ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಧೋ…ಧೋ ಮಳೆಯ ಸಿಂಚನಕೆ ಇಳೆ ತಂಪಾಗಿದೆ.ಇಷ್ಟು ಮಳೆ ಬೀಳುವ ಸಮಯಕೆ ತತ್ತರಿಸುವ ಕಾಲ ಒದಗಿದೆ.ಮೊದಲೆಲ್ಲ ತಿಂಗಳಾನುಗಟ್ಟಲೆ ಮೋಡ ಕುಸಿದಂತೆ ಅಥವಾ ಮೋಡದ ಮಳೆಯ ಚೀಲ ತೂತಾದಂತೆ ಮಳೆ ಒಂದೇ ಸಮನೆ ಸುರಿದರೂ,ಪ್ರವಾಹದ ಭೀತಿ ಇರಲಿಲ್ಲ..ಭೂಕಂಪನದ ಅನುಭವ ಅಷ್ಟಾಗಿ ಕಂಡು ಬರುತ್ತಿರಲಿಲ್ಲ….ಆದರೂ ಕಾರ್ಗತ್ತಲ ಮಳೆಯ ಸುದ್ದಿಯ ಹೇಳುವ ಅಜ್ಜಂದಿರು ಈಗ ಉಳಿದಿಲ್ಲ…ಅವರೆಲ್ಲ ಅಂತಹ ಸಮಯದಲ್ಲೇ ಸುಖವಾಗಿ,ಆರೋಗ್ಯವಾಗಿ ಬಾಳಿ ಬದುಕಿದ್ದರು. ರಾಗಿ ಅಂಬಲಿ ಕುಡಿದು ನಿರೋಗಿಯಾಗಿದ್ದರೆಂಬ ವಿಷಯವೇ ನಮಗೆಲ್ಲ ಜೀರ್ಣಿಸಿಕೊಳ್ಳಲು ಕಷ್ಟ.ಯಾಕೆಂದರೆ ನಮಗೆಲ್ಲ ಅದು ಹೆಚ್ಚು ಮಹತ್ವದ್ದು ಅಂತ ಅನ್ನಿಸುವುದೇ ಇಲ್ಲ.ಸಮಯದೊಂದಿಗೆ ಮನುಷ್ಯನ ಜೀವನ ಶೈಲಿಯು ಬದಲಾಗಿದೆ.ಪ್ರಕೃತಿಯ ಸಂಪತ್ತು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.ಭೂಗರ್ಭದ ಹುಡುಕಾಟಕೆ ಬಲಿಯಾಗುವ ಸರದಿ ಯಾರದ್ದೆಂದು ಉಹಿಸಬೇಕಷ್ಟೇ.

ಮಳೆ….ಮಳೆ…ಸುತ್ತಲು ನೀರು, ನೀರು ಮನೆಯ ಅಡಿಪಾಯ ಸಡಿಲಾದ ಮಣ್ಣಿನೊಳಗೆ ಕುಸಿದರೆ ಆಶ್ಚರ್ಯ ಪಡಬೇಕಿಲ್ಲ.ಬೆಟ್ಟ ಗುಡ್ಡದ ಕೆಳಗಡೆ ವಾಸವಿರುವವರ ಪಾಡು ಅತಂತ್ರದಲ್ಲಿ ಮುಳುಗಿದರೆ ಮುಂದೇನು ಗತಿ!.. “ಅಂಕೋಲೆಯ ಶಿರೂರು ಗುಡ್ಡ ಕುಸಿತ ನೆನೆದರೆ ಕರುಳು ಚುರ್ ಅನ್ನುತ್ತದೆ”.ಪ್ರಾಣ ಹಾನಿಯ ಜೊತೆಗೆ ಪ್ರಕೃತಿ ನಾಶವಾದರೆ ಉಳಿಗಾಲ ಉಂಟಾ? ಮಣಿಪುರದ ರಾಜಧಾನಿ ಇಂಫಾಲ್ ಅಕ್ಷರಶಃ ನೀರಲ್ಲಿ ಮುಳಿಗಿದ್ದ ಭಾಗವನ್ನು ದೂರದರ್ಶನದಲ್ಲಿ ಕಂಡಾಗ ಮಾತು ಮೌನವಾಗಿದ್ದು,ಕಣ್ಣೀರ ಹನಿಗಳಿಗೆ ಯಾವ ಬೆಲೆಯು ಇಲ್ಲ..ಏಕೆಂದರೆ ೧೫ ನದಿಗಳು ಒಮ್ಮೆಲೆ ಉಕ್ಕಿ ಹರಿದಾಗ ಆಗುವ ಅನಾಹುತದ ಬಗ್ಗೆ ನೆನೆದರೆ ಮೈಜುಮ್ಮೆನಿಸುತ್ತದೆ.ಅಲ್ಲಿಯ ಸಾವು ನೋವುಗಳು ಕಣ್ಮುಂದೆ ಬಂದಾಗ ಈ ಜನ್ಮಕ್ಕೆ ಯಾವ ಬೆಲೆಯಿದೆ ಈ ಪ್ರಕೃತಿಯ ಮುಂದೆ‌? ಇದು ಒಂದು ರಾಜ್ಯದ ಕಥೆಯಲ್ಲ,ಪ್ರತಿ ರಾಜ್ಯದ ಪ್ರತಿ ಜಿಲ್ಲೆ,ಹಳ್ಳಿಗಳ‌ ಗತಿಯು ಇಂತಹುದೇ ಸಾವು ನೋವುಗಳು. ಪ್ರಕೃತಿ ವಿನಾಶದ ಅಂಚಿನಲ್ಲಿದೆ ಎಂದು ಮುನ್ಸೂಚನೆ ನೀಡುತ್ತಿದೆ.

