ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಲಾಯ ತಸ್ಮೈ ನಮಃ ಎಂದರೆ ಎಲ್ಲವನ್ನೂ ಕಾಲವೇ ಕಲಿಸುತ್ತದೆ ಎಂದರ್ಥ. ಮನುಷ್ಯನ ಜೀವನದಲ್ಲಿ ಕಾಲವೆಂಬುವುದು ಬಹಳ ಪ್ರಮುಖವಾಗಿದೆ.ಈ ಕಾಲವೆಂಬುದು ಕೆಲವೊಮ್ಮೆ ನಮ್ಮನ್ನು ಕಾಡುತ್ತದೆ ಪೀಡಿಸುತ್ತದೆ,ಕೆಲವೊಮ್ಮೆ ಖುಷಿಗೊಳಿಸುತ್ತದೆ, ಕೆಲವೊಮ್ಮೆ ದುಃಖಿಸುವಂತೆ ಮಾಡುತ್ತದೆ, ಕೆಲವೊಮ್ಮೆ ಹರ್ಷೋಲ್ಲಾಸವನ್ನು ತರುತ್ತದೆ. ಇಂತಹ ಅಮೂಲ್ಯವಾದ ಕಾಲವನ್ನು ನಾವು ಬಹಳ ಎಚ್ಚರಿಕೆಯಿಂದ ವಿನಯೋಗಿಸಿಕೊಳ್ಳಬೇಕು.ಕಳೆದ ಸಮಯ, ಆಡಿದ ಮಾತು, ಬಿಟ್ಟ ಬಾಣ ಇವು ಯಾವುದನ್ನೂ ಹಿಂದೆ ಪಡೆಯಲಾಗದು. ಆದ್ದರಿಂದ ನಮಗಿರುವ ಕಾಲ ಅಥವಾ ಸಮಯವನ್ನು ಸದ್ಬಳಕೆ ಮಾಡುವಲ್ಲಿ ನಾವು ಬಹಳ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು.

ನಮ್ಮ ಜೀವನದಲ್ಲಿ ಇನ್ನೊಬ್ಬರು ಅತಿಯಾಗಿ ಆಟ ಆಡಿದಾಗ, ನಮಗೆ ಮೋಸ ಮಾಡಿದಾಗ,ಮಾನಸಿಕವಾಗಿ ಕಾಡಿದಾಗ, ನಮಗಾದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೇ ಇರುವಾಗ “ಕಾಲಾಯ ತಸ್ಮೈ ನಮಃ “ಎಂದು ನಾವು ಸಮಾಧಾನ ಪಟ್ಟುಕೊಳ್ಳುತ್ತೇವೆ .ಇಂದು ಅವನು ಹಾರಾಡುತ್ತಾನೆ, ಹಾರಾಡಲಿ. ನನಗೆ ಉಪದ್ರವ ಕೊಡುತ್ತಾನೆ ಕೊಡಲಿ, ಮುಂದೊಂದು ದಿನ ಅವನೇ ಅನುಭವಿಸುವಂತೆ ಆಗುತ್ತದೆ .ಅಂದರೆ ಅದರ ಅರ್ಥ ಮುಂದಿನ ಜೀವನದಲ್ಲಿ ಕಾಲವೇ ಅವನಿಗೆ ಅನುಭವಿಸುವಂತೆ ಮಾಡುತ್ತದೆ.
“ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ”ಎಂದು ಹೇಳಿದ ಹಾಗೆ ಇವತ್ತು ನಾನು ಕಷ್ಟ ಪಟ್ಟರೆ ನನಗೆ ಇತರರು ಕಷ್ಟ ಕೊಟ್ಟರೆ ,ಮುಂದೆ ಕಷ್ಟ ಕೊಟ್ಟವರೇ ಕಷ್ಟವನ್ನು ಅನುಭವಿಸುವ ಸಮಯವೂ ಬರುತ್ತದೆ .ಅದನ್ನು ಕಾಲವೇ ನಿರ್ಧರಿಸುತ್ತದೆ ಎಂದು, ನಾವು ಬದುಕಿನಲ್ಲಿ ಭರವಸೆಯನ್ನು ತಂದುಕೊಳ್ಳುತ್ತೇವೆ,ಸಮಾಧಾನ ಪಟ್ಟುಕೊಳ್ಳುತ್ತೇವೆ

