ಸತ್ಯ ಸಂಗಾತಿ
ಡಿ ಪಿ ಯಮನೂರಸಾಬ್
“ಅಸಹಾಯಕ ವಿಧವೆಯೊಬ್ಬಳ ಸತ್ಯಕಥೆ”


ಹೂವಿನಹಡಗಲಿ,ಏ.10- ತಾಲೂಕಿನ ಪುಟ್ಟ ಗ್ರಾಮ ಮುದೇನೂರು. ಅಲ್ಲಿ ಬಳ್ಳಾರಿ ಪಿಂಜಾರರೆಂಬುದೊಂದು ಬಳಗ. ಇವರು ಸುಮಾರು ವರ್ಷಗಳ ಹಿಂದೆ ಕೂಲಿ ಅರಸಿ ಈ ಗ್ರಾಮಕ್ಕೆ ಬಂದರೆಂಬ ಪ್ರತೀತಿ ಇದೆ. ಆ ಸಮಯದಲ್ಲಿ ಗೌಡರ ಮನೆತನ ದೊಡ್ಡ ಹೆಸರು ಮಾಡಿತ್ತು. ನೂರಾರು ಎಕರೆ ಜಮೀನು. ಅವರ ಮನೆತನದಲ್ಲಿ ಕೆಲಸಕ್ಕೆಂದರೆ ಇವರದೊಂದು ಪಾಲು, ಇತ್ತೀಚಿಗೆ ಕೃಷಿ ಚಟುವಟಿಕೆಯಲ್ಲಿ ಕೆಲಸ ನಿರ್ವಹಿಸುವ ಈ ಬಳಗದವರು ಯಾವುದೇ ಮೋಜುಮಸ್ತಿ ಮಾಡದೆ ಒಂದೊಂದು ರೂಪಾಯಿಗೂ ಲೆಕ್ಕಹಾಕಿ ಕೂಡಿಟ್ಟು ಬದುಕ ಕಟ್ಟಿಕೊಂಡವರು.
ಇವರ ವಂಶಸ್ಥರ ಹೆಸರುಗಳು ಈ ರೀತಿ ಇವೆ. ಪಕ್ಕೀರಸಾಬು, ದೊಡ್ಡರಾಜಸಾಬು, ಸಣ್ಣರಾಜಸಾಬು, ಲತೀಫಸಾಬು, ಅಲ್ಲಾಭಕ್ಷುಸಾಬ್, ಇವರ ಹೆಸರುಗಳು ಮುಸ್ಲಿಂ ಸಮುದಾಯಕ್ಕೆ ಹೊಂದಿಕೊಂಡಿವೆ. ಅದರು ಇವರಆರಾಧ್ಯ ದೇವತೆ ಹೊಸಪೇಟೆಯ ಹುಲಿಗಿ ಕ್ಷೇತ್ರದ ಹುಲಿಗೆಮ್ಮ. ಈಗಲೂ ಹುಣ್ಣೆಮೆ ಬಂತೆಂದರೆ ಎಡೆಬುತ್ತಿಯನ್ನು ಕಟ್ಟಿಕೊಂಡು ತಲೆಮೇಲೆ ಹೊತ್ತುಕೊಂಡು ಉದೋ ಉದೋ ಎಂಬ ನಾಮಸ್ಮರಣೆ ಮಾಡುತ್ತಾ ಈ ಬಳಗ ಹೋಗುವುದನ್ನು ಇಡಿ ಊರೇ ನಿಂತುಕೊಂಡು ನೋಡುವಷ್ಟು ಸೊಗಸಾಗಿರುತ್ತೆ.
