ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 

ಇದಿರೆನ್ನ ಹಳಿವವರು ಮತಿಯ ಬೆಳಗುವರು
ಮನದ ಕಾಳಿಕೆಯ ಕಳೆವವರೆನ್ನ ನಂಟರು
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ
ಹೇಯೋಪಾದಿಯ ತೋರುವವರು
ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು
ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ

                          -ಸಕಲೇಶ ಮಾದರಸ

 ವಚನಕಾರ ಸಕಲೇಶ ಮಾದರಸನ ಈ ವಚನದಲ್ಲಿ ಒಂದು ಭಾವ ಪ್ರಪಂಚ ತೆರೆದುಕೊಂಡಿದೆ. ಹೊಸ ದನಿಯ ಸಾಂದ್ರಶಕ್ತಿ ಇದೆ. ಭ್ರಮೆ,ವಾಸ್ತವ ಮತ್ತು ಆಧ್ಯಾತ್ಮದ  ತಾಕಲಾಟವಿದೆ. ಚಿತ್ರವತ್ತಾಗಿ ಮೂಡಿ ಬಂದ ಇಲ್ಲಿನ ವಚನದುದ್ದಕ್ಕೂ ಸಹಜ ಜನ್ಯವಾದ ಲಯ, ಪ್ರತಿಮೆಗಳಿವೆ. ಪ್ರಜ್ಞಾಪೂರ್ವಕವಾಗಿ ಅಭಿವ್ಯಕ್ತಿಸಿದ ಈ ಸಾಲುಗಳಲ್ಲಿ ಸ್ವವಿಮರ್ಶೆ ಇದೆ. ಆ ಕಾರಣಕ್ಕಾಗಿ ಈ ವಚನ ಹೆಚ್ಚು ವಿಸ್ತಾರವಾದ ಮಹತ್ವದ ವಚನವಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿಯೊಬ್ಬರ ಮನಸ್ಸಿನ ಸಂಕೀರ್ಣ ದ್ವಂದ್ವಗಳಿಗೆ ಅರ್ಥಪೂರ್ಣವಾಗಿ ಕನ್ನಡಿ ಹಿಡಿಯುವ ಇಲ್ಲಿನ ವಸ್ತು ಸಕಾಲಿಕವಾಗಿದೆ. ತೀವ್ರವಾದ ವಿಡಂಬನೆಯೊಂದಿಗೆ ವಿಷಾದವು ಮಡುಗಟ್ಟಿರುವುದು ಇದರ ಅಗ್ಗಳಿಕೆ . ಹೊಸ ಹೊಳಹು, ಹೊಳಪಿನಿಂದ ಕೂಡಿ ನಿಕಷಕ್ಕೆ ಈಡು ಮಾಡುವ ಇಲ್ಲಿನ ಭಾವ ಸೌಂದರ್ಯದ ಪ್ರಜ್ಞೆ ಗಮನಾರ್ಹ.    ನಾವಿರುವ ಪರಿಸರದಲ್ಲಿ ನಮ್ಮೊಡನೆ ವಾಸಿಸುವವರು ಕೆಟ್ಟ ಜನ, ನಮ್ಮ ಬಗೆಗೆ ಅವರಿಗೆ ಆತ್ಮವಿಶ್ವಾಸ, ಗೌರವವಿಲ್ಲ. ಸದಾ ನಮ್ಮನ್ನು ಹೀಯಾಳಿಸುವುದರಲ್ಲಿಯೇ ಕಾಲವನ್ನು ನೂಕುತ್ತಾರೆ. ಈ ಒಳತೋಟಿಯ ಸಂಕಟದಿಂದ ಹೊರಗೆ ಬರುವ ಬಗೆ ಹೇಗೆ ?. ಇಂತಹ ಮನೋಧರ್ಮದ ಜನಗಳ ನಡುವೆ ಬದುಕುವುದಕ್ಕಿಂತ ಬೇರೆ ಊರಿನಲ್ಲಿ ಬದುಕುವುದು ಉಚಿತವಾದುದು ಎಂದು ಪ್ರತಿಯೊಬ್ಬರು ಅಪೇಕ್ಷಿಸುತ್ತಾರೆ. ಸೂಕ್ಷ್ಮವಾಗಿ ಪರಿಭಾವಿಸಿದರೆ ಇದು ಎಸ್ಟರಮಟ್ಟಿಗೆ ಸರಿ? ಎಲ್ಲ ಊರಿನಲ್ಲಿಯೂ ಟೀಕೆ ಮಾಡುವವರು, ಹೊಟ್ಟೆಕಿಚ್ಚಿನಿಂದ  ಹಗುರವಾಗಿ ಮಾತನಾಡುವವರು ಇದ್ದೇ ಇರುತ್ತಾರೆ.  