾಗಿ  ಘೋಷಿಸಿದ.

 ಓರ್ವ ವ್ಯಕ್ತಿ ಈ ಆಹ್ವಾನವನ್ನು ಸ್ವೀಕರಿಸಿ ಅತ್ಯುತ್ಸಾಹದಿಂದ ನಡೆಯತೊಡಗಿದ. ಹಸಿವು ನೀರಡಿಕೆಗಳನ್ನು ತೊರೆದು ನಡೆಯುತ್ತಲೇ ಇದ್ದ. ಇನ್ನೇನು ಸೂರ್ಯ ಮುಳುಗಲು ಸ್ವಲ್ಪ ಹೊತ್ತು…. ಆ ವ್ಯಕ್ತಿ ಹೊಟ್ಟೆ ಹಸಿವಿನಿಂದ ಬಳಲಿ ನೀರು ಕುಡಿಯಲು ಸಮಯ ವ್ಯರ್ಥವಾದೀತು ಎಂದು ನೀರನ್ನು ಕೂಡ ಕುಡಿಯದೆ ತನ್ನ ಪಯಣವನ್ನು ಮುಂದುವರಿಸಿದ ಆತ ಸೂರ್ಯಾಸ್ತದ ಸಮಯದಲ್ಲಿ ನೆಲವನ್ನಪ್ಪಿದ…..ಆದರೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬದುಕಿದ್ದರಲ್ಲವೇ ಆ ಭೂಮಿ ಆತನದಾಗುವುದು.

ಇದನ್ನೇ ನಮ್ಮ ಶರಣರು ಹೇಳಿರುವುದು

 “ಆನೆ ಕುದುರೆ ಭಂಡಾರವಿರ್ದಡೇನು
 ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು
 ಮಲಗುವದರ್ಧ ಮಂಚ
 ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ
 ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದು
 ಕೈ ವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ, ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ
ನಿಃಕಳಂಕ ಮಲ್ಲಿಕಾರ್ಜುನ “

 ಎಂದು. ಮೋಳಿಗೆ ಮಾರಯ್ಯನವರು ಹೇಳಿದ ಈ ವಚನ ಪ್ರಸ್ತುತ ಮನುಷ್ಯ ಯಾವ ರೀತಿ ಜೀವನವನ್ನು ನಡೆಸಬೇಕು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

 ಸತತವಾಗಿ ಮೊಬೈಲ್ನ ಸ್ಕ್ರೀನ್ ಅನ್ನು ತೀಡುತ್ತಾ, ಎಂದೂ ಮುಗಿಯದ ಹಗಲುಗನಸನ್ನು ಕಾಣುತ್ತಾ ವ್ಯರ್ಥ ಬದುಕನ್ನು ಸಾಗಿಸುವುದನ್ನು ಬಿಡಬೇಕು. ಒತ್ತಡ ಮತ್ತು ದಣಿವು ನಮ್ಮ ಬದುಕಿನ ಭಾಗವಾಗದಂತೆ ಉತ್ತಮ ಆರೋಗ್ಯಕರ ಹವ್ಯಾಸಗಳನ್ನು ನಮ್ಮದಾಗಿಸಿಕೊಂಡು ಬದುಕನ್ನು ಅರ್ಥಪೂರ್ಣವಾಗಿ ಜೀವಿಸಬೇಕು.

ತಂತ್ರಜ್ಞಾನದ ಹೊಸ ಆವಿಷ್ಕಾರಗಳು ನಮ್ಮ ಬದುಕನ್ನು ಸುಗಮಗೊಳಿಸುತ್ತವೆ, ನಿಜ ಆದರೆ ಇವುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಮನೋ ದೈಹಿಕ ಆರೋಗ್ಯ, ಚಿತ್ತ ಸ್ವಾಸ್ಥ್ಯ, ಮಾನವೀಯ ಸಂಬಂಧಗಳು ಕದಡಿ ಹೋಗದಂತೆ ಕಾಯ್ದುಕೊಳ್ಳಬೇಕು. ಅತಿಯಾದರೆ ಅಮೃತವೂ ವಿಷ ಎಂಬುದನ್ನು ಅರಿತು ನಮ್ಮ ಬದುಕನ್ನು ಸಮರ್ಥವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ರೀತಿಯ ಹೋಲಿಕೆಗೆ ಅವಕಾಶವೀಯದ  ಒಳ್ಳೆಯ ಉದ್ದೇಶ ಮತ್ತು ಕಾಳಜಿಯುಕ್ತ ಜೀವನ ಶೈಲಿಯು  ನಮ್ಮ ಬದುಕನ್ನು ಸುಂದರವಾಗಿಸುತ್ತದೆ ಎಂಬುದನ್ನು ಮರೆಯದಿರೋಣ.
 ಬೇಡ ಎಂಬುದು ಕೂಡ ಒಂದು ಆಯ್ಕೆ ಎಂಬುದನ್ನು ಮರೆಯದೆ ಅವಶ್ಯಕತೆ ಬಿದ್ದಲ್ಲಿ ಬೇಡ ಎಂದು ಹೇಳುವುದನ್ನು ಮರೆಯದೆ ಇರೋಣ.
 ಏನಂತೀರಾ ಸ್ನೇಹಿತರೆ?


About The Author

1 thought on “ವೀಣಾ ಹೇಮಂತ್ ಗೌಡ ಪಾಟೀಲ್ ಹೇಳುವಂತೆ ʼಬೇಡ ಎಂಬುದು ಕೂಡ….. ಒಂದು ಆಯ್ಕೆʼ”

Leave a Reply

You cannot copy content of this page

Scroll to Top