ವಿಶೇಷ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
́ಇರಲಿ ಬದುಕಿನಲ್ಲಿ….
ತುಸು ವಿರಾಮʼ

ಆಕೆಯ ಮನೆಯ ವಾತಾವರಣವೇ ಹಾಗೆ. ಎಲ್ಲೆಡೆ ಕಲರವ.ಇಡೀ ಮನೆಯ ಎಲ್ಲಾ ವಸ್ತುಗಳಲ್ಲಿಯೂ ಜೀವಂತಿಕೆಯ ಕಳೆ ಸೂಸುವಂತಹ ಸಂಚಲನ.
ಮನೆಯ ಒಳಗೆ ಬಂದು ತನ್ನೆಲ್ಲ ಸಾಮಾನುಗಳನ್ನು ಇರಿಸಿದ ಮಗಳು ತನ್ನ ಅಮ್ಮನೊಂದಿಗೆ ಜೋರಾಗಿ ಮಾತನಾಡುತ್ತಲೇ ಕಸಪೊರಕೆ ಒರಸುವ ಬಟ್ಟೆ ಮತ್ತು ಧೂಳನ್ನು ಜಾಡಿಸುವ ಬ್ರಷ್ ಗಳನ್ನು ಹಿಡಿದು ಬಂದಳು. ಮನೆಯ ಒಂದೊಂದು ಮೂಲೆಯನ್ನು ಚೊಕ್ಕಟವಾಗಿ ಗುಡಿಸಿ ಒರೆಸಿ ಮತ್ತೇನಾದರೂ ಉಳಿದಿದೆಯೇ ಎಂದು ಪರಿಶೀಲನಾತ್ಮಕವಾಗಿ ನೋಡಿ ನೆಮ್ಮದಿಯ ನಿಟ್ಟುಸಿರಿಟ್ಟಳು.
ಕಳೆದ ಒಂದೆರಡು ಗಂಟೆಗಳಿಂದ ಮಗಳ ಚಟುವಟಿಕೆಗಳನ್ನು ಅತ್ಯಂತ ಶಾಂತವಾಗಿ ಮತ್ತು ದೀರ್ಘವಾಗಿ ನೋಡಿದ ತಾಯಿ ಒಂದು ಪುಟ್ಟದಾದ ಬಗಲಲ್ಲಿ ಧರಿಸುವ ಪರ್ಸನ್ನು ಮಗಳ ಹೆಗಲಲ್ಲಿ ತೊಡಿಸಿ ನಾವು ಹೊರಗೆ ಹೋಗಿ ಬರೋಣವೆ? ಅದೆಷ್ಟು ಚಂದದ ಬಿಸಿಲು ಬಿದ್ದಿದೆ.. ಇಂತಹ ಅದೆಷ್ಟೋ ಚಂದದ ಸಾಯಂಕಾಲಗಳನ್ನು ನಾನು ಕಳೆದುಕೊಂಡಿದ್ದೇನೆ ಎಂದು ಕೇಳಿದಳು. ಅದ್ಭುತವಾದ ಜೀವನವನ್ನು ನಡೆಸಿದ ಅನುಭವವನ್ನು ಹೊತ್ತ ಜಾಣ್ಮೆ ಆಕೆಯ ಕಣ್ಣುಗಳಲ್ಲಿತ್ತು.
