ವಚನ ಸಂಗಾತಿ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ
ಚನ್ನಬಸವಣ್ಣನವರ ವಚನಗಳು-

*ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು*
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಅಷ್ಟವಿಧಾರ್ಚನೆ ಷೋಢಶೋಪಚಾರಎಂಬರಲ್ಲದೆ
ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ
ಕೂಡಲ ಚೆನ್ನ ಸಂಗಮ ದೇವಾ – ಚೆನ್ನ ಬಸವಣ್ಣ
ಚೆನ್ನ ಬಸವಣ್ಣನವರು ವಯಸ್ಸಿನಲ್ಲಿ ಅತ್ಯಂತ ಕಿರಿಯರಾಗಿದ್ದರೂ ಶರಣ ಸಾಹಿತ್ಯ ಗುರು ಲಿಂಗ ಜಂಗಮ ತತ್ವಗಳಲ್ಲಿ ಶ್ರೇಷ್ಠ ಅನುಭವಿಗಳು. ಭಕ್ತ ಭವಿಯ ಜೀವನ ಸಾಧನೆಯ ಸಾರ್ಥಕತೆ ಬಗ್ಗೆ ಅರ್ಥಪೂರ್ಣವಾಗಿ ತಮ್ಮ ವಚನದಲ್ಲಿ ಚಿಂತಿಸಿದ್ದಾರೆ.
*ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು*
ಭವಿ ನಾಲ್ಕು ಜಾವ ಅಂದರೆ ದಿನದ ಹನ್ನೆರಡು ಗಂಟೆಗಳ ಕಾಲ ತನ್ನ ಹೊಟ್ಟೆ ಉಪಜೀವನ ಬಗ್ಗೆ ಚಿಂತಿಸುತ್ತಾನೆ . ಆಹಾರ ಸಂಗ್ರಹ ಹಣ ಧನ ಕನಕ ಕ್ರೋಢೀಕರಿಸುವುದು ,ಮನೆ ಕಟ್ಟುವುದು ಆಸ್ತಿ ಮಾಡುವುದು ಮಕ್ಕಳ ಮಡದಿಯ ಸೌಖ್ಯವನ್ನು ಬಯಸುವುದು .ತನ್ನ ಇಂದ್ರಿಯ ಚಾಪಲ್ಯಕ್ಕೆ ಮಾರು ಹೋಗಿ ಅದಕ್ಕೆ ಬೇಕಾದ ವಸ್ತು ವಿಷಯಗಳನ್ನು ಅನುಭವವಿಸಲು ಪರಿ ತಪಿಸುತ್ತಾನೆ . ಭವಿಯು ಪ್ರಾಪಂಚಿಕ ವಿಷಯಾದಿಗಳಲ್ಲಿ ತನ್ನ ಮೂಲ ಬೌದ್ಧಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ.ಕೇವಲ ತನ್ನ ಹೊಟ್ಟೆ ಹೊರೆಗೆ ಐಹಿಕ ಸುಖಕ್ಕೆ ಕುದಿಯುತ್ತಾನೆ ಚಡಪಡಿಸುತ್ತಾನೆ.
*ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು*
ಹಗಲಿನಲ್ಲಿ ಸಂಪಾದಿಸಿದ ಹಣ ಧನ ಆಸ್ತಿ ಹೇಗೆ ವ್ಯಯ ಮಾಡಬೇಕು ಎಂಬ ಲೆಕ್ಕದಲ್ಲಿ ಸದಾ ವಿಚಾರಿಸುವ ಭವಿ ,ರಾತ್ರಿಯಿಡಿ ವ್ಯಸನಕ್ಕೆ ಜಾರುತ್ತಾನೆ ಕನಸಿನಲ್ಲಿಯೂ ಕೂಡ ತಾನು ಪಡೆಯಬಹುದಾದ ಪದಾರ್ಥಿಕ ಸಂಗ್ರಹಣೆ ಆಸ್ತಿ ಅವುಗಳನ್ನು ಪಡೆಯುವ ತಂತ್ರಗಾರಿಕೆ ಬಗ್ಗೆ ರಾತ್ರಿ ನಾಲ್ಕು ಜಾವ ಅಂದರೆ ಒಂದು ಜಾವಕ್ಕೆ ನಾಲ್ಕು ಗಂಟೆ ಸಮಯ ನಿಗಧಿಯಾಗಿರುತ್ತದೆ .ಸಂಪಾದಿಸಿದ ಆಸ್ತಿಯನ್ನು ವ್ಯಸನದಲ್ಲಿ ಕಳೆಯುವದರಲ್ಲಿ ಕುದಿಯುತ್ತಿರುವ ಮನುಷ್ಯ ತನ್ನ ನೆಮ್ಮದಿ ಶಾಂತಿ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ .ವ್ಯಸನ ದುರಾಭ್ಯಾಸದಲ್ಲಿ ತೊಡಗಿರುವ ಭವಿ ತಾನು ಗಳಿಸಿದ ಸಂಪತ್ತು ಆಸ್ತಿ ಎಲ್ಲಿ ತನ್ನ ಬಿಟ್ಟು ಹೋಗುತ್ತದೆ ಎಂದು ಸದಾ ಚಿಂತಿಸುತ್ತಾನೆ.ಆಗ ಮನುಷ್ಯ ತಾನು ಹಗಲು ಇರುಳು ವ್ಯಾಕುಲಕ್ಕೆ ಒಳಗಾಗುತ್ತಾನೆ .ಹಗಲಿನಲ್ಲಿಯೂ ಹಂಬಲಿಸುವ ಮನ ರಾತ್ರಿಯಿಡಿ ಮತ್ತೆ ಚಿಂತಾಕ್ರಾಂತನಾಗುತ್ತಾನೆ .