ಈ ಭವದ ಬದುಕು ಕಾಲದ ನಿಯಂತ್ರಣದಲ್ಲಿರುತ್ತದೆ ಎನ್ನಬಹುದು. ಯಾವುದು ನಾವು ಹೇಳಿದ ಹಾಗೆ ಅಥವಾ ನಾವು ಭಾವಿಸಿದ ಹಾಗೆ ಅಥವಾ ನಾವು ಯಾವಾಗ ನಡೆಯಬೇಕೆಂದು ಭಾವಿಸುತ್ತೇವೆ ಆಗ ನಡೆಯದೆ ಇರಬಹುದು. ಯಾವ ಯಾವ ಕಾರ್ಯ ಯಾವ ಯಾವ ಕಾಲಕ್ಕೆ ನಡೆಯಬೇಕೊ ಅದನ್ನು ಕಾಲವೇ ನಿರ್ಧರಿಸುತ್ತದೆ
ಕಾಲವೇ ನಮ್ಮನ್ನು ಆಯಾಯ ಪರಿಸ್ಥಿತಿಗೆ ಹೊಂದಿಕೊಂಡು ಬದುಕುವಂತೆ ಮಾಡುತ್ತದೆ .ನಮ್ಮ ಹಿರಿಯರು ಹೇಳಿದ್ದಾರೆ “ಅಂದಿಗೆ ಅದೇ ಸುಖ, ಇಂದಿಗೆ ಇದೇ ಸುಖ” ಎಂದು. ಹಿಂದಿನ ಕಾಲದಲ್ಲಿ ಯಾವ ಪರಿಸ್ಥಿತಿ ಇತ್ತೋ, ಆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಅಂದು ನಾವು ಬದುಕುತ್ತಿದ್ದೆವು. ಅಂದಿನ ಕಾಲಕ್ಕೆ ಅದೇ ನಮಗೆ ಸುಖವನ್ನು ಕೊಟ್ಟಿತ್ತು. ಇಂದು ಹಾಗಿಲ್ಲ ಪರಿಸ್ಥಿತಿ ಬದಲಾಗಿದೆ . ಸಾಕಷ್ಟು ಬದಲಾವಣೆಗಳು ನಮ್ಮ ಕಣ್ಣ ಮುಂದಿವೆ. ಅಂತಹ ಬದಲಾವಣೆಗಳಿಗೆ ಹೊಂದಿಕೊಂಡು ಕಾಲಕ್ಕೆ ಸರಿಯಾಗಿ ನಾವು ಬದುಕುತ್ತಿದ್ದೇವೆ. ಇದನ್ನೇ ನಮ್ಮ ಹಿರಿಯರು” ಕಾಲಕ್ಕೆ ತಕ್ಕಂತೆ ಕೋಲ” ಎನ್ನುತ್ತಾರೆ . ಆಯಾಯ ಕಾಲಕ್ಕೆ ಅನುಗುಣವಾಗಿ ನಾವು ಹೊಂದಿಕೊಂಡು ಬದುಕುವಂತೆ,ಜೀವನವನ್ನು ನಡೆಸುವಂತೆ ಅನುಭವ ಪಡೆದುಕೊಳ್ಳುವುದು ನಮ್ಮ ಜೀವನದ ಕಾಲದಿಂದ .ಹಾಗಾಗಿ ಕಾಲಾಯ ತಸ್ಮೈ ನಮಃ ಎಂಬ ಸಮಾಧಾನ ಸಂತೃಪ್ತಿ ನಮ್ಮಲ್ಲಿರುತ್ತದೆ.