“ಮಳೆ ಬಂದರೆ ಬೇಜಾರಿಲ್ಲ,ಅದನ್ನು ಹಿಡಿದಿಟ್ಟಕೊಳ್ಳುವ ಬೇರುಗಳು ಭೂಮಿಯ ಆಳದಲ್ಲಿದ್ದರೆ ಮಾತ್ರ”!. ಬಟಾಬಯಲಾದ ಹಾಗೂ ಬಿಗಿಯಾದ ನಿಯಂತ್ರಣವಿಲ್ಲದ ಸಮಯದಲ್ಲಿ ನಾವಿದ್ದೆವೆ..ಇನ್ನೂ ನೀರು ಭೂಮಿಯ ಸೀಳಿ ಹೃದಯ ಬಡಿತ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗುವುದು ಯಾವಾಗ? ಒಂದು ಗಿಡ ಬೆಳೆಸಿ ನೀರೂಣಿಸುವ ಕಾರ್ಯಕೆ ಸಮಯವಿಲ್ಲ..ಒಂದು ಕಡೆ ಕೊಂಡಿ ಕಳಚಿದರೆ ಮತ್ತೊಂದು ಕಡೆ ಜೀವಿಗಳ ಕೊನೆಗಾಲ ಆರಂಭವಾದಂತೆ.ಮಳೆಗೆ ಹೆದರಿ ಓಡುಹೋಗುವುದು ಎಲ್ಲಿ? ಮತ್ತೆ ಗುಡ್ಡ ಕುಸಿದರೆ ಮುಂದಿನ ನಡೆ ಏನು?ಅತಿಯಾದ ಜೆಸಿಬಿಗಳ ಬಳಕೆಯಿಂದ ಸಡಿಲಗೊಂಡಿದೆ ಧರೆ!. ನಮಗೆಲ್ಲ ಗೊತ್ತಿದೆ, ಆದರೂ ಏನು ಮಾಡದಿರುವ ಹಂತದಲ್ಲಿದ್ದೆವೆ. ಭೂಮಿಯ ಉಳಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.‌30×40 ಸೈಟಿಗೆ ಕೋಟಿ ಬೆಲೆ ನೀಡಿ ಖರೀದಿಸುವ ಕಾಲವಿದು.ಅದರ ಮೇಲೆ ಹತ್ತು ಅಂತಸ್ತಿನ‌ ಅಪಾರ್ಟ್ಮೆಂಟ್ ಕಟ್ಟಿ ಜೀವನ ಭದ್ರಪಡಿಸಿಕೊಳ್ಳುವ ತವಕ. ಹೊಲ ಗದ್ದೆಗಳು ಅನ್ನ ಬೆಳೆಯುವ ಕಾರ್ಖಾನೆಗಳಾಗಿ ಉಳಿದಿಲ್ಲ. ಅವೆಲ್ಲವೂ ATM ಗಳಾಗಿ ಮಾರ್ಪಾಟು ಹೊಂದಿವೆ.

ಒಂದೆಡೆ ಪ್ರಕೃತಿ ವಿಕೋಪ,ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳ ಉಲ್ಬಣಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತತೆ.ಮರಣಗಳು ಎಗ್ಗಿಲ್ಲದೆ ಸಾಗುತ್ತಿರುವುದು ಕಣ್ಮುಂದೆ ಇದ್ದರೂ ತಡೆಗಟ್ಟಲು ಹೋರಾಟದ ಮುನ್ನುಡಿ ಈಗಾಗಲೇ ಬೆರಳೆಣಿಕೆ ಬರೆದವರು ಇದ್ದಾರೆ.
“ಕರೋನ” ಹೊಸ ರೂಪಾಂತರವಾಗಿ ಸದ್ದಿಲ್ಲದೆ ಆವರಿಸುತ್ತಿರುವುದನ್ನು ಮತ್ತು ಅದರ ಪರಿಣಾಮ ಗ್ರಹಿಸಿದರೆ ನರಕ ದರ್ಶನವಾದಂತೆ.. ಮೊದಲೇ ಕರೋನ ಕ್ಷಣಗಳು ಮನುಷ್ಯನ ಮನಸ್ಸಿನ ಮೇಲೆ ಹಾಗೂ ದೈಹಿಕ ಆಘಾತ ಇವೆಲ್ಲ ಕೊನೆಗಾಲದಲ್ಲಿ ಶವ ಹೂಳಲು ಯಾರು ಬರದಿರುವ ಸಂದರ್ಭ ಬಂದಾಗ “ಯಾರಿಗೆ ಯಾರಿಲ್ಲ ಎರವಿನ ಸಂಸಾರ ನೀರ ಮೇಲಿನ ಗುಳ್ಳಿ ನಿಜವಲ್ಲ ಹರಿಯೇ” ಮಾತು ನೆನಪಾಗದೆ ಇರದು..ಕರಾಳ ದಿನಗಳು ಮತ್ತೆ ಬರದಿರಲೆಂಬ ಆಶಯ!.ನಿಂತ ನೀರಿನಿಂದ ಉಂಟಾಗುವ ಮಲೇರಿಯಾ, ಕಾಲರಾಗಳಿಂದ ದೂರವಿರುವಂತೆ ಎಚ್ಚರಿಕೆ ಹಾಗೂ ಸ್ವಚ್ಚತೆಯ ಅರಿವು ನಮಗಿರಬೇಕು..

