ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎತ್ತು ಇಲ್ಲದ ಬಿತ್ತು
ಕತ್ತು ಇಲ್ಲದ ರುಂಡದಂತೆ
ಚಿತ್ತ ವಿಲ್ಲದ ಧ್ಯಾನ
ಮತ್ತು ತಂದ ಭ್ರಮೆಯಂತೆ
ಕಾಣಾ ಶಾಂತಲಿಂಗ ಪ್ರಭುವೆ!

       ಯಂತ್ರ ಮನುಷ್ಯನ ಜೀವನ ಆಕ್ರಮಿಸಿಕೊಂಡ ಹಾಗೆ, ಸಂತೋಷ ಸಂಭ್ರಮ ಕಾಣೆಯಾಗಿ ಬದುಕು ಒಂದು ರೀತಿಯಲ್ಲಿ ಯಾಂತ್ರಿಕವಾಗಿದೆ. ಸಂಭ್ರಮ ಸಡಗರಗಳು ಕಾಣೆಯಾಗಿ ತುಂಬಾ ನೀರಸವಾದ ಜೀವನ ನಮ್ಮದಾಗಿದೆ.
ಉತ್ತರ ಕರ್ನಾಟಕದ ಕಾರ ಹುಣ್ಣಿಮೆಯ ವಿಷಯಕ್ಕೆ ಬಂದಾಗ ಈ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಮನೆ ಮನೆಯಲ್ಲಿ ಎತ್ತುಗಳು ಅವುಗಳ ಗೆಜ್ಜೆ ನಿನಾದ, ಅವುಗಳ ಕೂಗು, ಹೆಜ್ಜೆಯ ಸಪ್ಪಳ, ಅವುಗಳ  ಸಾಂಗತ್ಯ ನೆನೆದುಕೊಂಡರೆ ಜೀವ ಚುರ್ ಎನ್ನುತ್ತದೆ. ಆಗಿನಂತೆ ಈಗ ಮನೆ ಮನೆಗಳಲ್ಲಿ ಎತ್ತು ಎಮ್ಮೆ ದನ ಇಲ್ಲವಾಗಿವೆ. ಅವುಗಳಿಲ್ಲದ ಕಾರ ಹುಣ್ಣಿಮೆ ಅರ್ಥ ಹೀನ ಎನಿಸುತ್ತದೆ.
  ವರ್ಷದ ಮೊದಲ ಹಬ್ಬ ರೈತನಿಗೆ ಕಾರ ಹುಣ್ಣಿಮೆ. ಆತ ಈ ಹಬ್ಬಕ್ಕೆ ಹತ್ತು ಹದಿನೈದು ದಿನಕ್ಕೆ ಮುಂಚೆಯೇ ತಯಾರಿ ಮಾಡಿಕೊಳ್ಳುತ್ತಿದ್ದ. ಪುಂಡಿಬೆಳೆ  ದಂಟಿನಿಂದ (ಕಾಂಡದಿಂದ) ತೆಗೆದ ನಾರು ನೂಲು ತೆಗೆದು ಕೊಂಡು ಹಗ್ಗ ಹೊಸೆಯುತ್ತಿದ್ದ .
ಅದರಿಂದ ಎತ್ತಿನ ಕೊರಳಿಗೆ, ಮುಖಕ್ಕೆ, ಕೊಂಬಿಗೆ ಹೂ ಗುಚ್ಛ ದಂತಹ ಗೊಂಡೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ. ಕಾರ ಹುಣ್ಣಿಮೆ ಮುನ್ನಾದಿನ ಅದನ್ನು ಬಣಗಾರನ ಹತ್ತಿರ ಕೊಂಡುಹೋಗಿ ವಿವಿಧ ಬಣ್ಣಗಳಲ್ಲಿ ಆ ಗೊಂಡೆಗಳನ್ನು ಅದ್ದಿ ಅವು ನೈಜ ಹೂ ಗೊಂಚಲು ಹಾಗೆ ಕಾಣುವಂತೆ ಮಾಡುತ್ತಿದ್ದ. ಕುರುಬರ ಹಾಡೆಗೆ ಹೋಗಿ ಉಣ್ಣೆ ತಂದು ಅದರಿಂದ ಹಗ್ಗ ಮಾಡಿ ಎತ್ತಿನ ಕೊರಳು ಮತ್ತು ಸೊಂಟಕ್ಕೆ ಕಟ್ಟುತ್ತಿದ್ದ.

