ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದು ಅಮ್ಮಂದಿರ ದಿನ ಹೌದು ಅಮ್ಮನನ್ನು ನೆನೆಯಲು ಒಂದು ದಿನ ಬೇಕೆ?ಸಂತಸವಾದರೂ, ನೋವಾದರೂ ನಮಗೆ ಅರಿವಿಲ್ಲದೆಯೇ ನಮ್ಮ ನಾಲಿಗೆ ನುಡಿವ ಪದವೇ ಅಮ್ಮ ಎಂದು.ಆಗಾಗ ನೆನಪಾಗಿ ನೆನೆದೊಡೆ ಕಣ್ಣ್ಂಚು ಜಾರುವ ಜೀವಭಾವದವಳು.

ವರಕವಿ ಬೇಂದ್ರೆಯವರು ಹೇಳುತ್ತಾರೆ
ಪಾತಾಳ ಕಂಡರೇನೂ, ಆ ತಾಯಿ ಬಿಡುವಳೇನೂ,ಕಾಯವನು ಹೆತ್ತ ಕರುಳು ಕಾಯುವುದು ಹಗಲು ಇರುಳು ಎಂದು.

ಆದರೆ ಪ್ರಸ್ತುತ ಆಗುತ್ತಿರುವ ಬದಲಾವಣೆಯ ಕಂಡು ಮನ ಮಿಡುಕಿ ಹೀಗೇಕೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.ಏಕೆಂದರೆ ಹೆತ್ತ ಕರುಳೇ ಕೊಲ್ಲುವ ತಾಯಿ ಆಗಿದ್ದಾಳೆ ಇದು ಊಹಿಸಲು ಕಷ್ಟ,ಒಡಲಕಂದನ ಭವಿಷ್ಯಕ್ಕಾಗಿ ತನಗೆ ಏನೇ ಕಷ್ಟಗಳು ಬಂದರು ಕಂಗೆಡದೆ ಸಾಕಿ ಬೆಳೆಸುವವಳು,ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ತನ್ನ ಮಗುವ ಕಾಪಾಡುವ ದೈವ ಕೊಲ್ಲುವವಳಾಗಿರುವುದು ನಿಜಕ್ಕೂ ಅಮಾನವೀಯ ಅಮ್ಮ ಪದಕ್ಕೆ ಕಳಂಕ ತರುವ ಸಂಗತಿ.

ಬಸವಣ್ಣನವರ ವಚನದಂತೆ
ಒಲೆಹತ್ತಿ ಉರಿದರೆ ನಿಲಬಹುದಲ್ಲವೆ, ಧರೆ ಹತ್ತಿ ಉರಿದರೆ ನಿಲಲುಬಾರದು ಏರಿ ನೀರು ಬಂಡೆ ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆ ಹಾಲು ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವೆ
ಕೂಡಲ ಸಂಗಮದೇವ ಎಂಬಂತಾಗಿದೆ.ಬಸವಣ್ಣನವರ ಈ ವಚನ ಪ್ರಸ್ತುತ ಆಗುತ್ತಿರುವ ಸಂಗತಿಗಳಿಗೆ ಕೈಗನ್ನಡಿಯಾಗಿದೆ.

ಇನ್ನು ಕುಟುಂಬ ನಿಭಾಯಿಸಲು ಗಂಡನೊಂದಿಗೆ ಹೆಗಲು ಜೋಡಿಸಿದ ಅಮ್ಮಂದಿರ ಅಳಲು ಆತಂಕ, ಕೀಳರಿಮೆ ಇನ್ನೊಂದು ತೆರನಾದದ್ದು.ದುಡಿಯಲು ಹೊರಗಡೆ ಬಹುಪಾಲು ಸಮಯ ಕಳೆವ ತಾಯಂದಿರಿಗೆ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶಗಳು ಕಡಿಮೆಯಾಗಿ ಆ ಕೊರಗನ್ನು ತುಂಬಲು ಅವರು ಕೇಳಿದ್ದನ್ನೆಲ್ಲ ಇಲ್ಲವೆನ್ನದೆ ಕೊಡಿಸುವುದು ಸವೆ೯ಸಾಮಾನ್ಯವಾಗಿದೆ.ಅದು ಹವ್ಯಾಸದ ಬದಲು ಚಟವಾಗಿ ಗ್ಯಾಜೆಟ್ಗಳ ಗುಲಾಮರಾದರೆ ಆ ಗುಂಗಿನಿಂದ ಹೊರ ತರುವುದು ತುಂಬಾ ಕಷ್ಟ,ಆಗ ಈಗ ಕೊಡುವ ಸಮಯಕ್ಕಿಂತ ಹೆಚ್ಚು ಹಾಗೇ ಮನೋವ್ಯಾಧಿ ಪೋಷಕರಿಗೆ ಹಾಗಾಗಿ ಅವರಿಗೆಂದೆ ಸಮಯ ಮೀಸಲಿಟ್ಟು ಆದಷ್ಟು ಅವರ ಮಾತುಗಳ ಆಲಿಸೋಣ,ಸರಿ, ತಪ್ಪು ಗಳು ತಿದ್ದೋಣ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬಂತೆ ಆಗದಿರಲಿ.