ಅಯ್ಯೋ ಈಗ ಬೇಡಮ್ಮ ನನಗೆ ಇನ್ನು ಸ್ವಲ್ಪ ಕೆಲಸ ಬಾಕಿ ಇದೆ… ಅಡುಗೆ ಮನೆಯ ಕಿಟಕಿಗಳನ್ನು, ಗ್ಯಾಸ್ ಸ್ಟವ್ ಅನ್ನು ಸ್ವಚ್ಛ ಮಾಡಿ ಅಡುಗೆ ಮಾಡುತ್ತೇನೆ ನಂತರ ಮಕ್ಕಳ ಬಟ್ಟೆಗಳನ್ನು ಮಡಚುವುದಿದೆ ಎಂದು ತುಸು ದಣಿದ ಸ್ವರದಲ್ಲಿ ಮಗಳು ಹೇಳಿದಳು
ಮಗಳ ಬಳಿ ಸಾರಿದ ತಾಯಿ ಮೃದುವಾಗಿ ಆದರೆ ಅಷ್ಟೇ ದೃಢವಾಗಿ ಮಗು ನಿನ್ನ ಅಡುಗೆಯ ಪಾತ್ರೆಗಳು ನೀನು ಸ್ವಚ್ಛಗೊಳಿಸುವುದಕ್ಕಿಂತ ಹೆಚ್ಚು ಹೊಳೆಯುವುದು ಬೇಕಿಲ್ಲ… ಸ್ವಚ್ಛಗೊಳಿಸುವುದು ಮುಖ್ಯ ನಿಜ, ಆದರೆ ಬದುಕುವುದು ಅದಕ್ಕಿಂತ ಮುಖ್ಯ ಎಂದು ಹೇಳಿದಾಗ
ಮಗಳು ನಿಂತಲ್ಲಿಯೇ ಶಿಲೆಯಾದಳು.
ನಂತರ ತಾನು ಕುಳಿತ ಜಾಗಕ್ಕೆ ಮರಳಿದ ತಾಯಿ ಅದೇ ಆರಾಮ ಕುರ್ಚಿಯಲ್ಲಿ ಒರಗಿಕೊಂಡು ಕುಳಿತಳು…. ನಂತರ ನಿಧಾನವಾಗಿ ಮಾತನಾಡಲು ಆರಂಭಿಸಿದಳು. ನಿನ್ನ ವಯಸ್ಸಿನಲ್ಲಿ ಇದ್ದಾಗ ನಾನು ಕೂಡ ನಿನ್ನ ಹಾಗೆಯೇ ಯೋಚಿಸುತ್ತಿದ್ದೆ… ಮನೆಯ ಪ್ರತಿ ಮೂಲೆ, ಪ್ರತಿ ಪಾತ್ರೆ ಪ್ರತಿ ಬಟ್ಟೆಗಳು ಚೊಕ್ಕಟವಾಗಿ ಒಂಚೂರು ಕಲೆ ಇಲ್ಲದಂತೆ ಇರುವುದು ಒಳ್ಳೆಯ ತಾಯಿ, ಪತ್ನಿ ಮತ್ತು ಹೆಣ್ಣು ಮಕ್ಕಳ ಲಕ್ಷಣ ಎಂದೇ ಯೋಚಿಸುತ್ತಿದ್ದೆ. ನನ್ನಿಡೀ ದಿನವನ್ನು ಮನೆಯನ್ನು ಸ್ವಚ್ಛಗೊಳಿಸುವುದರಲ್ಲಿ ಮಕ್ಕಳು ಆಡಿ ಬಿಸಾಡಿದ ಆಟದ ಸಾಮಾನುಗಳನ್ನು, ಓದಿ ಅತ್ತಿತ್ತ ಇಟ್ಟುಬಿಟ್ಟ ಪುಸ್ತಕಗಳನ್ನು ಎತ್ತಿಡುವುದರಲ್ಲಿ ಕಳೆಯುತ್ತಿದ್ದೆ. ಮನೆಯ ನೆಲವನ್ನು ಉಜ್ಜಿ ಉಜ್ಜಿ ಸ್ವಚ್ಛಗೊಳಿಸಿ, ಹಾಸಿಗೆಗಳನ್ನು ಜೋಡಿಸಿ ಬೆಡ್ ಶೀಟ್ ಗಳನ್ನು ಹಾಕಿ ಮನೆಗೆ ಬರಬಹುದಾದ ಅತಿಥಿಗಳ ನೆಪದಲ್ಲಿ ಸದಾ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದೆ…. ಆದರೆ ಅವರೆಂದೂ ಬರಲೇ ಇಲ್ಲ. ಬಂದವರು ನನ್ನ ಮನೆಯ ಅಂದ ಚಂದವನ್ನು ನೋಡಿ ಹೊಗಳಲೂ ಇಲ್ಲ.
