ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಪ್ರೀತಿ..!

ಎದೆ ಬಗೆದರೂ..
ಬೆಳೆ ಕೊಡುವ
ಇಳೆಯ ಪ್ರೀತಿ..!
ಒಡಲ ಕಡಿದರೂ
ನೆರಳ ನೀಡುವ
ಮರದ ಪ್ರೀತಿ..!
ಬೆಂಕಿಯಿಟ್ಟರೂ…
ಬೆಳಕ ಬೀರುವ
ಬತ್ತಿಯ ಪ್ರೀತಿ.!
ತೀಡಿ ತೇಯ್ದಷ್ಟೂ
ಸೌರಭ ಸೂಸುವ
ಶ್ರೀಗಂಧದ ಪ್ರೀತಿ.!
ಕೊಳ್ಳಿಯಿಟ್ಟರೂ
ಮಧು ಸುರಿಸುವ
ಜೇನ್ಗೋಡ ಪ್ರೀತಿ.!
ಅಣು ಅಣುವಲೂ
ಕಣಕಣದಲೂ
ಲೋಕ ತುಂಬಿದೆ
ನಿಸ್ಪೃಹ ಪ್ರೀತಿ.!
ಜೀವಜೀವದ ಸೆಲೆ
ಭಾವಾನುಭಾವ ನೆಲೆ
ಬದುಕಿನ ಬೆಲೆಯೇ
ನಿಸ್ವಾರ್ಥ ಪ್ರೀತಿ.!
ಪ್ರೀತಿ ಸತ್ತದಿನ
ಪಂಚಭೂತಗಳಿಗೂ
ಮಹಾ ಸೂತಕ.!
ದಿಗಂತದಾಚೆಗು ಶೋಕ.!
ಪ್ರೀತಿಯಿಲ್ಲದ ಕ್ಷಣವೇ
ಸಮಸ್ತವೂ ಶೂನ್ಯ
ಯುಗಯುಗದ ಅಂತ್ಯ
ಈ ಜಗದ ಪ್ರಳಯ..!!
ಎ.ಎನ್.ರಮೇಶ್. ಗುಬ್ಬಿ.




