ಕಾವ್ಯ ಸಂಗಾತಿ
ʼಪ್ರೀತಿಯ ಪ್ರಲಾಪʼ
ಶಂಕರಾನಂದ ಹೆಬ್ಬಾಳ


ಪ್ರಲಾಪಗೈಯುವದು ಪ್ರೀತಿಯೇ
ಪ್ರಲೋಭನೆಗೆ ಒಳಗಾಗುವುದು ಪ್ರೀತಿಯೇ
ಪ್ರೇಮ ಕುಶಧಿಯಲ್ಲಿ ಬಿದ್ದವರೆಷ್ಟು..?
ಈಜಿ ದಡ ತಲುಪಿದವರೆಷ್ಟು..?
ಮಾರ್ಮಿಕವಾದ ಯಕ್ಷ ಪ್ರಶ್ನೆಗೆ ಉತ್ತರ
ಸಿಗದೆ ಹೆಣಗುತಿರುವೆ..!
ಪ್ರಕ್ಷುಬ್ದ ಮನಸಿನ ತಳಮಳ
ಪ್ರಣೀತ ತೋರದೆ ನಿಂತಿದೆಯೇಕೆ..?
ಪ್ರೀತಿ ಎಂಬುದು ಪ್ರಮಾದವೇ..?
ಪ್ರೀತಿ ಪ್ರಮಾಣವಿಲ್ಲದೆ ನಡೆಯುವುದೇ.?
ಕೂಪಕ್ಕಿಂತಲೂ ಆಳವಿದು
ಪುಳಿಂದನ ಬಾಣಕ್ಕಿಂತ ಮೊನಚು
ಪ್ರಖರದ ಪ್ರಭಾವ ತೋರಿ
ರಾಜಠೀವಿಯಲಿ ಮೆರೆದಿದೆಯೇಕೆ..?
ಪ್ರವರ್ಧಮಾನಕ್ಕೆ ಬಂದಂತೆ
ಪ್ರವಾಹದಂತೆ ಹರಿಯುತಿದೆಯೇಕೆ
ಪ್ರಕೋಪದಂತೆ ಕೆರಳಿ ನಿಂತು
ಪ್ರತಿಜ್ಞೆಗೈಯುತಿದೆ
ಪವಾಡ ಸದೃಶ ರೀತಿಯಲಿ
ಹೃದಯ ಪರಿಧಿಯ ಆವರಿಸಿದೆಯೇಕೆ
ಪ್ರತಿಮೆಯಿಲ್ಲದೆಯೆ ಅಪ್ರತಿಮ
ರೂಪತೋರಿ ಬೆರಗುಗೊಳಿಸಿ
ಪ್ರತಿಕಾರ ತೀರಿಸಿಕೊಳ್ಳುತಿದೆ…
ದುಃಖಸಾಗರ ಕಟ್ಟೆಯೊಡಿಸಿ
ಹೊರಬಿದ್ದ ಮೀನಿನಂತೆ ಒದ್ದಾಡಿಸಿದೆ
ನೋವು ನೂರೆಂಟು
ಭಾವ ಬಿನ್ನಣ ಬಣ್ಣದ ಜೋಕುಮಾರನಾಗಿ
ಕುಣಿಯುತ್ತಿದೆ.