ಹೌದಾ ಅಮ್ಮ! ಎಂದು ಆಶ್ಚರ್ಯದಿಂದ ತನ್ನ ಕೈಯಲ್ಲಿನ ಸಣ್ಣ ಒರೆಸುವ ಬಟ್ಟೆಯನ್ನು ಟೇಬಲ್ ಮೇಲೆ ಇಡುತ್ತಾ ತಾಯಿಯ ಮುಂದೆ ಬಂದು ಕುಳಿತಳಾಕೆ. ನನಗೆ ಇದು ಯಾವುದೂ ಗೊತ್ತಿರಲಿಲ್ಲ ಅಮ್ಮ ಮುಂದೆ ಹೇಳು ಎಂದು ತಾಯಿಯನ್ನು ಒತ್ತಾಯಿಸಿದಳು.
ತನ್ನ ಸೆರಗಿನಿಂದ ಮಗಳ ಹಣೆಯ ಮೇಲಿನ ಬೆವರನ್ನು ಒರೆಸಿದ ತಾಯಿ ತುಂಬಾ ವರ್ಷಗಳ ನಂತರ ನನಗೆ ಅರ್ಥ ಆಯ್ತು…. ನಾನು ಈ ಎಲ್ಲಾ ಕೆಲಸಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿರುವಾಗ ನನ್ನ ಮಕ್ಕಳು ಬೆಳೆಯುತ್ತಿದ್ದರು. ಮಕ್ಕಳು ಹಬ್ಬದ ಸಡಗರದಲ್ಲಿ ಮುಳುಗೇಳುವಾಗ ನಾನು ಪಾತ್ರೆಗಳನ್ನು ತೊಳೆಯುತ್ತಾ, ಬಟ್ಟೆಗಳನ್ನು ಒಗೆಯುತ್ತಾ ನನ್ನ ಸಮಯವನ್ನು ವಿನಿಯೋಗಿಸುತ್ತಿದ್ದೆ. ನಾನು ಮಾಡದಿದ್ದರೆ ಇನ್ನಾರು ಮಾಡುತ್ತಾರೆ? ಎಂಬ ಭಾವ ನನ್ನಲ್ಲಿತ್ತು. ನನ್ನ ಅನುಪಸ್ಥಿತಿಯಲ್ಲಿಯೂ ಕೂಡ ಮನೆ ನಡೆಯುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ.
ತಾಯಿ ಮತ್ತು ಮಕ್ಕಳ ನಡುವೆ ನಿಮಿಷಗಳ ದೀರ್ಘ ಮೌನ ಆವರಿಸಿತು… ಮಗಳು ತನ್ನ ನೆನಪುಗಳನ್ನು ಕೆದಕಿದಾಗ ಹೌದಲ್ಲವೇ! ತಾವೆಲ್ಲ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ ತಮ್ಮ ತಾಯಿ ಅಡುಗೆ ಮನೆಯಲ್ಲಿ ಆಹಾರವನ್ನು ತಯಾರಿಸುವ, ಮನೆ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಹಬ್ಬದ ದಿನಗಳಲ್ಲೂ ಕೂಡ ಅದೇ ಹಳೆಯ ನೈಟಿ ಇಲ್ಲವೇ ಚೂಡಿದಾರ್ಗಳಲ್ಲಿ ತನ್ನನ್ನು ತಾನು ತೂರಿಸಿಕೊಂಡು ಸದಾ ಕೆಲಸ ಮಾಡುತ್ತಿರುವುದನ್ನು ನೆನಪಿಸಿಕೊಂಡಳು.