      ಹುಣ್ಣಿಮೆಯ ಮೊದಲ ದಿನ “ಹೊನ್ನು ಹುಗ್ಗಿ”  ದಿನ ಎಂದು ಕರೆಯಲಾಗುತಿತ್ತು.  ಜೋಳ ಕುಟ್ಟಿ ಅದರಿಂದ ತಯಾರಿಸುವ ಪಾಯಸದಂತಹ ಆಹಾರ ಹೊನ್ನು ಹುಗ್ಗಿ. “ಆಹಾರದ ಹೆಸರು ನೋಡಿ!”  ಈ ಭಾಗದ ರೈತರ ಪ್ರಮುಖ ಆಹಾರ ಬೆಳೆ  “ಜೋಳ”.  ಅದು ಅವನಿಗೆ ಹೊನ್ನು ಮತ್ತು ಅದಕ್ಕೂ ಮಿಗಿಲು. ಅದರಿಂದ ತಯಾರಿಸಿದ್ದು ಹೊನ್ನು ಹುಗ್ಗಿ. ಇದನ್ನೇ ಎತ್ತಿಗೆ ಉಣ ಬಡಿಸಿ ತಾನೂ ತಿನ್ನುತ್ತಿದ್ದ ಮನೆಯವರೆಲ್ಲ ತಿನ್ನುತ್ತಿದ್ದರು.
         ಹುಣ್ಣಿಮೆಯ ದಿನ ಎತ್ತಿಗೆ ಸ್ನಾನ ಮಾಡಿಸಿ,ಕೊಂಬು ಕೆತ್ತಿಸಿ, ಕೊಂಬಿಗೆ ಆಯಿಲ್ ಪೇಂಟ್ ಬಳಿದು, ಮೈಗೆ ಬಣ್ಣ ಬಳೆದು, ಕೊಂಬು ಕತ್ತು ಸೊಂಟಕ್ಕೆ ತಾನು ತಯಾರಿಸಿದ ಶೃಂಗಾರ ಸಾಧನಗಳನ್ನು ಕಟ್ಟಿ,ರೈತಾಪಿ ಸಲಕರಣೆಗಳನ್ನು ಹೊಂದಿಸಿ ಇಟ್ಟು , ಅವುಗಳ ಮುಂದೆ ರಂಗೋಲಿ ಹಾಕಿ ಸಲಕರಣೆ ಸಮೇತ ಎತ್ತಿನ ಪೂಜೆ ಮಾಡಿ ನೈವೇದ್ಯ ಸಮರ್ಪಿಸಿ, ಎತ್ತಿಗೂ ಹೋಳಿಗೆ, ಅನ್ನ, ಇತ್ಯಾದಿ, ಆಹಾರ ತಿನ್ನಿಸಿ, ಎತ್ತಿನ ಬಾಯಿ ತೊಳೆದು, ದೀರ್ಘ ದಂಡ ಪ್ರಣಾಮ ಆ ಎತ್ತುಗಳ ಮುಂದೆ ಹಾಕಿ, ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ತಾನು ತನ್ನ ಕುಟುಂಬ ಆಹಾರ ಸೇವಿಸುತ್ತಿದ್ದರು. ಇದೆಲ್ಲ ನೋಡಿದ್ರೆ ಎತ್ತು ಅವನ ಸಹಾಯಕ್ಕೆ ಒದಗಿದ ಪ್ರಾಣಿ ಅಂತ ಅಲ್ಲ . ಎತ್ತು ಅವನ ಆತ್ಮ ಸಂಗಾತಿ, ಆತನ ಜೀವ ಪ್ರಾಣ, ಅವನ ಸರ್ವಸ್ವ. ನೆನೆದುಕೊಂಡರೆ ಕಣ್ಣು ಹನಿಗೂಡುತ್ತವೆ.
ಮಧ್ಯಾಹ್ನದ ಹೊತ್ತಿಗೆ ಎತ್ತಿನ ಓಟದ ಸ್ಪರ್ಧೆ. ಊರಿನ ಎಲ್ಲರ ಎತ್ತು ಒಂದು ಮೈದಾನಕ್ಕೆ ತಂದು, ಇಂದಿನ ಸ್ಕೇಟಿಂಗ್ ಹೋಲುವ ಸಲಕರಣೆ ವಿಶೇಷವಾಗಿ ಈ ಹಬ್ಬಕ್ಕಾಗಿಯೇ ಮರದಿಂದ ತಯಾರಿಸಿದ್ದು ಪ್ರತಿ ಜೋಡಿ ಎತ್ತುಗಳಿಗೆ ಕಟ್ಟಿ ಅದರ ಮೇಲೆ ರೈತರು ನಿಂತು ಓಡಿಸುತ್ತಿದ್ದರು. ಯಾವ ಜೋಡೆತ್ತು ಮೊದಲು ತಲುಪುತ್ತದೆಯೋ ಆ ಜೋಡೆತ್ತಿನ ಮೆರವಣಿಗೆ ಊರು ತುಂಬಾ ನಡೆಯುತ್ತಿತ್ತು. ಕೆಲವು ಗ್ರಾಮಗಳಲ್ಲಿ ಕರಿ ಕಡೆಯುವ ಕಾರಣಿಕ ನುಡಿಯುವ ಸಂಪ್ರದಾಯ ಇತ್ತು. ಇಲ್ಲವೆ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಎತ್ತಿನ ಬಣ್ಣದ ಧವಸ ಧಾನ್ಯ ಹೆಚ್ಚು ಬೆಳೆಯುತ್ತದೆಂದು ಅದ್ದನ್ನೇ ಹೆಚ್ಚು ಪ್ರಮಾಣದಲ್ಲಿ ಬಿತ್ತಲಾಗುತಿತ್ತು.
   ಈಗ ನೋಡಿದರೆ ಎಲ್ಲಿ ಹೋದವು ಆ ದಿನಗಳು ಎನಿಸುತ್ತದೆ. ಗ್ರಾಮ ಒಂದರಲ್ಲಿ ಒಬ್ಬರೋ ಇಬ್ಬರೋ ಜೋಡಿ ಎತ್ತು ಇಟ್ಟು ಕೊಂಡಿದ್ದಾರೆ. ಟ್ರಾಕ್ಟರ್ ಉಳುಮೆ ಜನಪ್ರಿಯವಾಗಿದೆ. ಇರುವ ಎತ್ತುಗಳಿಗೆ ಮಾರುಕಟ್ಟೆಯಿಂದ ತಂದ ಶೃಂಗಾರ ಸಾಧನಗಳನ್ನು ಹಾಕಿ ಕಾಟಾಚಾರಕ್ಕೆ ಹಬ್ಬ ಮಾಡಲಾಗುತ್ತಿದೆ.ಏನೇ ಅನ್ನಿ ಎತ್ತು ಇಲ್ಲದ ಉಳುಮೆ ಉಳುಮೆಯೇ ಅಲ್ಲ.


