ಲಹರಿ ಸಂಗಾತಿ
ಜಯಶ್ರೀ.ಜೆ.ಅಬ್ಬಿಗೇರಿ
ಬಯಕೆಗಳ ಬೆನ್ನೇರಿ. . . . .


ಮುಂಜಾವಿನ ಮಂಜಿನಲ್ಲಿ ಹೂಗಳು ಅರಳಿ ನಿಂತಿರುವಾಗ ಕಂಗಳನ್ನು ಅರಳಿಸಿ ನಗುವ ಹೂಗಳನ್ನು, ಹೂಗಳ ಮೇಲಿನ ನಗುವ ಮಂಜಿನ ಹನಿಗಳನ್ನು ನೋಡುತ್ತೇವೆ. ಸಂತಸದಿಂದ ಹೂನಗೆ ಅರಳಿಸುತ್ತೇವೆ. ಅದೇ ಹೂವು ಸಂಜೆ ಬಾಡಿದ ಮೇಲೆ ತುಳಿದು ನಡೆಯುತ್ತೇವೆ. ಅಂದರೆ ನಗುವ ಮುಖಕ್ಕೆ ಇರುವ ಬೆಲೆ ಅಳುವ ಮುಖಕ್ಕೆ ಇರುವುದಿಲ್ಲ. ಇಲ್ಲಿ ನಮ್ಮ ದುಃಖವನ್ನು ಪ್ರತಿಯೊಬ್ಬರ ಮುಂದೆ ತೋಡಿಕೊಳ್ಳಲು ಹೋಗಬಾರದು. ಅವರವರ ದುಃಖಗಳೇ ಅವರಿಗೆ ಸಾಕಾಗಿರುವಾಗ ನಮ್ಮ ದುಃಖಕ್ಕೆ ಕಿವಿ ಕೊಡಲು ಮನಸ್ಸುಗಳೆಲ್ಲಿ?
ಹಲವು ಸಲ ನಮ್ಮ ದುಃಖಕ್ಕೆ ಕಾರಣ ಅತಿಯಾದ ಬಯಕೆಗಳು ಈ ಬಯಕೆಗಳು ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತವೆ. ಬಯಕೆ ಬದುಕಿಗೆ ಮೂಲ ಪ್ರೇರಣೆ ಏನೋ ನಿಜ. ಅವು ನಮ್ಮನ್ನು ಹತಾಶೆಗೆ ಖಿನ್ನತೆಗೆ ದೂಡುವುದು ಅಷ್ಟೇ ಸತ್ಯ. ಅವು ನಮ್ಮ ನಡವಳಿಕೆ ಮತ್ತು ನಿರ್ಧಾರಗಳನ್ನು ರೂಪಿಸುತ್ತವೆ. ಅವು ಎಂದಿಗೂ ಪೂರ್ಣಗೊಳ್ಳುವುದಿಲ್ಲ. ಒಂದು ಪೂರೈಸಿದ ತಕ್ಷಣ ಇನ್ನೊಂದು ಬಯಕೆ ಉಂಟಾಗುತ್ತದೆ. ಬಯಕೆಗಳ ಹಿಂದೆ ನಾವೋ? ನಮ್ಮ ಹಿಂದೆ ಬಯಕೆಗಳೋ ತಿಳಿಯದು. ಬೆಂಬಿಡದೆ ಬೆನ್ನತ್ತಿ ಕಾಡುತ್ತವೆ. ಹೋದಲ್ಲಿ ಬಂದಲ್ಲಿ ಜೊತೆಗೆ ಸಾಗುತ್ತವೆ. ನಮ್ಮ ಮನಸ್ಸನ್ನು ತಮ್ಮ ಹತೋಟಿಯಲ್ಲಿ ಬಂಧಿಸಿಕೊಳ್ಳುತ್ತವೆ. ಆನೆಗೆ ಅಂಕುಶ ಹೇಗೋ ಹಾಗೆ ನಮಗೆ ಬಯಕೆಗಳು. ಅಂಕುಶದಲ್ಲಿಟ್ಟು ನಮ್ಮನ್ನು ಆಳುತ್ತವೆ. ತನ್ನ ಬಂಧನದಲ್ಲಿರಿಸಿಕೊಂಡ ಬಯಕೆಗಳ ಹಾಗೆಯೇ ಬದುಕು ಸಾಗುವುದಿಲ್ಲ ಎಂಬುದು ಸತ್ಯ. ಬಯಸಿದ್ದೆಲ್ಲ ಇಲ್ಲಿ ಸಿಗುವುದಿಲ್ಲ ಎಂದು ತಿಳಿದಾಗ ಬಯಕೆಗಳದ್ದು ಇಲ್ಲಿ ಎಲ್ಲವೂ ನಡೆಯುವುದಿಲ್ಲ ಎಂಬುದು ಅರ್ಥವಾಗುತ್ತದೆ.