ಹೌದಲ್ವೇ ಅಮ್ಮ! ನಾವು ಕೂಡ ನಿನಗೆ ಸಹಾಯ ಮಾಡಿದ್ದು ನಮಗೆ ನೆನಪಿಲ್ಲ ಎಂದು ಮಗಳು ಹೇಳಿದಾಗ ನಸು ನಗುತ್ತಾ ತಾಯಿ ತಲೆ ಆಡಿಸಿದಳು.
ಹೌದು ಆದರ್ಶ ಪತ್ನಿ, ಆದರ್ಶ ತಾಯಿ ಉತ್ತಮ ಗೃಹಿಣಿಯ ಭೂತ ನನ್ನ ಮೇಲೆ ಸವಾರಿ ಮಾಡುತ್ತಿತ್ತು. ನೀವೆಲ್ಲರನ್ನು ನೀವಿರುವ ಜಾಗದಲ್ಲಿಯೇ ಕುಳ್ಳಿರಿಸಿ ಎಲ್ಲವನ್ನು ಮಾಡಿ ಹಾಕುತ್ತಿದ್ದ ನಾನು ಸುಳ್ಳು ಭ್ರಮೆಯಲ್ಲಿ ತೇಲಾಡುತ್ತಿದ್ದೆ…. ಆದರೆ ನಿಮ್ಮೆಲ್ಲರಲ್ಲಿ ನಾನೂ ಒಬ್ಬಳು ಎಂದೂ, ನಾನು ಕೂಡ ನಿಮ್ಮನ್ನು ಸೇರಿಸಿಕೊಂಡು ಕೆಲಸ ಕಾರ್ಯಗಳನ್ನು ಪೂರೈಸಿ ಎಲ್ಲರೊಂದಿಗೆ ಬೆರೆತು ನಡೆಯಬೇಕು ಎಂಬ ಭಾವವನ್ನು ಎಂದೂ ನನ್ನ ಮನಸ್ಸಿನಲ್ಲಿ ಸುಳಿಯಗೊಡಲಿಲ್ಲ ಎಂಬ ಕಾರಣಕ್ಕೆ ನನಗೆ ಖೇದವೆನಿಸುತ್ತದೆ.
ಮಗಳು ಏನೊಂದೂ ಮಾತನಾಡದೆ ಹೌದೆಂಬಂತೆ ಸುಮ್ಮನೆ ತಲೆ ಆಡಿಸಿದಳು… ಪುಟ್ಟಿ…. ನೆನಪುಗಳನ್ನು ಮನೆಯ ಒಳಕೋಣೆಗಳಲ್ಲಿ ಹುಡುಕಲು ಸಾಧ್ಯವಿಲ್ಲ, ನೆನಪುಗಳು ಮಡಚಿ ಇಟ್ಟ ಬಟ್ಟೆಗಳಲ್ಲಿ ಇರುವುದಿಲ್ಲ. ನಮ್ಮೆಲ್ಲರ ಭ್ರಮೆಯಂತೆ ಸುಂದರವಾದ ನೆನಪುಗಳು ಫೋಟೋಗಳಲ್ಲಿ ಕೂಡ ಇರುವುದಿಲ್ಲ…. ಸುಂದರವಾದ ನೆನಪುಗಳನ್ನು ನಾವು ಜೀವಿಸುವ ಮೂಲಕ, ಅನುಭವಿಸುವ ಮೂಲಕ ಹೊಂದಬೇಕು.