*ಅಷ್ಟವಿಧಾರ್ಚನೆ ಷೋಢಶೋಪಚಾರಎಂಬರಲ್ಲದೆ*
ಅನ್ಯ ಮಾರ್ಗದಿಂದ ಗಳಿಸಿದ ಆಸ್ತಿ ಹಣ ಸಂಪತ್ತು ಅವುಗಳ ಪಡೆದ ವಾಮ ಮಾರ್ಗಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿ ಸಮಾಧಾನ ಹೊಂದಲು ಬಾಹ್ಯದಲ್ಲಿ ಅಷ್ಟವಿಧಾರ್ಚನೆ ಹಾಗೂ ಅರ್ಘ್ಯ ಪಾದ್ಯ ದೂಪ ದೀಪ ನೈವೆದ್ಯ ಮುಂತಾದ ಷೋಢಶೋಪಚಾರ ಮುಂತಾದ ಒಣ ಆಚರಣೆಯಿಂದ ಭವಿ ಸಮಾಧಾನಪಡಲು ಯತ್ನಿಸುತ್ತಾನೆ. ತನ್ನ ಪ್ರತಿಷ್ಠೆಗೆ ಆಡಂಭರದ ಪೂಜೆಯಲ್ಲಿ ತೊಡಗುತ್ತಾನೆ. ಇಂದು ಅನೇಕ ಶ್ರೀಮಂತರು ಸಂಸ್ಕಾರವಿಲ್ಲದಿದ್ದರೂ ಲಿಂಗಕ್ಕೆ ಸಮಾಜಕ್ಕೆ ಅನೇಕ ರೀತಿಯ ಆಚರಣೆಯ ಮೂಲಕ ತಮ್ಮ ಸ್ವಾಮ್ಯತ್ವವನ್ನು ಹೊಂದುತ್ತಾರೆ.ಪೂಜೆ ಪ್ರವಚನ ಕೀರ್ತನೆ ಸಾಮೂಹಿಕ ಪ್ರಸಾದ ಇದು ಹೊರಗೆ ಡಾಂಭಿಕವಾಗಿ ತೋರುವ ಇಂತಹ ಆಚರಣೆಗಳು ಲಿಂಗಕ್ಕೆ ಹೊರಗೆ .
*ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ ಕೂಡಲ ಚೆನ್ನ ಸಂಗಮ ದೇವಾ*
ಸಂಸ್ಕಾರ ರಹಿತ ಭಾವ ಶುದ್ಧವಿಲ್ಲದವನ ಗಳಿಕೆ ಕಿಲ್ಬಿಷ ಉಂಟು ಮಾಡುತ್ತದೆ. ತನ್ನ ಚೈತನ್ಯವನ್ನು ನಂಬಿ ಸಮಷ್ಟಿಯ ನಿರಂತರ ಅಭಿವೃದ್ಧಿಗೆ ಸ್ವಾನುಭವ ಮಾಡುವ ಭಕ್ತ ಶ್ರೇಷ್ಠನಾಗುತ್ತಾನೆ. ಅಂತೆಯೇ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂದಿದ್ದಾರೆ ಚೆನ್ನ ಬಸವಣ್ಣನವರು. ತನ್ನದೆನ್ನುವುದು ಸತ್ಯ ಸಮತೆ ಶಾಂತಿ ತರ್ಕ ವೈಚಾರಿಕತೆ ಎಂಬ ಪ್ರಾಮಾಣಿಕ ಪ್ರಜ್ಞೆ ಅದುವೇ ನಿಜವಾದ ಆಸ್ತಿ ಖನಿಜ . ಉತ್ತಮ ಭಾವಗಳನ್ನು ಹೊಂದಿದ ಭಕ್ತನು ತನ್ನ ಉತ್ತಮ ಗುಣಗಳನ್ನು ಒತ್ತೆಯಿಟ್ಟು ನೆಮ್ಮದಿ ಶಾಂತಿ ಸಂತಸ ಎಂಬ ನಿಧಾನವನ್ನು ಆಸ್ತಿಯನ್ನು ಗಳಿಸುವನು ,ಆದರೆ ಅಂತಹ ವ್ಯಕ್ತಿಗಳನ್ನು ಲಿಂಗ ಸಾಕ್ಷಿಯಾಗಿ ನಾನು ಕಾಣಲಾರೆನು ಎಂದು ಚೆನ್ನ ಬಸವಣ್ಣನವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಸಮಾಜದಲ್ಲಿ ಒಳ್ಳೆಯ ನಡತೆ ಸಚ್ಚಾರಿತ್ರ್ಯಕ್ಕೆ ಬೆಲೆಕೊಡುವವರು ಕಡಿಮೆಯಾಗಿದ್ದಾರೆ ಲಾಂಛನ ಆಡಂಭರದ ಪೂಜೆ ಶ್ರೀಮಂತರ ಅಟ್ಟಹಾಸದಲ್ಲಿ ಲಿಂಗ ತತ್ವ
ಮಸುಕಾಗುತ್ತಿದೆ ಎಂದೆನ್ನುವ ಭೀತಿ ಶರಣ ಚೆನ್ನ ಬಸವಣ್ಣನವ ವಚನದಲ್ಲಿ ಕಾಣಬಹುದು.
ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ





ಅರ್ಥಪೂರ್ಣ ವಚನ ವಿಶ್ಲೇಷಣೆ ಸರ್
ಅತ್ಯಂತ ಅಪರೂಪದ ಸುಂದರ ವಿಶ್ಲೇಷಣೆ ಸರ್
ಸರ್ ಸುಂದದ ವಚನ ವಿಶ್ಲೇಷಣೆ
Excellent… Vachan
ಸರ್ ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