ಅತ್ತಲಿತ್ತ ಹೋಗದಂತೆ ಹೆಳವನ
ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧನ
ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೇ
ಅನ್ಯ ವಿಷಯಕ್ಕೆಳಸದಂತೆ ಇರಿಸು
ಕೂಡಲ ಸಂಗಮ ದೇವ
ಬಯಕೆಗಳಿಲ್ಲದವನು ಮನುಷ್ಯನಾಗಿರಲು ಅಸಾಧ್ಯ. ಆದರೆ ಬಯಕೆಗಳಲ್ಲಿ ಮಿತಿಯಿರುವುದು ಶ್ರೇಷ್ಠ ಗುಣ. ಆದ್ದರಿಂದ ಬಸವಣ್ಣನವರು ತಮ್ಮ ವಚನದಲ್ಲಿ ಬಯಕೆಗಳ ಸೆಳೆತಕ್ಕೆ ಕಾರಣವಾಗುವ ಅಂಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ದೇವರಿಂದ ಬೇಡುತ್ತಾರೆ.
ಬಯಕೆಗಳನ್ನು ಈಡೇರಿಸಿಕೊಳ್ಳಲು ಮುಂದಿನವರ ಮುಖಕ್ಕೆ ಮಸಿ ಹಚ್ಚಲು ಹಿಂಜರಿಯದೇ ಇರುವ ಜನರೂ ಇದ್ದಾರೆ. ಬೇರೆಯವರಿಗೆ ಸುಗಂಧವನ್ನು ಪೂಸುವುದಾದರೆ ಮೊದಲು ನಮ್ಮ ಕೈಗೆ ಸುಗಂಧದ ಸುವಾಸನೆಯು ತಗಲುತ್ತದೆ. ಅದೇ ಮಸಿಯನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈಗೆ ಮಸಿ ಹತ್ತುತ್ತದೆ. ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು. ಇಲ್ಲಿ ಒಂದು ಮಾರ್ಮಿಕ ಮಾತನ್ನು ಹೇಳಲೇಬೇಕೆನಿಸುತ್ತದೆ. ನಾವೆಷ್ಟೇ ಸರ್ವ ಸ್ವತಂತ್ರಾಗಿದ್ದರೂ ನೀ ನನಗಾದರೆ ನಾ ನಿನಗೆ ಎನ್ನುವ ನುಡಿ ಅನ್ವಯವಾಗುತ್ತದೆ. ನಾವೆಲ್ಲರೂ ಒಬ್ಬರ ಮೇಲೆ ಒಬ್ಬರು ಅವಲಂಬಿತರಿದ್ದೇವೆ. ಬಯಕೆಗಳ ಹಿಂದೆ ಬಿದ್ದಾಗ ಅವುಗಳ ಈಡೇರಿಕೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಸಂಗತಿಯನ್ನು ತಿಳಿದು ಮುನ್ನಡೆಯುವುದು ಒಳಿತು. ನಮ್ಮ ಬಯಕೆಗಳ ಬಲಹೀನತೆಯಲ್ಲಿ ಹಿರಿಯರನ್ನು ಹೆತ್ತವರನ್ನು ನಿರ್ಲಕ್ಷಿಸುವುದು ಸಲ್ಲ. ಮರದಲ್ಲಿಯ ಒಣಗಿದ ಎಲೆಯೊಂದು ಉದುರುತ್ತ ಹೇಳಿತು ‘ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಬದಲಾವಣೆ ಮಾತ್ರ ಶಾಶ್ವತ.’ ಜೀವನದಲ್ಲಿ ಎರಡು ಆಯ್ಕೆಗಳಿವೆ. ಒಂದು ಒಪ್ಪಿಗೆ ಇನ್ನೊಂದು ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು. ಬಯಕೆಗಳ ವಿಷಯದಲ್ಲೂ ಅರಿತು ಅಪ್ಪಿಕೊಳ್ಳಬೇಕು ಒಪ್ಪಿಕೊಳ್ಳಬೇಕು.