ನಾವು ಮಾಡುವ ಪ್ರತಿಯೊಂದು ಮನೆ ಕೆಲಸ, ಅಡುಗೆ, ಆಹಾರ ಸೇವನೆಗಳು ದಿನಚರಿಯಾಗಿರುತ್ತದೆ…. ನಾವು ಬದುಕಿರುವವರೆಗೂ ಮುಗಿಯದ ಯಜ್ಞವದು. ಪ್ರತಿ ದಿನ ಹೊಡೆದರೂ ಕೂಡ ಮತ್ತೆ ಕಸ ಬಂದು ಬೀಳುತ್ತದೆ… ಅದೆಷ್ಟೇ ಸ್ವಚ್ಛಗೊಳಿಸಿದರೂ ಧೂಳು ಅಲ್ಲಲ್ಲಿ ಮನೆ ಮಾಡುತ್ತದೆ.. ಪಾತ್ರೆಗಳು ಮುಸುರೆಗಳಾಗಿ ತೊಳೆಯಲ್ಪಡುತ್ತವೆ.
ಆದರೆ ಅಮ್ಮ… ಇವೆಲ್ಲವೂ ಪ್ರತಿದಿನ ಮಾಡಲೇಬೇಕು ಅಲ್ಲವೇ? ಹೀಗೆಲ್ಲ ಮಾಡದೇ ಇದ್ರೆ ಮನೆ ಸ್ವಚ್ಛ ಅಂತ ಹೇಗೆ ಅನಿಸಿಕೊಳ್ಳುತ್ತೆ ಎಂದು ಮಗಳು ಕುತೂಹಲದಿಂದ ಕೇಳಿದಳು.
ನಿಡಿದಾದ ಉಸಿರನ್ನು ಹೊರ ಹಾಕುತ್ತಾ ತಾಯಿ ಹೀಗೆ ಉತ್ತರಿಸಿದಳು ಮನೆ ಕೆಲಸಗಳನ್ನು, ಊಟ ತಿಂಡಿಗಳನ್ನು ಮಾಡಬೇಕು ನಿಜ…. ಆದರೆ ಎಲ್ಲವನ್ನೂ ಕಡ್ಡಾಯವಾಗಿ ಪ್ರತಿದಿನವೂ ಮಾಡಲೇಬೇಕೆಂದೇನಿಲ್ಲ. ಮತ್ತು ಮನೆಯನ್ನು ಹೀಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬೇರೆಯವರಿಗೋಸ್ಕರ ಅಲ್ಲ ಅದು ನಮಗಾಗಿ ಇರಬೇಕು.
ಅತಿಥಿಗಳು ಮನೆಗೆ ಬರುವುದಾದರೆ ಬರಲಿ ಬಿಡು. ಬರಲಿ ಕುಳಿತುಕೊಳ್ಳಲಿ, ಬಂದು ಒಂದು ಕಪ್ಪು ಚಹಾ ಕುಡಿದು ನಮ್ಮ ಮನೆಯ ಕುರಿತು ಏನಾದರೂ ಹೇಳಿ ಹೋಗುವುದಾದರೆ ಹೋಗಲಿ ಬಿಡು. ಅದು ಅವರ ಕೆಲಸ. ಹಾಗೆ ಬಂದಿರುವುದೇ ನಮಗಾಗಿ ಆದರೆ ಅವರಿಗೆ ಉಳಿದೆಲ್ಲವೂ ನಗಣ್ಯವೆನಿಸುತ್ತದೆ… ಮತ್ತು ಅದು ಸರಿ ಕೂಡ. ಅಕಸ್ಮಾತ್ ಅವರು ನಮಗಾಗಿ ಬಂದಿರುವುದಿಲ್ಲ ಎಂದಾದರೆ ಅವರು ನಮ್ಮ ಮನೆಯ ಕುರಿತು ಆಡಿಕೊಳ್ಳಬಹುದು. ಹಾಗೆಂದು ಮನೆಗೆ ಬಂದವರಲ್ಲಿ ಅಗೌರವ ಬೇಡ.