About The Author

2 thoughts on ““ಕಳೆದು ಹೋದ ಸಂಭ್ರಮ”ಹಳೆಯ ದಿನಗಳ ನೆನಪಲ್ಲಿ,ಶಾಂತಲಿಂಗ ಪಾಟೀಲಅವರ ಲೇಖನ”

  1. ವಂದನೆಗಳು ಬರೆಹ ಪ್ರಕಟಿಸಲಾಗಿದೆ ಎನ್ನುವುದಕ್ಕಿಂತ ಹಳ್ಳಿ ಹಾಡಿನ ವೇದನೆಗೆ ಅನುಮೋದನೆ ದೊರೆಯಿತು ಅದಕ್ಕೆ ಮತ್ತೊಮ್ಮೆ ಶರಣು ಶರಣಾರ್ಥಿ

  2. ಕಾರ್ ಹುಣ್ಣಿಮೆಯ ಹಬ್ಬದ ಸಂಭ್ರಮ ಕಣ್ಣಮುಂದೆ ಬಂದಂತೆ ಭಾಸವಾಗುತ್ತಿದೆ.ಲೇಖಕರು ಇನ್ನೂ ಉತ್ತಮ ಸಾಹಿತ್ಯ ಹೊರ ತರಲಿ ಎಂದು ಆಶಿಸುತ್ತೇನೆ. ಬಸವರಾಜ ಜನ್ನಾ

Leave a Reply

You cannot copy content of this page

Scroll to Top