ಪ್ರೇಮ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಪ್ರೇಮದಷ್ಟು ಬಲಶಾಲಿ
ಶಕ್ತಿ ಯಾವುದಿದೆ?

ಗಾಯಗೊಂಡ ಹೃದಯಕ್ಕೆ ರು ಮುಲಾಮು ಸವರಿದರೂ ಸಮಾಧಾನವಾಗುವುದಿಲ್ಲ. ನೋವುಂಡ ಎದೆಗೆ ನೋವು ನೀಡಿದವರು ಮೆಲ್ಲನೇ ಸ್ವಲ್ಪ ಸವರಿದರೂ ಸಾಕು ಆಳವಾದ ಗಾಯವಾಗಿದ್ದರೂ ಕ್ಷಣಾರ್ಧದಲ್ಲಿ ಮಾಯ. ಹೀಗೇಕೆ ಹೃದಯ ಹಟ ಹಿಡಿಯುವುದು? ತಿಳಿಯದು. ಈ ಹೃದಯಕೆ ಬೇಕಿರುವುದು ತನ್ನವರು ಎನಿಸಿಕೊಂಡುವುದರಿAದ ಒಂದು ಹಿಡಿ ಪ್ರೀತಿ, ದಣಿವಾದಾಗ ಒರಗಲು ಒಂದು ಒಲವಿನ ಹೆಗಲು. ಪುಟ್ಟ ಪುಟ್ಟ ವಿಷಯಕ್ಕೆಲ್ಲ ಸಂಭ್ರಮಿಸುವ ಹೃದಯಕ್ಕೆ ಯಾಂತ್ರಿಕತೆಯಿಂದ ತುಕ್ಕು ಹಿಡಿಸುತ್ತಿದ್ದೇವೆ. ಮನೆ ಮಂದಿಯೊಂದಿಗೆ ಮಾತನಾಡಲೂ ಬಿಡುವಿಲ್ಲದಂತೆ, ಮಾತನಾಡಿದ್ದನ್ನು ಕೇಳಿಸಿಕೊಳ್ಳದಷ್ಟು ವ್ಯವಧಾನವಿರದಂತೆ ನಮ್ಮ ಪಂಚೇಂದ್ರಯಗಳನ್ನು ಹರಿ ಬಿಡುತ್ತಿದ್ದೇವೆ. ಯಂತ್ರಗಳೊಂದಿಗೆ ಯಂತ್ರವಾಗಿ ಬಿಟ್ಟಿದ್ದೇವೆ. ಕ್ಷಣವೊಂದಕ್ಕೆ ಸಾವಿರಾರು ಜನರನ್ನು ಕಾಣುವ ಮಹಾನಗರಗಳಲ್ಲಂತೂ ಜೀವನ ಪೂರಾ ಪೂರಾ ಯಾಂತ್ರಿಕವಾಗಿಬಿಟ್ಟಿದೆ. ಓಡುವ ವೇಗದಲ್ಲಿ ಪ್ರೇಮದ ಬಾಗಿಲುಗಳನ್ನು ಮುಚ್ಚಿ ಬಿಟ್ಟಿದ್ದೇವೆ. ವಸ್ತು ಕೇಂದ್ರಿತ ಜಗತ್ತಿನಲ್ಲಿ ಹೃದಯ ಒಂಟಿಯಾಗಿದೆ. ಕೆಲವೊಮ್ಮೆ ಸಿಟ್ಟು, ಅಳುವಿನ ಮೂಲಕ ಹೊರ ಹಾಕುತ್ತೇವೆ.ಕಣ್ಣಿನಿಂದ ಇಳಿದ ನೀರು ಕೆನ್ನೆ ತೋಯಿಸುವ ಮುನ್ನ ಪ್ರೀತಿಯಿಂದ ತನ್ನ ಮುಖವನ್ನು ಬೊಗಸೆಯಲ್ಲಿ ಹಿಡಿದು,’ ನಾನು ಬದುಕಿರೋದೆ ನಿನಗೋಸ್ಕರ.’ಎನ್ನುವ ಜೀವ ಸಿಕ್ಕರೆ ತಬ್ಬುಗೆ ಸಡಿಲಸದೇ ಬಿಕ್ಕಳಿಸಿ ಬಿಡಬೇಕು ಎನಿಸುತ್ತದೆ. ಇಷ್ಟು ಅಗಲಕ್ಕೆ ಕಣ್ಣು ತೆರೆದು ಸಂತಸ ವ್ಯಕ್ತ ಪಡಿಸಬೇಕೆನಿಸುತ್ತದೆ. ಪ್ರೇಮಕ್ಕಾಗಿ ಹಂಬಲಿಸುತ್ತ ಜೀವಗಳು ದಿನೇ ದಿನೇ ಕುಸಿಯುತ್ತಿದೆ. ಗುಂಡಿಗೆಗಳು ಅದುರಿ ಹೋಗುತ್ತಿವೆ. ಎಲ್ಲೆಲ್ಲೂ ಪ್ರೇಮದ ಅಭಾವದಿಂದ ಜೀವಗಳು ರೋಸಿ ಹೋಗುತ್ತಿವೆ.