ನಿನಗಾಗಿ ಬಂದವರು ನಿನ್ನೊಂದಿಗೆ ಕುಳಿತು ಹರಟೆ ಹೊಡೆಯಲು ಬಂದಿರುತ್ತಾರೆ, ನಿನ್ನ ಮಾತುಗಳನ್ನು ಕೇಳಲು ತಮ್ಮ ಮಾತುಗಳನ್ನು ಹೇಳಲು ಪರಸ್ಪರದ ಸುಖ ದುಃಖಗಳನ್ನು ಹಂಚಿಕೊಳ್ಳುವ ಬಯಕೆಯಿಂದ, ತುಸು ನೆಮ್ಮದಿಯನ್ನು ಕೂಡ ಅರಸಿ ಬಂದಿರುತ್ತಾರೆ. ನಿನ್ನೊಂದಿಗೆ ನಕ್ಕು ನಲಿದು ಪ್ರೀತಿಯ ನಾಲ್ಕು ಮಾತುಗಳನ್ನಾಡಿ ನೀನು ಕೊಡುವ ಚಹಾದ ಜೊತೆಗೆ ಪ್ರೀತಿಯ ಸವಿಯನ್ನು ಸೇವಿಸುತ್ತಾರೆ… ನೀನು ತೋರುವ ನಲ್ಮೆಯ ಮಾತುಗಳ ಜೊತೆ ತಿಂಡಿ ತಿನ್ನುತ್ತಾರೆ.. ಅವರು ಅವರಾಗಿ ನಿನ್ನ ಬಳಿ ಬಂದಿರುವಾಗ ನೀನು ನೀನಾಗಿಯೇ ಅವರನ್ನು ಎದುರುಗೊಳ್ಳಬೇಕು. ಮನೆಯ ಪ್ರತಿಯೊಂದು ಮೂಲೆ ಮೂಲೆಗಳ ಚೊಕ್ಕಟತನ ಅವರ ಮನಸ್ಸಿಗೆ ಮುದ ನೀಡಬಹುದು… ಆದರೆ ನಿನ್ನ ಆತ್ಮೀಯವಾದ ಮಾತುಗಳಿಗಿಂತ ಹೆಚ್ಚಲ್ಲ. ಬೆಲೆ ಬಾಳುವ ಕಪ್ಪುಗಳಲ್ಲಿಯ ಚಹಾಕ್ಕಿಂತ ಸಾದಾ ಪಿಂಗಾಣಿ ಕಪ್ಪುಗಳಲ್ಲಿ ನೀನು ಪ್ರೀತಿಯಿಂದ ಸೋಸಿದ ಚಹಾವನ್ನು ನಿನ್ನೊಂದಿಗೆ ಕುಳಿತು ಕುಡಿಯುವುದರಲ್ಲಿಯೇ ಅವರು ತೃಪ್ತಿಯನ್ನು ಕಾಣುತ್ತಾರೆ ಎಂಬುದು ನಿನಗೆ ಗೊತ್ತಿರಲಿ…. ಅವರನ್ನು ಕೂರಿಸಿಯೂ ನೀನು ನಿನ್ನ ಕೆಲಸಗಳಲ್ಲಿ ವ್ಯಸ್ತಳಾದರೆ ಅದು ಅವರಿಗೆ ಬೇಸರವನ್ನು ತರಬಹುದು…. ಒಟ್ಟಿನಲ್ಲಿ ನೀನು ನೀನಾಗಿಯೇ ಇರು.
ಇನ್ನೂ ಹೇಳಬೇಕೆಂದರೆ ಬೆಳಗಿನ ಚಹಾವನ್ನು ನಿನ್ನ ಪತಿಯೊಂದಿಗೆ, ಮಕ್ಕಳೊಂದಿಗೆ ಹರಟೆ ಹೊಡೆಯುತ್ತಾ ಸೇವಿಸು… ಚಹಕ್ಕೆ ಇನ್ನಿಲ್ಲದ ಸ್ವಾದ ಬರುತ್ತದೆ.