ನಮ್ಮ ನಿತ್ಯ ಜೀವನದಲ್ಲಿ ನೋಡಿದರೆ ನಾವು ಒಂದು ರೀತಿಯ ಬದುಕನ್ನು ಬದುಕುತ್ತಾ ಇರುತ್ತೇವೆ,ಆದರೆ ಯಾವನೋ ಒಬ್ಬ ಬಂದು ವಿಶಿಷ್ಟವಾದ ರೀತಿಯಲ್ಲಿ ಬದುಕುತ್ತಾನೆ. ಅದು ನಮಗೆ ಹಿಡಿಸದು ಎಂದಾದರೆ ನಾವು ಏನು ಹೇಳುತ್ತೇವೆ ?ಎಲ್ಲವನ್ನು “ಕಾಲ ಮಹಿಮೆ” ಎನ್ನುತ್ತೇವೆ ಅಂದರೆ ನಮ್ಮ ಜೀವನದಲ್ಲಿ ಉಂಟಾಗುವ ಏರುಪೇರುಗಳು, ಕಷ್ಟ ಸುಖಗಳು, ಒಳಿತು, ಕೆಡುಕುಗಳು,ಅಭಿವೃದ್ಧಿ, ಲಾಭ, ನಷ್ಟ ಇವೆಲ್ಲವನ್ನು ಕಾಲವೇ ನಿರ್ಧರಿಸುತ್ತದೆ ಎಂದು ಹೇಳಬಹುದು.