ಇದು ಸ್ಪಷ್ಟವಾದ ಕಲ್ಪನೆ.ಇದು ಜಗದ ನಿಯಮ ಕೂಡ.ಅಂತವರೇ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವವರು ಎಂದು ವಚನಕಾರ ಇಲ್ಲಿ ಬಲವಾದ ತೀರ್ಮಾನಕ್ಕೆ ಬರುತ್ತಾರೆ.      ನಮ್ಮ ಮನಸ್ಸಿನ ಕಲ್ಮಶವನ್ನು ಕಳೆಯುವ ಶಕ್ತಿ  ಒಡನಾಡಿಗಳಿಗಿರುತ್ತದೆ. ಅವರು ನಮ್ಮ ಅಂತರಂಗ ಪ್ರಪಂಚದ ಆಗು ಹೋಗುಗಳ ವಿಕಾರಗಳನ್ನು ಚೆನ್ನಾಗಿ ಬಲ್ಲವರು. ಅವರೇ ನಿಜವಾದ ಬಂಧುಗಳು.ಪ್ರೀತಿಯಿಂದ ತಿದ್ದುವ ನೈತಿಕ ಶಕ್ತಿ ಅವರಿಗಿದೆ. ಅವರ ಗೆಳೆತನದ ನಿಷ್ಕಲ್ಮಶ ಪ್ರೀತಿ, ಔದಾರ್ಯ, ಕಾಳಜಿ, ಸೌಜನ್ಯ ನಮ್ಮ ವ್ಯಕ್ತಿತ್ವವನ್ನು ಬೆಳಗಬಲ್ಲದು. ಅವರಿಗೆ ನಮ್ಮನ್ನು ನಾಳೆಯ ಕನಸುಗಳಲ್ಲಿ ತೊಡಗಿಸುವ ಉಮೇದಿ ಇರುತ್ತದೆ. ಅವರು ಮಾತ್ರ ನಾಳಿನ ದಿನಗಳ ಬಗೆಗೆ ನಮ್ಮೊಳಗೆ ಹೊಸ ಭರವಸೆ, ಕನಸುಗಳನ್ನು ಬಿತ್ತಬಲ್ಲರು. ಅಂತವರಿಗಾಗಿ ಮನಸ್ಸು ಹಗಲಿರುಳು ಧಾವಂತದಲಿ ತುಡಿಯುತ್ತದೆ. ಅವರು ಪರ ಊರಿನಲ್ಲಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವರನ್ನು ಹುಡುಕಿಕೊಳ್ಳುವ, ಸಹಕಾರ, ಹೊಂದಾಣಿಕೆಯಿಂದ ಕೂಡಿ ನೆಮ್ಮದಿಯಿಂದ ಬದುಕುವ, ಅರ್ಥ ಮಾಡಿಕೊಳ್ಳುವ ಒಳಗಣ್ಣು ಬೇಕು.ಸಂಬಂಧಗಳ ಮಥನದಲ್ಲಿ ಮಾತ್ರ ಪ್ರತಿ ಗಳಿಗೆ ಸಹ್ಯವಾಗಲು ಸಾಧ್ಯ.   ದುರಾಚಾರಿಗಳು ನಮ್ಮೊಡನೆ ಯಾವತ್ತಿಗೂ ಇರುತ್ತಾರೆ. ತಮ್ಮ ಆಲೋಚನೆಗಳನ್ನು ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಾರೆ. ಆಳದಲಿ ಮಾಯದ ಗಾಯ ಮಾಡಿ ನಗುತ್ತಾರೆ. ಮೇಲೆ ಏಳದಂತೆ ನಯವಾಗಿ ತುಳಿಯುತ್ತಾರೆ. ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಾರೆ. ನೋವು, ಸಂಕಟ, ದಿಗಿಲನ್ನು ಹುಟ್ಟು ಹಾಕುತ್ತಾರೆ. ನಂಜನ್ನು ಕಾರುವುದೇ ಅವರ ಜಾಯಮಾನ. ಸದಾ ಕೇಡನ್ನು ಬಗೆಯುವ ಧಾಷ್ಟ್ಯದ ಜನರಿಂದ ಹಲವು ಹತ್ತು ಹೊಸ ಪಾಠಗಳ ಕಲಿಕೆಯಾಗುತ್ತದೆ. ಅವರೆಲ್ಲರೂ ನಿಜವಾದ ಅರ್ಥದಲ್ಲಿ ನಮ್ಮೊಳಗೆ ಇರುವ ಕೇಡಿಗೆ ಕನ್ನಡಿ ಒಡ್ಡುತ್ತಾರೆ. ನಮ್ಮ ಮನದ ಓರೆ ಕೋರೆಗಳನ್ನು ಸೂಕ್ಷ್ಮವಾಗಿ ತಿದ್ದುವ ಪ್ರತಿನಿಧಿಗಳು ಎನ್ನುವ ಮಾತುಗಳು ಕುತೂಹಲಕರವಾಗಿವೆ ಎನಿಸಿದರೂ ಸತ್ಯ . ಈ ಬಗೆಯ ನಡವಳಿಕೆಯ ಜನ ಎಲ್ಲ ಪ್ರದೇಶದಲ್ಲೂ ಸಿಗುತ್ತಾರೆ ಎನ್ನುವುದೇ ಸಮಾಧಾನದ ಸಂಗತಿ. ಬದಲಾಗುತ್ತಿರುವ ಪ್ರಪಂಚದೊಂದಿಗಿನ ಹೊಂದಾಣಿಕೆ ಬಹಳ ಮುಖ್ಯ.   