ಪರಸ್ಪರ ಆತ್ಮೀಯತೆಯಿಂದ ಪ್ರೀತಿಯಿಂದ ಮನಸ್ಸುಗಳನ್ನು ಗೆಲ್ಲಬೇಕಾದುದು ನಮ್ಮೆಲ್ಲರ ಬದುಕಿನ ಮೊದಲ ಆದ್ಯತೆ. ‘ಪ್ರೀತಿಯೇ ಜೀವನ .’ ಎಂದು ಗೊತ್ತಿದ್ದರೂ ನಿರ್ಲಕ್ಷಿಸುತ್ತಿದ್ದೇವೆ.ಬೌದ್ಧಿಕ ಪರಿಣಿತಿಯತ್ತ ಚಿತ್ತ ಹರಿಸುತ್ತಿರುವ ನಾವು ಭಾವನಾತ್ಮಕತೆಯತ್ತ ವಾಲುವುದನ್ನು ಮರೆಯುತ್ತಿದ್ದೇವೆ. ತಲೆಯ ಆಜ್ಞೆಯನ್ನು ಶಿರಸಾವಹಿಸಿ ಪರಿಪಾಲಿಸುವ ನಾವು ಎದೆಯ ನೋವಿಗೆ ಕಿವಿಗೊಡುತ್ತಿಲ್ಲ. ಮೂಲತಃ ನಾವೆಲ್ಲ ಭಾವ ಜೀವಿಗಳು. ಜೀವನ ಪ್ರೇಮಕೆ ಪ್ರೇರಕವಾದ ನಮ್ಮೆಲ್ಲರ ಅಭ್ಯುದಯಕ್ಕೆ ಸೆಲೆಯಾದ ಭಾವನೆಗಳಿಗೆ ಪ್ರಾಶಸ್ತ ನೀಡುವುದು ಅನಿವಾರ್ಯ.ಒತ್ತಡ ಸ್ಪರ್ಧೆ ಭೋಗಲಾಲಸೆಗಳ ಹಿಂದೆ ಬಿದ್ದು ಹೃದಯವನ್ನು ಸುಂದರ ಭಾವಗಳ ಹೂದೋಟವಾಗಿಸದೇ ಚುಚ್ಚುವ ಮುಳ್ಳುಗಳ್ಳಿಂದ ತುಂಬುತ್ತಿದ್ದೇವೆ. ಅನುಭಾವಿಗಳು ಹೇಳುವಂತೆ ಅನಗತ್ಯ ಚಿಂತೆಗಳ ಕಸವನ್ನು ಆಗಾಗ ಉಡುಗಿ ಹೊರ ಹಾಕಬೇಕು. ಇದನ್ನೇ ಆಧ್ಯಾತ್ಮದಲ್ಲಿ ಸಾಧ್ಯವಾದಷ್ಟೂ ‘ಖಾಲಿ ಇರಿ’ ಎನ್ನುತ್ತಾರೆ. ಖಾಲಿ ಇರುವುದೆಂದರೆ ಭೂತಕಾಲದಿಂದ ಹೊರಬರುವುದು. ಭವಿಷ್ಯತ್ತಿನ ಭ್ರಮೆಗಳಿಗೆ ಸಿಲುಕದಿರುವುದು. ಬಿರುಗಾಳಿ ಇಲ್ಲದಿರುವ ಜಾಗದಲ್ಲಿ ದೀಪವು ನಿಶ್ಚಲವಾಗಿ ಉರಿಯುವಂತೆ ಸದ್ಭಾವಗಳಿರುವ ಹೃದಯದಲ್ಲಿ ಪ್ರೇಮದ ಬುಗ್ಗೆ ನಿರಾತಂಕವಾಗಿ ಚಿಮ್ಮುತ್ತದೆ. ‘ಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?’ ಎಂದು ಪ್ರಶ್ನಿಸುತ್ತಾನೆ ಮಹಾಕವಿ ಕಾಳಿದಾಸ. ಈ ನುಡಿಯನ್ನೇ ಸಮರ್ಥಿಸಿಕೊಳ್ಳುವಂತೆ ಪ್ರೇಮಚಂದರು ‘ತರ್ಕದ ಒರೆಗಲ್ಲಿನ ಮೇಲೆ ಪ್ರೇಮದ ಒರೆಯಿಟ್ಟು ನೋಡಲಾಗುವುದಿಲ್ಲ.’ ಎಂದಿದ್ದಾರೆ. ಅತ್ಯಂತ ಬಲಶಾಲಿಯಾದ ಪ್ರೇಮದ ಬಲವನ್ನು ಬಳಸಿ ಜೀವನದ ಚೆಲುವನ್ನು ಆನಂದಿಸೋಣವಲ್ಲವೇ?

ಜಯಶ್ರೀ.ಜೆ. ಅಬ್ಬಿಗೇರಿ





ಈಗಿನ ತಂತ್ರ ಜ್ಞಾನ ,ಬೆಳೆದಷ್ಟು ಮನುಷ್ಯನ ಜೀವನ ಶೈಲಿ ಬದಲ್ಲಾಗಿದೆ. ಪ್ರೇಮ ನಿವೇದನೆ ತೋರಬೇಕು.ಅದರಲ್ಲಿ ನೋವು ಮರೆಯುವ ಶಕ್ತಿ ಇದೆ.ಸಂತೋಷದಿಂದ ಬಾಳುವುದೇ ಜೀವನ.
ಸೂಪರ್ ಮೇಡಮ್
ಧನ್ಯವಾದಗಳು
ಪ್ರೇಮ ದಂತಹ ಸಧ್ಬಾವನ ಶಕ್ತಿ ಯಾವುದಕ್ಕೂ ಮಿಗಿಲಾಗಿ ಧನ್ಯವಾದ ಮೇಡಂ
ಪ್ರೇಮದ ಶಕ್ತಿ ಅನಾವರಣ ಅದ್ಭುತ..