“ಹಣ್ಣೆಲೆ ಉದುರಿದಾಗ ಹಸಿರೆಲೆ ನಕ್ಕಂತೆ” ಇದು ಒಂದು ಕಾಲದ ಮಹತ್ವವನ್ನು ತಿಳಿಸುವಂತಹ ಗಾದೆ ಮಾತು ಎಂದೇ ಹೇಳಬಹುದು. ಇಲ್ಲಿ ಒಂದು ಮರದಲ್ಲಿ ಇರುವಂತಹ ಹಸಿರಾದ ಎಲೆ, ಹಣ್ಣಾಗಿ ಉದುರಿ ಕೆಳಗೆ ಬಿದ್ದು ,ಅದು ಒಣಗಿ ಹೋಗುತ್ತದೆ ಎಲ್ಲ ಮರಗಳ ಸ್ಥಿತಿಯು ಅದೇ ಆಗಿರುತ್ತದೆ. ಕಾಲ ಹೆಚ್ಚು ಕಡಿಮೆ ಅಷ್ಟೇ .ಅಂದರೆ ಈ ವ್ಯತ್ಯಾಸಕ್ಕೆ ಕಾರಣ ಕಾಲವೇ ತಾನೇ!!? ಮನುಷ್ಯನ ಸಾವು ಕೂಡ ಹಾಗೆ ಇಂದು ಕೆಲವರು ಸತ್ತರೆ ಕೆಲವರು ನಾಳೆ ಸಾಯಬಹುದು. ಆದರೆ ಮನುಷ್ಯ ಇನ್ನೊಬ್ಬನಿಗೆ ಬಂದ ಸ್ಥಿತಿಯನ್ನು ಕಂಡು ನಗಬಾರದು, ಅಪಹಾಸ್ಯ ಮಾಡಬಾರದು ನಮಗೂ ಅಂತಹದೊಂದು ಸಂದರ್ಭವನ್ನು ಅಥವಾ ಸಂಕಷ್ಟದ ಸಮಯವನ್ನು ಕಾಲ ಒದಗಿಸಿಕೊಡುತ್ತದೆ ಎಂಬುದೇ ಇದರ ಅರ್ಥ .”ಹಣ್ಣೆಲೆ ಉದುರಿದಾಗ ಹಸಿ ಎಲೆ ನಕ್ಕಂತೆ “ಅಂದರೆ ಹಸಿರೆಲೆಗೆ ಹಣ್ಣೆಲೆಯ  ಪರಿಸ್ಥಿತಿ ಮುಂದೊಂದು ದಿನ ಬರುತ್ತದೆ ಎಂಬ ಸತ್ಯದ ಅರಿವು ಇರುವುದಿಲ್ಲ. ಆ ಸತ್ಯದ ಅರಿವನ್ನು ಕಾಲ ಆ ಎಲೆಗೆ ಮುಂದೊಂದು ದಿನ ಮಾಡಿಕೊಡುತ್ತದೆ ಅಂದರೆ ಹಸಿರಾಗಿದ್ದ ಎಲೆ ಹಣ್ಣಾದಾಗ ಸತ್ಯದ ಅರಿವು ಆಗುತ್ತದೆ. ನಮ್ಮ ಜೀವನದಲ್ಲಿಯೂ ಸಹ ಹೀಗೆ ಕೆಲವೊಮ್ಮೆ ನಮ್ಮಷ್ಟಕ್ಕೆ ನಾವು ದುಃಖಿಸುತ್ತೇವೆ. ದೇವರು ನನಗೆ ಯಾಕೆ ಇಂಥ ಕಷ್ಟವನ್ನು ಕೊಡುತ್ತಾನೆ ಅವನಿಗೆ ಯಾಕೆ ಕಷ್ಟ ಕೊಡುತ್ತಿಲ್ಲ ಎನ್ನುವ ಪ್ರಶ್ನೆಗೆ ನಮಗೆ ಉತ್ತರ ಗೊತ್ತಿರುವುದಿಲ್ಲ. ಆದರೆ ಅಂತಹ ಪ್ರಶ್ನೆಗೆ ಕಾಲವೇ ಉತ್ತರಿಸುತ್ತದೆ. ಹಾಗಾಗಿ ಎಲ್ಲವೂ ‘ಕಾಲಾಯ ತಸ್ಮೈ ನಮಃ’ ನಾವು ಕೇವಲ ನಿಮಿತ್ತ ಮಾತ್ರ .
ನಮ್ಮ ಬದುಕಿನಲ್ಲಾಗಲಿ, ಸಮಾಜದಲ್ಲಾಗಲಿ,ಅಹಿತಕರ ಘಟನೆಗಳು ನಡೆದಾಗ ಅಥವಾ ಸಮಾಜದಲ್ಲಿ ಅನಪೇಕ್ಷಿತ ಘಟನೆಗಳು ನಡೆದಾಗ,ಅದರಿಂದ ತೊಂದರೆ ಉಂಟಾದಾಗ ನಾವು ಅದನ್ನು ತಡೆಯಲು ಬಯಸುತ್ತೇವೆ. ಆ ತೊಂದರೆಯಿಂದ ಪಾರಾಗಲು ಪ್ರಯತ್ನಿಸುತ್ತೇವೆ.ಆದರೆ ಅದು ಸಾಧ್ಯವಾಗದೇ ಇದ್ದಾಗ ಎಲ್ಲಕ್ಕೂ “ಕಾಲವೇ ಉತ್ತರಿಸುತ್ತದೆ” ಎಂದು ನಾವು ಸುಮ್ಮನಾಗಿಬಿಡುತ್ತೇವೆ ಅಂದರೆ ತಪ್ಪು ಮಾಡಿದವರಿಗೆ ತಾನು ಮಾಡುವುದು ತಪ್ಪು ಎಂಬುದರ ಅರಿವು ಆಗದಿದ್ದರೂ,ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪವನ್ನು ಪಡುತ್ತಾರೆ.ಇದೆಲ್ಲದಕ್ಕೂ ಕಾಲ ಕೂಡಿ ಬರಬೇಕು.