ಮಗುವಿಗೆ ತಾಯಿಯೇ ಮೊದಲ ಗುರು ಉತ್ತಮ ಸಂಸ್ಕಾರ ನೀಡುವಲ್ಲಿ ಮಹತ್ತರವಾದ ಕೊಡುಗೆ ತಾಯಿದಾಗಿದೆ.ಇತ್ತೀಚೆಗೆ ಒಂದು ನಡೆದ ಸಂಗತಿ ಆಡುವ ಮಗುವ ಕರೆದ ಅಜ್ಜಿ ಅಂಗಡಿಯಿಂದ ತನಗೆ ಬೇಕಾದ ವಸ್ತು ತರಿಸಿಕೊಂಡರು ಅದಕಂಡ ಆ ಬಾಲಕನ ಅಮ್ಮ ನನ್ನ ಮಗನನ್ನು ಏಕೆ ಕಳಿಸಿದೆ ಎಂದು ಅಜ್ಜಿಗೆ ಬೈದರು.ವಯಸ್ಸಾದ ಜೀವಗಳಿಗೆ ಸಹಾಯ ಮಾಡು ಎಂದು ಹೇಳುವ ತಾಯಿಯೇ ಹೀಗೆ ವರ್ತಿಸಿದರೆ ಮಗುವಿಗೆ ತಾನೇ ಏನು ಕಲಿಸುವಳು ಯೋಚಿಸಬೇಕಾದ ಸಂಗತಿ ಅಲ್ಲವೇ.ಮಗುವಿಗೆ ತಂದೆಗಿಂತ ಹೆಚ್ಚಾಗಿ ತಾಯಿಯೇ ಆಪ್ತ ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ಕೊಡುವುದು ಗುರುತರವಾದ ಜವಾಬ್ದಾರಿ ಇದೆ.

ಪಿ.ಲಂಕೇಶರ ಅವ್ವ ಕವನದ..
ಬನದ ಕರಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು,ಗಂಡನ್ನ ಸಾಕಿದಳು,ಕಾಸು ಗಂಟಿಕ್ಕಿದಳು, ನೊಂದ ನಾಯಿಯ ಹಾಗೆ ಬೈದು ಗೊಣಗಿ ಗುದ್ದಾಡಿದಳು
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ,ನನ್ನವ್ವ ಬದುಕಿದ್ದು ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ, ಮೇಲೊಂದು ಸೂರು,ಅನ್ನ, ರೊಟ್ಟಿ,ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಕೊನೆಯದಾಗಿ ಇಷ್ಟೇಲ್ಲಾ ಹೇಳಿದ ಮೇಲೆ ನನ್ನಮ್ಮ ನ ಬಗ್ಗೆ ಹೇಳದಿರಲು ಸಾಧ್ಯವೇ ಅವಳು ನಿರಾಭರಣ ಸುಂದರಿ,ಮಗುವಿನ ಮುಗ್ಧ ಮನ, ನಾವುಗಳೇ ಅವಳ ಸವ೯ಪ್ರಪಂಚ,ಅನ್ಯರ ಸುಖ ಕಂಡು ಅಸೂಯೆಪಡದವಳು.ಇದ್ದುದ್ದರಲ್ಲೇ ತೃಪ್ತಳು.ಐದು ಜನ ಮಕ್ಕಳಲ್ಲಿ ನನ್ನ ಬಗ್ಗೆ ಅತಿಯಾದ ವಿಶ್ವಾಸ ನಿಮ್ಮ ಮಗಳು ಚೆನ್ನಾಗಿ ಓದುತ್ತಾಳೆ ಎಂದರೆ,ಆಗ ಅವಳ ಮೊಗ ಮೊರದಗಲ ಹೌದು ಅವಳು ಜಾಣೆ ಎಲ್ಲಿದ್ದರು ಜಯಿಸುವಳು ಅವಳ ಬಗ್ಗೆ ನಂಗೆ ಯಾವುದೇ ಚಿಂತೆ ಇಲ್ಲ ಎನ್ನುತ್ತಿದ್ದ ನನ್ನಮ್ಮ ನ ನುಡಿ ನೆನೆದು ಗದ್ಗದಿತಳಾಗುವೆ, ಅಮ್ಮ ಎಂದರೆ ಕಂಠ ಬಿಗಿದು ಕೊರಳುಬ್ಬಿ ದುಃಖ ಉಮ್ಮಳಿಸಿ ಬರುವುದು ಬರೀ ನೋವೇ ಕಂಡರು ಸುಖ ಇಲ್ಲವೆಂದು ದೂಷಿಸದೆ ಇರುವಷ್ಟು ದಿನ,ಉಸಿರ ಕೊನೆಯವರೆಗೂ ನಮಗಾಗಿ ಮಿಡಿದ ಜೀವ ಅಮ್ಮ ನೀ ದೇವರ ತೇರಂತೆ ತಲೆಯೆತ್ತಿಯೇ ನಮಿಸಬೇಕು ನಿನಗೆ ಒಮ್ಮೆ ಧರೆಗೆ ಬಾ ನಿನ್ನ ಮಡಿಲ ಮಗುವಾಗಿ ಅತ್ತು ಹಗುರಾಗುವೆ ನಿನ್ನ ಪ್ರೀತಿಗೆ ಎಣೆಯಿಲ್ಲ ಕೊನೆಯಿಲ್ಲ.ಕೂಡಿಟ್ಟ ಕನಸ ಕೇಳು ಬಾ,ನಾ ಅಮ್ಮನಾದಾಗಲೇ ನಿನ್ನ ನಾ ಇನ್ನು ಹೆಚ್ಚು ಅರಿತಿದ್ದು.

ಬದುಕಿಗೆ ನೀ ತೋರಿದ ಋಜುಮಾಗ೯, ಭರವಸೆ ಇಂದಿಗೂ ನಡೆಸುತ್ತಿದೆ.ಸವ೯ರಿಗೂ ಅಮ್ಮಂದಿರ ದಿನದ ಶುಭಾಶಯಗಳು ಅಂತರಂಗಕ್ಕೆ ಸದಾ ಬೆಳಕು ತೋರುವ ಅಮ್ಮನಿಗೆ ಅನಂತ ನಮನಗಳು.

About The Author

Leave a Reply

You cannot copy content of this page

Scroll to Top