ಇತ್ತ ಮುಸ್ಲಿಂ ಹಬ್ಬಗಳು ಬಂದರೆ ತಲೆಮೇಲೆ ಮುಲ್ಲಾನ ಟೋಪಿ ಹಾಕಿ ನಮಾಜು ಮಾಡುತ್ತಾರೆ. ಈ ಬಳಗದ ಮುಂದಾಳತ್ವ ಕಟ್ಟಿಕೊಂಡ ಚಂದದ ಸಂಸಾರವೆಂದರೆ ಚಂದಾಹುಸೇನ್ ಪತ್ನಿ ಫರೀದಾ. ಈ ಬಳಗದಲ್ಲೇ ಇವರೆಂದರೆ ತುಂಬಾ ಪ್ರೀತಿ. ಎಲ್ಲಾ ಕಾರ್ಯಗಳಲ್ಲೂ ಇವರದೇ ಮುಂದಾಳತ್ವ. ಈ ದಂಪತಿಗಳನ್ನು ಮುಂದೆ ಬಿಟ್ಟುಕೊಂಡು ಇಡೀ ಬಳಗವೇ ಹರ್ಷಪಡುತ್ತಿತ್ತು. ಆದರೆ ವಿಧಿಯಾಟವೇ ಬೇರೆ ಎಂಬಂತೆ ಈ ಸುಂದರ ಸಂಸಾರದಲ್ಲಿ ಬಿರುಗಾಳಿ ಬೀಸಿ. ಚಂದಾಹುಸೇನ್ ಕಾಯಿಲೆಗೆ ತುತ್ತಾಗಿ ತೀರಿಕೊಂಡಾಗ ಅವರ ಪತ್ನಿ ಫರಿದಾಬಾಳಲ್ಲಿ ಸಹಿಸಿಕೊಳ್ಳಲಾಗದಷ್ಟು ದುಃಖ ಇಮ್ಮಡಿಸಿತ್ತು.
ಪುಟ್ಟ ಎರಡು ಕಂದಮ್ಮಗಳನೆತ್ತ ಈ ಮಹಾತಾಯಿಯ ದುಃಖ ಅಬ್ಬರಿಸುವಂತಿತ್ತು. ಆಕೆ ತನ್ನ ದುಃಖವನ್ನು ಹೊರಗಾಕಿದ ಪರಿ ಈ ರೀತಿ ಇತ್ತು. ಇನಿಯ ನೀ ನಿಲ್ಲದ ನನ್ನ ಬಾಳುಯಾಂಗಕಳಿಯಲಿ, ನೀನು ಗಂಭೀರದಿಂದ ಬರುತ್ತಿದ್ದ ಸದ್ದು ನನ್ನ ಹೃದಯದೊಳಗ ಮನೆಮಾಡೈತಿ. ನನಗೆ ಎಲ್ಲಾ ಮುತೈದೆಯರು ಸೇರಿ ಬಳೇ ತೆಗೀತಾರ, ವಿಧವಿ ಮಾಡ್ತಾರ, ವಿಧವೆ ಅಂತಾರ, ನಾನು ಇಷ್ಟು ಚಿಕ್ಕ ವಯಸ್ಸಿಗೆ ವಿಧವೆಯಾಗಲೇನೋ ಶಿವನೆ ಎಂಬ ಆಕೆಯ ಆರ್ಭಟದ ದುಃಖಕ್ಕೆ ಇಡೀ ಊರಿಗೆ ಊರೇ ಕಣ್ಣೀರಾಕಿ ಬೊಬ್ಬೆ ಒಡೆಯುವಂತಿತ್ತು.
ಇದು ನಮ್ಮ ಹಳ್ಳಿಗಳಲ್ಲಿನ ಕನ್ನಡ ನಾಡಿನ ಮಣ್ಣಿನ ಮಗಳ ದೌರ್ಭಾಗ್ಯ, ಜಾತಿಯಾವುದಾದರೇನು ಭಾಷೆಯೊಂದೆಯಲ್ಲವೆ, ನಾವು ಹುಟ್ಟಿ ಬೆಳೆದ ನಾಡಿನಲ್ಲಿ ನಮ್ಮ ಸಂಸ್ಕೃತಿ ಒಂದೇ ಅಲ್ಲವೇ.
ಡಿ ಪಿ ಯಮನೂರಸಾಬ್