ಹಿರಿಯರು ಕಿರಿಯರಿಗೆ ಕೆಲವೊಂದು ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ. ಆದರೆ ಕೆಲವರು ಹಿರಿಯರ ಮಾರ್ಗದರ್ಶನವನ್ನು ಅನುಸರಿಸದೇ ದಿಕ್ಕರಿಸಿ ನಡೆಯುತ್ತಾರೆ. ಮುಂದೊಂದು ದಿನ ಅವರಿಗೆ ಕಾಲವೇ ಸರಿಯಾದದ್ದನ್ನು ಕಲಿಸುತ್ತದೆ ಅಂದರೆ ತಾನು ಹಿರಿಯರು ಹೇಳಿದ ಮಾತನ್ನು ದಿಕ್ಕರಿಸಿ ತಪ್ಪು ಮಾಡಿದೆ. ಅಂದು ಅವರು ಹೇಳಿದ್ದನ್ನು ಕೇಳುತ್ತಿದ್ದರೆ ಇಂದು ಹೀಗಾಗುತ್ತಿರಲಿಲ್ಲ. ಇಂದು ನನ್ನ ಕೆಟ್ಟ ಸಮಯ ಅಥವಾ ಕಾಲ ಎಂದು ಪಶ್ಚಾತ್ತಾಪ ಪಡುತ್ತಾರೆ.ಸಮಾಜದಲ್ಲಿ ಯಾರೇ ಆಗಲಿ ಏನಾದರೂ ತಪ್ಪು ಮಾಡಿದಾಗ ಅದನ್ನು ಸರಿಪಡಿಸಲು ಪ್ರಯತ್ನಿಸಿ ಕೂಡ ಸಾಧ್ಯವಾಗದೇ ಇದ್ದಾಗ,ಎಲ್ಲವನ್ನು ಕಾಲನ ನಿರ್ಧಾರಕ್ಕೆ ಬಿಟ್ಟುಬಿಡುತ್ತಾರೆ. ಮುಂದೊಂದು ದಿನ ಕಾಲವೇ ಅವನಿಗೆ ಉತ್ತರಿಸುತ್ತದೆ ಎಂದು ಹೇಳಿ ಸುಮ್ಮನಾಗುತ್ತಾರೆ.

“ವಿನಾಶಕಾಲೇ ವಿಪರೀತ ಬುದ್ಧಿ”ಎಂಬ ನುಡಿ ಮಾತಿನಲ್ಲಿಯೂ ಕೂಡ ಕಾಲನ ಮಹಿಮೆಯನ್ನು ಕಾಣಬಹುದು.ನಾಶ ಅಥವಾ ನಿರ್ಮಾಣ ಮಾಡುವಂತಹ ಶಕ್ತಿ ಇರುವುದು ಕಾಲನಿಗೆ ಮಾತ್ರ. ವಿನಾಶಕಾಲೇ ಅಂದರೆ ನಾಶವಾಗುವಂತಹ ಕಾಲ ಬಂದಾಗ ಮನುಷ್ಯನಿಗೆ ವಿಪರೀತವಾದ ಬುದ್ದಿ ಬರುತ್ತದೆ. ಅಂದರೆ ಕೆಟ್ಟದನ್ನು ಮಾಡುತ್ತಾನೆ ಎಂದರ್ಥ. ಹಾಗಾಗಿ ಮನುಷ್ಯ ಒಳ್ಳೆಯದಾಗುವ ಕಾಲಕ್ಕೆ ಒಳ್ಳೆ ಕೆಲಸಗಳನ್ನು ಮಾಡಿ ಕೆಟ್ಟದಾಗುವ ಕಾಲಕ್ಕೆ ಕೆಟ್ಟ ಕೆಲಸಗಳನ್ನು ಮಾಡಲು ಪ್ರೇರಣೆ ಕಾಲ ನೀಡುತ್ತದೆ ಎಂದು ಹೇಳಬಹುದು. ಅದಕ್ಕೆ ನಮ್ಮ ಹಿರಿಯರು ಹೇಳುವುದುಂಟು “ಅದೇನೋ ಕೆಟ್ಟ ಗಳಿಗೆ ನಡೆದು ಹೋಯಿತು”ಅಂದರೆ ಕೆಟ್ಟದು ನಡೆಯಲು ಕಾರಣ ಕಾಲ ಅಥವಾ ಸಮಯ  ಎಂದರ್ಥ.

ಮನುಷ್ಯನ ಬದುಕು ಅಥವಾ ಭವಿಷ್ಯ ಅನಿಶ್ಚಿತವೆಂದೇ ಹೇಳಬಹುದು .ಏಕೆಂದರೆ ಎಲ್ಲವನ್ನು ನಿರ್ಧರಿಸುವವನು ಕಾಲನೇ. ಹಾಗಾಗಿ ನಮ್ಮ ಜೀವನದಲ್ಲಿ ಮುಂದೆ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟ. ಎಲ್ಲವನ್ನು ಮೊದಲೇ ಹೇಳಲಾಗುವುದಿಲ್ಲ” ಮುಂದೆ ಹೇಗಾಗುತ್ತದೆ ನೋಡೋಣ”ಎಂಬ ಮಾತಿನ ಉದ್ಗಾರ ಇದೆ ಅರ್ಥದಲ್ಲಿ ತಾನೆ?