ಮನೆಯ ಕೆಲಸಗಳನ್ನು ಮಕ್ಕಳಿಗೂ ಹಂಚು… ಮಕ್ಕಳಲ್ಲಿ ಜವಾಬ್ದಾರಿ ಹೆಚ್ಚುತ್ತದೆ ಜೊತೆಗೆ ತಮ್ನ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುವುದರಲ್ಲಿ ತಮ್ಮ ಪಾಲು ಇದೆ, ಇರಲೇಬೇಕು ಎಂಬ ಭಾವ ಮೂಡುತ್ತದೆ. ಮನೆಯ ಕೆಲಸ ಕಾರ್ಯಗಳು ನಿನಗೆ ಹೊರೆಯಾಗಿ ತೋರುವುದಿಲ್ಲ…. ಎಲ್ಲವನ್ನು ನೀನೇ ಮಾಡಿ ನಿನ್ನನ್ನು ನೀನು ಕಡೆಗಣಿಸಿಕೊಳ್ಳುವುದಕ್ಕಿಂತ ಎಲ್ಲರ ಜೊತೆಗೆ ಬೆರೆತು ಅವರು ಕೂಡ ನಿನ್ನೊಂದಿಗೆ ಕೆಲಸ ಮಾಡುವಂತೆ ಪ್ರೇರೇಪಿಸಿ ನಿನಗಾಗಿಯೂ ಇರುವ ನಿನ್ನದೇ ಬದುಕನ್ನು ನೀನು ಅದ್ಭುತವಾಗಿ ಜೀವಿಸು.
ನಿನ್ನ ಮಕ್ಕಳೊಂದಿಗೆ ಆಟವಾಡು, ಚಿತ್ರ ಬರಿ ಓದು, ಬರಹಗಳಲ್ಲಿ ತೊಡಗಿಕೋ… ಇನ್ನಿಲ್ಲದಂತೆ ತಿರುಗಾಡು. ಪ್ರೀತಿಯಿಂದ ತಬ್ಬಿಕೊಂಡು ಮುದ್ದು ಮಾಡು. ಅವಶ್ಯಕತೆ ಇದ್ದಾಗ ಮಾತ್ರ ಮನೆ ಕೆಲಸಗಳಲ್ಲಿ ತೊಡಗಿಕೋ. ನಿನ್ನ ಮನಸ್ಸು ಮತ್ತು ದೇಹ ಇರುವುದು ಕೇವಲ ಮನೆಯ ಬಟ್ಟೆ ಮತ್ತು ಸಾಮಾನುಗಳನ್ನು ಹೊಳಪಿಸಲು ಅಲ್ಲ… ಬದಲಾಗಿ ನಿಮ್ಮೆಲ್ಲರ ಬದುಕನ್ನು ಚಮಕಿಸಲು, ಹೊಳೆಸಲು ಮತ್ತು ಹೊಳೆಯಿಸಲು ಕೂಡ.
ಮುಂದೊಂದು ದಿನ ನಾವೆಲ್ಲರೂ ಮಣ್ಣಿಗೆ ಖಂಡಿತವಾಗಿಯೂ ಮರಳುತ್ತೇವೆ… ಆಗ ನಿನ್ನ ಸಮಾಧಿಯ ಮೇಲೆ ತನ್ನ ಮನೆಯನ್ನು ಒಂದೇ ಒಂದು ಕಲೆಗಳಿಲ್ಲದಂತೆ ಸ್ವಚ್ಛವಾಗಿರಿಸಿದ ಹೆಣ್ಣುಮಗಳು ಎಂದು ಬರೆಯುವುದಿಲ್ಲ ಅಲ್ಲವೇ ?
ಆದರೆ ಅವರು ಖಂಡಿತವಾಗಿಯೂ ನೀನು ಅವರನ್ನು ಪ್ರೀತಿಸಿದ, ಮಾತುಗಳನ್ನು ಆಲಿಸಿದ, ಬಾಚಿ ತಬ್ಬಿದ, ಉಣ ಬಡಿಸಿದ ಪರಿಯನ್ನು ನೆನೆಯುತ್ತಾರೆ.
