ಗಜಲ್ ಸಂಗಾತಿ
ಸುಕನಸು
ಪ್ರಭಾವತಿ ಎಸ್ ದೇಸಾಯಿ
ಊಲಾಮಿಶ್ರಕೆ
ತರಹೀ ಗಜಲ್


ಪ್ರಭಾವತಿ ಎಸ್ ದೇಸಾಯಿಯವರ ಊಲಾಮಿಶ್ರಕೆ ತರಹೀ ಗಜಲ್
ಕೊರೆವ ಚಳಿ ಅವನ ಆಲಿಂಗನ ಬಯಸುತ ಇರುಳು ಜಾರಿತು
ಲಾಲಸೆಗೆ ಪ್ರಣಯ ಮಧುಪಾನ ಬೆರೆಸುತ ಇರುಳು ಜಾರಿತು
ಪ್ರೇಮಾಲಾಪದ ಆನಂದಧಾಮಕೆ ಲಜ್ಜೆಯ ಗೆಜ್ಜೆ ಕಳಚಿರುವೆ
ಆಸೆಯಲಿ ಸಂಕೋಚ ಪರದೆಗಳ ಸರಿಸುತ ಇರುಳು ಜಾರಿತು
ಜೊತೆಯಲಿ ಕೈ ಹಿಡಿದು ಪ್ರೀತಿಸುವುದನು ಜಗಕೆ ಸಾರುವಾಸೆ
ಒಂದಾಗುವ ಕನಸಗಳು ಛೇಡಿಸಿ ಕಾಡಿಸುತ ಇರುಳು ಜಾರಿತು
ಅದೆಂತಹ ಮೋಡಿ ಬಾಹುಬಂಧನದಲಿತ್ತು ಮೋಹವಾಗಿದೆ
ಮೃದು ಸ್ಪರ್ಶದ ನೆನಪು ಅಮಲು ಭರಿಸುತ ಇರುಳು ಜಾರಿತು
ಮಲ್ಲಿಗೆ ಸುಮದ ಪರಿಮಳವು ಭಾವನೆಗಳಿಗೂ ಮಿಡುವುದು
ಸುಖದ ಕಲ್ಪನೆಯಲಿ ಲೋಕವನೆ ಮರೆಸುತ ಇರುಳು ಜಾರಿತು
ಸುಕನಸು