ಕಾಲ ಅಥವಾ ಸಮಯ ಎನ್ನುವುದು ಬಹಳ ಪ್ರಾಮುಖ್ಯವಾದ ಅಂಶ ಮನುಷ್ಯನ ಬದುಕು ಅಲ್ಪಾವಧಿ  ಆದ ಕಾರಣ ,ಜೀವಿತಕಾಲವನ್ನು ಅತ್ಯಂತ ಸುಂದರವಾಗಿ ಕಳೆಯಬೇಕು. ಇತರರಿಗೆ ಸಹಾಯವಾಗುವಂತೆ ತನ್ನನ್ನು ತಾನು ತೊಡಗಿಸಿಕೊಂಡು ಸಂತೃಪ್ತಿಯನ್ನು ಪಡೆದುಕೊಂಡು ಬದುಕಬೇಕು. ಮುಂದೆ ಜೀವನ ಹೇಗಿರುತ್ತದೆ. ಯಾವ ರೀತಿಯ ಕಾಲ ಬರಬಹುದು. ಅದಕ್ಕೆ ಹೊಂದಿಕೊಂಡು ನಾವು ಹೋಗುತ್ತೇವೆಯೋ , ಇಲ್ಲವೋ ಯಾವುದು ಕೂಡ ಮೊದಲೇ ಅರ್ಥವಾಗದು .ಅಂತಹ ಸಮಯ ಬಂದಾಗ ಅದರ ಅರಿವು ನಮಗೆ ಆಗುತ್ತದೆ .ಅಂದರೆ ಕಾಲವೇ ನಮಗೆ ಜ್ಞಾನವನ್ನಾಗಲಿ ,ಅರಿವನ್ನು ಆಗಲಿ ಕಲಿಸಿಕೊಡುತ್ತದೆ .

ಮನುಷ್ಯನ ಜೀವನದಲ್ಲಿ ಪ್ರತಿ ಹಂತದಲ್ಲೂ ಸಮಯವೆನ್ನುವುದು ಬಹಳ ಬೆಲೆಬಾಳುವಂತದ್ದು. ಬಾಲ್ಯ ಯೌವ್ವನ ಹಾಗೂ ವೃದ್ಧಾಪ್ಯ ಈ ಮೂರು ಕಾಲಗಳು ಮನುಷ್ಯನ ಬದುಕಿನಲ್ಲಿ ಬೆಳವಣಿಗೆಯ ಮೂರು ಹಂತಗಳು. ಆಯಾಯ ಹಂತದಲ್ಲಿ  ಏನೇನು ಆಗಬೇಕೋ ಅದನ್ನು ಆಯಾಯ ಕಾಲದಲ್ಲಿ ಮಾಡಿದರೆ ಮಾತ್ರ ಚಂದ .ಒಂದು ವೇಳೆ ಅದು ತನ್ನ ಗತಿಯನ್ನು ಬದಲಾಯಿಸಿದರೆ ಅದನ್ನು ಕಾಲನ ಮಹಿಮೆ ಎಂದೇ ಹೇಳಲಾಗುತ್ತದೆ. ಎಲ್ಲವೂ ಕಾಲನ ಮಹಿಮೆ .ಯಾವ ಕಾಲದಲ್ಲಿ ಯಾರ್ಯಾರಿಗೆ ಏನೇನು ಆಗಬೇಕು ಎಲ್ಲವನ್ನು ನಿರ್ಧರಿಸುವವನು ಆ ಕಾಲನೆ. “ಕಾಲಾಯ ತಸ್ಮೈ ನಮಃ “


About The Author

Leave a Reply

You cannot copy content of this page

Scroll to Top