ಜೀವನದಲ್ಲಿ ಪ್ರತಿಯೊಂದಕ್ಕೂ ಸಮಯವಿದೆ. ಹಾಗೆಯೇ ಬಯಕೆಗಳ ಈಡೇರಿಕೆಗೂ ಸಹ. ಅದು ಸಮಯಕ್ಕೆ ಸಿಕ್ಕರೆ ಮಾತ್ರ ಅದಕ್ಕೆ ಹೆಚ್ಚು ಉಪಯುಕ್ತವೆನಿಸುವುದು. ಹಸಿದಾಗ ಸಿಕ್ಕ ಅನ್ನ ದೇವರು ಎನಿಸಿಕೊಳ್ಳುವುದು. ಹೊಟ್ಟೆ ತುಂಬಿದ ಮೇಲೆ ಹುಗ್ಗಿಯೂ ಸಹ ಮುಳ್ಳು ಮುಳ್ಳೆನಿಸುವುದು. ಸಂತಸದಲ್ಲಿದ್ದಾಗ ಕೈಕುಲುಕುವುದು ಎಷ್ಟು ಮುಖ್ಯವೋ ಕಷ್ಟದಲ್ಲಿದ್ದಾಗ ನೆರವಿಗೆ ದಾವಿಸುವ ಕೈಗಳು ಅವುಗಳಿಗಿಂತ ಮುಖ್ಯ. ಜೀವಂತವಿರುವಾಗ ಬಯಕೆಗಳ ಹಾರಾಟದಲ್ಲಿ ಮುಳಗಿ, ತಾತ್ಸಾರ ತೋರಿ, ಶವವಾದಾಗ ಅತ್ತು ಅತ್ತು ತೋರುವ ಪ್ರೀತಿ ಯಾವತ್ತೂ ವ್ಯರ್ಥ. ಅಂದರೆ ಇರುವಾಗಲೇ ಬೇರೆಯವರ ಕಷ್ಟ ಸಂಕಟಗಳಿಗೆ ಮಿಡಿಯಬೇಕು. ಪ್ರೀತಿ ನಂಬಿಕೆ ಸ್ನೇಹವಿದ್ದರೆ ಅಸಾಧ್ಯವೂ ಸಾಧ್ಯ. ಬಯಕೆಗಳ ಬೆನ್ನೇರಿ ಕುರುಡರಾದರೆ ಸುಂದರ ಬದುಕು ಅರ್ಥಹೀನವಾಗುವುದು ಖಚಿತ. ಒಳ್ಳೆಯ ಸಮಯಕ್ಕಿಂತ ಒಳ್ಳೆಯ ಮನುಷ್ಯನ ಸಂಬAಧ ಜತನದಿಂದ ಕಾಪಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಒಳ್ಳೆಯ ಮನುಷ್ಯ ಒಳ್ಳೆಯ ಸಮಯವನ್ನು ತರಬಲ್ಲ. ಆದರೆ ಒಳ್ಳೆಯ ಸಮಯವು ಒಳ್ಳೆಯ ಮನುಷ್ಯನನ್ನು ತರಲಾರದು.
ಬಯಕೆಗಳು ಒಬ್ಬರಿಂದೊಬ್ಬರಿಗೆ ಬದಲಾಗುತ್ತವೆ. ಪೂರೈಸಿದಾಗ ಸಂತೋಷ ಉಂಟಾಗುತ್ತದೆ. ಇಲ್ಲದಿದ್ದಾಗ ದುಃಖ ಉಂಟಾಗುತ್ತದೆ. ಅಂದರೆ ಬಯಕೆಗಳು ಸಂತೋಷ ಮತ್ತು ದುಃಖಕ್ಕೆ ಕಾರಣವಾಗುತ್ತವೆ. ಬಯಕೆಗಳಿಗೆ ಮತ್ತು ಸುಖ ದುಃಖಗಳಿಗೆ ನಾವು ಎಂಥವರ ಸಂಗದಲ್ಲಿರುತ್ತೇವೆ ಎಂಬುದು ಹೆಚ್ಚಿನ ಪರಿಣಾಮ ಬೀರುವುದು. ನಾವು ಬೆಳೆಯುವುದು ಉಳಿಯುವುದು ಅಳಿಯುವುದು ಎಲ್ಲವೂ ಸಂಗದಿAದಲೇ. ಬಯಕೆಗಳು ಸಂಗದ ಪ್ರಭಾವಕ್ಕೆ ಒಳಗಾಗದೆ ಇರುವಂಥವು