ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
ಒಲವು

ಒಲವು ಸರಳವಾಗಿರಬೇಕು
ಸರಕಾಗಬಾರದು….
ಒಲವು ಬಲವಾಗಬೇಕು
ಬಲವಂತವಾಗಬಾರದು ….
ಒಲವು ಪ್ರಯಾಣವಾಗಬೇಕು
ಪ್ರಯಾಸವಾಗಬಾರದು…..
ಒಲವು ವರತೆಯಾಗಬೇಕು
ನಿರವತೆಯಾಗಬಾರದು…..

ಒಲವು ವಿನಿಮಯವಾಗಬೇಕು
ವ್ಯವಹಾರವಾಗಬಾರದು …..
ಒಲವು ಹೂವಾಗಬೇಕು
ಹಾವಾಗಬಾರದು…..
ಒಲವು ಅಪೇಕ್ಷೆಯಾಗಬೇಕು
ಉತ್ಪ್ರೇಕ್ಷೆಯಾಗಬಾರದು…..
ಒಲವು ಗೆಲುವಾಗಬೇಕು
ಗಲ್ಲಾಗಬಾರದು …..
ಒಲವು ಉಲಿಯಬೇಕು
ಉಳಿಯಾಗಬಾರದು …..
ಒಲವು ವಿಶಾಲವಾಗಿರಬೇಕು
ವಿಷಾದವಾಗಬಾರದು …..
ಒಲವು ಆವರಿಸಬೇಕು
ಅವಸರಿಸಬಾರದು …..
ಒಲವು ಸಂತಸವಾಗಬೇಕು
ಸಂತಾಪವಾಗಬಾರದು ……
ಒಲವು ಸಮರಸವಾಗಬೇಕು
ಸಮರವಾಗಬಾರದು ……
ಒಲವು ಅಮೃತವಾಗಬೇಕು
ಮೃತವಾಗಬಾರದು ……
ಒಲವು ಮಧುರವಾಗಿರಬೇಕು
ದೂರವಾಗಿರಬಾರದು
ಒಲವು ಅಸ್ತ್ರವಾಗಿರಬೇಕು
ವಿವಸ್ತ್ರವಾಗಬಾರದು…….
ಒಲವು ಅಭಿಮಾನವಾಗಬೇಕು
ಅವಮಾನವಾಗಬಾರದು……
ಒಲವು ಸಾಧನವಾಗಬೇಕು
ಧನವಾಗಬಾರದು……
ಒಲವು ಶೃಂಗಾರವಾಗಬೇಕು
ಶರವಾಗಬಾರದು……
ಒಲವು ವಶವಾಗಬೇಕು
ಶವವಾಗಬಾರದು……
ಒಲವು ಆಸ್ತಿಯಾಗಬೇಕು
ಅಸ್ತಿಯಾಗಬಾರದು
ಒಲವು ಸಾಕ್ಷಾತ್ಕಾರವಾಗಬೇಕು
ಚಮತ್ಕಾರವಾಗಬಾರದು……
ಒಲವು ಬೆಳಕಾಗಬೇಕು
ಬೇಯಬಾರದು……
ಒಲವು ಧಾರಾಳವಾಗಿರಬೇಕು
ದಾಳವಾಗಬಾರದು……
ಒಲವು ಅಲಂಕಾರವಾಗಬೇಕು
ಅಹಂಕಾರವಾಗಿರಬಾರದು…..
ಒಲವು ಒಲವಾಗಿರಬೇಕು
ಓಲೈಕೆಯಾಗಬಾರದು……

ಪರವಿನ ಬಾನು ಯಲಿಗಾರ




ಬಹಳ ಚೆನ್ನಾಗಿದೆ ಮೆಡ೦