ಈ ವಚನವನ್ನು ಓದುವಾಗ ನನಗೆ ತಟ್ಟನೆ ನೆನಪಾದದ್ದು ಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮುಳ್ಳುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ.’ ಎನ್ನುವ ಕವಿತೆಯ ಸಾಲುಗಳು. ಇವು ಕೂಡ ಸಕಲೇಶ ಮಾದರಸರ ಆಶಯವನ್ನು ಸಶಕ್ತವಾಗಿ ದ್ವನಿಸುವಂತೆ, ಬದುಕುವ ಕ್ರಮವನ್ನು ತುದಿ ಮುಟ್ಟಿ ನೋಡುವಂತಿವೆ. ನಮ್ಮನ್ನು ಸೂಕ್ಷ್ಮ ಸಂವೇದಿಯಾಗಿಸುತ್ತಲೇ ಅರಿವನ್ನು ಹಿಗ್ಗಿಸುವಂತಿವೆ.     ದಾರಿ ತಪ್ಪಿದಾಗ ಎಚ್ಚರಿಸುವ, ತಿಳುವಳಿಕೆಯನ್ನು ಹೇಳುವ, ನಿಂದಿಸುವ, ನನ್ನೊಳಗಿನ ನನ್ನನ್ನು ಅರಿವಿನ ಬೆಳಕಿನಲ್ಲಿ, ನಿಜದ ನೆಲೆಯಲ್ಲಿ ತೋರಿಸುವ  ಜನ ನನ್ನ ನೆರೆಹೊರೆಯಲ್ಲೇ ಇರುವಾಗ ಬೇರೆ ಊರಿಗೆ ಹೋಗಲೇಕೆ? ಎಂದು ತಮಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಈ ತೆರನಾದ ದೊಡ್ಡ ಗುಣ ಆಲೋಚನಾ ಪ್ರಜ್ಞೆ ನಮ್ಮೆಲ್ಲರದಾಗಬೇಕು.ನಾವು ಇರುವಲ್ಲಿ ಸುತ್ತಲಿನ ಜನರೊಂದಿಗೆ ಪ್ರೀತಿ,ಸ್ನೇಹ ಸಂಬಂಧದ ಪರಿಮಿತದಲ್ಲಿ ಬದುಕಬೇಕು. ಆಗ ಬದುಕು ಸಾರ್ಥಕ್ಯವನ್ನು ಪಡೆದುಕೊಳ್ಳುತ್ತದೆ. ಅನಿರ್ವಚನೀಯ ಆನಂದವಾಗುತ್ತದೆ  ಎನ್ನುವ ಅನನ್ಯ ಆಶಯ ಇಲ್ಲಿ ಧ್ವನಿಪೂರ್ಣವಾಗಿ ಅಭಿವ್ಯಕ್ತಿಗೊಂಡಿದೆ. ಒಂದು ಅನುಭವವನ್ನು ವಚನದಲ್ಲಿ ದುಡಿಸಿಕೊಂಡ ಮತ್ತು ದಾಟಿಸಿದ ರೀತಿ ಮನೋಜ್ಞವಾಗಿದೆ. ಇವು ಸರಳ ಸತ್ಯವಾದ ವಿಚಾರಗಳಾಗಿದ್ದು ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬಲ್ಲ ಸೂತ್ರದಂತಿವೆ.ಇಂತಹ ಅತೀತವಾದ ಬೀಜದ ಮಾತುಗಳು ಮಾತ್ರ ನಾಳಿನ ಬದುಕಿನ ಹಾದಿಗೆ ಕಂದೀಲು ಆಗಬಲ್ಲವು.                   


About The Author

Leave a Reply

You cannot copy content of this page

Scroll to Top