ಅಲ್ಲ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ ದುರ್ಜನರ ಸಂಗ ಬಚ್ಚಲಿನ ಕೊಚ್ಚೆಯಂತೆ. ಸಜ್ಜನರ ಸಂಗ ಜೇನುತುಪ್ಪ ಸವಿದಂತೆ ದುರ್ಜನರ ಸಹವಾಸ ಕೊಳಚೆ ನೀರಿನ ಹಾಗೆ ಅಸಹ್ಯವಾಗಿರುತ್ತದೆ. ಇದನ್ನೇ ವಿವರಿಸಿ ಹೇಳುವುದಾದರೆ, ಸಜ್ಜರ ಸಂಗದಲ್ಲಿ ಬೆಳೆಯುತ್ತೇವೆ. ದುರ್ಜನರ ಸಂಗದಲ್ಲಿದ್ದರೆ ಅಳಿಯುತ್ತೇವೆ. ಕೇವಲ ನಾರನ್ನಾಗಲಿ ದಾರವನ್ನಾಗಲಿ ಜನರು ತಲೆಯಲ್ಲಿ ಧರಿಸುವುದಿಲ್ಲ. ಹೂವಿನ ಹಾರದ ಸಂಬಂಧದಿಂದ ನಾರನ್ನೂ ತಲೆಯಲ್ಲಿ ಮುಡಿಯುತ್ತಾರೆ. ಬಯಕೆಗಳ ವಿಚಾರದಲ್ಲಿ ಸಂಗವೂ ಮುಖ್ಯವಾಗುತ್ತದೆ.
ಕೆಲವು ಬಯಕೆಗಳು ನೈತಿಕವಾಗಿ ಸರಿಯಾಗಿರುವುದಿಲ್ಲ. ಬಯಕೆಗಳ ದರ್ಬಾರಿನಲ್ಲಿ ಎಲ್ಲದಕ್ಕೂ ಅಸ್ತು ಇಲ್ಲ ಎಂದು ತಿಳಿಯದೇ ಇರುವ ಅಲ್ಪ ಮತಿಗಳು ಅವುಗಳ ಹಿಂದೆಯೇ ಸುತ್ತುತ್ತಾರೆ. ಕೆಲವರಂತೂ ಹಣವೇ ಜೀವನವೆಂದು ಅದರ ಹಿಂದೆ ಓಡುತ್ತಾರೆ. ಹಣಕ್ಕೆ ಎಲ್ಲವೂ ದಕ್ಕುವುದಿಲ್ಲ. ಹಣಕ್ಕೆ ದಕ್ಕದ ಅನೇಕ ಸಂಗತಿಗಳು ಈ ಜಗದಲ್ಲಿವೆ ಎಂಬುದನ್ನು ಅರಿತು ನಡೆಯಬೇಕು. ಅದಕ್ಕೆಂದಲೇ ಹಿರಿಯರು ಹೇಳಿದ್ದು,’ ಓಡುವುದಾದರೆ ಮಾಡುವ ಕೆಲಸದ ಹಿಂದೆ ಓಡು. ಹಣದ ಹಿಂದೆ ಓಡ ಬೇಡ. ನಾವು ಕೆಲಸದ ಹಿಂದೆ ಓಡಿದರೆ ಹಣ ತಾನೇ ನಮ್ಮ ಹಿಂದೆ ಓಡಿ ಬರುತ್ತದೆ. ಮಾಡುವುದಾದರೆ ಒಳ್ಳೆಯ ಕೆಲಸ ಮಾಡು, ಕೆಟ್ಟದ್ದು ತಾನೇ ಓಡಿ ಹೋಗುತ್ತದೆ. ಹುಡುಕುವುದಾದರೆ ಒಳ್ಳೆಯ ಮಾರ್ಗ ಹುಡುಕು.’ ಅದನ್ನು ಬಿಟ್ಟು ಕೆಟ್ಟದ್ದರ ಹಿಂದೆ ಓಡಿದರೆ ಅದು ನಿನ್ನನ್ನು ಅಟ್ಟಿಸಿಕೊಂಡು ಬಂದು ಸರ್ವನಾಶ ಮಾಡುತ್ತದೆ. ಹಣ, ಅಧಿಕಾರದ ಬಯಕೆಗಿಂತ ಜ್ಞಾನ ಕಲಿಕೆ ಬೆಳವಣಿಗೆಯಂತಹ ಅರಿವಿನ ಬಯಕೆಗಳ ಬಯಸುವುದು ಏಳ್ಗೆಗೆ ನಾಂದಿ ಹಾಡುವುದು ಅಲ್ಲವೇ?
ಜಯಶ್ರೀ.ಜೆ.ಅಬ್ಬಿಗೇರಿ



