ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ʼಗಾಯಗಳ ನೇಯ್ಗೆʼ

ಹಂತ ಹಂತದಲೂ
ಗಾಯಗಳ ಮೇಲೆ ಗಾಯ
ನಿರಂತರ ಸೆಣಸಬೇಕಿದೆ
ಗಾಯವೆ ಇಲ್ಲದಂತೆ
ನಟಿಸಬೇಕಿದೆ
ಗಾಯಗಳ ನೇಯ್ಗೆಯ ಸೀರೆಯ
ಒಂದೊಂದು ಎಳೆಯಲೂ
ನಿಟ್ಟುಸಿರ ನೋವು
ಅಂಚಿನದಡಿಯಲಿ ಭಾವನೆಗಳ
ಬಂಧನ
ಸೆರಗಿನಲಿ ಸೇರಿಕೊಂಡ ಸಾವಿರಾರು ಕನಸುಗಳ ನೇಯ್ಗೆ
ನೋವಿನ ಬಣ್ಣ ಬಳಿದುಕೊಂಡು
ಮಸುಕಾಗಿದೆ
ನಾಜೂಕಿನ ಮನಸಿಗೆ
ನಯವಾಗಿ ನೇಯ್ದ
ಹುಸಿಎಳೆಗಳ ಗಾಯ ಸುತ್ತಿ ಸುತ್ತಿ ಕಾಡುತಿದೆ ನಿರಿಗೆಯುದ್ದಕೂ ನಿಂತು
ಹಿಂಸಿಸುವ ಕಳವಳದ ಭಾವನೆಗಳು
ಚೌಕಳಿ ಮಿತಿಯ
ನಿರ್ಭಂದನೆಗಳ ಸರಳಿಗಳು
ಬಂಧನಗಳಾಗಿ ಸುತ್ತಿಕೊಂಡಿವೆ
ಒಂದರೊಳಗೊಂದೊಂದು
ಮಡಚಿದ ಮಡಿಕೆಗಳು ನೊಂದರೂ
ಸಹನೆಯ ಮುಲಾಮನು
ಹಚ್ಚಿಕೊಂಡು
ಗಾಯವೇ ಇಲ್ಲದಂತೆ
ನೋವನುಂಗಿ ನಗುವ
ಮುಖದಲಿ ಒಳಗೊಳಗೆ
ಗಾಯಗಳು ಗುದ್ದಾಡುತಿವೆ
ನೋವ ಮಾಯಿಸಬಹುದು
ಕಲೆಯ ಮಾಯಿಸಬುಹುದೆ ಎಂದು?
ನನ್ನೊಳಗಿನ ನನ್ನವಳು ಕೇಳುತ್ತಿದ್ದಾಳೆ
ಗಾಯಗಳ ನೇಯ್ಗೆ ಧರಿಸಿ
ನಿನ್ನನೆ ನೀ ಮರೆತು
ನಿನ್ನತನವನೆ ನೀ ಕಳೆದುಕೊಳ್ಳಬೇಡ ಎಂದು
ಎಚ್ಚರಿಸುತ್ತಿದ್ದಾಳೆ.

ಲಲಿತಾ ಪ್ರಭು ಅಂಗಡಿ



