ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಜೆಯ ಬಾನು ಕೆಂಪೇರುವುದರೊಳಗೆ  ಬಂದುಬಿಡು
ಪಾರಿಜಾತದ ಮೊಗ್ಗು ಪಕಳೆ ಬಿಡಿಸುವುದರೊಳಗೆ  ಬಂದುಬಿಡು..!!

ನಿನ್ನ ನೆನಕೆಗಳು ನನ್ನೊಳಗೂ ಹೊರಗೂ ದುಂಬಿಗಳಾಗಿ ದಾಂಗುಡಿ ಇಡುತ್ತಿವೆ
ಕಾಲುದಾರಿಯ ಜಾಜಿ ಮಲ್ಲಿಗೆ ಮೈ ನೆರೆಯುವುದರೊಳಗೆ ಬಂದುಬಿಡು..!!

ನಿನ್ನ ಚಹರೆಗಳನ್ನು ಪಹರೆಯಾಡುವ ನನ್ನ ಕಣ್ಗಳಿಗೆ ಕ್ಷಣಕಾಲ ವಿರಾಮ ನೀಡು..
ಇರುಳ ಆಗಸದಲಿ ಚುಕ್ಕಿ ಚಂದ್ರಮರು ನಿದಿರೆಗೆ ಜಾರುವುದರೊಳಗೆ ಬಂದುಬಿಡು..!!

ನಿನ್ನ ಎದೆಗಳಿಸಿಕೊಂಡ ನನ್ನ ಕವಿತೆಯೊಳಗೆ ಚಿಗುರೊಡೆದೆ
ನಸುಜಾವ ತಂಬೆಲರಿನ ಮೇಲಿಟ್ಟ ಒಲವಿನ ಅಕ್ಷರಗಳು ಜಾರುವುದರೊಳಗೆ ಬಂದುಬಿಡು..!!

ನಿನ್ನ ದನಿಗೆ ನನ್ನ ದನಿಗೂಡಿಸಿ ನೆರಳಿನ ಪಯಣದಿ ಹೆಜ್ಜೆ ಹಾಕುವಾಸೆ
ಮೊಹಬ್ಬತ್ ನಾ ಮೆಹಂದಿಯಲ್ಲಿ‌ ಬರೆದ ನಿನ್ನ ಚಿತ್ರ ಅಳಿಸುವುದರೊಳಗೆ ಬಂದುಬಿಡು..!!

ಮಧುರಾಲಾಪಗಳಲ್ಲಿ ನನ್ನ ದನಿಯಾಲಿಸು, ಏನನ್ನು ಕೇಳದೇ ಹಿಂಬಾಲಿಸು
ವಿರಹದ ಚಿಪ್ಪಿನಲ್ಲಿ ಬೇಯುತ್ತಿರುವ ಹೆಣ್ಣು ಮುತ್ತಾಗುವುದರೊಳಗೆ ಬಂದುಬಿಡು..!!

ನಿನಗಾಗಿ ಒಂದು ಪದ, ಒಂದು ಹನಿ ಕಣ್ಣೀರು ಜಯದ ಉನ್ಮಾದತೆಗೆ ಕಾಯುತ್ತಿದೆ..
ನಿನ್ನ ನೆನಪುಗಳ ಶರಾಬು ಹನಿಹನಿಯಾಗಿ ಖಾಲಿಯಾಗುವುದರೊಳಗೆ ಬಂದುಬಿಡು..!!


About The Author

3 thoughts on “ಜಯಂತಿಸುನಿಲ್ ಅವರ ಗಜಲ್-”

Leave a Reply

You cannot copy content of this page

Scroll to Top