ಒಟ್ಟಾರೆಯಾಗಿ ಹೇಳುವುದಾದರೆ, ಮಳೆಯನ್ನೇ ಆರಾಧಿಸಬೇಕು.ಜೀವ‌ನದಿಗಳು ತುಂಬಿ ಹರಿಯಬೇಕು.ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸಬೇಕು.ಎಲ್ಲವೂ ಸರಿಯಾದ ರೀತಿಯಲ್ಲಿ ಇದ್ದಿದ್ದರೆ ಇಂದಿನ ಪ್ರವಾಹಗಳು ಜೀವಹಾನಿ ಮಾಡುತ್ತಿರಲಿಲ್ಲ. ಇಂದಿಗಿಂತ ಹಿಂದೆ ಭಯಾನಕ ಮಳೆಗಳು!. ಆದರೆ ಜೀವಹಾನಿಯ ಪ್ರಮಾಣ ತೀರಾ ಕಡಿಮೆ.ಆದರೆ ಇಂದು ಅಲ್ಪ ಮಳೆಗೆ ಮನೆಮಠ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೆವೆ ಎಂದರೆ ತಪ್ಪಾಗದು.ಆದರೂ ನಮಗೆ ಪಶ್ಚಾತ್ತಾಪ ಎಂಬ ಅಳುಕು ನಮಗಿಲ್ಲ.ಅನ್ಯಾಯ ಮಾಡಿ ನ್ಯಾಯ ಕೇಳುವ ಮನೋಭಾವಕ್ಕೆ ಬಂದು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ನಿಂತಿದ್ದೆವೆ.ನಮಗಷ್ಟೇ ಒಳ್ಳೆಯದಾಗಬೇಕು.ಮತ್ಯಾರಿಗೂ ಒಳಿತಾಗಬಾರದು.ಸಂಕುಚಿತ ಭಾವವೇ ಇಂದು ಮನುಷ್ಯನ ವ್ಯಕ್ತಿತ್ವವನ್ನು ಕೆಳಹಂತಕ್ಕೆ ತಂದು ನಿಲ್ಲಿಸಿದೆ.ಅಂದ ಮೇಲೆ ಅಡೆತಡೆಗಳ ಜಾಡನ್ನು ಕಿತ್ತೊಗೆದ ಮೇಲೆ ಹರಿವ ನೀರಿಗೆ ಯಾವ ಸಂಕೋಚ? ನಿರ್ಭಯವಾಗಿ ತನ್ನ ಪ್ರವಾಹವನ್ನು ಮನಸ್ಸಿಗೆ ಬಂದಂತೆ ಹರಿಬಿಟ್ಟು ಚೆಲ್ಲಾಟವಾಡುತ್ತಿದೆ.ಎತ್ತರ ಪ್ರದೇಶ ಸ್ವಲ್ಪ ತಡವಾಗಿ ಹಾನಿಗೊಳಗಾಗಬಹುದು.ಆದರೆ ವಿನಾಶ ಪಕ್ಕಾ..ಏನಾದರೂ ಅವನತಿಯನ್ನು ತಡೆಗಟ್ಟಲು ಯಾವ ಮಾರ್ಗ ಸೂಕ್ತ ಎಂಬುದನ್ನು ಮನಗಾಣಬೇಕು ಅಷ್ಟೇ.. ಪರಿಣಾಮ ನಮ್ಮ ಕೈಲಿಲ್ಲ..ಪ್ರಕೃತಿ ಕೊಟ್ಟಿದ್ದನ್ನು ಕಣ್ಮುಚ್ಚಿ ತಗೊತಿರಬೇಕು ಆಯ್ಕೆಗೆ ಅವಕಾಶವಿಲ್ಲ..


This image has an empty alt attribute; its file name is leela-3.jpg

About The Author

Leave a Reply

You cannot copy content of this page

Scroll to Top