ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇಳಲಾಗದ ವೇದನೆಯ
ಮೂಕ ರೋದನ ಕೇಳುತಿದೆ
ಕಲ್ಲು ಕಲ್ಲಿನಲ್ಲೂ
ಕಳೆದ ಗತವೈಭವದ ದಿನಗಳ
ನೆನಪು ಮರುಕಳಿಸಿ…
ಛತ್ರ ಚಾಮರಗಳ
ಹೊನ್ನ ಪಲ್ಲಕ್ಕಿಯ
ಆ ಮೆರವಣಿಗೆ,
ಅಶ್ವಗಳ ಖುರಪುಟಗಳ ಸದ್ದಿನಲಿ
ಗಜಗಳ ಗಂಭೀರ ನಡಿಗೆ ಗಳ
ಆ ರಾಜ ಪಥವೆಲ್ಲಿ…
ಬಳ್ಳದಿಂದ ಅಳೆದು
ಮುತ್ತು ರತ್ನಗಳ ಮಾರಿದ
ಆ ಸಂತೆ ಬೀದಿ
ಜನ ಕಲ್ಯಾಣಕೆ ಹರಿದ
ತುಂಗೆಯ ಕಲ್ಲು ಕಾಲುವೆಗಳು
ಭವ್ಯ ವಿಶ್ರಾಮ ಮಂಟಪಗಳು
ಮಹಾ ಮೌನದಲಿವೆ ಇಂದು..

ವೀರ ಹುಕ್ಕ ಬುಕ್ಕರ
ವಿದ್ಯಾರಣ್ಯರ ಹರಕೆಯ
ಪಾವನ ನೆಲವಿಂದು
ಅಸಹಾಯಕನಂತೊರಗಿದೆ…
ರಾಜಾಧಿರಾಜ ರಾಯನ
ಜೈತಯಾತ್ರೆಯ ಜಯಘೋಷ. ಪರಾಕುಗಳ ಉದ್ಘೋಷಗಳಿಂದು
ಮರೆಯಾಗಿವೆ ಮುಗಿಲಿನಲಿ…

ದತ್ತಿ ದಾನ ಧರ್ಮಗಳ
ಕೆತ್ತಿದ ಶಿಲಾ ಶಾಸನಗಳ
ಅನ್ನದಾತರು ಬೆವರಿಳಿಸಿ ಬೆಳೆದ
ಹಸಿರು ಉಸಿರುಗಟ್ಟಿದೆ..
ಸಾಹಿತ್ಯ ಸಂಗೀತ ಕಲೆಗಳ ಸ್ವರ ನಾದದಿ
ಝೇಂಕರಿಸಿದ ರಾಜಸಭೆಯ ಮೆರುಗು
ಕರಗಿಹೋಯಿತು ಕಾಲಗರ್ಭದಿ…

ಮಸಣ ಮೌನದಲಿ
ಮಿಂದಂತಿದೆ ಹೆಮ್ಮೆಯ
ಮಾನೋಮಿ ದಿಬ್ಬ ಮರುಗಿ..
ಪಂಪಾಪತಿಯ ಇಚ್ಛೆಯೋ
ವರವೋ ಶಾಪವೋ
ಹಂಪೆಯ ದುರ್ವಿಧಿಯೋ
ಬಂಡೆಗಲ್ಲುಗಳ ರಾಶಿಯ
ಕೊಂಪೆಯಾದುದಿಂದು
ಕೊರಗಿ ಸೊರಗುತ…


About The Author

2 thoughts on “ಮೂಕ ರೋದನ…ಹಮೀದಾ ಬೇಗಂ ದೇಸಾಯಿ”

  1. ಮೌನ ರೋದನದ ಕವಿತೆ ಅರ್ಥಪೂರ್ಣವಾಗಿ ಮೂಡಿಬಂದಿದೆ.

  2. ನಿಜ ಮೇಡಂ.. ಅಂದಿನ ವೈಭವದ ಹಂಪಿ ಇಂದು ಹಾಳು ಕೊಂಪೆ..ಆದರೂ ಇತಿಹಾಸ ಮಾತ್ರ ರೋಚಕ.. ಅಷ್ಟೇ ದುಃಖಕರ..ಚಂದದ ಕವಿತೆ..

Leave a Reply

You cannot copy content of this page

Scroll to Top