ತಾಯಿ ಈ ಮಾತುಗಳನ್ನು ಹೇಳುತ್ತಿರುವಾಗ ಮಗಳು ತನ್ನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಮೌನವಾಗಿ ಒರೆಸಿದಳು… ಬದುಕಿನ ಕೆಲ ಘಳಿಗೆಗಳು ಮತ್ತೆ ಮರಳಿ ದೊರೆಯುವುದಿಲ್ಲ ಎಂಬುದು ಇದೀಗ ಆಕೆಗೆ ಅರ್ಥವಾಗಿತ್ತು.
ಆ ದಿನ ಸಂಜೆ ಆಕೆ ತನ್ನ ತಾಯಿಯನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೌದಾ ಯಾಕೆ ಮರಳಿ ಬರುವಾಗ ಅಲ್ಲಿಯೇ ಇದ್ದ ಪಾನಿಪುರಿ ಅಂಗಡಿಯಲ್ಲಿ ಅಮ್ಮನಿಗಿಷ್ಟವಾದ ಪಾನಿಪುರಿಯನ್ನು ಆಕೆಗೆ ಕೊಡಿಸಿ
ತನ್ನಿಷ್ಟದ ಮಸಾಲಾ ಪುರಿಯನ್ನು ಮನದುಂಬಿ ಅಸ್ವಾದಿಸುತ್ತಾ ಸೇವಿಸಿದಳು.
ಅವರಿಬ್ಬರೂ ಮನೆಗೆ ಮರಳಿ ಬರುವಷ್ಟರಲ್ಲಿ ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದರು.. ಮನೆ ಮಾತ್ರ ಎಂದಿನಂತೆ ಶಾಂತವಾಗಿತ್ತು ಆದರೆ ಆಕೆಯ ಮನಸ್ಸಿಗೆ ಅಂಟಿದ ಕೊಳೆ ತೊಡೆದು ಹೋಗಿ ಮುಖದಲ್ಲಿ ಸ್ವಚ್ಛತೆಯ ಪ್ರತಿಬಿಂಬ ಪ್ರತಿಫಲಿಸುತ್ತಿತ್ತು.
ಇದು ನಮ್ಮ ಬದುಕು ಕೂಡ ಸ್ನೇಹಿತರೆ! ಎಷ್ಟೋ ಬಾರಿ ಎಲ್ಲರಿಗೂ ಎಲ್ಲವನ್ನೂ ಮಾಡುವ ಹೆಣ್ಣುಮಕ್ಕಳು ತಮಗಾಗಿ ಒಂದು ಪುಟ್ಟ ಅಡುಗೆಯನ್ನು ಕೂಡ ಮಾಡುವುದಿಲ್ಲ. ನಮ್ಮ ಕಾಳಜಿ ನಾವೇ ಮಾಡಿಕೊಳ್ಳದಿದ್ದರೆ ಇನ್ನಾರು ಮಾಡುತ್ತಾರೆ?
ನಮ್ಮನ್ನು ನಾವೇ ಗೌರವಿಸಿಕೊಳ್ಳದಿದ್ದರೆ, ಬೇರೆಯವರು ನಮ್ಮನ್ನು ಗೌರವಿಸಲು ಸಾಧ್ಯವೇ?
ನಮ್ಮ ಮನಸ್ಸಿನ ಮಾತನ್ನು ನಾವು ಕೇಳದಿದ್ದರೆ ಇನ್ನಾರು ಕೇಳುತ್ತಾರೆ?
ಯೋಚಿಸಿ… ಬದುಕು ನಿಮ್ಮದು.
ಕೆಲ ನಿರ್ಧಾರಗಳು ಕೂಡ ನಿಮ್ಮವೇ ಆಗಿರಬೇಕು.

ವೀಣಾ ಹೇಮಂತ್ ಗೌಡ ಪಾಟೀಲ್




Very well said mam
Savita Deshmukh